ಗಮ್ಯ
ನಮ್ಮದಲ್ಲಿ ನೆಲೆ ಬಂದೆವೆನೆ ಇಲ್ಲಿ ಏನಿದೇನು ಮರ್ಮ
ಸುಳ್ಳೆ ಬಾಳು ತೊಡಕಾಗಿಸುತ್ತ ಮರಮರಳಿ ಬರುವ ಕರ್ಮ
ಬಾಳಲಾಗದೇ ಬೆಂಕಿಯಾಗದೊಲು ತಂಗಾಳಿಯಾಗಿ ಜನಕೆ
ಮುಗಿದಂತೆ ಕೆಲಸ ಕರೆ ಬಂದಿತೆನಲು ಕೊರಗಾಗದಂತೆ ಮನಕೆ
ಸಂತನಾಗಲಿಕೆ ಸಾಧ್ಯವಿಲ್ಲದಿರೆ ಕೊಂತವಾಗಲೇಕೆ
ಕುಂತು ನಿಂತು ಮರೆ ಮಾತಿನಲ್ಲಿ ಕಾಪಟ್ಯ ಹುಸಿಯದೇಕೆ
ಧನ ಪದವಿ ಸ್ಥಾನ ಅಧಿಕಾರವೇನು ನೆರವಾಗಲಿಕ್ಕೆ ಬೇಡಾ
ಕರುಣೆ ತುಂಬಿದೆದೆ ಕಕ್ಕುಲಿತೆಯ ಕರ ಚಾಚದೇನು ನೋಡಾ
ಹಸಿವು ನಿದ್ರೆ ಭಯ ಮೈಥುನದ ಬಯಕೆ ಮೃಗದಂತೆ ನಮಗು ಇರದೇ
ಇಷ್ಟೆ ಗೋಲದಲ್ಲಿ ಸುತ್ತುತ್ತಲಿರಲು ಮನುಜರೆನ್ನಬಹುದೇ
ಎಷ್ಟೆಷ್ಟೊ ಜನ್ಮತಳೆದಿರುವೆವಂತೆ ನೆನಪಾರಿಗಿಹುದು ಹೇಳು
ಪುಣ್ಯಗಳ ಫಲಿತ ನರಜನುಮವಿರಲು ಹುಸಿಹೋಗಲೇಕೆ ಬಾಳು
ಹೆತ್ತವರು ಬಳಗ ನೆಲ ದೇಶ ಭಾಷೆ ನಮ್ಮ ಆಯ್ಕೆಗಿತ್ತೇ
ಮೈಮಾಟ ಬಣ್ಣ ಮೇಧಾವಿತನವು ಕೊಳಲು ಬಿಕರಿಗಿತ್ತೇ
ವಿಕಲಾಂಗತನವ ಬುದ್ಧಿಮಾಂದ್ಯತೆಯ ಬಯಸಿ ಪಡೆವರೇನು
ಕುಬ್ಜ ಕಾಯವನು ವಿಕೃತ ರೂಪವನು ಹೊರೆಯೆ ಸುಲಭವೇನು
ಪಡೆದು ಬಂದೆವೆನೆ ಸುಕೃತವೆನಲಷ್ಟೆ ಸಾಧನೆಯ ಪಟ್ಟಿಗಲ್ಲ
ನಡೆ ನುಡಿಯ ಮದವ ತೊಡೆಯುತ್ತ ವಿನಯ ಬೆಳೆಸಿಕೊಳೆ ಕಷ್ಟವಲ್ಲ
ಹಿಂದು ಮುಂದಿನದ ಬಲ್ಲವರು ಇಹರೆ ಇಂದು ನಾಳೆಗಿಹುದೇ
ಬಂದುದಾಯ್ತಿನ್ನು ಕೊರಗಿ ಕಳೆಯದಳಿಸುತ್ತ ಹೋಗಬರದೇ
ಕಿರುಗಾತ್ರವೇನು ಕೊರೆಯಲ್ಲ ಸಿದ್ಧಿಗೆ ಪಾತ್ರ ಬಹಳ ಮುಖ್ಯ
ಬೇಡಿ ಬಲಿ ಮುರಿದ ವಾಮನನ ನೋಡಿ ಮಾಡಬಹುದು ಸಖ್ಯ
ವ್ಯಕ್ತಿಯಾಗಿರದೆ ಶಕ್ತಿಯಾಗೆದ್ದು ಸಂಕವಾದವರ ಹಾದಿ
ಸದ್ವಿನಯ ಛಲವು ಸೌಜನ್ಯ ದೃಢವು ಪಟ್ಟಿಯಲಿ ಮೊದಲ ಯಾದಿ
ಪಡೆದುದೂ ಇಹುದು ಕಳೆದುದೂ ಇಹುದು ನಾನೆಲ್ಲಿ ಹುಡುಕು ಮೊದಲು
ತೊಡಕಾಗದಂತೆ ಅಡಿಗಡಿಗೆ ಸಿಕ್ಕು ತಡೆವುದನು ಮಾಡು ಬದಲು
ಏಳುಬೀಳುಗಳ ಪಯಣದುದ್ದಕೂ ಕೈಮರವ ನೆಡುತಲಿರಲು
ಮುತ್ತು ಬಿತ್ತದಲೆ ಮರೆತ ಕಂಕರಕೆ ಆಗಬಹುದು ಬರಲು
(ಕೊಂತ = ಭರ್ಚಿ, ಈಟಿ.
ಬರಲು = ಪೊರಕೆ.
ಸಂಕ = ಸೇತುವೆ
ಕಂಕರ = ಕಲ್ಲು)
– ರತ್ನ
Very ನೈಸ್. ನಿಮ್ಮ ವಿವಿಧ ಪ್ರಾಕಾರದ ಬರಹಗಳು ಚಂದ ಮೇಡಂ ( ಕಥೆ, ಲೇಖನ, ಕವನ ಹೀಗೆ )
ಧನ್ಯವಾದಗಳು ನಯನ ಅವರೆ
ಎಂದಿನಂತೆ ಇಂದೂ ಚೆನ್ನ..ನಿಮ್ಮ ಕವನ. ಏರು ಪೇರಿನ ಈ ಜೀವನ ಪಯಣದುದ್ದಕ್ಕೂ ಸಂಭಾಳಿಸುತ್ತ ಸಾಗುವ ಪರಿಯನ್ನು ವಿಶದೀಕರಿಸಿ ರೀತಿ ಮನ ಮುಟ್ಟುವಂತಿದೆ.
ಧನ್ಯವಾದಗಳು ಶಂಕರಿ ಶರ್ಮಾ ಅವರೆ