ನೆನಪು 16: ಕವಿ ,ಅನುವಾದಕ ಸುಮತೀಂದ್ರ ನಾಡಿಗ ಹಾಗೂ ಕೆ ಎಸ್ ನ
ಬೇಂದ್ರೆ,ಅಡಿಗ ಹಾಗು ಕೆ ಎಸ್ ನ ಮೂರೂ ಕವಿಗಳ ಪ್ರಭಾವವನ್ನು ಮೈಗೂಡಿಕೊಂಡು ಬೆಳೆದರೂ ತಮ್ಮದೇ ಶೈಲಿಯಿಂದ ಕವನಗಳನ್ನು ರಚಿಸಿ, ಕವಿಗೋಷ್ಠಿಗಳಲ್ಲಿ ಆಕರ್ಷಕವಾಗಿ ಹಾಗೂ ಧ್ವನಿಪೂರ್ಣವಾಗಿ ವಾಚಿಸಬಲ್ಲ ಸಾಮರ್ಥ್ಯ ಹೊಂದಿದ್ದವರು ಸುಮತೀಂದ್ರ ನಾಡಿಗ ಅವರು. ಎಪ್ಪತ್ತರ ದಶಕದಿಂದಲೂ ನಮ್ಮ ತಂದೆಯವರನ್ನು ಭೇಟಿಯಾಗಲು ಬರುತ್ತಿದ್ದವರಲ್ಲಿ ನಾಡಿಗರೂ ಪ್ರಮುಖರು.ಅಮೆರಿಕದಲ್ಲಿ ವಾಸವಾಗಿದ್ದ ಭಾವಮೈದುನ ಪಿ.ಶ್ರೀನಿವಾಸರಾವ್ ಜತೆಗೂಡಿ ಕೆ ಎಸ್ ನ ರ ಹಲವು ಪ್ರಮುಖ ಕವನಗಳನ್ನು ಇಂಗ್ಲೀಷ್ ಗೆ ಅನುವಾದಿಸಿ ಓದುಗರ ಪರಿಧಿಯನ್ನು ವಿಸ್ತರಿಸುವಲ್ಲಿ ನಾಡಿಗರ ಪಾತ್ರ ಹಿರಿದಾದುದು.
ಸುಮತೀಂದ್ರ ನಾಡಿಗರು ಕೇಂದ್ರ ಸಾಹಿತ್ಯ ಅಕಾಡೆಮಿಯವರ “ಭಾರತೀಯ ಸಾಹಿತ್ಯ ನಿರ್ಮಾಪಕರು” ಪುಸ್ತಕ ಮಾಲೆಯಲ್ಲಿ ಕೆ ಎಸ್ ನ ಬದುಕು ಬರಹಗಳ ಬಗ್ಗೆ ಉಪಯುಕ್ತ ಒಳನೋಟ ನೀಡುವಂಥ 90 ಪುಟಗಳ “ಕೆ ಎಸ್ ನರಸಿಂಹಸ್ವಾಮಿ “ ಎಂಬ ಪುಸ್ತಕ ರಚಿಸಿದ್ದು,ಕವಿಯ ಬಗ್ಗೆ ಮಾಹಿತಿ ಬಯಸುವವರಿಗೆಲ್ಲ ಒಂದು ಉತ್ತಮ ಆಕರವಾಗಿದೆ (ಸೆಂಟ್ರಲ್ ಕಾಲೇಜು ಆವರಣದಲ್ಲಿರುವ ಅಕಾಡೆಮಿಯ ಬೆಂಗಳೂರು ಕಛೇರಿಯಲ್ಲಿ ಈ ಪುಸ್ತಕ ಮಾರಾಟಕ್ಕೆ ಲಭ್ಯವಿದ್ದು,ಇದರ ಬೆಲೆ ರೂ ಐವತ್ತು ಆಗಿರುತ್ತದೆ)
ಗೋವಾದ ಮಾಪುಸಾದಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿದ್ದ ನಾಡಿಗರು ಉನ್ನತ ಅಧ್ಯಯನಕ್ಕಾಗಿ ಅಮೆರಿಕಕ್ಕೆ ಹೋಗಿ ಬರುವಷ್ಟರಲ್ಲಿ ಕಾಲೇಜಿನಿಂದ ಕಾರಣಾಂತರದಿಂದ ಹೊರಬರಬೇಕಾಯಿತು.ಆ ಸಮಯದಲ್ಲಿ ಅವರು ಬೆಂಗಳೂರಿಗೆ ಬಂದು ಜೀವನೋಪಾಯಕ್ಕಾಗಿ ಗಾಂಧಿಬಜಾರ್ ಮುಖ್ಯ ರಸ್ತೆಯಲ್ಲಿ “ಕರ್ಣಾಟಕ ಬುಕ್ ಹೌಸ್ “ಎಂಬ ಪುಸ್ತಕ ಮಳಿಗೆಯೊಂದನ್ನು ತೆರೆದರು.ಆ ಪುಸ್ತಕ ಮಳಿಗೆ ಅಡಿಗ,ರಾಮಚಂದ್ರಶರ್ಮ,ವೈಎನ್ಕೆ,ಮುಂತಾದ ಕಾವ್ಯಾಸಕ್ತರ ಜೇನುಗೂಡಾಗಿತ್ತು.ಸ್ವಲ್ಪ ದಿನ “ಮಲ್ಲಿಗೆ “ಮಾಸಪತ್ರಿಕೆಯ ಸಂಪಾದಕೀಯ ಮಂಡಳಿಯಲ್ಲೂ ಕೆಲಸ ನಿರ್ವಹಿಸಿದರು.ನಂತರ ಬೆಂಗಳೂರು ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗ ಸೇರಿ ನಿವೃತ್ತರಾದರು.ನಿವೃತ್ತಿಯ ನಂತರ ಕೆಲಕಾಲ ನ್ಯಾಷನಲ್ ಬುಕ್ ಟ್ರಸ್ಟ್ ನ ಅಧ್ಯಕ್ಷರೂ ಆಗಿದ್ದರು.
