ಪ್ರವಾಸದ ಪ್ರಾರಂಭ
ಪ್ರವಾಸವೆಂದರೆ ಖುಶಿಪಡದವರು ಯಾರು? ದಿನ ದಿನದ ಕೆಲಸಗಳ ಒತ್ತಡದಲ್ಲಿ, ಎಲ್ಲಿಗಾದರೂ ಸರಿ, ಕುಟುಂಬ ಸಮೇತ ಸ್ವಲ್ಪ ದಿನ ಹೊರಗಡೆ ಸುತ್ತಾಡುವುದು ಮೈಮನಸ್ಸನ್ನು ಹಗುರಗೊಳಿಸಿ ಮುಂದಿನ ದಿನಗಳ ಕೆಲಸಗಳಿಗೆ ಸ್ಫೂರ್ತಿಯನ್ನೀಯುತ್ತದೆ. ಆದರೆ, ಕೈಯಲ್ಲಿರುವ ಹಣದ ಲಭ್ಯತೆಗೆ ಅನುಸಾರವಾಗಿ ಪ್ರವಾಸವನ್ನು ರೂಪಿಸಬೇಕಾಗುವುದು ಅಗತ್ಯ ತಾನೇ? ಹಿಂದಿನ ಕಾಲದಲ್ಲಿ ಯಾತ್ರೆಯೆಂಬುದಾಗಿ ಹೆಸರಿಸಲ್ಪಡುತ್ತಿದ್ದ ಪ್ರವಾಸವೆಂದರೆ ಕಾಶೀಯಾತ್ರೆ. ಈಗಂತೂ ತಿಂಗಳುಗಟ್ಟಲೆಯ ವಿದೇಶ ಪ್ರವಾಸ ಕೂಡಾ ನೀರು ಕುಡಿದಷ್ಟು ಸಲೀಸಾಗಿಬಿಟ್ಟಿದೆ. ಅದಕ್ಕಾಗಿಯೇ ಇದ್ದಾರೆ ಪ್ರವಾಸೀ ಏಜೆಂಟರುಗಳು. ಅತ್ಯುತ್ತಮ ಸವಲತ್ತುಗಳನ್ನು, ಕೊಡುಗೆಗಳನ್ನು ಪ್ರವಾಸಿಗಳಿಗೆ ಸ್ಪರ್ಧೆಯಲ್ಲಿ ಒದಗಿಸಲು ಮುಂದೆ ಬರುವುದು ಕಂಡುಬರುತ್ತದೆ. ಈ ಪ್ರವಾಸೋದ್ಯಮವು ಅತ್ಯಂತ ಉತ್ತಮ ವಾಣಿಜ್ಯೋದ್ಯಮವೂ ಆಗಿದೆ.
ಸಾಧಾರಣವಾಗಿ ಪ್ರವಾಸವು ಎಲ್ಲರಿಗೂ ಇಷ್ಟವೇ ಆದರೂ, ಅದರಲ್ಲಿಯೇ ವಿವಿಧತೆ ಕಂಡುಬರುತ್ತದೆ. ಕೆಲವರು ಪ್ರಕೃತಿ ಪ್ರಿಯರಾದರೆ, ಇನ್ನು ಕೆಲವರು ಯಾತ್ರೆಯ ರೂಪದಲ್ಲಿ ದೇವಾಲಯಗಳನ್ನು ಸಂದರ್ಶಿಸಲು ಇಷ್ಟಪಡುವರು. ಸಾಹಸೀಪ್ರವೃತ್ತಿಯ ಯುವಪೀಳಿಗೆಯವರಲ್ಲಿ; ಗುಡ್ಡ, ಬೆಟ್ಟಗಳನ್ನು ಏರುವುದು, ಪರ್ವತಾರೋಹಣ ಇತ್ಯಾದಿ ಚಾರಣಗಳು ಹೆಚ್ಚು ಜನಪ್ರಿಯವಾಗುತ್ತಿವೆ. ಅಂತೂ, ಯಾವುದೇ ಆದರೂ ಮನವನ್ನು ಉಲ್ಲಸಿತಗೊಳಿಸಿ ಉತ್ಸಾಹ ತುಂಬುವುದಲ್ಲದೆ, ಹೊಸ ಸ್ಥಳಗಳು, ಅಲ್ಲಿಯ ಆಚಾರ, ವಿಚಾರ, ಸಂಸ್ಕೃತಿಗಳ ಪರಿಚವಾಗುವ ಅವಕಾಶವು ಇಂತಹ ಪ್ರವಾಸಗಳಲ್ಲಿ ದೊರೆಯುತ್ತದೆ.
UNWTO(United Nation’s World Tourism Organization), ಅಂದರೆ, ಸಂಯುಕ್ತ ರಾಷ್ಟ್ರಗಳ ವಿಶ್ವ ಪ್ರವಾಸೋದ್ಯಮ ಸಂಸ್ಥೆಯು 1970ನೇ ಇಸವಿಯ ಸೆಪ್ಟೆಂಬರ 27ನೇ ತಾರೀಕನ್ನು ಅಂತರಾಷ್ಟ್ರೀಯ ಪ್ರವಾಸದ ದಿನವನ್ನಾಗಿ ಆಚರಿಸಲು ಶಾಸನವೊಂದನ್ನು ರೂಪಿಸಿತು. ಸಂಯುಕ್ತ ರಾಷ್ಟ್ರಗಳಲ್ಲಿ 1980ನೇ ಇಸವಿಯಿಂದ ಪ್ರತೀ ವರ್ಷವೂ ಈ ದಿನವನ್ನು ವಿಶೇಷವಾಗಿ ಆಚರಿಸಲ್ಪಡುತ್ತದೆ. ಈ ದಿನದಂದು, ಪ್ರವಾಸೋದ್ಯಮದಿಂದ ಆಗಬಹುದಾದಂತಹ, ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ವಲಯಗಳಲ್ಲಿನ ಅಭಿವೃದ್ಧಿಗೆ ಉತ್ತೇಜನಾತ್ಮಕ ಕಾರ್ಯಕ್ರಮಗಳನ್ನು ವಿಶ್ವದಾದ್ಯಂತ ಹಮ್ಮಿಕೊಳ್ಳಲಾಗುವುದು. ಜಗತ್ತಿನೆಲ್ಲೆಡೆ ನಡೆಯುವ ಪ್ರವಾಸ ಪ್ರಕ್ರಿಯೆಯಲ್ಲಿ ಕೋಟಿಗಟ್ಟಲೆ ಜನರು ಭಾಗವಹಿಸುವರು. ಈ ಪ್ರವಾಸಿಗರಿಗೆ ಅಗತ್ಯವಿರುವ ವಸತಿ, ಅನುಕೂಲತೆ, ಆಕರ್ಷಣೆ, ಅಗತ್ಯತೆ, ಚಟುವಟಿಕೆ ಇತ್ಯಾದಿಗಳ ಬಗೆಗೆ ಮೇಲ್ಮಟ್ಟದ ಸ್ತರದಲ್ಲಿ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗುವುದು.
ನಾನು ಪ್ರೈಮರಿ ಶಾಲೆಯಲ್ಲಿದ್ದಾಗ ನಮ್ಮನ್ನು ಗ್ರಾಮದ ಸರಹದ್ದಿನಲ್ಲಿದ್ದ ಸಣ್ಣ ಅಣೆಕಟ್ಟು ನೋಡಲು ಕರೆದೊಯ್ದುದು ನೆನಪಿದೆ. ಅದುವೇ ನನ್ನ ಜೀವನದ ಮೊದಲ ಪ್ರವಾಸ ಎನ್ನಬಹುದು. ಆಗ ಬೇಸಿಗೆಕಾಲ.. ನಡೆದುಕೊಂಡೆ ಅಲ್ಲಿಗೆ ಹೋಗಿದ್ದೆವು. ಭಣಗುಟ್ಟುವ ಅಣೆಕಟ್ಟಿನಲ್ಲಿ ಒಂದು ತೊಟ್ಟೂ ನೀರಲ್ಲದಿದ್ದುದು ಮಾತ್ರ ನಮಗೆಲ್ಲಾ ನಿರಾಸೆಯಾಗಿತ್ತು. ಮಧ್ಯಾಹ್ನ, ತೆಗೆದುಕೊಂಡು ಹೋದ ಗಂಜಿ, ಚಟ್ನಿ ತಿಂದು ಹಿಂತಿರುಗಿದ ನೆನಪು ಮಾತ್ರ ಈಗಲು ತುಂಬ ಖುಷಿಕೊಡುತ್ತದೆ. ಹಳ್ಳಿಯಲ್ಲಿ ಕೃಷಿಕರಾಗಿದ್ದ ನನ್ನಜ್ಜ, ಅಡಿಕೆ ಮಾರಿ, ಮನೆಗೆ ಬೇಕಾದ ವಸ್ತುಗಳನ್ನು ತರಲು ಆಗಾಗ ಮಂಗಳೂರಿಗೆ ಹೋಗುವಾಗ ನನ್ನನ್ನೂ ಜೊತೆಗೆ ಕರೆದೊಯ್ಯುತ್ತಿದ್ದರು. ಅದು ನನ್ನ ಪ್ರವಾಸದ ಎರಡನೇ ಹಂತ ಎನ್ನಬಹುದು. ಆಮೇಲೆ, ದೂರವಾಣಿ ಇಲಾಖೆಯಲ್ಲಿ ವೃತ್ತಿ ನಿರತಳಾಗಿದ್ದಾಗ, ನಾಲ್ಕು ವರ್ಷಕ್ಕೊಮ್ಮೆ ಸಿಗುವ ವಿನಾಯಿತಿ ದರದಲ್ಲಿ ಕನ್ಯಾಕುಮಾರಿ, ಕುಲು, ಮನಾಲಿ ಇತ್ಯಾದಿ ಸ್ಥಳಗಳಿಗೆ ಪ್ರವಾಸ ಹೋಗಿರುವುದು, ಹೊಸ ಸ್ಥಳಗಳನ್ನು ನೋಡುವ, ಅಲ್ಲಿಯ ಸಂಸ್ಕೃತಿ, ಭಾಷೆಗಳನ್ನು ತಿಳಿಯುವ ಅವಕಾಶ ಒದಗಿಸಿತ್ತು. ನಮ್ಮ ಸುಂದರ ಮೈಸೂರು, ದಕ್ಷಿಣಕನ್ನಡದವರಾದ ನಮಗೆ ಹಾಗೂ ಸಾಮಾನ್ಯವಾಗಿ ಇಲ್ಲಿಯ ಎಲ್ಲಾ ಶಾಲೆ, ಕಾಲೇಜುಗಳು ಪ್ರವಾಸ ಏರ್ಪಡಿಸುವ ಮುಖ್ಯ ಪ್ರವಾಸೀ ಕೇಂದ್ರ ಎನ್ನಬಹುದು. ನನ್ನಂತೆ, ಹೆಚ್ಚಿನವರು ಒಂದಕ್ಕಿಂತ ಹೆಚ್ಚು ಬಾರಿ ಅಲ್ಲಿಗೆ ಹೋದವರೇ ಆಗಿದ್ದಾರೆ. ಹಾಗೆಯೇ ನನಗೆ ಪುಟ್ಟ ಪ್ರವಾಸಗಳನ್ನು ಆಯೋಜಿಸಿ ಆನಂದಿಸುವ ಹವ್ಯಾಸವೂ ಪ್ರಾರಂಭವಾಯ್ತು. ಅವುಗಳಲ್ಲಿ ಬಾದಾಮಿ, ಐಹೊಳೆ, ಪಟ್ಟದಕಲ್ಲು ಇತ್ಯಾದಿ ಸ್ಥಳಗಳಲ್ಲಿಗೆ ಆಯೋಜಿಸಿದ್ದ ಎರಡು ದಿನಗಳ ಪ್ರವಾಸವು ನಿಜಕ್ಕೂ ನನಗೊಂದು ಸವಾಲೇ ಆಗಿತ್ತು ಎನ್ನಬಹುದು! ನಿಗದಿಪಡಿಸಿದ ಸಮಯಕ್ಕೆ ಸಹಪ್ರವಾಸಿಗರು ವಾಹನದ ಬಳಿ ತಲಪದೆ ಇರುವುದು ಆಯೋಜಕರಿಗೆ ಬಹಳ ತೊಂದರೆಯನ್ನು ಉಂಟುಮಾಡುವುದಲ್ಲದೆ, ಇದರಿಂದಾಗಿ, ಆಯೋಜಿಸಲ್ಪಟ್ಟ ವೀಕ್ಷಣಾ ಸ್ಥಳಗಳ ಭೇಟಿಯೇ ಮಾಡಲಾಗದೆ ಎಡವಟ್ಟಾದುದೂ ಇದೆ. ಆದರೂ, ಆ ದಿನಗಳ ಸವಿನೆನಪುಗಳು ಮನದ ಮೂಲೆಯಲ್ಲಿ ಉಳಿದುಕೊಂಡಿದೆ.
ಮುಂದೆ, ನನ್ನ ಜೀವನದಲ್ಲಿ ಕನಸಲ್ಲೂ ಯೋಚಿಸಲಸಾಧ್ಯವಾದ ವಿದೇಶ ಪ್ರವಾಸದ ಅವಕಾಶ ಒದಗಿ ಬಂದುದು ಮಾತ್ರ ದೈವಲೀಲೆ ಎನ್ನಬಹುದು! ಮದುವೆಯಾದ ಮಗಳು ವೃತ್ತಿಯ ಸಲುವಾಗಿ ಅಮೇರಿಕದಲ್ಲಿ ನೆಲೆಸಿದಾಗ, ಅಲ್ಲಿಗೆ ನಮ್ಮನ್ನು ಬರಮಾಡಿಕೊಂಡು, ಆ ದೇಶವನ್ನು ಸುತ್ತಿಸಿದುದು ನಿಜಕ್ಕೂ ಜೀವನದ ಅವಿಸ್ಮರಣೀಯ ಅನುಭವ. ನಮ್ಮ ದೇಶದಲ್ಲಿಯೇ ಪ್ರವಾಸಪ್ರಿಯರಿಗೆ ಖುಶಿ ಕೊಡುವ ಅಸಂಖ್ಯಾತ ಪ್ರವಾಸಿತಾಣಗಳಿವೆ ಹೌದು. ಆದರೆ ಹೆಚ್ಚಿನ ಕಡೆಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿದೆ. ಅದರಲ್ಲಿ ವಿದೇಶೀಯರನ್ನು ಮೆಚ್ಚಲೇಬೇಕು. ಅಲ್ಲಿ ಪ್ರವಾಸಿತಾಣಗಳು ಯಾವುದೇ ಅರಣ್ಯಪ್ರದೇಶ, ಬೆಟ್ಟದ ತುದಿ, ಜಲಪಾತಗಳ ತಾಣ ಎಲ್ಲೇ ಇರಲಿ,ಎಲ್ಲೆಲ್ಲೂ ಸ್ವಚ್ಛ, ಸುಂದರ. ಕಸ, ಪ್ಲಾಸ್ಟಿಕ್ ಗಳ ಹಾವಳಿ ಇಲ್ಲ. ಸಮೃದ್ಧ ನೀರಿನ ಸೌಕರ್ಯವುಳ್ಳ ಶುಚಿಯಾದ ಶೌಚಾಲಯಗಳು, ಸ್ವಚ್ಛ ಕುಡಿಯುವ ನೀರು, ಅಲ್ಲಲ್ಲಿ ಉಪಯೋಕ್ಕಾಗಿ ಕಸದ ತೊಟ್ಟಿಗಳು ಲಭ್ಯತೆ ಮನಸ್ಸಿಗೆ ಖುಶಿ ಕೊಡುತ್ತವೆ. ಹಣಕ್ಕಾಗಿ ಪೀಡಿಸುವವರು ಎಲ್ಲೂ ಕಾಣಸಿಗುವುದಿಲ್ಲ. ಅಚ್ಚುಕಟ್ಟಾದ ಮಾರ್ಗಸೂಚಿಗಳೇ ಪ್ರವಾಸಿಗರಿಗೆ ಮಾರ್ಗದರ್ಶಿಗಳು! ಸ್ಥಳದ ಬಗ್ಗೆ ವಿವರವಾದ ಮಾಹಿತಿಗಳು ಕೂಡ ಅಲ್ಲಿಯೇ ಲಭ್ಯ. ಅಲ್ಲಿ ಪ್ರವಾಸ ಮಾಡುವುದೆಂದರೆ ಅತ್ಯಂತ ಸುಖಕರ ಅನುಭವ ಎನ್ನುವುದರಲ್ಲಿ ಎರಡು ಮಾತಿಲ್ಲ.
