ಗಝಲ್
ಕರಿಮಬ್ಬು ಹರಡುತ ಎಗ್ಗಿಲ್ಲದೆ ಕುಗ್ಗಿದ
ಪ್ರಭಾಪ್ರಸರಣ ಕಾಡಿಸಿತು ಸಖಿ
ಬಿರುನುಡಿ ಉಕ್ಕೇರಿ ಎಗ್ಗಳದಿ ಮೈದಳೆದು
ಹೃದಯದಂಗಣ ಬಾಡಿಸಿತು ಸಖಿ
ಕರುಬುವ ಜಿದ್ದಿನ ಕುಟಿಲತೆ
ವೈರಾಗ್ಯ ಸೃಷ್ಟಿಸದೇ ಮುನ್ನಡೆಗೆ
ಬರಡುತನ ನಿರ್ಲಕ್ಷಿಸಿ ಮುನ್ನುಗ್ಗಲು
ಧೈರ್ಯಸೈರಣೆ ಕೊಡಿಸಿತು ಸಖಿ
ನಿರಾಶೆ ಸರಿದ ಮನದಲಿ ನಿರೀಕ್ಷೆ
ತೋರಣವೆದ್ದು ನಿಂತಿತು
ಭರವಸೆಯ ಬೆಳಕಿನ ಕನ್ನಡಿ ಬದುಕಿಗೆ
ಆಶಾಕಿರಣ ಮೂಡಿಸಿತು ಸಖಿ
ತಿರೆಧರಿಸಿದ ಕ್ಷಮೆಯನು ಯೋಚಿಸಿ
ಚಿತ್ತದ ಭೀತಿಯು ತೊಲಗಿತು
ಸಿರಿಯುಕ್ಕಿದ ಚೆಲುವಲಿ ಪಲ್ಲವಿಸಿ
ಲತಾಕಾವಣ ನೋಡಿಸಿತು ಸಖಿ
ಪರಿಪುಷ್ಟ ಹಾಸದೆಸಳುಗಳ ಹರಡಿಸುತ
ಪದ್ಮಗಳು ಸೊಗಸುಕ್ಕಿ ಬಿರಿಯಿತು
ಪರಿಶೋಭಿತ ಸೌಂದರ್ಯದಲಿ
ಕಾಂತಿತೋರಣ ಕೂಡಿಸಿತು ಸಖಿ||
-ಪದ್ಮಾ ಆಚಾರ್ಯ, ಪುತ್ತೂರು
ಮುದುಡಿದ ಮನಸು ಹಂತ ಹಂತವಾಗಿ ಭರವಸೆಯ ತುಂಬಿಕೊಂಡು ಅರಳುವ ಬಗೆಯನ್ನು ವಿವರಿಸಿದ ಪರಿ ಸೊಗಸಾಗಿದೆ.
ಸಕಾರಾತ್ಮಕ ಚಿಂತನೆ ಗೆ ಇಂಬುಗೊಡುವಂತಹ ಗಝಲ್ ಒಂದು ಸೆಲ್ಯೂಟ್ ಮೇಡಂ.
SUPER ಗಝಲ್
ಕರಿಮಬ್ಬು ಕವಿದು ಕದಡಿದ ಮನದಲ್ಲಿ ಅಶಾಪುಷ್ಪ
ಪಲ್ಲವಿಸಿದ ಬಗೆ ಗಝಲ್ ನಲ್ಲಿ ಪಡಿಮೂಡಿದ ರೀತಿ ಅನನ್ಯ.. ಧನ್ಯವಾದಗಳು ಮೇಡಂ.