ಪೆರೂವಿನ ವಿಚ್ ಮಾರ್ಕೆಟ್
‘ದಿ ಮೆರ್‍ಕಾಡೋ ಡಿ ಬ್ರೂಜಸ್’ ಪೆರೂವಿನ ಭಾಷೆಯಲ್ಲಿ ಈ ಮಾರುಕಟ್ಟೆಯನ್ನು ಕರೆಯುವ ಬಗ್ಗೆ.ಅಂದರೆ ಮಾಟಗಾತಿಯರ ಮಾರುಕಟ್ಟೆಎಂದರ್ಥ.ಪೆರೂವಿನ ಲಿಮಾದಲ್ಲಿ ಈ ಮಾರುಕಟ್ಟೆಇದೆ.ಈ ಮಾರುಕಟ್ಟೆಯಲ್ಲಿ ಮಾರಾಟವಾಗುವ ವಸ್ತುಗಳು ಸಾಮಾನ್ಯವಾಗಿ ಊಹಿಸಲಾಗದಂಥಹವು.ಔಷಧ ಗುಟುಕುಗಳು, ಸಂಧಿವಾತಕ್ಕಾಗಿ ಹಾವಿನ ಕೊಬ್ಬು, ವಿವಿಧ ವಿಚಿತ್ರ ಮೂಲಿಕೆಗಳಿಂದ ತಯಾರಿಸಿದ ನುಣುಪಾದ ಕಣಕ ಇವುಗಳ ಜೊತೆಗೆಆರೋಗ್ಯ ವೃದ್ಧಿಗಾಗಿ ಅನೇಕ ಮಸಾಲೆ ಪದಾರ್ಥಗಳಿಗೆ ಇದು ಹೆಸರುವಾಸಿ.ಈ ಮಸಾಲೆಗಳಲ್ಲಿ ಕೆಲವೊಂದು ಕಪ್ಪೆಗಳೊಂದಿಗೆ ಸಂಯೋಜಿಸಲ್ಪಟ್ಟಿದ್ದು, ಅದು ಸಂಧಿವಾತ ನಿವಾರಣೆಗೆ ಉಪಯುಕ್ತ ಎಂಬ ಪರಿಕಲ್ಪನೆಅವರಲ್ಲಿದೆ. ಶಾಪ ವಿಮೋಚನೆಗೆ ಅವಶ್ಯವಿರುವ ಕಪ್ಪು ಮೇಣದ ಬತ್ತಿಗಳು ಹಾಗೂ ಇನ್ನೂ ಅನೇಕಾನೇಕ ಚಿತ್ರ ವಿಚಿತ್ರ ಮತ್ತು ಆಕರ್ಷಕ ವಸ್ತುಗಳನ್ನು ಈ ಮಾರುಕಟ್ಟೆಯಲ್ಲಿ ಕಾಣಬಹುದು.
ಈ ಮಾರುಕಟ್ಟೆಯಲ್ಲಿರುವ ಮಾಟಗಾತಿಯರು, ಸಾಮಾನ್ಯವಾಗಿ ಮಾಟಗಾತಿಯರು ಹಾಕುವ ನಿರ್ದಿಷ್ಟವಾದ ಉದ್ದನೆಯ ಟೋಪಿಗಳನ್ನು ಧರಿಸಿರುವುದಿಲ್ಲ. ಕೈಯಲ್ಲಿ ಮಾಟಗಾತಿಯರ ದಂಡವನ್ನೂ ಹಿಡಿದಿರುವುದಿಲ್ಲ. ಹಾಗಾಗಿ ಅವರುಗಳು ಇದನ್ನೆಲ್ಲಾ ಮಾಡುತ್ತಾರೆ ಎಂದು ನಂಬುವುದೂ ಕಷ್ಟವಾಗುತ್ತದೆ.ಅವರುಗಳು ಅತ್ಯಂತ ಪರಿಣಾಮಕಾರಿ ಹಾಗೂ ಶಕ್ತಿಯುತ ಔಷಧಗಳನ್ನು ವಿವಿಧ ಮೂಲಿಕೆಗಳಿಂದ ತಯಾರಿಸುವುದರೊಂದಿಗೆ, ಜಾನಪದ ಪರಿಹಾರೋಪಾಯಗಳನ್ನು ಮೈಗೂಡಿಸಿಕೊಂಡಿದ್ದಾರೆ. ಪೆರೂವಿನ ಹೆಚ್ಚಿನ ಜನಸಂಖ್ಯೆಯ ದೈಹಿಕ ಹಾಗೂ ಆದ್ಯಾತ್ಮಿಕಗುಣ ಲಕ್ಷಣಗಳ ದುಷ್ಪರಿಣಾಮಗಳನ್ನು ಗುಣಪಡಿಸಲು ಅವುಗಳ ಉಪಯೋಗ ಮಾಡುತ್ತಾರೆ.ಇಲ್ಲಿನ ಮಾರುಕಟ್ಟೆಯಲ್ಲಿ ತಯಾರಾಗುವಗುಟುಕು ಔಷಧಗಳು ಎಲ್ಲವನ್ನೂ, ಅಂದರೆ ಜಡತ್ವದಿಂದ ಮೊದಲ್ಗೊಂಡು ಭಗ್ನಹೃದಯದವರೆಗೂ, ಗುಣಪಡಿಸುವ ಶಕ್ತಿ ಹೊಂದಿದೆ ಎಂದು ಹೇಳಲಾಗುತ್ತದೆ.
ಈ ಮಾರುಕಟ್ಟೆಯು ‘ಗಮರಾ’ ನಿಲ್ದಾಣದ ಕೆಳಗೆ, ನೆಲಮಹಡಿಯಲ್ಲಿ ಹರಡಿಕೊಂಡಿದೆ. ಈ ಕಾರಣದಿಂದಾಗಿ ಬಹಳಷ್ಟು ಸ್ಥಳೀಯರಿಗೇ ಇದರ ಇರುವು ತಿಳಿದಿಲ್ಲ. ಇದರ ಅಸ್ಥಿತ್ವದ ಬಗ್ಗೆ ಯಾವುದೇ ಕಲ್ಪನೆ ಸಹ ಅವರುಗಳಿಗೆ ಇಲ್ಲ. ಹಣವಂತರಿಗೆ ಮಾತ್ರ ಮೀಸಲಾದ ಈ ಮಾರುಕಟ್ಟೆ ಎಂದು ಇದರ ಬಗೆಗಿನ ಪುರಾಣ ಕಥೆಗಳು ಹೇಳಿದರೂ, ಜನ ಸಾಮಾನ್ಯರೂ ಹೋಗಿ ತಮಗೆ ಬೇಕಾದ, ಇಷ್ಟವಾದ ಅವಶ್ಯ ವಸ್ತುಗಳನ್ನು ನಿರಾಯಾಸವಾಗಿ ಇಲ್ಲಿ ಖರೀದಿಸಬಹುದು. ಈ ಮಾರುಕಟ್ಟೆ ಬಾಹ್ಯ ಪ್ರಪಂಚದೊಡನೆ ಕೇವಲ ಒಂದೇ ಒಂದು ಗೆರೆಯಿಂದ ಬೇರ್‍ಪಡಿಸಲ್ಪಟ್ಟಿದೆ.ಈ ಮಾರುಕಟ್ಟೆಯೊಳಗೆ ಅಡಿಯಿಟ್ಟೊಡನೆ ಕಾಣಬರುವುದು, ಗಾಜಿನಗೂಡಿನಲ್ಲಿ ಪ್ರದರ್ಶನಕ್ಕೆಇಟ್ಟಿರುವ ವಿವಿಧ ಅಳತೆಯ ಗಾತ್ರದ ಹಾವಿನ ಚರ್ಮಗಳು. ಅಷ್ಟೇ ಸಾಕು ಮೈನವಿರೇಳಲು.
‘ದಿ ಮೆರ್‍ಕಾಡೋ ಡಿ ಬ್ರೂಜಸ್’ – ಮಾಟಗಾತಿಯರ ಮಾರುಕಟ್ಟೆಯ ಹಿಂದಿರುವ ಅತಿ ಮುಖ್ಯ ಹಾಗೂ ಪ್ರಮುಖ ಉದ್ದೇಶ, ಪೆರೂವಿನ ಪ್ರಾಚೀನ ಸಂಪ್ರದಾಯಗಳನ್ನು ಮರಳಿ ಮುನ್ನೆಲೆಗೆ ತರುವುದು.ಇದರೊಂದಿಗೆ ಅಲ್ಲಿನ ಜನಸಾಂಪ್ರದಾಯಿಕ ಔಷಧಿಗಳನ್ನು ಉಪಯೋಗಿಸುವ ಅಭ್ಯಾಸವನ್ನು ವೃದ್ಧಿಸುವುದು. ಇದು ಬಹಳ ವಿಚಿತ್ರವಾಗಿ ಕಂಡು ಬಂದರೂ, ಪೆರೂವಿನ ಸಮಾಜದ ಸ್ಥಳೀಯಜನರಲ್ಲಿ ಈ ವೈದ್ಯಕೀಯ ವಿಧಾನವನ್ನುವ್ಯಾಪಕವಾಗಿ ಅಭ್ಯಾಸ ಮಾಡುವ ಮನಸ್ಸಿದೆ.
