ಪರಿಸರ ರಕ್ಷಣೆ ನಮ್ಮ ನಿಮ್ಮೆಲ್ಲರ ಹೊಣೆ
ಹೆತ್ತತಾಯಿ, ಹೊತ್ತಮಾತೆ[ಭೂಮಾತೆ] ಅನುಗಾಲವೂ ಪೂಜನೀಯಳು.ನಮ್ಮ ಸಂಸ್ಕೃತಿಯಲ್ಲಿ ಹಿರಿಯರಿಂದ ಆಶೀರ್ವಾದ ಪಡೆಯುವಾಗ ಹಿರಿಯರ ಪಾದದ ಬುಡದಲ್ಲಿ ಭೂಮಿಗೆ ನಮ್ಮ ಕೈ ಸ್ಪರ್ಶಿಸಿ ಹಣೆಗೆ ಒತ್ತಿಕೊಳ್ಳುವುದು ಸಂಪ್ರದಾಯ.ಮಣ್ಣು ಎಂಬುದು ಹೊನ್ನಿಗೆ ಸಮ!.ನೀರು ಎಂಬುದು ಗಂಗೆ!.ಸಸ್ಯ ಆಹಾರದ ಮೂಲ ಮಾತ್ರವಲ್ಲ ನಾವು ಉಸಿರಾಡುವ ಆಮ್ಲಜನಕದ ಸೃಷ್ಟಿಯೂ ಹೌದು!!. ಭೂಮಿತಾಯಿ ಮಾತೃದೇವಿಗೆ ಸಮ. ಭೂದೇವಿಯ ಸಮಸ್ತ ಚರಾಚರ ವಸ್ತುಗಳು ಮಾನವನಿಗೆ ಒಂದಿಲ್ಲೊಂದು ವಿಧದಲ್ಲಿ ಉಪಕಾರಿ,ಸಹಕಾರಿ. ಬೀಜಕ್ಕೆ ಚೇತರಿಸಿಕೊಳ್ಳಲು ನೀರು,ಗೊಬ್ಬರ, ಆರೈಕೆಗಳು ಬೇಕಾದಂತೆ ಮನುಷ್ಯನಿಗೂ ಯೋಗ್ಯನಾಗರಿಕನಾಗಿ ಬೆಳೆಯಲು ಪರಿಸರ,ಸಜ್ಜನರ ಸಾನ್ನಿಧ್ಯ, ಇವುಗಳೆಲ್ಲ ಅಗತ್ಯ.
ವೃಕ್ಷಕ್ಕೆ ಜ್ಯೋತಿಶಾಸ್ತ್ರದಲ್ಲೂ ಪ್ರಮುಖ ಸ್ಥಾನವಿದೆ. ಇಪ್ಪತ್ತೇಳು ನಕ್ಷತ್ರಗಳಿಗೆ ,ಹನ್ನೆರಡು ರಾಶಿಗಳಿಗೆ, ನವಗ್ರಹಗಳಿಗೆ ಇವುಗಳಿಗೆಲ್ಲ ಹೊಂದಿಕೊಂಡು ಒಂದೊಂದು ವೃಕ್ಷಗಳಿವೆ.
ಹಾಗೆಯೇ ಮರವೆಂಬ ವರದಿಂದ ಒಬ್ಬ ಬೇಡರವ ವಾಲ್ಮೀಕಿಯಾಗಿ,ಅವಿನಾಶಿಯಾದ ರಾಮಾಯಣವನ್ನೇ ಬರೆದ ಕಥೆ ನಮಗೆ ತಿಳಿದಿರುವುದೇ ಆಗಿದೆ. ಹಲಫಲವಿಲ್ಲದ ಭೂಮಿ ಬೆಲೆಬಾಳದು ಹಾಗೂ ನಿರರ್ಥಕ. ಮರಗಳಿಂದ ನೆರಳು,ಫಲಪುಷ್ಪ, ಉರುವಲು, ಗೊಬ್ಬರ, ಮೋಪು, ಮೊದಲಾದ ಪ್ರಯೋಜನಗಳಲ್ಲದೆ ಅಪಾರ ವನೌಷಧಿಗಳೂ ದೊರೆಯುತ್ತವೆ.ವನೌಷಧಿಗಳು ಮಾನವನ ರೋಗವನ್ನು ನೀಗಿ, ಆರೋಗ್ಯ ಕಾಪಾಡುವಲ್ಲಿ ಮಹತ್ತರ ಪಾತ್ರವಹಿಸುತ್ತವೆ.
