ವಧೂ…ವರಪರೀಕ್ಷೆ
ಮದುವೆಗೂ ಮುಂಚೆ ವಧುಪರೀಕ್ಷೆ ಮತ್ತು ವರ ಪರೀಕ್ಷೆ ನಡೆದೇ ನಡೆಯುತ್ತವೆ.ಅದು ಸಹಜ ಕೂಡ. ವರ ಅಥವಾ ವಧುವಿಗೆ ಈ ಪರೀಕ್ಷೆಗಳಲ್ಲಿ ಪಾಸಾಗುವುದು ಅನಿವಾರ್ಯ. ಹುಡುಗ ಹುಡುಗಿಯನ್ನು ನೋಡಿ ಪರಸ್ಪರ ಒಪ್ಪಿಗೆಯಾದರೆ ಮಾತ್ರ ಮದುವೆ. ಆದರೆ ಈ ಹಂತದಲ್ಲಿಯೇ ಎಷ್ಟೋ ಹುಡುಗರಿಗೆ ಹುಡುಗಿ ಇಷ್ಟವಾಗುವುದಿಲ್ಲ. ಹಾಗೆ ಹುಡುಗಿಗೂ ಹುಡುಗ ಇಷ್ಟವಾಗುವುದಿಲ್ಲ. ಹಾಗೆ ಇಷ್ಟವಾಗದಿರುವುದಕ್ಕೆ ದೊಡ್ಡ ದೊಡ್ಡ ಕಾರಣಗಳು ಬೇಕಿಲ್ಲ.
ನಮ್ಮ ಸ್ನೇಹಿತರ ಮಗ.ಮದುವೆಗೆ ಹೆಣ್ಣು ಹುಡುಕುತ್ತಿದ್ದರು. ಮಧ್ಯೆವರ್ತಿ ಒಂದು ಸಂಬಂಧ ತೋರಿಸಿದರು. ಹುಡುಗಿ ಚೆನ್ನಾಗಿದ್ದಾಳೆ. ಎಲ್ಲಾ ರೀತಿಯಲ್ಲೂ ಸರಿ ಹೊಂದಬಹುದಾದ ಸಂಬಂಧ. ಆದರೆ ತನಗೆ ಈ ಸಂಬಂಧ ಬೇಡ ಎಂದು ಬಿಟ್ಟ ಹುಡುಗ. ಕಾರಣ ಇಷ್ಟೆ ಹುಡುಗ ಹೇಳಿದ್ದು ಹುಡುಗಿಯ ಮನೆ ಹಳೆಯ ಮನೆ ಅಂತ. ಅಲ್ಲ ಹುಡುಗಿಯ ಮನೆ ಹಳೆಯದಾದರೆ ಇವನೀಗೇನಪ್ಪ, ಇವನೇನು ಆ ಮನೆಗೆ ಹೋಗಿ ಇಡೀ ಬದುಕು ನಡೆಸಬೇಕೆ. ಎಲ್ಲ ವಿಚಾರದಲ್ಲಿಯೂ ಸರಿಹೊಂದುತ್ತಿದ್ದ ಸಂಬಂಧ ಮನೆ ಚೆನ್ನಾಗಿಲ್ಲ ಅನ್ನೊ ಒಂದೇ ಕಾರಣಕ್ಕೆ ತಿರಸ್ಕರಿಸಿದ್ದು ವಿಪರ್ಯಾಸವೇ ಸರಿ. ಅಲ್ಲಿಗೆ ಮದುವೆ ಪ್ರಯತ್ನ ಮಾತುಕತೆಗೂ ಮುನ್ನವೇ ಮುರಿದು ಬಿತ್ತು. ಮತ್ತೊಂದು ಘಟನೆ, ನನಗೆ ಆ ಮನೆಯವರು ತುಂಬಾ ಪರಿಚಿತರು .ಮನೆ ತುಂಬಾ ಹೆಣ್ಣು ಮಕ್ಕಳು ಇರುವ ಸಂಸಾರ. ಒಬ್ಬಬ್ಬರದ್ದೆ ಹೇಗೊ ಮದುವೆ ಮಾಡಿದರು. ಕೊನೆ ಮಗಳು ಸ್ವಲ್ಪ ದಪ್ಪ. ಗಂಡುಗಳು ಒಪ್ಪಿಕೊಳ್ಳುವುದು ಕಷ್ಟವಾಯಿತು. ಹೇಗೋ ಒಬ್ಬ ಗಂಡು ಒಪ್ಪಿಕೊಂಡಿದ್ದ. ಇನ್ನೇನು ಈ ಮಗಳ ಜವಾಬ್ದಾರಿಯನ್ನು ಮುಗಿಸಿ ಬಿಡೋಣ ಅಂತ ಅಂದುಕೊಂಡರೆ ಅವರ ಲೆಕ್ಕಾಚಾರ ತಳಕೆಳಗಾಗಿತ್ತು. ಅವರ ಮಗಳೇ ನನಗೆ ಈ ಹುಡುಗ ಬೇಡ ಎಂದು ಬಿಟ್ಟಳು. ಅವಳು ಬೇಡ ಅಂದ ಕಾರಣ ಕೇಳಿದರೆ ನಗಬೇಕೋ ಅಳಬೇಕೋ ತಿಳಿಯದೆ ನನ್ನ ಬಳಿ ಬಂದು ಪೇಚಾಡುತ್ತ ತಮ್ಮ ಅಳಲು ತೋಡಿಕೊಂಡಿದ್ದರು. ಎಲ್ಲಾ ಗಂಡುಗಳು ನನ್ನನ್ನು ಬೇಡ ಅಂತ ನನಗೆ ಅವಮಾನ ಮಾಡದ್ರು ಅಲ್ವಾ. ಈಗ ನಾನು ಬೇಡ ಅಂತ ಅವಮಾನ ಮಾಡ್ತೀನಿ ಅಂತ ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದಂತೆ ಮಾಡಿದ್ದಳು.
ಮತ್ತೊಂದು ವಧು ಪರೀಕ್ಷೆಯಲ್ಲಿ ಹುಡುಗ ಮತ್ತು ಅವನ ಮನೆಯವರು ಬಂದು ವಧು ಪರೀಕ್ಷೆ ನಡೆಸಿ ವಾಪಸ್ಸು ಹೋದ ಮೇಲೆ ಹುಡುಗಿ ತುಂಬಾ ಫಾಸ್ಟ್ ಅಂತ ಹೇಳಿ ಬಿಟ್ಟಾಗ, ಹುಡುಗಿ ಮನೆಯವರಿಗೆ ಆಶ್ಚರ್ಯವಾಗಿತ್ತು . ನಮ್ಮ ಮಗಳು ಫಾಸ್ಟಾ ಅಂತ ಅಂತ ಅವರಿಗೇ ಗೊಂದಲವಾಗಿತ್ತು. ಯಾಕೆ ಅವರಿಗೆ ಹಾಗೆ ಅನ್ನಿಸಿತು ಅಂತ ಮಧ್ಯೆವರ್ತಿ ಬಳಿ ಕೇಳಿ ತಿಳಿದುಕೊಂಡಾಗ ಕೋಪವೇ ಬಂದಿತ್ತು. ವಧು ಪರೀಕ್ಷೆಗೆ ಹುಡುಗಿ ಗಂಡಿನವರ ಮುಂದೆ ಬಂದು ಕುಳಿತಾಗ ಹುಡುಗಿ ಕೈಯಲ್ಲಿ ಮೊಬೈಲ್ ಹಿಡಿದು ಹೊರ ಬಂದು ಗಂಡಿನವರ ಮುಂದೆ ಕುಳಿತಿದ್ದಳಂತೆ. ಹಾಗಾಗಿ ಹುಡುಗಿ ಫಾಸ್ಟ್ ಅಂತ ಅನ್ನಿಸಿತಂತೆ.ಶಿವ ಶಿವ ಎಂತೆಂತಹ ಜನರು ಇರುತ್ತಾರಪ್ಪ. ಮೊಬೈಲ್ ಹಿಡಿದಿದ್ದೆ ತಪ್ಪು ಅಂತ ಭಾವಿಸುವಂತ ಅನಾಗರಿಕತೆ ಮತ್ತು ಮಡಿವಂತಿಕೆ ಇರುವ ಈ ಸಂಬಂಧ ತಪ್ಪಿದ್ದೆ ಒಳ್ಳೆಯದಾಯಿತು ಅಂತ ಅಂದುಕೊಂಡರು. ಪಾಪ ಆ ಹುಡುಗಿ ರೂಮಿನಲ್ಲಿ ಕುಳಿತು ಮೊಬೈಲ್ ನೋಡುತ್ತಿದ್ದವಳು, ಮರೆತು ಅವಳಿಗರಿವಿಲ್ಲದಂತೆ ಮೊಬೈಲ್ ಕೈಯಲ್ಲಿ ಹಿಡಿದು ಹೊರಬಂದು ಗಂಡಿನವರ ಮುಂದೆ ಬಂದು ಕುಳಿತಿದ್ದಳು. ಮೊಬೈಲ್ ಕೈಯಲ್ಲಿ ಇತ್ತಷ್ಟೆ. ಅದನ್ನೇನೂ ಅವಳು ನೋಡುತ್ತಿರಲಿಲ್ಲ. ಈ ಹೆಣ್ಣಿನವರೂ ಸುಮ್ಮನೆ ಬಿಡಲಿಲ್ಲ. ಅಷ್ಟರೊಳಗಾಗಲೇ ಹುಡುಗನ ಫೇಸ್ ಬುಕ್ ಚೆಕ್ ಮಾಡಿದ್ದು ಆ ಹುಡುಗ ಗೆಳೆಯರ ಜೊತೆ ತಿಂದು ಕುಡಿದು ಕುಪ್ಪಳಿಸಿದ್ದು, ಗೆಳತಿಯರ ಜೊತೆ ಟೂರ್ ಹೊಡೆದದ್ದೂ , ಸದಾ ಕ್ರಿಕೆಟ್ ಮ್ಯಾಚ್ ಗಳನ್ನು ನೋಡುತ್ತಿದ್ದ ಫೋಟೋಗಳನ್ನು ಹಾಕಿಕೊಂಡಿದ್ದ. ಈ ಎಲ್ಲಾ ಲೀಲೆಗಳನ್ನೂ ನೋಡಿದ್ದ ಹುಡುಗಿ ಮನೆಯವರು ಮಧ್ಯವರ್ತಿ ಬಳಿ ಎಲ್ಲವನ್ನೂ ಹೇಳಿ ಅವನಿಗಿಂತ ಫಾಸ್ಟಾ ನಮ್ಮ ಹುಡುಗಿ ಹೀಗೇ ಹೇಳಿದ್ರು ಅಂತ ಅವರಿಗೇ ಹೇಳಿ ಅಂತ ಝಾಡಿಸಿದ್ದರು.
“ಋಣಾನುಬಂಧೇ ರುಪೇಣಾ ಪಶುಪತಿಸುತಾಲಯ:” ಎಂಬಂತೆ ಯಾರು ಯಾರಿಗೆ ಋಣವಿರುತ್ತದೆಯೋ ಅದು ಅವರಿಗೆ ಲಭ್ಯವಾಗಿಯೇ ಆಗುತ್ತದೆ. ಅದನ್ನು ತಪ್ಪಿಸಿಕೊಳ್ಳುವುದು ಅಸಾಧ್ಯ. ಅದು ನಿಜ ಎಂಬಂತೆ ನಮ್ಮ ಸೋದರಮಾವ ಹೆಣ್ಣು ನೋಡಲು ಹೋದಾಗ ಒಬ್ಬಟ್ಟಿನ ಊಟ ಹಾಕಿದ ತೆಳ್ಳಗೆ, ಬೆಳ್ಳಗೆ,ಉದ್ದ ಇರುವ ಹುಡುಗಿಯನ್ನು ಒಪ್ಪದೆ ಒಣ ಚಪಾತಿ ಕೊಟ್ಟ ಕುಳ್ಳಗೆ ತೆಳ್ಳಗೆ ಇರುವ ಹುಡುಗಿಯನ್ನು ಒಪ್ಪಿದ್ದು ನಂತರ ಮದುವೆಯೂ ಆಗಿದ್ದು ಋಣಾನುಬಂಧವಲ್ಲವೇ.
ನನ್ನ ಗೆಳತಿಯೊಬ್ಬಳನ್ನು ಇಂಜಿನಿಯರ್ ವರ ಒಪ್ಪಿ ಮಾತುಕತೆ ನಡೆದು ನಿಶ್ಚಿತಾರ್ಥವೂ ಆಗಿಹೋಯಿತು.ಆದರೆ ನಂತರ ಭಾವಿ ಪತಿ ಪದೇ ಪದೇ “ನಾನು ಇಂಜಿನಿಯರ್ , ನೀನು ಡ್ರೈವರ್ ಮಗಳು.ನಾನು ಡ್ರೈವರ್ ಮಗಳನ್ನು ಮದುವೆ ಆಗ್ತಾ ಇರೋದು ನಂಗೆ ಹಿಂಸೆ ಅನಿಸುತ್ತೆ. ನನ್ನ ಸ್ಟೇಟಸ್ಗೆ ನೀನು ತಕ್ಕವಳಲ್ಲ. ಆದರೂ ನಾನು ಮದುವೆ ಆಗಲು ಒಪ್ಪಿರುವುದು ನನ್ನ ಔದಾರ್ಯ” ಅಂತ ಹೇಳಿ ಮುಜುಗರ ತರಿಸುತ್ತಿದ್ದ.ನನ್ನ ಗೆಳತಿ ನೋಡುವ ತನಕ ನೋಡಿ ರೋಸಿ ಹೋಗಿ ” ನಿನ್ನ ಔದಾರ್ಯ ನನಗೆ ಬೇಡ ಕಣಯ್ಯ. ನಿನ್ನ ಸ್ಟೇಟಸ್ ಗೆ ತಕ್ಕ ಹುಡುಗಿಯನ್ನೆ ನೀನು ಮದುವೆ ಮಾಡಿಕೋ ” ಅಂತ ಅವನ ಜೊತೆ ಮದುವೆಯನ್ನೆ ನಿರಾಕರಿಸಿಬಿಟ್ಟಳು.
