ಕವಿ ಕೆ ಎಸ್ ನ ನೆನಪು 6 : ಹಿರಿಯಣ್ಣ ಮಾಸ್ತಿ ಹಾಗೂ ಕೆ ಎಸ್ ನ

Spread the love
Share Button

ಕವಿ ಕೆ ಎಸ್ ನ

1982ರಲ್ಲಿ ಮೈಸೂರ ಮಲ್ಲಿಗೆಯ ಕವನಗಳು ಪ್ರಬುದ್ಧ ಕರ್ಣಾಟಕದಲ್ಲಿ  ಪ್ರಕಟವಾಗಲು ಆರಂಭವಾಗಿ  ನಲವತ್ತು ವರುಷವಾಯಿತೆಂದು ನಮ್ಮ ತಂದೆಯವರು ನಾಡಿನ ಎಲ್ಲ ಪತ್ರಿಕೆಗಳಿಗೆ ಪತ್ರ ಒಂದನ್ನು ಬರೆಯುವುದರ ಮೂಲಕ ಈ  ಸವಿಸಂಭ್ರಮವನ್ನು ಹಂಚಿಕೊಂಡು, ಎಲ್ಲ ಕಾವ್ಯಾಸಕ್ತರನ್ನು, ಪ್ರಕಟಣೆ ಮಾಡಿದ ಮಹಾರಾಜ ಕಾಲೇಜು ಕರ್ಣಾಟಕ ಸಂಘವನ್ನು ಹಾಗೂ ಕೃತಿಗೆ ಕಾರಣಕರ್ತರಾದ ಕೃಷ್ಣಶಾಸ್ತ್ರಿಗಳನ್ನು ಸ್ಮರಿಸಿದ್ದರು.

ಪತ್ರಿಕೆಗಳಲ್ಲಿ ಪತ್ರ ಪ್ರಕಟವಾದ ಮೂರು ದಿನಕ್ಕೆ ಮಾಸ್ತಿಯವರಿಂದ ನಮ್ಮ ತಂದೆಯವರಿಗೆ ಒಂದು ಪತ್ರ ಬಂದಿತು. ಅದರಲ್ಲಿ ” “ನರಸಿಂಹಸ್ವಾಮಿ ಮೈಸೂರ ಮಲ್ಲಿಗೆಯನ್ನು ಮೊದಲು ಪ್ರಕಟಿಸಲು ಮುಂದೆ ಬಂದವನು ನಾನು, ನಿನಗೆ ನೆನಪಿದೆಯೇ” ಎಂದಷ್ಟೇ ಇತ್ತು ತಕ್ಷಣ ನಮ್ಮ ತಂದೆಯವರಿಗೆ ತಾವು ಪತ್ರಿಕೆಗಳಿಗೆ ಬರೆದ ಪತ್ರದಲ್ಲಿ ಮಾಸ್ತಿಯವರ ಹೆಸರು ಇಲ್ಲದ್ದು ಆಗ ಅರಿವಾಯಿತು.

ನಮ್ಮ ಪತ್ರಿಕೆಗಳಿಗೆ ಮತ್ತೊಂದು ಪತ್ರ ಬರೆದು ‘ಮೈಸೂರ ಮಲ್ಲಿಗೆಯನ್ನು ಮೊದಲು ಪ್ರಕಟಿಸಲು ಮುಂದೆ ಬಂದದ್ದು ಹಿರಿಯಣ್ಣ ಮಾಸ್ತಿಯವರು . ಈ ವಿಷಯ ನನ್ನ ಹಿಂದಿನ ಪತ್ರದಲ್ಲಿ ಬಿಟ್ಟುಹೋಗಿದ್ದಕ್ಕೆ ಅಣ್ಣ ಮಾಸ್ತಿಯವರ ಕ್ಷಮೆ ಕೋರುತ್ತೇನೆ’ ಎಂದು ಸ್ಪಷ್ಟಪಡಿಸಿದರು.

ಈ ವಿಷಯ ತಿಳಿದ ಮಾಸ್ತಿಯವರು  ತಮ್ಮಎಂದಿನ ಮಗುವಿನ ನಗೆ ಚೆಲ್ಲಿ “ಈಗ ಸರಿಯಾಯಿತು” ಎಂದರು.

ನಮ್ಮ ತಂದೆಯವರ ಅಭಿನಂದನ ಗ್ರಂಥ ”ಚಂದನ”ದ ಬಿಡುಗಡೆಯಾದಾಗ, ಮಾಸ್ತಿಯವರು ಆಗಮಿಸಿ ಮೊದಲ ಸಾಲಿನಲ್ಲಿ ಕುಳಿತು ಸಮಾರಂಭವನ್ನು ಹರಸಿದ್ದರು.

