ನೆನಪು 14 : ಕವಿ ಎನ್ ಎಸ್ ಎಲ್ ಭಟ್ಟ ಮತ್ತು ಕೆ ಎಸ್ ನ

Spread the love
Share Button

ಕವಿ ಕೆ ಎಸ್ ನ

ಸಂತ ಶಿಶುನಾಳ ಶರೀಫರ ರಚನೆಗಳನ್ನು ಹಾಗೂ ಕನ್ನಡದ ಭಾವಗೀತೆಗಳನ್ನು  ಕ್ಯಾಸೆಟ್ಟುಗಳ ರೂಪದಲ್ಲಿ ಹೊರತರಲು ಕಾರಣರಾದ ಸಹೃದಯ ಕವಿ,ವಿಮರ್ಶಕ, ಚಿಂತಕ  ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ ಅವರು  ನಮ್ಮ ತಂದೆಯವರ ಆಪ್ತಸ್ನೇಹವಲಯಗಳಲ್ಲಿ ಇದ್ದವರೇ. ಎಪ್ಪತ್ತರ ದಶಕದಲ್ಲಿ ಕೆ ಎಸ್ ನ ರ ಶೈಲಿ ನವೋದಯದಿಂದ ನವ್ಯಕ್ಕೂ ಪಲ್ಲಟಗೊಂಡಿದ್ದನ್ನು ತಾರ್ಕಿಕವಾಗಿ ವಿಶ್ಲೇಷಿಸಿ “ಹೊರಳು ದಾರಿಯಲ್ಲಿ ಕೆ ಎಸ್ ನ ಕಾವ್ಯ” ಎಂಬ ಸುದೀರ್ಘ ಲೇಖನವೊಂದನ್ನು ಬರೆದು ಕಾವ್ಯಾಸಕ್ತರ ಗಮನ ಸೆಳೆದಿದ್ದರು. ಅಲ್ಲದೆ ಹಲವಾರು ಸಂಘ ಸಂಸ್ಥೆಗಳ ಆಶ್ರಯದಲ್ಲಿ ನಡೆದ ಸಾಹಿತ್ಯ ಕಾರ್ಯಕ್ರಮಗಳಲ್ಲಿ ನಮ್ಮ ತಂದೆಯವರ ಕಾವ್ಯ ಕುರಿತು ತಮ್ಮ ವಿಶಿಷ್ಟ ಶೈಲಿಯಿಂದ ಪರಿಚಯಿಸುತ್ತಿದ್ದರು.

1992ರಲ್ಲಿ ನಮ್ಮತಂದೆಯವರಿಗೆ ಬೆಂಗಳೂರು ವಿಶ್ವವಿದ್ಯಾಲಯದ ಗೌರವ ಡಿ.ಲಿಟ್ ಪದವಿ ಬಂದಾಗ ಎನ್ ಎಸ್ ಎಲ್ ಭಟ್ಟ ಕಲಾನಿಕಾಯದ ಡೀನ್ ಆಗಿದ್ದರು.

ನಮ್ಮ ತಂದೆಯವರನ್ನು  ಭೇಟಿಯಾಗಲು ಎನ್ ಎಸ್ ಎಲ್ ಭಟ್ಟ ಅವರು ಆಗಾಗ್ಗೆ ಮನೆಗೆ ಬರುತ್ತಿದ್ದರು.1985-1988ರ ಅವಧಿಯಲ್ಲಿ ನಾನು ನಮ್ಮ ಬ್ಯಾಂಕಿನ ಬನಶಂಕರಿ ಎರಡನೇ ಹಂತದ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದಾಗ ಅವರು ಬ್ಯಾಂಕ್ ನ ಗ್ರಾಹಕರಾಗಿದ್ದರು.ಆ ಕಾರಣದಿಂದ ಅವರು ನಮ್ಮ ಮನೆಗೆ ಬಂದಾಗ ನನ್ನ ಹತ್ತಿರ ವಿಶ್ವಾಸದಿಂದ ಮಾತನಾಡುತ್ತಿದ್ದರು.

ನಮ್ಮ ಬ್ಯಾಂಕ್ ಕನ್ನಡ ಸಂಘವು 1989ರಲ್ಲಿ ಆಯೋಜಿಸಿದ್ದ ಕಾವ್ಯ ರಸಗ್ರಹಣ ಶಿಬಿರಕ್ಕೆ ನಿರ್ದೇಶಕರಾಗಿ ಬಂದಿದ್ದರು.1985ರಲ್ಲಿ ನಮ್ಮ ಬ್ಯಾಂಕ್ ಅಧಿಕೃತವಾಗಿ ರಾಜ್ಯೋತ್ಸವ ಆಚರಿಸಲು ಆರಂಭಿಸಿದಾಗ ಅವರು   ಪ್ರತಿಭಾ ಪುರಸ್ಕಾರ ಸ್ವೀಕರಿಸಿದ್ದರು. 1989ರಲ್ಲಿ ಗೆಳೆಯ ಕಬ್ಬಿನಾಲೆ ವಸಂತ ಭಾರದ್ವಾಜ್ ಹಾಸನದಲ್ಲಿ ಕವಿ ಕಾವ್ಯ ಕಮ್ಮಟ ಆಯೋಜಿಸಿದ್ದಾಗ ಅದರ ನಿರ್ದೇಶನವನ್ನೂ ವಹಿಸಿಕೊಂಡು ಯಶಸ್ವಿಯಾಗಿ ನಡೆಸಿ ಎಲ್ಲ ಬ್ಯಾಂಕ್ ಕವಿಗಳ ಹೃದಯವನ್ನು ಗೆದ್ದಿದ್ದರು.

ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ

ಶಿಶುನಾಳ ಶರೀಫರ ತತ್ವಪದಗಳನ್ನು ದಕ್ಷಿಣ ಕರ್ಣಾಟಕದಲ್ಲೂ  ವ್ಯಾಪಿಸಿದ ಕೀರ್ತಿ ಎನ್ ಎಸ್ ಎಲ್ ಭಟ್ಟ ಅವರದು .ನಂತರ ಭಾವಗೀತೆಗಳ ಧ್ವನಿಸುರುಳಿಯನ್ನೂ ತರುವ ಅಭಿಯಾನದ ಮುಂದಾಳತ್ವ ವಹಿಸಿ ಮೈಸೂರು ಅನಂತಸ್ವಾಮಿ ರಾಗ ಸಂಯೋಜನೆಯಲ್ಲಿ ಭಾವಸಂಗಮ ಎಂಬ  ಹಲವು ಕನ್ನಡ ಪ್ರಸಿದ್ಧ ಕವಿಗಳ ರಚನೆಗಳ ಕ್ಯಾಸೆಟ್ ಹೊರಬರಲೂ  ಕಾರಣರಾದರು.

1982ರಲ್ಲಿ ಹೊರಬಂದ ನಮ್ಮ ತಂದೆಯವರ ಮೈಸೂರ ಮಲ್ಲಿಗೆಯ ಕ್ಯಾಸೆಟ್ ನ ಆರಂಭದಲ್ಲಿ  ಕವಿಯ ಬಗ್ಗೆ  ಹಾಗೂ ಅಲ್ಲಿನ  ಕವನಗಳ ಬಗ್ಗೆ ತಮ್ಮ ಆಕರ್ಷಕ ದನಿಯಲ್ಲಿ ಪ್ರಾಸ್ತಾವಿಕ ಪರಿಚಯ ನೀಡಿದ್ದರು . ಇದರಿಂದ ಮೈಸೂರ ಮಲ್ಲಿಗೆಯ ಕವನಗಳಿಗೆ ಇದರಿಂದ ಒಂದು ಉತ್ತಮ ಪ್ರಚಾರ ಲಭಿಸಿತು  .

ನಮ್ಮ ತಂದೆಯವರ ಬಗ್ಗೆ ಒಂದು ಗೌರವಪೂರ್ವಕ ಸ್ನೇಹಭಾವದಿಂದ ಹೊಂದಿರುವ   ಕವಿ ,ವಿಮರ್ಶಕ, ಹಾಗೂ ಅನುವಾದಕ ಹಾಗೂ ವಾಗ್ಮಿ  ಎನ್ ಎಸ್ ಎಲ್ ಭಟ್ಟ  ಅವರು.

(ಮುಂದುವರಿಯುವುದು….)

ಈ ಲೇಖನ ಸರಣಿಯ ಹಿಂದಿನ ಸಂಚಿಕೆ ಇಲ್ಲಿದೆ:   http://surahonne.com/?p=29633

-ಕೆ ಎನ್  ಮಹಾಬಲ
(ಕೆ ಎಸ್ ನ  ಪುತ್ರ, ಬೆಂಗಳೂರು )  

3 Responses

  1. ನಯನ ಬಜಕೂಡ್ಲು says:

    ಅಪರೂಪದ ವಿಚಾರಗಳನ್ನೊಳಗೊಂಡ ಲೇಖನ ಮಾಲೆ ಬಹಳ ಸೊಗಸಾಗಿ ಮೂಡಿ ಬರುತ್ತಿದೆ.

  2. ಶಂಕರಿ ಶರ್ಮ says:

    ನಿಮ್ಮ ತಂದೆಯರೊಡನೆ ಒಡನಾಡಿದ ಮಹಾನ್ ಕವಿಗಳ, ಸಾಹಿತಿಗಳ ಬಗ್ಗೆಯೂ ತಿಳಿಯುವ ಅವಕಾಶ ಕಲ್ಪಿಸುತ್ತಿರುವ ಈ ಲೇಖನ ಮಾಲೆಯು ಬಹಳ ಚೆನ್ನಾಗಿದೆ. ಧನ್ಯವಾದಗಳು ಸರ್.

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: