ಇಂದಿಗಿಂತ ಅಂದೇನೆ ಚೆಂದವೋ.. ಒಂದು ನೆನಪು.
ಅವಿಭಕ್ತ ಕುಟುಂಬಗಳಲ್ಲಿ ಬೆಳೆದವರಿಗೆ ಸಿಗುವ ಅನುಭವ ಸಾಗರದಷ್ಟು. ಈಗಿನ ಪರ್ಸನಾಲಿಟಿ ಡೆವಲಪ್ ಮೆಂಟ್ ಕೋರ್ಸಾಗಲಿ, ಕೌನ್ಸೆಲಿಂಗ್ ಸೆಂಟರುಗಳ ಶಿಕ್ಷಣವಾಗಲೀ ಹಿಂದಿನ ಕೂಡುಕುಟುಂಬ ನೀಡುವ ಅನುಭವಕ್ಕಿಂತ ಹೆಚ್ಚಿನದೇನೂ ಕೊಡಲು ಸಾಧ್ಯವಿಲ್ಲವೇನೋ…. ಕಷ್ಟ-ಸುಖಗಳಲ್ಲಿನ ಅನುಸರಿಕೆ , ನಾನು-ನನ್ನದು ಎಂಬ ಸಣ್ಣತನ ಬಿಟ್ಟು ನಾವು-ನಮ್ಮದು ಎನ್ನುವ ಹಿರಿತನ ಇಲ್ಲೇ ಆರಂಭಗೊಳ್ಳುತ್ತಿತ್ತು. ಸಾಮರಸ್ಯ- ಸೌಹಾರ್ದತೆಗಳ ಪಾಠ ಕಲಿಯಲು, ಮಕ್ಕಳಿಗೆ ಬೇಕಾದ ಮಾನಸಿಕ ದೃಢತೆ, ಸ್ವಾವಲಂಬನೆ ಬೆಳೆಸಲು ಅವಿಭಕ್ತ ಕುಟುಂಬಗಳ ಪಾತ್ರ ಹಿರಿದೇ ಆಗಿತ್ತು.
ನನ್ನ ಬಾಲ್ಯದ ಸ್ವಲ್ಪ ವರುಷಗಳು ಹಳ್ಳಿಯಲ್ಲೇ ಕಳೆದೆ. ಹೊಸಕೋಟೆ ತಾಲ್ಲೂಕಿನ ಹೀರೇಹಳ್ಳಿಯ ಶ್ಯಾನುಭೋಗರು ನನ್ನ ತಾತ. ಹದಿನಾಲ್ಕನೇ ಮಗ ನನ್ನ ತಂದೆ. ಒಂದೆರಡು ಹೆರಿಗೆಯಲ್ಲಿ ಹೋಗಿ ಮಿಕ್ಕವು ಹನ್ನೆರಡೇ ಗಂಡುಮಕ್ಕಳು ಎನ್ನುತ್ತಿದ್ದರು ನನ್ನ ಅಜ್ಜಿ. ಕೆನ್ನೆ ತುಂಬ ಅರಿಸಿನ ಬಳಿದು ಹಣೆಯಲ್ಲಿ ಎದ್ದು ಕಾಣುವಂತಹ ದೊಡ್ಡ ಕುಂಕುಮ, ತಲೆ ತುಂಬಾ ಹೂ ಮುಡಿದು ಒಳಕಚ್ಚೆ ಧರಿಸಿ ಯಾವಾಗಲೂ ಶಿಸ್ತಾಗಿ ಮಡಿಯಲ್ಲಿ ಇರುತ್ತಿದ್ದ ಭಾಗಿರಥಿ ಅಜ್ಜಿ ಇಡೀ ಕುಟುಂಬದ ದೇಖಾರೇಖಿ ನೋಡಿಕೊಳ್ಳುತ್ತಿದ್ದ ಗಟ್ಟಿಗಿತ್ತಿ. ಊರ ಹೊರಗಿದ್ದ ದೇವಸ್ಥಾನದಲ್ಲಿ ಮಾರುತಿಯ ಪೂಜೆ ಮಾಡಿಕೊಂಡು ಮನೆಗೆ ಹೊಂದಿಕೊಂಡಂತೆ ಇದ್ದ ಅರ್ಧ ಎಕರೆ ತೋಟದಲ್ಲಿ ತೆಂಗು ಬಾಳೆ ತರಕಾರಿಗಳನ್ನು ಬೆಳೆದುಕೊಂಡು ಸರಳ ಜೀವನ ಶೈಲಿಯನ್ನು ಅಪ್ಪಿಕೊಂಡಿದ್ದವವರು ನನ್ನ ತಾತ ಭೀಮಸೇನರಾಯರು. ತೋಟದಲ್ಲಿದ್ದ ಬಾವಿಯ ಸಿಹಿನೀರಂತೂ ಆ ಹಳ್ಳಿಗೇ ವರ್ಲ್ಡ್ ಫೇಮಸ್. ಹನ್ನೆರೆಡು ಗಂಡುಮಕ್ಕಳಿಗೂ ಮದುವೆ ಮಾಡಿ ಬೆಂಗಳೂರು, ಮೈಸೂರು ಮುಂತಾದ ಕಡೆ ಬೇರೆ ಸಂಸಾರ ಹೂಡಿದ್ದರೂ ಕೊನೆಯ ಮೂರು ಗಂಡುಮಕ್ಕಳು ತಮ್ಮ ಹೆಂಡಿರು ಮಕ್ಕಳೊಂದಿಗೆ ಊರಲ್ಲೇ ಇದ್ದವರು. ನನ್ನ ಅಪ್ಪ ಕೊನೆಯ ಮಗ.