ಹಿಂದಿನವರು ಹೇಳಿದ ಮಾತೊಂದು ನೆನಪಿಗೆ ಬರುತ್ತದೆ. ಗಿಡಮೂಲಿಕಾ ಪಂಡಿತನೊಬ್ಬ ದನದ ಕೊಟ್ಟಿಗೆಗೆ ಸೊಪ್ಪು ತರಲುಹೋಗಿ; ಹಸಿರುತುಂಬಿದ ಕಾಡನ್ನು ಇಡೀ ಸುತ್ತಾಡಿಯೂ ಆತ ಒಂದುಹಿಡಿ ಸೊಪ್ಪನ್ನೂ ಕೀಳದೆ ಹಾಗೆಯೇ ಹಿಂದುರುಗಿದನಂತೆ!. ಹೌದು.., ಸರ್ವ ಸಸ್ಯರಾಶಿಯಲ್ಲಿ ಔಷಧಿ ಕಂಡ ವೈದ್ಯ ಅದನ್ನು ಗೊಬ್ಬರದ ಉಪಯೋಗಕ್ಕೆ ಕಡಿಯುವನೇ!?.ಇದು ಹಿರಿಯರಿಂದ ಸಾಗಿ ಬಂದ ಆಡು ಉದಾಹರಣೆಯಾದರೂ ಈ ದೃಷ್ಟಾಂತದಿಂದ ಅದರ ಮಹತ್ವ ಅರಿವಾಗದಿರದು!!. ಹಸಿರೆಲೆಗಳು ಬಾಷ್ಪೀಭವನದ ಮೂಲಕ ವಾತಾವರಣದಲ್ಲಿರುವ ಅಂಗಾರಾಮ್ಲವನ್ನು ಹೀರಿ ಮನುಜನಿಗೆ ಅಗತ್ಯವಾದ ಆಮ್ಲಜನಕವನ್ನು ಬಿಡುತ್ತವೆ.ಹಾಗೆಯೇ ಬಾಷ್ಪವಿಸರ್ಜನೆ ಕ್ರಿಯೆ ಎಂದರೆ ಮರಗಳು ಬೇರಿನಮೂಲಕ ನೀರನ್ನು ಹೀರಿ,ಎಲೆಗಳ ಮೂಲಕ ನೀರಾವಿಯನ್ನು ವಾತಾವರಣಕ್ಕೆ ಬಿಡುತ್ತವೆ.ಇವೇ ಮೋಡಗಳಾಗಿ ನಮಗೆ ಮಳೆಯನ್ನುಂಟು ಮಾಡ್ತವೆ. ಇದೆಲ್ಲಾ ನಮ್ಮ ಶಾಲಾತರಗತಿಯ ಸಸ್ಯ ವಿಜ್ನಾನ ಮುಖೇನ ಕಲಿತಿರುತ್ತೇವೆ. ಜೀವಸಂಕುಲಕ್ಕೆ ನೆರಳನ್ನೀಯುವುದಲ್ಲದೆ ಫಲಪುಷ್ಪ,ಉರುವಲು,ಮೋಪು, ಗೊಬ್ಬರಗಳಿಗೂ ಎರವಾಗಿ,ಪ್ರಾಣಿಪಕ್ಷಿಗಳಿಗೆಲ್ಲ ಆಹಾರ, ಆಶ್ರಯವನ್ನೀಯುವ ಮಹಾಗುಣ ಮರಗಳದು. ಕಡಿದು,ಬಡಿದು,ಕೊಡವಿದರೂ ಮಣ್ಣಿನೊಳಗೊಂದಿಷ್ಟು ಕಾಂಡ ಬಾಕಿಯಾದರೂ ವಾಪಾಸು ಚಿಗುರಿ ನೆರಳು ,ನೇಮ ಒದಗಿಸುತ್ತವೆ.
ಮೋಪಿನಮರವು ಚಿರಾಯು ಎನ್ನಬಹುದು!.ಪಕಾಸಿ, ಹಾಸುಹಲಗೆ, ಬಾಗಿಲು,ಕಿಟಿಕಿ,ದಾರಂದಗಳಾಗಿ ನಮ್ಮ ಮನೆಯೊಳಗೆ ಹಿತೈಷಿಯಂತೆ ಬೇಸಿಗೆಯಲ್ಲಿ ತಂಪೂ, ಮಳೆಗಾಲಕ್ಕೆ ಬೆಚ್ಚನೆಯ ಕಾವನ್ನೂ ನೀಡುವ ಈ ಹಿರಿಗುಣಕ್ಕೆ ಎಣೆಯುಂಟೇ?. ಕಡಿದುರುಳಿಸಿದಾತನ ತಲೆಕಾಯುವ ಮೋಪಿನ ಮರವಾಗಿಯೋ ಬಡಗಿಗೆ ಜೀವನಮಾರ್ಗ ಒದಗಿಸುವುದೋ ಜೊತೆಗೆ ತಾನುರಿದು ಮನುಜನ ಹೊಟ್ಟೆಹೊರೆಯಲು ಕಟ್ಟಿಗೆಯಾಗಿ ಬರುವುದೂ ಪರಿಸರ ಒದಗಿಸುವ ದೊಡ್ಡಮಾತೇ ಸೈ!!.
ನಾವು ಪೋಷಿಸಿದ ಮರಗಳು ಮಕ್ಕಳಂತೆ! ಅಥವಾ ಅದಕ್ಕೂಮಿಗಿಲಾಗಿ!!.ಮಕ್ಕಳಾದರೋ ಸೆಟೆದು ನಿಂತು ಎದುರುತ್ತರ ಹೇಳಿಯಾರು!! ಆದರೆ ಮರಗಳು ಹಾಗಲ್ಲ.ಎತ್ತರದ ಮರ ತನ್ನ ಆಕಾರದಲ್ಲೂ ಗುಣದಲ್ಲೂ ಒಂದೇತರ!.ಮರದ ಮುಂದೆ ಮಾನವರು ಎಲ್ಲ ವಿಧದಲ್ಲೂ ಕುಬ್ಜರೇ ಸರಿ. ಪ್ರಕೃತಿಯಿಂದ ನಾವುಕಲಿಯುವುದು ಬಹಳಷ್ಟಿದೆ. ಎಷ್ಟೇ ದ್ರೋಹಬಗೆದರೂ ಉಪಕಾರವೀಯುವ ತ್ಯಾಗ ಮರದ ಮಹಾಗುಣ!!.ವರನೀಡುವ ಮರವನ್ನು ಪೋಷಿಸೋಣ ,ಪೂಜಿಸೋಣ. ಸಾಲುಮರತಿಮ್ಮಕ್ಕನನ್ನು ಇಲ್ಲಿ ಸ್ಮರಿಸಬಹುದು.
ಕ್ಷಮೆ ಹಾಗೂ ತ್ಯಾಗವೆಂಬೆರಡು ಮಹಾಗುಣಗಳನ್ನು ಬೆಳೆಸುವಂತೆ ಮರವು ಮೂಕವಾಗಿ ನಮಗೆ ನೀಡುವ ದಿವ್ಯ ಸಂದೇಶ.
ಪರಿಸರ ಸ್ವಚ್ಚ- ನಾವಿರುವ ಪರಿಸರವನ್ನು ಸ್ವಚ್ಚವಾಗಿಡುವ ಕಾರ್ಯವನ್ನು ಅದನ್ನು ಉಪಯೋಗಿಸುವ ನಾವುಗಳು ಮಾಡಬೇಕಾದ ಆದ್ಯ ಕರ್ತವ್ಯ. ನದಿ,ಕೊಳ,ಜಲರಾಶಿಗಳಲ್ಲೂ ನಮ್ಮ ಇತರ ಪರಿಸರಗಳಲ್ಲೂ ಪ್ಲಾಸ್ಟಿಕ್,ಹಾಗೂ ಕರಗದ ಇತರ ಕಸಗಳನ್ನು ಎಸೆಯದೆ ಸಂರಕ್ಷಿಸಲು ಪ್ರಧಾನಿ ನರೇಂದ್ರಮೋದಿಯವರು ನೀಡಿದ ’ಸ್ವಚ್ಛಭಾರತ’ ಯೋಜನೆ ಜಾರಿಗೊಳಿಸಿದಮೇಲೆ ನಮ್ಮ ನೆಲ,ಜಲ ಒಂದಿನಿತು ಸ್ವಚ್ಚದಕಡೆಗೆ ಸಾಗುತ್ತಿದೆ ಎನ್ನಬಹುದು.
-ವಿಜಯಾಸುಬ್ರಹ್ಮಣ್ಯ,ಕುಂಬಳೆ.
ಸುಪರ್‍್Akkoooಬರಹ
ಸೂಪರ್. ಬಹಳಷ್ಟು ಹೊಸ ವಿಚಾರಗಳಿಂದ ಕೂಡಿದ ಬರಹ
ಪ್ರಕೃತಿಮಾತೆಯ ಮಹಾ ಸಂದೇಶವನ್ನು ಸಾರುವ ಸೊಗಸಾದ ಲೇಖನ ವಿಜಯಕ್ಕ.. ಧನ್ಯವಾದಗಳು.
ಹೇಮಮಾಲಾ ಹಾಗೂ ಆಶಾನೂಜಿ,ನಯನಾ ಬಜಕ್ಕೂಡ್ಳು ,ಎಲ್ಲಾ ಓದುಗರಿಗೂ ಧನ್ಯವಾದ ಗಳು.
ಶಂಕರಿಶರ್ಮ ಧನ್ಯವಾದಗಳು.