ಮಾಸ್ತಿ ವೆಂಕಟೇಶ ಅಯ್ಯಂಗಾರ್

1980ರ ಜೂನ್ ನಲ್ಲಿ ನಮ್ಮ ತಂದೆ ಅನಾರೋಗ್ಯಕ್ಕೀಡಾಗಿ ಆಸ್ಪತ್ರೆ ಸೇರಬೇಕಾಗಿ ಬಂತು.ಈ ವಿಷಯ ತಿಳಿದ ಮಾಸ್ತಿಯವರು ಐನೂರು ರೂಪಾಯಿಯ ಚೆಕ್ ಒಂದನ್ನು ಕಳುಹಿಸಿ “ಚೆಕ್ ಸ್ವೀಕರಿಸಬೇಕು .ಇದು ನನ್ನಪ್ರೀತಿಯ  ಆಗ್ರಹ“ ಎಂದು ಪತ್ರ ಬರೆದಿದ್ದರು.

1982ರಲ್ಲಿ ಬೆಂಗಳೂರು ಆಕಾಶವಾಣಿಯವರು ಯುಗಾದಿ ಕವಿಸಮ್ಮೇಳನವೊಂದನ್ನು ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಆಯೋಜಿಸಿತ್ತು . ಅದರ ಅಧ್ಯಕ್ಷತೆ ವಹಿಸಿದ್ದವರು ಮಾಸ್ತಿಯವರು. ನಮ್ಮ ತಂದೆಯವರೂ ಅದರಲ್ಲಿ ಭಾಗವಹಿಸಿದ್ದರು. ಆಕಾಶವಾಣಿಯ ವಾಹನ ನಮ್ಮ ತಂದೆಯವರನ್ನು ಕರೆದುಕೊಂಡು ಮಾಸ್ತಿಯವರ ಮನೆಯತ್ತ ಹೋಯಿತು.ತಂದೆಯವರ ಜತೆ ನಾನೂ ಹೋಗಿದ್ದೆ. ನಿತ್ಯಪೂಜೆಯಲ್ಲಿ ನಿರತರಾಗಿದ್ದ ಮಾಸ್ತಿಯವರು, ಬೇಗ ಸಿದ್ದರಾಗಿ ಬಂದು ತಡವಾದದ್ದಕ್ಕೆ ಎಲ್ಲರ ಕ್ಷಮೆ ಕೋರಿ, ತಮ್ಮಸೌಜನ್ಯ ಮೆರೆದರು.

ಅವರು  ಹೊಸಮುಖವಾಗಿದ್ದ ನನ್ನತ್ತ ನೋಡಿ “ಯಾರಿದು?” ಎಂದು ಕೇಳಿದರು.ನಮ್ಮ ತಂದೆಯವರು “ನನ್ನ ಮಗ”  ಎಂದಾಗ  ಮಾಸ್ತಿಯವರು “ಹಾಗಾದರೆ ಮೊದಲು ಅವನನ್ನು ಮಾತನಾಡಿಸುತ್ತೇನೆ. ನೀನಾದರೆ ಆಗಾಗ್ಗೆ ಸಿಗುವವನು” ಎಂದು ನಮ್ಮ ತಂದೆಗೆ ಹೇಳಿ ”ಏನು ಹೆಸರು ?“ ಎಂದು ನನ್ನ ಕೇಳಿದರು. ಹೆಸರು ಹೇಳಿದೆ, ಕೆಲಸದ ಬಗ್ಗೆ ವಿಚಾರಿಸಿದರು.

“ಅಪ್ಪನ ಜತೆಯೇ ಇದ್ದೀಯೊ?” ಎಂದು ಕೇಳಿದಾಗ ಒಟ್ಟಿಗೆ ಇದ್ದೇವೆ ಎಂದೆ.

