ಅಜ್ಜಯ್ಯನ ಗಾಂಧಿ
ಎಷ್ಟೋ ಕಾಲದಿಂದ ತೂಗುತ್ತಿತ್ತು ಗಾಂಧಿ ಫೋಟೋ
ಅಜ್ಜಯ್ಯನ ಮನೆ ಗೋಡೆಗೆ
ಫಳ ಫಳ ಗಾಜಿನ ಕಟ್ಟಿನಲ್ಲಿ ಭಾರವಾದ
ಕ್ಯಾಲೆಂಡರಿನ ಗಾಂಧಿ ಚರಕ ತಿರುಗಿಸುತ್ತ
ಸದಾ ತುಟಿ ಹಿಗ್ಗಿಸಿ ನಗುತ್ತಿದ್ದ
ಉಪ್ಪಿನ ಸತ್ಯಾಗ್ರಹಕ್ಕೆ ಅಂಕೋಲೆಗೆ ಬಂದ ಬಾಪುವನ್ನು
ಅಜ್ಜಯ್ಯ ದೂರದಿಂದ ಕಂಡಿದ್ದನಂತೆ
‘ಬಾಪು ಕೈ ಇಳಿಬಿಟ್ಟು ನೆಟ್ಟಗೆ ನಿಂತರೆ
ಅವನ ಹಸ್ತ ಅವನ ಮಂಡಿಗೆ ತಾಗುತ್ತಿತ್ತು’
ಸುದ್ದಿ ನಮಗೆಲ್ಲ ಕಣ್ತುಂಬುವಂತೆ ಹೇಳುತ್ತಿದ್ದ ಅಜ್ಜಯ್ಯ
‘ನಿಮ್ಗೆ ಗೊತ್ತಿಲ್ಲ ಗಾಂಧಿ ವಿಷ್ಣುವಿನ 11 ನೇ ಅವತಾರ’
ನಾವೆಲ್ಲ ಭಕ್ತಿಯಿಂದ ಕೈಯೆತ್ತಿ ಮುಗೀತಿದ್ದೆವು
ಕ್ರಮೇಣ ತೂಗು ಹಾಕಿದ ದಾರ ಇಲಿ ಕೊರೆಯಿತೊ ಗಾಜಿನ ಭಾರ ಹೆಚ್ಚಾಯಿತೋ
ನೋಡುನೋಡುತ್ತಿರುವಂತೆ ಒಂದಿನ
ಧಡ್ಡನೆ ಕೆಳಕ್ಕೆ ಬಿದ್ದ ಗಾಂಧಿ
ಆ ಸದ್ದಿಗೆ ಇಡೀ ಮನೆ ಬೆಚ್ಚಿಬಿತ್ತು
ಅಪ್ಪ ಗಾಜಿನ ಪುಡಿ ಉದುರಿಸಿ
ಹಗುರಾದ ಗಾಂಧಿ ತಲೆಗೆ ಬೇರೆ ದಾರ ಕಟ್ಟಿ
ಪುನಃ ಇಳಿಬಿಟ್ಟ
ಗಾಜಲ್ಲಿ ಮಸುಕಾಗಿದ್ದ ಬಾಪು ಕನ್ನಡಕ ಹಾಗೂ
ಚರಕದ ಗೋಲ ಈಗ ಸ್ವಚ್ಛ ಕಾಣುತ್ತಿತ್ತು
ಮೂಡುಗಾಳಿಯ ದಿನಗಳಲ್ಲಿ ಹೊರಖೋಲಿಯ
ತೆರೆದ ಕಟಾಂಜನದಿಂದ ಬೀಸಿ ಬರುವ ಗಾಳಿಗೆ
ಬರಿ ರಟ್ಟಿನ ಗಾಂಧಿ ತಡಪಡಿಸುತ್ತ ಹೊಯ್ದಾಡುತ್ತಿದ್ದ
ಕರಾವಳಿಯ ಒಂದು ದೊಡ್ಡ ಮಳೆಗಾಲದಲ್ಲಿ
ರಾತ್ರಿ ಬೆಳಗಾಗುವುದರೊಳಗೆ
ಅಜ್ಜಯ್ಯನ ಮನೆ ಮುಂಬದಿ ಕುಸಿದು ಹೋಯಿತು
ಆ ಅವಶೇಷದಲ್ಲಿ ಗುರುತೇ ಸಿಗದಂತೆ
ಅಜ್ಜಯ್ಯನ ಗಾಂಧಿ ಚರಕದೊಡನೆ ಸಮಾಧಿಯಾಗಿದ್ದ
ನಂತರ ಅಪ್ಪ ಕಟ್ಟಿಸಿದ ಹೆಂಚಿನಮನೆ
ಗೃಹ ಪ್ರವೇಶದ ದಿನವೇ ಅಜ್ಜಯ್ಯ ತೀರಿಹೋದದ್ದು
ಸ್ಮರಣೆಗೆ ಇರಲಿ ಅಂತ ಅಜ್ಜಯ್ಯನ ಫೋಟೋ ಜೊತೆ ಅಪ್ಪ
ಗಾಂಧಿ ಚಿತ್ರ ಕೊಂಡು ಫೋಟೋ ಕಟ್ಟಿಸಿ ತಂದ
ತೂಗಿ ಬಿಡಲು ಸಿಮೆಂಟು ಗೋಡೆಗೆ ಮೊಳೆ ಇಟ್ಟು
ಸುತ್ತಿಗೆಯಿಂದ ಬಡಿದೇ ಬಡಿದ
ಬಗ್ಗಿಕೊಂಡ ಮೊಳೆಗಳ ರಾಶಿಯೇ ಬಿತ್ತು ಪಕ್ಕದಲ್ಲಿ
ಜಪ್ಪಯ್ಯ ಅಂದರೂ ಸಿಮೆಂಟು ಗೋಡೆ ಜಗ್ಗಲಿಲ್ಲ
ಅಜ್ಜಯ್ಯನ ಜೊತೆ ಗಾಂಧಿಯೂ
ಸ್ಟೋರ್ ರೂಮಿನ ಮೂಲೆ ಸೇರಿದ
ನಾನು ಎಸೆಸ್ಸೆಲ್ಸಿ ಇರುವಾಗ ಅಪ್ಪ ಒಮ್ಮೆ ಗದರುವ ಸ್ವರದಲ್ಲಿ ಹೇಳಿದ್ದ
‘ಓದಿಕೊಳ್ಳದೇ ನಪಾಸಾದರೆ ಅಷ್ಟೇ
ಇಲ್ಲೇ ಥಕ್ಕರ್ ಬಾಪ್ಪಾ ಹೊಲಿಗೆ ಕ್ಲಾಸಿಗೆ ಸೇರಿಸಿಬಿಡ್ತೇನೆ’
ಅದರ ಹಿಂದೆಯೇ ಚಿಕ್ಕಪ್ಪ ಅಣ್ಣಂದಿರಾಧಿಯಾಗಿ ಹೋ ಎಂದು ನಕ್ಕಿದ್ದರು
ಇದೀಗ
ಸ್ಟೋರ್ ರೂಮಲ್ಲಿ ಎದಿರುಬದಿರಾಗಿ ಕೂತಿದ್ದಾರೆ ಅಜ್ಜಯ್ಯ ಮತ್ತು ಗಾಂಧಿ
-ಸುನಂದಾ ಕಡಮೆ
ಬದಲಾದ ಗಾಂಧೀಜಿ ಯ ಮೌಲ್ಯಗಳನ್ನು ಚಿತ್ರಿಸುವ ಮೂಲಕ ಬರೆದಿರುವ ಕವನ ಚೆನ್ನಾಗಿದೆ ಮೂಡಿ ಬಂದಿದೆ.ಅಭಿನಂದನೆಗಳು ಮೇಡಂ.
ಥ್ಯಾಂಕ್ಯೂ
Nice one.
ಚೆನ್ನಾಗಿ ಮೂಡಿ ಬಂದಿದೆ
Thank you
ಸುಂದರವಾಗಿದೆ ಮೇಡಂ..
ಚಂದದ ಕವನ.