ಮತ್ತೊಂದು ಪ್ರಕರಣದಲ್ಲಿ ಮದುವೆ ನಿಶ್ಚಯವಾಗಿದ್ದ ಹುಡುಗ ಪ್ರತಿದಿನ ಹುಡುಗಿಗೆ ಫೋನ್ ಮಾಡುತ್ತಿದ್ದ. ಮದುವೆ ನಿಶ್ಚಯವಾಗುವಾಗ ನಮ್ಮ ಬೇಡಿಕೆ ಏನೂ ಇಲ್ಲ ಅಂತ ಹೇಳಿದ್ದ ಹುಡುಗ ನಂತರ ಹುಡುಗಿ ಜೊತೆ ಫೋನ್ನಲ್ಲಿ ಮಾತನಾಡುವಾಗ ದಿನಕ್ಕೊಂದು ಬೇಡಿಕೆ ಇಡುತ್ತಿದ್ದ. ತನಗೆ ಐವತ್ತು ಗ್ರಾಂ ಚಿನ್ನದ ಸರ ಬೇಕು , ತನ್ನ ಅಕ್ಕ ತಂಗಿಯರಿಗೆ ಕಂಚಿ ಸೀರೆನೇ ಬೇಕು, ದೊಡ್ಡ ಛತ್ರದಲ್ಲಿ ಮದುವೆ ಮಾಡಬೇಕು ಹೀಗೆ ಹೇಳುತ್ತಲೆ ಹೋದಾಗ ಅವನ ಬೇಡಿಕೆಗೆಳನ್ನು ಪೂರೈಸಲಾರದೆ ಮದುವೆಯನ್ನೇ ಮುರಿದು ಕೊಂಡರು. ಹೀಗೆ ಮದುವೆಗಳು ನಡೆಯುವುದಕ್ಕೆ ಮತ್ತು ಮುರಿದು ಹೋಗುವುದಕ್ಕೆ ಸಾಕಷ್ಟು ಕಾರಣಗಳು ಸಿಗುತ್ತವೆ.
-ಶೈಲಜಾ, ಹಾಸನ
ಖಂಡಿತಾ ನಿಮ್ಮ ಬರಹ ನೂರಕ್ಕೆ ನೂರು ಸತ್ಯ .ಭೂಮಿಗೆ ಬರುವಮೊದಲೆ ಬ್ರಹ್ಮ ಬರೆದಿರುವನಂತೆ .ಯಾರಿಗೆ ಯಾರು ಎಂದು ..ವಿಧಿಲಿಖಿತ .ಸುಪರ್‍್ವರ್ಣನೆ
ನಿಮ್ಮ ಅಭಿಮಾನದ ಪ್ರತಿಕ್ರಿಯೆಗೆ ಧನ್ಯವಾದಗಳು
ಅರ್ಥಪೂರ್ಣವಾದ ಬರವಣಿಗೆ…mam ……
ನಿಮ್ಮ ಅಭಿಮಾನದ ಪ್ರತಿಕ್ರಿಯೆಗೆ ಧನ್ಯವಾದಗಳು
ಹಲವಾರು ಉದಾಹರಣೆ ಸಹಿತ ತುಂಬಾ ಚೆನ್ನಾಗಿ ವಿವರಿಸಿದ್ದೀರಿ. ಬರಹ ಓದಿಸಿಕೊಂಡು ಹೋಗುತ್ತದೆ. ಹಾಗೆಯೇ ಚಿಂತನೆಗೂ ಹಚ್ಚುತ್ತದೆ.