ದಿನಕ್ಕೆರಡೇ ಬಾರಿ ಬಸ್ಸು ಓಡಾಡುತ್ತಿದ್ದ ಹಳ್ಳಿಯದು.. ಸುತ್ತ ಮುತ್ತಲಿನ ಹಳ್ಳಿಗಳಿಂದ ಜನರು ಬರುತ್ತಿದ್ದರು. ಹಸು-ಎಮ್ಮೆ ಕೊಳ್ಳಲು, ಆಸ್ತಿ ಪತ್ರ ಬರೆಸಲು, ತಮ್ಮ ಮಕ್ಕಳ ಮದುವೆಗೆ ದಿನ ಗೊತ್ತು ಮಾಡಲು, ಜಾತಕ ಬರೆಸಲು…ಹೀಗೇ.. ತೊಟ್ಟಿ ಮನೆಯ ದೊಡ್ಡ ಜಗುಲಿಯಲ್ಲಿ ಯಾವುದೇ ವೇಳೆಯಲ್ಲೂ ಜನ ತುಂಬಿರುತ್ತಿದ್ದುದು ಸರ್ವೇಸಾಮಾನ್ಯವಾಗಿತ್ತು. ಮನೆಯಲ್ಲಿನ ಹದಿನೈದು ಇಪ್ಪತ್ತು ಜನರ ದೊಡ್ಡ ಸಂಸಾರದ ಜೊತೆಗೆ ವಾರಕ್ಕೊಮ್ಮೆ ಭೇಟಿ ಕೊಡುವ ನೆಂಟರಿಷ್ಟರು, ಸಾಮಾನು ಸರಂಜಾಮು ಕೊಳ್ಳಲು ಬಂದು ಹಾಗೇ ನಮ್ಮ ಊರಿನವರು ಎಂಬ ಕುಶಲೋಪರಿ ವಿಚಾರಿಸಿಕೊಂಡು ಹೋಗುವ ಊರಿನ ಕಡೆಯ ರೈತಾಪಿ ಜನರು ತಮ್ಮ ಮನೆಯ ವ್ಯಾಜ್ಯ ಪರಿಹಾರಕ್ಕೂ ಊರ ಹಬ್ಬದ ಸಂಭ್ರಮಕ್ಕೆ ರಾಶಿ ನಕ್ಷತ್ರ ಕೇಳಲು ಶ್ಯಾನುಭೋಗರನ್ನೇ ಆಶ್ರಯಿಸಿದ್ದರು. ಈಗ ಆ ಸ್ಥಾನ ಸ್ವಲ್ಪ ಮಟ್ಟಿಗೆ ಟಿವಿ ಜ್ಯೋತಿಷಿ ಗಳು ಪಡೆದಿದ್ದಾರೆ ಎನ್ನಬಹುದು. ಹೊರಗಿನಿಂದ ಬರುವ ಅತಿಥಿ-ಅಭ್ಯಾಗತರಲ್ಲದೆ ಆ ಮನೆಯ ಮದುವೆಯಾದ ಎರಡನೇ ತಲೆಯ ಅಣ್ಣ ತಮ್ಮಂದಿರ ಸಂಸಾರಗಳು, ಅಕ್ಕತಂಗಿಯರ ಮಕ್ಕಳು, ಮರಿಗಳು ಚಿಳ್ಳೆಪಿಳ್ಳೆಗಳು ಸೇರಿ ಬಹುಸಂಖ್ಯಾತ ಕುಟುಂಬದ ಸದಸ್ಯರ ಸಂಖ್ಯೆಯೇ ದೊಡ್ಡ ಮದುವೆಮನೆಯಂತಾಗಿ ಬಿಡುತ್ತಿತ್ತು. ಈಗಿನ ಕಾಲದಲ್ಲಿ ಇರುವ ಮೂರು ಮತ್ತೊಂದು ಜನರ ನ್ಯೂಕ್ಲಿಯರ್ ಕುಟುಂಬದ ಆಯವ್ಯಯಕ್ಕೆ ತಲೆಕೆಡಿಸಿಕೊಳ್ಳುವವರು ಹಿಂದಿನ ಕಾಲದ ಕನಿಷ್ಠ 25-30 ಮಂದಿಯ ಒಂದು ದಿನದ ತಿಂಡಿ ಊಟದ ಲೆಕ್ಕಾಚಾರದ ನಿರ್ವಹಣೆ ನಿಭಾಯಿಸಲು ಸಾಧ್ಯವಾಗದೆ ತಲೆಸುತ್ತು ಬಂದು ಬಿದ್ದೇಬಿಡುತ್ತಾರೇನೋ..!!