ನಾಡಿಗರು ನಮ್ಮ ತಂದೆಯವರನ್ನು ಭೇಟಿಯಾಗಲು ಬಂದಾಗಲೆಲ್ಲ ಈ ವಿದ್ಯಮಾನಗಳನ್ನು ವಿನೋದಕರವಾದ ಶೈಲಿಯಲ್ಲಿ ವಿವರಿಸುತ್ತಿದ್ದರು.ಅವರು ಹೋದ ಮೇಲೆ ನಮ್ಮ ತಂದೆ “ಪಾಪ ನಾಡಿಗ, ಮಕ್ಕಳೊಂದಿಗ. ಎಷ್ಟೊಂದು ತೊಂದರೆ ಅವನಿಗೆ” ಎಂದು ಕನಿಕರಿಸುತ್ತಿದ್ದರು. 1976ರಲ್ಲಿ ಶಿವಮೊಗ್ಗೆಯಲ್ಲಿ ಅಖಿಲ ಭಾರತ 49ನೆಯ ಸಾಹಿತ್ಯ ಸಮ್ಮೇಳನ ನಡೆದಿದ್ದಾಗ,ತಮ್ಮ ಕರ್ಣಾಟಕ ಬುಕ್ ಹೌಸ್ ನ ಸ್ಟಾಲ್ ಮೂಲಕ ಆಗ ತಾನೆ ಬಿಡುಗಡೆಯಾಗಿದ್ದ ಕೆ ಎಸ್ ನ ಅವರ “ತೆರೆದ ಬಾಗಿಲು” ಕೃತಿಯ ಸಾಕಷ್ಟು ಪ್ರತಿಗಳನ್ನು ಮಾರಾಟ ಮಾಡುವಲ್ಲಿಯೂ ನಾಡಿಗರು ಸಹಕರಿಸಿದ್ದರು.
ಮೈಸೂರ ಮಲ್ಲಿಗೆಯ ಕವನಗಳನ್ನು ಪ್ರೇಮಕಾವ್ಯದ ಬದಲು ದಾಂಪತ್ಯ ಗೀತೆಗಳು ಎಂದೇ ಪರಿಗಣಿಸುವುದು ಸರಿ ಎಂದು ನಾಡಿಗರು ಪ್ರತಿಪಾದಿಸಿ ಕವಿಯ ಕಾವ್ಯವನ್ನು ಹೊಸಬಗೆಯ ದೃಷ್ಟಿಕೋನದಿಂದ ನೋಡಲು ಚಾಲನೆ ನೀಡಿದರು.ಸ್ವತಃ ಕೆ ಎಸ್ ನ ಅವರೇ “ಮೈಸೂರ ಮಲ್ಲಿಗೆ”ಯ ಹೆಚ್ಚಿನ ಕವನಗಳು ಮದುವೆಯಾದ ನಂತರ ಬರೆದಿದ್ದು ಎಂದು ಹೇಳಿದ್ದು ನಾಡಿಗರ ಪ್ರತಿಪಾದನೆಗೆ ಆಧಾರವಾಗಿತ್ತು. ಕೆ ಎಸ್ ನ ಕವನಗಳ ಅನುವಾದ,ಅವುಗಳ ಬಗ್ಗೆ ಚಿಂತನೆ ಇವುಗಳಿಂದ ನಮ್ಮ ತಂದೆಯವರ ನೆನಪಿನಲ್ಲಿ ಉಳಿದವರು ಸುಮತೀಂದ್ರ ನಾಡಿಗರು.
(ಮುಂದುವರಿಯುವುದು….)
ಈ ಲೇಖನ ಸರಣಿಯ ಹಿಂದಿನ ಸಂಚಿಕೆ ಇಲ್ಲಿದೆ: http://surahonne.com/?p=29924
-ಕೆ ಎನ್ ಮಹಾಬಲ
(ಕೆ ಎಸ್ ನ ಪುತ್ರ, ಬೆಂಗಳೂರು )
ಕೆ ಎಸ್ ನ ಅವರ ಕುರಿತಾದ ಈ ಅಂಕಣ ಬಹಳ ಸೊಗಸಾಗಿ ಮೂಡಿ ಬರುತ್ತಿದೆ. ಆದಷ್ಟು ಬೇಗ ಇದು ಪುಸ್ತಕ ರೂಪದಲ್ಲಿ ಬರಲಿ.
ಬದುಕು ಹೆಚ್ಚಿನವರ ಪಾಲಿಗೆ ಹೂವಿನ ಹಾಸಿಗೆಯಲ್ಲ ಅನ್ನುವುದು ಈ ಭಾಗದಲ್ಲಿ ಅರ್ಥವಾಗುತ್ತದೆ, ಕಷ್ಟದಲ್ಲೂ ಅದ್ಭುತ ಸಾಹಿತ್ಯ ಹುಟ್ಟಿಕೊಳ್ಳುತಿದ್ದ ಪರಿ ನಿಜಕ್ಕೂ ಅದ್ಭುತ.
ಹಿರಿಯ ಕವಿ ಶ್ರೇಷ್ಟರ ಅಪರೂಪದ ಸೊಗಸಾದ ಬರಹ…ಧನ್ಯವಾದಗಳು ಸರ್.
ಪರಿಚಯಿಸಲಾಯಿತು.ಧನ್ಯವಾದಗಳು