ನಿಮ್ಮ ಅಭಿಮಾನದ ಪ್ರತಿಕ್ರಿಯೆಗೆ ಧನ್ಯವಾದಗಳು
ವಾಸ್ತವ ಸ್ಥಿತಿಯ ಅನಾವರಣ. ಇವತ್ತಿನ ದಿನಗಳಲ್ಲಿ ಮದುವೆಯಾದರೂ ಯಾವಾಗ, ಹೇಗೆ, ಮುರಿಯುತ್ತೋ ಅನ್ನುವ ಭಯವೂ ಎಲ್ಲರಲ್ಲೂ ಇರುತ್ತೆ.
ನಿಮ್ಮ ಅಭಿಮಾನದ ಪ್ರತಿಕ್ರಿಯೆಗೆ ಧನ್ಯವಾದಗಳು ನಯನ
ವಾಸ್ತವಕ್ಕೆ ಕನ್ನಡಿ ಹಿಡಿದ ಚೆಂದದ ಬರಹ..
ಧನ್ಯವಾದಗಳು
ಶತಮಾನಗಳೇ ಉರುಳಿದರೂ ಕೆಲವು ಪ್ರಶ್ನೆ ಉತ್ತರ ಗಳು ಹಾಗೆಯೇ ರವಾನೆಯಾಗುತ್ತಿರುತ್ತವೆ ಎನ್ನುವುದಕ್ಕೆ ಈ ಲೇಖನ ಉತ್ತಮ ಉದಾಹರಣೆ.ಅಭಿನಂದನೆಗಳು ಮೇಡಂ
ತುಂಬಾ ಚೆನ್ನಾಗಿ ವಿವರಿಸಿರುವಿರಿ. ಹುಡುಗಿ ಫೇಸ್ಬುಕ್ ಅಲ್ಲಿ ಇಲ್ಲ ಅಂತ ಒಬ್ಬ ಹುಡುಗ ನಿರಾಕರಿಸಿದ ಅವಳನ್ನು.
ಬರಹ ಚೆನ್ನಾಗಿದೆ..
ತಮ್ಮ ಲೇಖನದಲ್ಲಿ ವಿವರಿಸಿದ ಹೆಚ್ಚಿನ ಎಲ್ಲಾ ಘಟನೆಗಳೂ ನಮ್ಮ ಅಕ್ಕ ಪಕ್ಕವೇ ಆಗುತ್ತಿರುವುದಂತೂ ನಿಜ. ನೀವಂದಂತೆ, ಋಣಾನುಬಂಧ ರೂಪೇಣ ಪಶು ಪತ್ನಿ ಸುತಾಲಯ ಎಂಬುದು ಕೆಲವು ವಿಚಿತ್ರಗಳನ್ನು ನೋಡಿದಾಗ ಹೌದೆನ್ನಿಸುವುದು. ಬಹಳ ಹಿಂದಿನ ಘಟನೆ..ನನ್ನ ಗೆಳತಿಗೆ ಇಡೀ ವರ್ಷ ಐವತ್ತಕ್ಕೂ ಮಿಕ್ಕಿ ವಧು ಪರೀಕ್ಷೆಯನ್ನು ಎದುರಿಸಿ ಸಾಕಾಗಿ ಬೇಸತ್ತವಳಿಗೆ, ಅವರ ಮನೆ ಬಾಡಿಗೆದಾರರ ತಮ್ಮನ ಸಂಬಂಧವೇ ಕುದುರಿದ್ದು ನಿಜಕ್ಕೂ ಆಶ್ಚರ್ಯ! ಕೈಯಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕಾಗಿ ಊರಿಡೀ ಹುಡುಕಿದ್ದರು. ಇಂತಹುದು ಇನ್ನೆಷ್ಟೋ… ಸೊಗಸಾದ ಸಕಾಲಿಕ ಬರಹ.
ಲೇಖನ ತುಂಬಾಚೆನ್ನಾಗಿದೆ
ನಿತ್ಯ ಕೇಳಿರುವ ಸಹಜ ಪ್ರಕ್ರಿಯೆಗಳು
ಆದರೆ ನಿಮ್ಮ ಬರೆವಣಿಗೆ ಯೊಳ …. ಹೊಕ್ಕು
ಓದಿದಾಗ ಅತ್ಯಂತ ಹರ್ಷ ಎನಿಸುತ್ತದೆ ,ಮಜಾ ಎನಿಸುತ್ತದೆ
ಈ ಪ್ರಪಂಚದಲ್ಲಿ ಎಷ್ಟು ವಿವಾಹಗಳ ನಡೆದಿದೆ
ಅಷ್ಟೇ ವಿಶೇಷತೆಗಳಿವೆ
ಸತ್ಯ ಕೂಡ