ಹಿರಿಸೊಸೆಯರು ಬೆಳಿಗ್ಗೆ ಶಾಲಾ-ಕಾಲೇಜುಗಳಿಗೆ, ಕಛೇರಿಗಳಿಗೆ ಹೋಗುವವರಿಗೆ ಹತ್ತಿಪ್ಪತ್ತು ಬುತ್ತಿ ಕಟ್ಟಿ, ಮಿಕ್ಕವರಿಗೆ ಉಪ್ಪಿಟ್ಟೋ, ಅವಲಕ್ಕಿಯೋ ಮಾಡಿಟ್ಟರೆ ಕಾಫಿ ಕಾಯಿಸುವುದು ಮನೆಯ ಯಜಮಾನತಿಯೇ. ಸದಾ ಮಡಿಯಲ್ಲಿರುವ ಹಿರಿಜೀವಗಳು ದೇವರ ಮನೆ, ಮಡಿ ಅಡಿಗೆಮನೆಗೆ ಯಾರನ್ನೂ ಬರಗೊಡಿಸದೆ ದೂರದಿಂದಲೇ ಕೊಟ್ಟಿಗೆಯಲ್ಲಿನ ಹಸು ಎಮ್ಮೆಗಳಿಂದ ನೇರವಾಗಿ ಹಾಲು ಕರೆದು ಗಟ್ಟಿ ಕಾಫಿ ಮಾಡಿಕೊಡುತ್ತಿದ್ದರು. ಆ ಕಾಫಿ ಲೋಟವೋ ಕಾಲು ಲೀಟರ್ ನಷ್ಟು ಗಾತ್ರದ್ದು. ಅಡುಗೆಮನೆಯ ಮೂರು ಕಲ್ಲಿನ ಸೌದೆಒಲೆಗಳ ಬಿಸಿಯಂತೂ ಆರುತ್ತಲೇ ಇರಲಿಲ್ಲ. ಕಾಫಿ, ಪಾನಕಗಳ ಪ್ರಮಾಣ ಹೆಚ್ಚಿರುವುದರಿಂದ ದೊಡ್ಡವರು ದೊಡ್ಡ ಕೆಲಸ ಹಂಚಿಕೊಂಡು ನಮಗೆ ‘ಚಿಲ್ಲರೆ’ ಕೆಲಸ ಕೊಡುತ್ತಿದ್ದರು. ಉದಾಹರಣೆಗೆ ಚಪಾತಿ ಮಾಡುವಾಗ ದೊಡ್ಡ ಬೋಗುಣಿಯಲ್ಲಿ ಹಿಟ್ಟು ಕಲೆಸೋದು-ನಾದೋದು ಅಕ್ಕ ಮಾಡಿದರೆ, ಒಂದೇ ಗಾತ್ರದ ಉಂಡೆ ಮಾಡಿ ಜೋಡಿಸಿಡೋದು ನನ್ನ ಪಾಲಿನ ಕೆಲಸ. ಲಟ್ಟಿಸಿ, ಬೇಯಿಸೋದು ಇನ್ನೊಬ್ಬರ ಕೆಲಸ ಹೀಗೇ…..
ತೊಟ್ಟಿ ಮನೆಗಳಲ್ಲಿ ಕಸಗುಡಿಸುವವರು ಒಬ್ಬರಾದರೆ ಅರ್ಧ ಫರ್ಲಾಂಗ್ ದೂರದ ಕಸದ ತೊಟ್ಟಿಗೆ ಎತ್ತಿ ಬಿಸಾಡಿ ಬರುವವರು ಇನ್ನೊಬ್ಬರು. ತೋಟದಿಂದ ಹೂ ಕಿತ್ತು ತಂದು , ಕೊಟ್ಟಿಗೆಯ ತುಂಗೆ, ರುಕ್ಮಿಣಿ, ದುರ್ಗಿ ಹಸುಗಳ ಹಾಲನ್ನು ಹಿಂಡಿಟ್ಟು ಮನೆಮುಂದೆ ಸಗಣಿ ನೀರು ಹಾಕಿ ರಂಗೋಲೆ ಬಿಡಿಸುವುದರೊಂದಿಗೆ ಆರಂಭಗೊಳ್ಳುವ ಬೆಳಗು, ಸ್ನಾನ ನಿತ್ಯಪೂಜೆ, ಜಾಗಟೆ ನಿನಾದದ ಮಂಗಳಾರತಿ, ನಮಸ್ಕಾರ, ತೀರ್ಥಪ್ರಸಾದ ಸೇವನೆಯಿಂದ ಮುಂದುವರಿಯುತ್ತಿತ್ತು. ಭಕ್ತಿ ಶ್ರದ್ಧೆ, ಶಿಸ್ತುಬದ್ಧವಾದ ಧಾರ್ಮಿಕ ಜೀವನಶೈಲಿ ಮಧ್ಯಮವರ್ಗದ ಆಸ್ತಿಯಾಗಿ ಸ್ವಾಭಿಮಾನಿ ಬದುಕಿಗೆ ಮುನ್ನುಡಿ ಬರೆದಿತ್ತೆಂದರೆ ಒಪ್ಪುವ ಮಾತೇ.
ಯಾವುದೇ ಹವಾಮಾನವಾಗಲಿ, ಎಂಥದ್ದೇ ಸಂದರ್ಭವಾಗಲಿ ಪಾದರಸದಂತಹ ಚಟುವಟಿಕೆಗಳ ಆಗರ ಅಡುಗೆಮನೆ. ಬೆಳಗಿನ ತಿಂಡಿಗೆ ಮಡಿಯುಟ್ಟ ಅಮ್ಮ, ದೊಡ್ಡಮ್ಮಂದಿರು, ಅವಲಕ್ಕಿ, ರೊಟ್ಟಿ, ಚಪಾತಿ ಪಲ್ಯ ಹೊಂದಿಸಿ ತಿಂಡಿ ರೆಡಿ ಎಂದು ಘೋಷಿಸಿದರೆ ಮೂಲೆ ಮೂಲೆಗಳಲ್ಲಿ ಇರುವ ಒಬ್ಬೊಬ್ಬರನ್ನೂ ಕರೆಯಲು ಮಕ್ಕಳಾದ ನಮ್ಮ ದೌಡು.. ಒಬ್ಬರಿಗೆ ಇಷ್ಟ ಇರುವ ತಿಂಡಿ ಇನ್ನೊಬ್ಬರಿಗೆ ಮೈಲಿಯಷ್ಟು ದೂರ.. ಹೊಗಳಿಕೆ ಮಾತುಗಳಷ್ಟೆ ಸಹಜವಾಗಿ ತೆಗಳಿಕೆಯೂ ಇರುತ್ತಿದ್ದರಿಂದ ಎರಡಕ್ಕೂ ನಿರ್ಲಿಪ್ತರಾಗಿ ಮುಂದಿನ ಅಡುಗೆಯ ಬಗ್ಗೆ ಗಮನ ಕೊಡುತ್ತಿದ್ದ ಸ್ಥಿತಪ್ರಜ್ಞರವರು! ಹೆಣ್ಣುಮಕ್ಕಳ ಬೆಂಕಿಗೆ ತುಪ್ಪ ಎರೆಯದ ಈ ಗುಣದಿಂದಲೇ ಆಗಾಗ ಶುರುವಾಗುವ ವ್ಯಾಗ್ಯುದ್ಧದ ಬೆಂಕಿಯ ಕಿಡಿ ಅತಿರೇಕಕ್ಕೆ ಹೋಗುವ ಮುನ್ನವೇ ಆರಿ ತಣ್ಣಗಾಗುತ್ತಿತ್ತು. ತಾಳ್ಮೆ ಅವಿಭಕ್ತ ಕುಟುಂಬದ ನಿತ್ಯ ಸಂಜೀವಿನಿ!
ಪಾತ್ರೆ ತುಂಬಾ ಫಿಲ್ಟರ್ ಕಾಫಿ ತಯಾರಿಸಿ ಎಲ್ಲರಿಗೂ ಕೊಟ್ಟು ಮುಸುರೆ ಎಲ್ಲಾ ಹಿತ್ತಿಲ ಬಚ್ಚಲಿನಲ್ಲಿ ತಿಕ್ಕಿ ಸ್ವಚ್ಛಗೊಳಿಸಿ ಬುಟ್ಟಿಯಲ್ಲಿ ತುಂಬಿಸಿ ನೀರು ಒಣಗಿದ ಮೇಲೆ ತಂದು ಅಡುಗೆಮನೆಯಲ್ಲಿ ಜೋಡಿಸಿ, ಕೊಟ್ಟಿಗೆಯಲ್ಲಿನ ಎಮ್ಮೆ, ದನ-ಕರುಗಳಿಗೆ ಮೇವು ಹಾಕಿ, ಕೊಟ್ಟಿಗೆ ಸ್ವಚ್ಛ ಮಾಡಿ, ಕಿಮೀ ದೂರದಲ್ಲಿನ ದೇವಸ್ಥಾನದ ಆವರಣದಲ್ಲಿದ್ದ ಮಡಿ ಬಾವಿಗೆ ಹೋಗಿ ಕಂಚು ಅಥವಾ ಹಿತ್ತಾಳೆಯ ಬಿಂದಿಗೆಗಳಲ್ಲಿ ಕುಡಿಯುವ ನೀರು ತಂದು ಅಡುಗೆಮನೆಯ ನೀರಿನ ಕೊಳಗ ತುಂಬಿಸಿ, ಹೊಳೆಗೆ ಹೋಗಿ ಬಟ್ಟೆಗಳನ್ನು ಒಗೆದುಕೊಂಡು ಬರುವ ವೇಳೆಗೆ ಮಧ್ಯಾಹ್ನದ ಅಡುಗೆಯ ಸಮಯಕ್ಕೆ ಹತ್ತಿರ. ಅಜ್ಜಿ, ಅಮ್ಮ, ದೊಡ್ಡಮ್ಮ, ಅತ್ತೆ ಇವರುಗಳಿಗೆ ದಿನವೆಲ್ಲಾ ಮುಗಿಯದ ಕೆಲಸವೇ. ಹಾಗಾಗಿ ಮಕ್ಕಳಾದ ನಮಗೆ ಅವರು ಹೇಳುವ ಚಿಲ್ಲರೆ ಕೆಲಸಗಳು ಖಾಯಂ ಆಗಿಬಿಟ್ಟಿದ್ದವು.
ಹಬ್ಬ-ಹರಿದಿನ, ಹೋಮ-ಹವನ ಇದ್ದರಂತೂ ಈ ಚಿಲ್ಲರೆ ಕೆಲಸ ಬೇರೆ ಬೇರೆ ಥರಹದ್ದು. ಅಣ್ಣಂದಿರು, ಮಾವಂದಿರು, ಭಾವಂದಿರು ಮಡಿಯಲ್ಲಿ ‘ನಾ ಮುಂದು ತಾ ಮುಂದು’ ಅಂತ ಅಡುಗೆ ಮಾಡ್ತಿದ್ದರಿಂದ ಅಲ್ಲೂ ಚಿಕ್ಕ- ಪುಟ್ಟ ಕೆಲಸಕ್ಕೆ ಕರಿಯೋರು. ಸಿಹಿ ಬೂಂದಿ ಮಾಡಿದರೆ ಲಾಡು ಕಟ್ಟೋದು, ತುರಿದ ಕೊಬ್ಬರಿ ಎತ್ತಿಡೋದು, ಕತ್ತರಿಸಿದ ತರಕಾರಿಯನ್ನು ಜೋಪಾನವಾಗಿ ಪಾತ್ರೆಗೆ ಹಾಕಿಡೋದು , ಕುಂಕುಮ-ಅರಿಸಿನ ಪಟ್ಟಿಗೆ ಸಹಾಯ ಮಾಡೋದು, ತಾಂಬೂಲಕ್ಕೆ ಎರಡು ವೀಳೇದೆಲೆ, ಅಡಿಕೆ ಜೋಡಿಸೋ ಕೆಲಸ, ಊಟಕ್ಕೆ ಕೂತವರಿಗೆ ನೀರು ಬಡಿಸೋದು, ಉಪ್ಪು-ಉಪ್ಪಿನಕಾಯಿ ನೀಡೋದು, ದೊಡ್ಡ ದೊಡ್ಡ ರಂಗೋಲೆ ಹಾಕಿದರೆ ಬಣ್ಣ ತುಂಬೋದು ಇತ್ಯಾದಿ .
ಮದುವೆ, ಮುಂಜಿ, ಗೃಹಪ್ರವೇಶಗಳಂತಹ ಸಮಾರಂಭಗಳು ಹಳೇ ಹೊಸ ನೆಂಟರಿಷ್ಟರು ಪುನರ್ಮಿಲನವಾಗಲು ಒಳ್ಳೆಯ ವೇದಿಕೆಯೇ ಸರಿ! ಹೊಸ ಅತ್ತೆ ಮಾವಂದಿರಿಗೆ ತಮ್ಮ ಸೊಸೆಮುದ್ದನ್ನು ಪ್ರದರ್ಶಿಸುವ ಸಂಭ್ರಮವಾದರೆ, ಗಂಡು ಹುಡುಕುತ್ತಿರುವ ಹೆಣ್ಣು ಹೆತ್ತವರಿಗೆ ಸಿಕ್ಕವರಿಗೆಲ್ಲಾ ಜಾತಕ ಹಂಚುವ, ಇನ್ನೂ ಒಳ್ಳೆಯ ಗಂಡಿದೆಯೇ ಎಂದು ವಿಚಾರಿಸುವ ಸಡಗರ..!! ನಮ್ಮಂತಹ ಪುಟ್ಟ ಮಕ್ಕಳಿಗೆ ಹೊಸ ಸ್ನೇಹಿತರನ್ನು ಪರಿಚಯಿಸಿಕೊಂಡು ದೊಡ್ಡ ಜಾಗದಲ್ಲಿ ಕಿರುಚಾಡಿ ಆಡುವ ಖುಷಿ.. ಎಲ್ಲರ ಮುಂದೆ ಅಪ್ಪ ಅಮ್ಮ ಬೈಯ್ಯುವುದು ಕಡಿಮೆ ಎಂಬ ಸತ್ಯ ಗೊತ್ತಿದ್ದರಿಂದ ಬೇಲಿ ಕಿತ್ತ ತುಂಟ ಕರುಗಳೇ ನಾವೆಲ್ಲರೂ..!
ಬಿಡುವಿನಲ್ಲಿ ಗಂಡಸರಿಗೆ ತಾಂಬೂಲದ ಕವರಿಗೆ ತೆಂಗಿನಕಾಯಿ ಹಾಕುವ ಕೆಲಸವಾದರೆ ಸರಪರ ರೇಷ್ಮೆ ಸೀರೆ ಸದ್ದು ಮಾಡುತ್ತಾ ಹೊಸ ಒಡವೆ ಪ್ರದರ್ಶಿಸುವ ಹೆಂಗಸರು ಹೂ ಕಟ್ಟಲು ಹಿಂಡಾಗಿ ಕೂರುವುದು ಆಗಿನ ಅಭ್ಯಾಸಗಳಲ್ಲೊಂದು. ದೊಡ್ಡಮ್ಮ, ಚಿಕ್ಕಮ್ಮ, ಅತ್ತೆ, ಅಕ್ಕ, ಅತ್ತಿಗೆ ಎಲ್ಲರಿಗೂ ನಾವೊಂದಷ್ಟು ಚಿಕ್ಕ ಮಕ್ಕಳು ಹತ್ತಿರ ಇರಲೇ ಬೇಕು. ಕನಕಾಂಬರ, ಮಲ್ಲಿಗೆ, ಕಾಕಡ, ಬಗೆ ಬಗೆಯ ಹೂವಿನ ರಾಶಿಯಲ್ಲಿ ಎರಡೆರಡು ಹೂಗಳು ಜೊತೆ ಮಾಡಿ ಜೋಡಿಸಿಟ್ಟರೆ ಅವರುಗಳು ದೊಡ್ಡ ಮಾಲೆ ಕಟ್ಟಲು ಅನುಕೂಲವಾಗುತ್ತಿತ್ತು. ನಾವು ಇಟ್ಟಷ್ಟೇ ವೇಗದಲ್ಲಿ ಹತ್ತು ಹನ್ನೆರಡು ಜೋಡಿ ಹೂ ಸಾಲುಗಳು ಮಾಯವಾಗುತ್ತಾ ಇನ್ನಷ್ಟು ಚುರುಕಾಗಿ ಜೋಡಿಸುವ ಉತ್ಸುಕತೆ ಪುಟಿದೇಳುತ್ತಿತ್ತು. ಪದೇ ಪದೇ ಇದೇ ಕೆಲಸ ಮಾಡುವಾಗ ನನ್ನ ಪುಟ್ಟತಲೆಗೆ ಬರುತ್ತಿದ್ದ ಯೋಚನೆ ಒಂದೇ.. ಯಾವಾಗ ಈ ಎರಡು ಹೂ ಜೊತೆ ಮಾಡೋ ಸ್ಥಿತಿಯಿಂದ ನಾನೇ ಹೂ ಹಾರ ಕಟ್ಟುವ ಪ್ರಮೋಷನ್ ಸಿಗುತ್ತೆ ಅನ್ನೋದು…😁. ಆ ಜೋರು, ದರ್ಪ, ಆರ್ಡರ್ ಮಾಡೋದನ್ನು ಅನುಭವಿಸೋ ಹೆಬ್ಬಯಕೆ. ದುರದೃಷ್ಟವಶಾತ್ ನಾನು ದೊಡ್ಡವಳಾಗೋ ಹೊತ್ತಿಗೆ ರೆಡಿಮೇಡ್ ಹೂ ಹಾರಗಳು ಅಗ್ಗಕೆ ಸಿಗುವಂತಾಗಿ ಮಾರ್ಕೆಟ್ ನಿಂದ ಮೂಟೆಗಟ್ಟಲೆ ದವನ ಮರುಗ ಸುಗಂಧರಾಜ ಸೇವಂತಿಗೆಹೂ ತಂದು ಹಾರಗಳನ್ನು ಕಟ್ಟೋ ಸಂಭ್ರಮ-ಸಡಗರ ಎಲ್ಲಾ ಮರೆಯಾಗಿಬಿಟ್ಟಿತು. ಅತ್ತೆ, ದೊಡ್ಡಮ್ಮರ ಹಾಗೆ ಹೂ ಕಟ್ಟೋ ನನ್ನ ಪ್ರಮೋಷನ್ ಕನಸು ಹಾಗೇ ಉಳಿದು ಹಲವಾರು ಸುಂದರ ಅನುಭವಗಳನ್ನಿತ್ತ ಬಾಲ್ಯದ ನೆನಪಿನ ಮೂಟೆಯಲ್ಲಿ ಚಿರಸ್ಥಾಯಿಯಾಯಿತು…..
– ಜಲಜಾ ರಾವ್ , ಬೆಂಗಳೂರು
ನಿಜ..ಕೂಡುಕುಟುಂಬವು ಒಂದು ಪಾಠಶಾಲೆ . ಅಜ್ಜ ಅಜ್ಜಿಯ ಹನ್ನೆರಡು ಮಕ್ಕಳಲ್ಲಿ ನಮ್ಮಪ್ಪ ಹಿರಿಯರು.ಚಿಕ್ಕಪ್ಪ ಅತ್ತೆಯಂದಿರ ಪ್ರೀತಿ ಮಮತೆಯ ಬಾಲ್ಯ ಈಗ ಸವಿಸವೀ ನೆನಪು.ಆ ಕಾಲ ಪುನ: ನೆನಪಿಸಿದ ನಿಮಗೆ ಧನ್ಯವಾದಗಳು.
ನಿಜ, ಅವಿಭಕ್ತ ಕುಟುಂಬಗಳ ಸವಿಯನ್ನು ಬಲ್ಲವರೇ ಬಲ್ಲರು. ಮೆಚ್ಚುಗೆಗೆ ಧನ್ಯವಾದ.
ಧನ್ಯವಾದ ನಿಮ್ಮ ಪ್ರೋತ್ಸಾಹ ಮತ್ತು ಮೆಚ್ಚುಗೆಗೆ ☺️
ಬಹಳ ಆಪ್ತವಾದ ಬರಹ..ಇಷ್ಟವಾಯಿತು
ಧನ್ಯವಾದ ☺️
ಚೆಂದದ ಬರಹ..
ಧನ್ಯವಾದ
Super. ಕೂಡು ಕುಟುಂಬದ ದೃಶ್ಯ ಕಣ್ಣ ಮುಂದೆ ಹಾದು ಹೋಯಿತು ಒಮ್ಮೆ. ತುಂಬಾ ಸುಂದರ ಹಾಗೂ ಆಪ್ತವಾಗಿದೆ ಮೇಡಂ ಬರಹ.
ನಿಮಗೆ ಇಷ್ಟ ಆಗಿದ್ದು ನನಗೂ ಸಂತೋಷ ಕೊಟ್ಟಿದೆ. ಧನ್ಯವಾದ ನಯನ
ಸೊಗಸಾದ, ಆಪ್ತವಾದ ಬರಹ.