ಈ ಮಾರುಕಟ್ಟೆಯಲ್ಲಿ ಅನೇಕ ಧಾರ್ಮಿಕ ಪೂಜೆ ಪುನಸ್ಕಾರಗಳಿಗೆ ಅವಶ್ಯವಿರುವ ವಸ್ತುಗಳು, ದೇವರ ಅರ್ಪಣೆಗೆ ಬೇಕಿರುವ ಪದಾರ್ಥಗಳು, ಊಹಿಸಬಹುದಾದ ಹಾಗೂ ಊಹಿಸಲು ಸಾದ್ಯವಿಲ್ಲದ ವಸ್ತುಗಳು ಇಲ್ಲಿ ಯಥೇಚ್ಚವಾಗಿ ಲಭ್ಯವಿದೆ. ಧಾರ್ಮಿಕ ವಸ್ತುಗಳಲ್ಲಿ ಹೆಬ್ಬಾವಿನ ಚರ್ಮ, ಸಮುದ್ರ ಚಿಪ್ಪುಗಳು, ಇದರೊಂದಿಗೆ ಸ್ಥಳೀಯ ಕೊಳಕು, ಕಲ್ಲುಗಳು, ಮಸಾಲೆ ಪದಾರ್ಥಗಳು ಮತ್ತು ಹಲವು ಬೀಜಗಳು ಸೇರಿ ತಯಾರಿಸಿದ, ಸ್ಥಳೀಯ ಭಾಷೆಯಲ್ಲಿ ಹಟಮ್ ಹಂಪಿ ಎನ್ನುವ ಮಿಶ್ರಣ ಮತ್ತು ವಿವಿಧ ಕಳ್ಳಿ ಎಲೆಗಳು ಇಲ್ಲಿ ಲಭ್ಯ.
ಈ ಮಾರುಕಟ್ಟೆಯಲ್ಲಿ ಹಲವು ಮಾಟಗಾತಿ ವೈದ್ಯರು ಹಾಗೂ ನೋವನ್ನು ಉಪಶಮನಗೊಳಿಸುವ ವೈದ್ಯರು ಗ್ರಾಹಕರ ಸೇವೆಗೆ ಲಭ್ಯವಿರುತ್ತಾರೆ.ಅಗತ್ಯವಿರುವವರು ಅವರುಗಳೊಡನೆ ಚರ್ಚಿಸಬಹುದು, ವಿಚಾರಣೆ ಮಾಡಬಹುದು ಮತ್ತು ಮಾರ್ಗದರ್ಶನ ಸಹ ಪಡೆಯಬಹುದು. ಅವರುಗಳು ಗ್ರಾಹಕರ ಸೇವೆಗೆ ಸದಾ ಸಿದ್ಧ.
-ಕೆ.ವಿ.ಶಶಿಧರ
ಹಾರರ್ ಕಥೆ ಓದಿದ ಹಾಗಾಯಿತು ಸರ್. ವಿಭಿನ್ನ ಹಾಗೂ ಮಾಹಿತಿಪೂರ್ಣ ಬರಹ.
ಬಹು ವಿಚಿತ್ರ.. ಆದರೂ ಸತ್ಯ! ನಂಬಲಸಾಧ್ಯ ಆಚರಣೆಗಳು ಇನ್ನೂ ಪ್ರಪಂಚದಲ್ಲಿ ಉಳಿದುಕೊಂಡಿರುವುದರ ಪುರಾವೆಯಂತಿದೆ ಈ ವಿಶೇಷ ಲೇಖನ..ಧನ್ಯವಾದಗಳು ಸರ್.
ಓಹ್..!! ಎಷ್ಟೊಂದು ಆಶ್ಚರ್ಯಕರವಾದ ವಿಚಾರ. ನಮಗೆ ಅರಿವಿಲ್ಲದ ವಿಷಯಗಳನ್ನು ಕುರಿತು ಓದಿ ತಿಳಿದುಕೊಳ್ಳುವುದು ನಿಜಕ್ಕೂ ಸಂತೋಷ. ಬರಹಕ್ಕಾಗಿ ನಿಮಗೆ ಧನ್ಯವಾದಗಳು.