ಇಷ್ಟೆಲ್ಲ ಅನುಕೂಲತೆಗಳು ನಮ್ಮಲ್ಲಿಯೂ ಇದ್ದರೆ ಎಷ್ಟು ಚೆನ್ನ ಎನಿಸುವುದು ನಿಜ. ಸ್ವಚ್ಛ, ಆರೋಗ್ಯಕರ ಮನಸ್ಸು, ಉದಾರತೆಯುಳ್ಳ ಅಧಿಕಾರಿಗಳಿಂದ ಇದು ಸಾಧ್ಯ. ಪ್ರವಾಸವು ಪ್ರಯಾಸವಾಗದಂತೆ ನಮ್ಮ ಪಯಣದ ತಯಾರಿಯನ್ನು ಸರಿಯಾಗಿ, ಯೋಜನಾಬದ್ಧವಾಗಿ ರೂಪಿಸುವುದು ಕೂಡಾ ಅಷ್ಟೇ ಅಗತ್ಯ. ಅಗತ್ಯವಿರುವ ಔಷಧಿಗಳ ಜೊತೆಗೆ ನಮ್ಮೊಡನೆ ಅತ್ಯಂತ ಕಡಿಮೆ ವಸ್ತುಗಳನ್ನು ಒಯ್ಯಬೇಕಾದುದು ಅತೀಮುಖ್ಯ. ಪ್ರವಾಸವೊಂದು ಹೋದಾಗ, ಕೆಲವೇ ದಿನಗಳಲ್ಲಿ ಸಹ ಪ್ರವಾಸಿ ಬಂಧುಗಳು ಅತ್ಯಂತ ಆತ್ಮೀಯರಾಗುವುದು ಬಹಳ ಸಂತೋಷಕೊಡುವ ಸಂಗತಿ.
ಆದರೆ ಇಂದಿನ ದಿನಗಳಲ್ಲಿ ಪ್ರವಾಸದ ಮಾತೆತ್ತುವಂತೆಯೇ ಇಲ್ಲವಲ್ಲ. ಲಕ್ಷಾಂತರ ಜನರ ಅನ್ನವಾಗಿರುವ ಈ ಪ್ರವಾಸೋದ್ಯಮವು ಸದ್ಯಕ್ಕೆ ಸ್ಥಗಿತಗೊಂಡಿದೆಯಾದರೂ, ಸುಂದರ, ಸುರಕ್ಷಿತ ದಿನಗಳು ಮುಂದೆ ಬರಲಿವೆ ಎಂಬ ನಿರೀಕ್ಷೆ ನಮ್ಮೆಲ್ಲರದು..ಅಲ್ಲವೇ?
-ಶಂಕರಿ ಶರ್ಮ, ಪುತ್ತೂರು.
ಚಂದದ ಲೇಖನ. ಪರಿಸ್ಥಿತಿ ಸುಧಾರಿಸಿ ಎಲ್ಲಿಗಾದರೂ ಪ್ರವಾಸ ಹೋಗಬೇಕು ಅನ್ನುವಷ್ಟು ಬೇಜಾರು ಮೂಡಿಸಿದೆ ಇವತ್ತಿನ ದಿನಗಳು
ಪ್ರವಾಸದ ಬಗ್ಗೆ ಹಲವು ಮಾಹಿತಿಗಳನ್ನು ಸುಂದರವಾಗಿ ನಿರೂಪಿಸಿದ್ದೀರಿ..ಚೆನ್ನಾಗಿದೆ. ಲೇಖನ
ಓದಿ ಮೆಚ್ಚಿದ ಸಾವಿತ್ರಿ ಅಕ್ಕ, ನಯನ ಮೇಡಂ, ಧನ್ಯವಾದಗಳು.
ನನಗೂ ಖುಷಿ ಆಯಿತು ಶಂಕರಿಅಕ್ಕಾ .. ನನ್ನನ್ನು ಅದೇಶ ಕ್ಕೆ ಹೋದಂತೆ ಆಯಿತು .. ವಿವರಿಸಿದ ವಿಧಾನ .ಅಚ್ಚುಕಟ್ಟು ಸ್ವಚ್ಚತೆಗೆ .
ವಿದೇಶದವರೇ .ಎರಡು ಮಾತಿಲ್ಲ .ಸೂಪರ್ ಬರಹ
ಕಾದು ನೋಡುವ ಪ್ರವಾಸ ಮಾಡಲು .