ಚಂದದಬರಹ
ಬರಹದಲ್ಲಿ ಆಗುಹೋಗುಗಳ ಬವಣೆ/ವಿಚಾರಗಳೆ ತುಂಬಿದೆ ಬರಹಗಳು ಆಪ್ತವಾಗಿವೆ ಹಿರಿಯರ ವ್ಯಕ್ತಭಾವನೆಗಳ ಅರಿವು ಇದ್ದಂತಿಲ್ಲ ಅಲ್ಲವೇ
ನಿಮ್ಮ ಅಭಿಪ್ರಾಯ ಈಗಷ್ಟೇ ಓದಿದೆ. ಸ್ಪಷ್ಟ ವಾಗಿ ಅರ್ಥವಾಗಲಿಲ್ಲ. ಮತ್ತೊಮ್ಮೆ ತಿಳಿಸಬಹುದೇ…
60-65 ಜನರಿದ್ದ ನನ್ನ ಅಜ್ಜನ ಮನೆಯ ನೆನಪಾಗ್ತಾ ಇದೆ..ಸೊಗಸಾದ ಬರಹ.
ಧನ್ಯವಾದ
ನನ್ನ ಅಜ್ಜಿಯು ಭಗೀರಥಿಯೇ ನನ್ನ ಬಾಲ್ಯ ನೆನಪಿಸಿದಿರಿ ಸುಂದರ ಅನುಭಾವದ ಲೇಖನ.ಅಂದಿನ ಕಾಲದಲ್ಲಿ ಇದ್ದ ಹೆಣ್ಣುಮಕ್ಕಳ ತಾಳ್ಮೆ ಇಂದು ಇಲ್ಲ .ಒಂದು ನಂಗೆ ಈಗಲೂ ಕುಶಿ ಎಂದರೆ ಇವತ್ತಿಗೂ ಅಪ್ಪ ನ ಮನೆ ಹಳ್ಳಿ ಜನರಿಂದ ಗಿಜಿಗುಡುತ್ತೆ.ಹಸು ಕರು ಫಿಲ್ಟ್ರ್ ಕಾಪಿ ಎಲ್ಲ ಇವತ್ತು ನೆನಪಷ್ಟೇ. ನಿಮ್ಮ ಬರಹ ಬಾಲ್ಯ ಕಣ್ಣು ಮುಂದೆ ಬಂದಂತಾಗಿದೆ. ಅಭಿನಂದನೆಗಳು.
ಹಂಚಿ ತಿನ್ನುವುದು, ತಾಳ್ಮೆ, ಸಹಕಾರ, ಹಿರಿಯರನ್ನು ಗೌರವಿಸುವ ಮನೋಭಾವ, ಕಿರಿಯರಿಗೆ ಅಕ್ಕರೆ ಕಕ್ಕುಲಾತಿ, ತ್ಯಾಗ…ಇವೆಲ್ಲ ಕಲಿಯಲನುಕೂಲ, ಎಲ್ಲಕ್ಕಿಂತ ಹೆಚ್ಚು ಕೂಡಿ ನಲಿಯುವ ಬೆಳೆಯುವ ಸಹಕಾರೀ ಮನೋಭಾವ. ಚೆನ್ನಾಗಿ ಬರೆದಿದ್ದೀರಿ…
ನಿಮ್ಮ ಬಾಲ್ಯದ ಅನುಭವ ,ನೆನಪುಗಳು ಬಹು ಸುಂದರ. ಮನ ಮುಟ್ಟಿತು
ಬಾಲ್ಯ ನೆನಪಾಗುತ್ತದೆ. ಪ್ರಬಂಧ ತುಂಬಾ ಚೆನ್ನಾಗಿದೆ.
ಅವಿಭಕ್ತ ಕುಟುಂಬ ಜೀವನದ ಮೇಲೆ ಬೆಳಕು ಚೆಲ್ಲುವ ಒಳ್ಳೆಯ ಲೇಖನ. ಅವಿಭಕ್ತ ಕುಟುಂಬದಲ್ಲಿ ಬೆಳೆದ ಮಕ್ಕಳಿಗೆ ಹೊಂದಿಕೊಳ್ಳುವ ಅಭ್ಯಾಸ ಬಾಲ್ಯದಲ್ಲಿಯೇ ರೂಢಿಯಾಗಿರುತ್ತದೆ. ವಿಭಕ್ತ ಕುಟುಂಬದಲ್ಲಿ ಮಕ್ಕಳು ಹೇಳಿದ್ದೇ ನಡೆಯುವ ಕಾರಣ ಆ ಮಕ್ಕಳಿಗೆ ಹೊಂದಿಕೊಳ್ಳುವ ಗುಣ ಕಡಿಮೆ ಇರುತ್ತದೆ.