“ಸಂತೋಷ” ಎನ್ನುತ್ತ ನಮ್ಮ ತಂದೆಯವರತ್ತ ತಿರುಗಿ “ನರಸಿಂಹಸ್ವಾಮಿ ನಿನಗೆ ಹುಷಾರಿಲ್ಲ ಎಂದು ಕೇಳಿದೆ. ಏನದರ ಅರ್ಥ?ನೀನು ನನಗಿಂತ ಇಪ್ಪತ್ತು ವರ್ಷ ಚಿಕ್ಕವನು. ದೇಹದ ಕಾಯಿಲೆ, ಮನಸ್ಸಿನ ಕಾಯಿಲೆ ಎಲ್ಲದಕ್ಕೂ ಪರಿಹಾರ ಇದ್ದೇ ಇದೆ.ಕಷ್ಟಗಳು ಬರುತ್ತವೆ ಹೋಗುತ್ತವೆ. ಅರೋಗ್ಯದ ಸಮಸ್ಯೆ ಇದ್ದರೂ ಈಗ ನಾನು ಧೈರ್ಯದಿಂದ ಇಲ್ಲವೇ?’ ಎಂದು ಗದರಿಸುವ ದನಿಯಲ್ಲೇ ಹೇಳಿದಾಗ ಮಾಸ್ತಿಯವರು ಮನೆಯ ಹಿರಿಯಣ್ಣನೇ ಆಗಿಬಿಟ್ಟಿದ್ದರು.

ನಮ್ಮ ತಂದೆಯವರಿಗೆ ಮಾಸ್ತಿ ಪ್ರಶಸ್ತಿ ಬಂದಾಗ ,ಅದನ್ನು ಸಂತಸದಿಂದ ಹಾಗೂ ಧನ್ಯತೆಯಿಂದ  ಸ್ವೀಕರಿಸಿದರು.

ಮಾಸ್ತಿಯವರ ಬರಹದ ಶೈಲಿಯನ್ನು ಮೆಚ್ಚಿ ಕೆ ಎಸ್ ನ “ಮಾಸ್ತಿಯವರ ಕವಿತೆ “ಎಂಬ ಸುನೀತವನ್ನು ಬರೆದಿದ್ದು(ಇರುವಂತಿಗೆ ಕವನ ಸಂಕಲನದಲ್ಲಿದೆ) ಮಾಸ್ತಿಯವರ ಕೃತಿಗಳನ್ನು :

/“ಅಪ್ರಕೃತ ಸಂಸ್ಕೃತದವಾಂತರದ ಧಗೆಯಿಲ್ಲ
ಇಲ್ಲಿ ಜೀವನದಂತೆ ಕವಿತೆ:ಜೀವದ ಉಸಿರು”/

ಎಂದು ವ್ಯಾಖ್ಯಿಸಿ ನುಡಿನಮನ ಸಲ್ಲಿಸಿದ್ದಾರೆ.

(ಮುಂದುವರಿಯುವುದು….)

ಈ ಲೇಖನ ಸರಣಿಯ ಹಿಂದಿನ ಸಂಚಿಕೆ ಇಲ್ಲಿದೆ: http://surahonne.com/?p=28734


-ಕೆ ಎನ್  ಮಹಾಬಲ
(ಕೆ ಎಸ್ ನ  ಪುತ್ರ)

4 Responses

 1. ಬಿ.ಆರ್.ನಾಗರತ್ನ says:

  ಚಂದದ ಮಾಹಿತಿ ಇದನ್ನು ಪುಸ್ತಕ ರೂಪದಲ್ಲಿ ಆದಷ್ಟು ಬೇಗ ಬರಲೆಂದು ನನ್ನ ಆಶಯ. ಈ ನಿಟ್ಟಿನಲ್ಲಿ ಯೋಚಿಸಿ ಸಾರ್.

 2. ನಯನ ಬಜಕೂಡ್ಲು says:

  ಅದ್ಭುತ ವಾಗಿದೆ ಸರ್ ಲೇಖನ ಮಾಲೆ. ಕೆ ಎಸ್ ನರಸಿಂಹ ಸ್ವಾಮಿ ಯವರ ಜೊತೆ ಜೊತೆಗೆ ಮಾಸ್ತಿಯಂತಹವರ ವ್ಯಕ್ತಿತ್ವದ ಪರಿಚಯ ಸಿಗುತ್ತಿರುವುದು ಓದುಗರ ಸೌಭಾಗ್ಯ

 3. ASHA nooji says:

  ಉತ್ತಮ ಲೇಖನ

 4. ಶಂಕರಿ ಶರ್ಮ says:

  ಹಿರಿಯ ಸಾಹಿತಿ, ಕನ್ನಡದ ಆಸ್ತಿ ಮಾಸ್ತಿಯವರ
  ಒಡನಾಟದೊಡನೆ, ಅವರ ನಿರ್ಮಲ ಮನಸ್ಸಿನ ಬಗೆಗೂ ತಿಳಿಸಿರುವುದು ಈ ಸಲದ ಲೇಖನದ ವಿಶೇಷತೆ!. ಧನ್ಯವಾದಗಳು ತಮಗೆ.

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: