ಅಮ್ಮನ ಕೈಯಲ್ಲಿ ಅರಳಿದ ಕೊಡೆ.
ದುಡಿಯುವ ಕೈ ಎರಡು, ತಿನ್ನುವ ಬಾಯಿಗಳು ಹನ್ನೆರಡು ಎನ್ನುವಂತಿದ್ದ ಕಾಲ ನನ್ನ ಬಾಲ್ಯ. ದೊಡ್ಡ ಸಂಸಾರದ ಹೊಣೆ ಹೊತ್ತ ಹಿರಿಯರು ಖರ್ಚುವೆಚ್ಚಗಳನ್ನು ನಿಭಾಯಿಸಲು ಹಲವಾರು ನವೀನ ಉಪಾಯಗಳನ್ನು ಮಾಡುತ್ತಿದ್ದರು. ಅದಕ್ಕೆ ನನ್ನಮ್ಮನೂ ಹೊರತಾಗಿರಲಿಲ್ಲ. ಅಂತಹ ಉಪಾಯಗಳಲ್ಲಿ ಮಕ್ಕಳಿಗೆ ಮಳೆಗಾಲದಲ್ಲಿ ರಕ್ಷಣೆಗಾಗಿ ತಯಾರಿಸಿದ ಕೊಡೆಯೂ ಒಂದು.
ಅಮ್ಮ ನಾವು ಐದು ಜನ ಮಕ್ಕಳಿಗಾಗಿ ನಮ್ಮ ಎತ್ತರ, ಗಾತ್ರಗಳನ್ನು ಅನುಸರಿಸಿ ತಮ್ಮಲ್ಲಿದ್ದ ಬಣ್ಣಮಾಸಿದ ಹತ್ತಿಯ ಸೀರೆಗಳನ್ನು ನಿಲುವಂಗಿಯಾಕಾರದಲ್ಲಿ ತಲೆಯಿಂದ ಕಾಲಿನವರೆಗೂ ಹಿಂಭಾಗದಿಂದ ತೊಟ್ಟುಕೊಳ್ಳುವಂತೆ ಕತ್ತರಿಸಿಕೊಂಡು ಸೊಂಟದಿಂದ ಕೆಳಕ್ಕೆ ಅಗಲವಾಗಿ ಕೆಳಗಿಳಿದು ನಮ್ಮ ಶಾಲಾ ಚೀಲವೂ ಅದರೊಳಗೆ ಅಡಕವಾಗುವಂತೆ ವಿನ್ಯಾಸಗೊಳಿಸುತ್ತಿದ್ದರು. ಬಟ್ಟೆಯಂಗಡಿಯಲ್ಲಿ ಅನೇಕ ಸಂದರ್ಭಗಳಲ್ಲಿ ಕೊಟ್ಟಿದ್ದ ಪ್ಲಾಸ್ಟಿಕ್ ಕವರ್‌ಗಳನ್ನು ಅಗಲವಾಗಿ ಬಿಡಿಸಿ ಮೊದಲು ತಯಾರಿಸಿಟ್ಟುಕೊಂಡಿದ್ದ ಸೀರೆಯ ನಿಲುವಂಗಿಯ ಮೇಲಿಟ್ಟು ಎರಡಕ್ಕೂ ಸೇರಿಸಿ ಹೊಲಿಗೆ ಹಾಕಿ ಭದ್ರಪಡಿಸುತ್ತಿದ್ದರು. ಅವೆರಡೂ ಅತ್ತಿತ್ತ ಸರಿದುಹೋಗದಂತೆ ಮಧ್ಯೆ ಮಧ್ಯೆ ಟಾಕುಗಳನ್ನು ಹಾಕುತ್ತಿದ್ದರು. ಕುತ್ತಿಗೆಯ ಅಕ್ಕಪಕ್ಕ ಮತ್ತು ಸೊಂಟದ ಅಕ್ಕಪಕ್ಕ ಬಟ್ಟೆಯ ಲಾಡಿಗಳನ್ನು ಹೊಲಿಯುತ್ತಿದ್ದರು. ಅಂಚುಗಳಿಗೆ ಬಟ್ಟೆಯಿಂದ ಉದ್ದಕ್ಕೂ ಕೂಳೆ ಕಾಣಿಸದಂತೆ ಹೊಲಿಗೆ ಹಾಕುತ್ತಿದ್ದರು. ಇದು ಹೆಮ್ಮಿಂಗಿನಂತಿರುತ್ತಿತ್ತು. ಇದು ಅಂದಿನ ಅಂಗಡಿಯ ರೈನ್‌ಕೋಟಿಗಿಂತ ಯಾವುದೇ ರೀತಿಯಲ್ಲಿ ಕಡಿಮೆ ಇರಲಿಲ್ಲ.
ನಾವುಗಳು ಅದನ್ನು ತಲೆಯ ಮೇಲಿನಿಂದ ಬೆನ್ನಿನ ಮೇಲೆ ಧರಿಸಿ ಲಾಡಿಗಳನ್ನು ಕಟ್ಟಿಕೊಳ್ಳುತ್ತಿದ್ದೆವು. ನಮಗೆ ಮಳೆಯಿಂದ ಒಳ್ಳೆಯ ರೀತಿಯಲ್ಲಿ ರಕ್ಷಣೆ ದೊರಕುತ್ತಿತ್ತು. ಬೇಸಗೆ ಕಾಲದಲ್ಲಿ ಅಮ್ಮನು ಇವುಗಳನ್ನು ತಯಾರಿಸಿ ಇಡುತ್ತಿದ್ದರು. ಮಳೆಗಾಲ ಮುಗಿದೊಡನೆ ಅವುಗಳನ್ನು ಶುಭ್ರವಾಗಿ ತೊಳೆದು ಚೆನ್ನಾಗಿ ಒಣಗಿಸಿ ಗೂಟಕ್ಕೆ ನೇತುಹಾಕುತ್ತಿದ್ದೆವು. ಮರುವರ್ಷ ಮಳೆಗಾಲದಲ್ಲಿ ಅವು ಉಪಯೋಗಕ್ಕೆ ಸಿದ್ಧ. ಏನಾದರೂ ಸಣ್ಣಪುಟ್ಟ ನ್ಯೂನತೆಗಳಾಗಿದ್ದರೆ ಅವುಗಳ ರಿಪೇರಿ ಮಾಡಿಕೊಡುತ್ತಿದ್ದರು. ಕಾಲೇಜಿನ ಮೆಟ್ಟಿಲು ಹತ್ತುವವರೆಗೂ ನಾವು ಯಾವುದೇ ಮುಜುಗರವಿಲ್ಲದೆ ಇಂಥಹ ಕೊಡೆಗಳ ಅಡಿಯಲ್ಲೇ ಮಳೆಗಾಲ ಕಳೆಯುತ್ತಿದ್ದೆವು.
ಈಗಲೂ ಮಳೆ ಬಂದಾಗ ನನ್ನಮ್ಮ ಮಾಡಿಕೊಡುತ್ತಿದ್ದ ಅಮ್ಮನ ಕೈಯಲ್ಲಿ ಅರಳುತ್ತಿದ್ದ ಕೊಡೆ ನೆನಪಿಗೆ ಬರುತ್ತದೆ. ಹಾಗೆಯೇ ಅವರಿಗಿದ್ದ ಜಾಣ್ಮೆಯೂ ನೆನಪಾಗುತ್ತದೆ.
-ಬಿ. ಆರ್. ನಾಗರತ್ನ. ಮೈಸೂರು.
ಬುದ್ಧಿವಂತಿಕೆಯ ಮೂಲ ಈಗ ತಿಳಿಯಿತು.❤️
ಅಮ್ಮ ಹೊಲಿದ ಮಳೆ ಅಂಗಿ, ಶಾಲೆ,ಮಳೆಗಾಲ ಕಣ್ಣಿಗೆ ಕಟ್ಟುವಂತಿದೆ
ಹಿರಿಯರ ಜಾಣ್ಮೆಯ ಜೀವನ ವಿಧಾನಕ್ಕೆ ನಿಮ್ಮ ತಾಯಿಯವರ ಬದುಕೂ ಒಂದು ಉದಾಹರಣೆ. ನಿಮ್ಮ ನೆನಪನ್ನು ನಮ್ಮೊಡನೆ ಹಂಚಿಕೊಂಡಿರುವುದಕ್ಕೆ ಧನ್ಯವಾದಗಳು.
ಬದುಕು ಕಲಿಸುವ ಪಾಠಗಳು ಹಲವು. ಗೃಹಿಣಿಯರ ಇಂತಹ ಅವೆಷ್ಟೋ ಕೆಲಸಗಳು ತೆರೆಮರೆಯಲ್ಲಿ ಉಳಿಯುವುದೇ ಹೆಚ್ಚು.
ಆದರೆ ಅದು ರೈನ್ ಕೋಟ್. ಕೊಡೆ ಅಲ್ಲ ಎನಿಸುತ್ತದೆ ಮೇಡಂ.
ಹೆಣ್ಣ್ಮಕ್ಕಳ ಜಾಣತನ ಮೊದಲೆಲ್ಲ ಹೀಗೆ ಏನಾದರೊಂದು ಮಾಡುವರು ಕೈಚಳಕ. ನಿಮ್ಮ ಅಮ್ಮಜಾಣೆ.
ನಾನು ಬರೆದ ಲೇಖನ ಕ್ಕೆ ತಮ್ಮ ಅಭಿಪ್ರಾಯ ಅನಿಸಿಕೆಗಳನ್ನು ತಿಳಿಸಿದವರೆಲ್ಲರಿಗೂ ನನ್ನ ಧನ್ಯವಾದಗಳು.
ಸೊಗಸಾದ ಬರಹ.
ಎಲ್ಲಾ ಸುಲಭವಾಗಿ ಕೈಗೆಟಕುವ ಈಗಿನ ಕಾಲದಲ್ಲಿ ಹಳೆಯ ಕ್ರಿಯಾತ್ಮಕ ಯೋಚನೆಗಳು ಯಾರಿಗೂ ಬರುವುದೇ ಇಲ್ಲವೇನೋ ನಿಮ್ಮ ನೆನಪು
ಉಳಿತಾಯದ ಮನೋಭಾವ, ಜಾಣ್ಮೆ, ಕೌಶಲಗಳನ್ನು ಕಲಿಸುತ್ತದೆ ಎಂಬ ಪಾಠವನ್ನು ಸೊಗಸಾಗಿ ಹೇಳಿದೆ, ಈ ನಿಮ್ಮ ಲೇಖನ.ಅಭಿನಂದನೆಗಳು.