ಮಳೆಯ ನೆನಪು
ಕರಾವಳಿಯವರಾದ ನಮಗೆ ಮಳೆ ಹೊಸತಲ್ಲ. ಧೋ ಎಂದು ಸುರಿದು ಸೋನೆ ಹಿಡಿವ ಮಳೆ, ಜಿಟಿ ಜಿಟಿ ಎಂದು ಕಿರಿ ಕಿರಿ ಹುಟ್ಟಿಸುವ ಮಳೆ, ಮನೆಯೊಳಗೆ ಬೆಚ್ಚಗಿರುವಾಗ ಅಮಲೇರಿಸುವ ಸೋನೆ ಮಳೆ, ಮಣ್ಣಿನ ಘಮದೊಂದಿಗೆಯೇ ಹೂವು ಅರಳಿಸುವ, ಪಚ್ಚೆ ತೆನೆ ತೋಯಿಸುವ ಮುಂಗಾರು ಮಳೆ.. ಹೀಗೆ. ಅದೇ ರೀತಿ, ಜೀರುಂಡೆಯ ದನಿ, ಕಪ್ಪೆಗಳ ವಟವಟ, ಕಡುಗತ್ತಲೆಯಲ್ಲಿನ ಮಿಂಚು ಹುಳುಗಳು, ದೀಪದ ಹುಳುಗಳು , ಅಲ್ಲೆಲ್ಲೋ ತೇಲಿ ಬರುವ ಪಾರಿಜಾತದ ಗಂಧ, ನೆಂದು ತೊಪ್ಪೆಯಾದ ಹೂಗಳು.. ಹೀಗೆ ಎಳೆಯ ವಯಸ್ಸಿನಲ್ಲಿ ಮಳೆಗಾಲ ನಮಗೆ ಪ್ರಿಯವೇ ಆಗಿತ್ತು. ಮಳೆ ಬಂದು ಒಂದೆರಡು ವಾರವಾಗುತ್ತಿದ್ದಂತೆ ಸುರಂಗದಿಂದ ಸುರಿಯುವ, ದಭೆ ದಭೆಯಾಗಿ , ಕೆಲವೊಮ್ಮೆ ನೆರೆಯಂತೆಯೇ ನಮ್ಮ ಅಡಿಕೆ ತೋಟದ ನಡುವಿನ ತೋಡಿನಲ್ಲಿ ಹರಿಯುವ ನೀರು. ಜಾರುತ್ತಿರುವ ಆಡಿಕೆ ಮರದ ಸಂಕ, ಅಲ್ಲಲ್ಲಿ ತೆವಳಿ , ಅಂಟಿಕೊಂಡು ರೇಜಿಗೆ ಹುಟ್ಟಿಸುವ ಬಸವನ ಹುಳ. ನಾವು ‘ಚೇರಟೆ’ ಎಂದೂ ಈಗಿನ ಮಕ್ಕಳು ‘ಸೆಂಟಿಪಿಡ್’ ಅಂದೇನೋ ಕರೆಯುವ ಸಹಸ್ರಪದಿ, ಹಾವು, ಚೇಳು, ಅಲ್ಲದೆ ಅಟ್ಟದಲ್ಲಿನ ತೆಂಗಿನ ಕಾಯಿ ರಾಶಿ ನಡುವಣ ಹೆಗ್ಗಣ. ಅಂಗಳದಲ್ಲಿನ ಏರೋಪ್ಲೇನ್ ಚಿಟ್ಟೆಗಳು, ಅರಳಿ ನಿಂತ ಜಾಜಿ, ಮಲ್ಲಿಗೆ, ದೊಡ್ಡ ಡಾಲಿಯಾ ಹೂಗಳು. ಅಂಗಳದಲ್ಲಿಯೇ ಮಳೆಗಾಲಕ್ಕೆಂದು ಬೆಳೆಸಿದ , ನಾವು ‘ನೆಟ್ಟಿ’ ಎಂದು ಕರೆಯುವ ತರಕಾರಿ ಗಿಡಗಳು.
ಮಳೆಯೊಂದಿಗೆಯೇ ಶಾಲೆಯೂ ಶುರು. ಈಗಿನಂತೆ ಬೈಂಡ್ ಪೇಪರ್ ಇಲ್ಲದ ಕಾರಣ ನನ್ನ ಅಮ್ಮ ಕ್ಯಾಲೆಂಡರ್ ಗಳನ್ನೋ, ಕೆಲವೊಮ್ಮೆ ಪ್ಲಾಸ್ಟಿಕ್ ಕವರ್ ಗಳಿಂದಲೋ ಬೈಂಡ್ ಹಾಕಿ ಕೊಡುತ್ತಿದ್ದರು. ವಿಶಾಲವಾದ ಬಯಲಿನಲ್ಲಿ, ಆಳೆತ್ತರಕ್ಕೆ ಬೆಳೆದ ಮುಳಿ ಹುಲ್ಲಿನ ನಡುವೆ, ಒಂದೆರಡು ತೊರೆಗಳನ್ನು ದಾಟಿ ಶಾಲೆಗೆ ಹೋಗುತ್ತಿದ್ದೆವು. ಕೆಲವು ಮಕ್ಕಳು ಗೊರಬೆ ತರುತ್ತಿದ್ದರು. ಪ್ಲಾಸ್ಟಿಕ್ ಗೊರಬೆ ಸ್ವಲ್ಪ ಮಾಡರ್ನ್ ಆಗಿತ್ತು. ಇನ್ನು ‘ರೈನ್ ಕೋಟ್’ ಶ್ರೀಮಂತರಿಗೆ ಮಾತ್ರ ಲಭ್ಯವಾಗಿದ್ದು ಅದನ್ನು ಧರಿಸುವ ಮಕ್ಕಳು ಮುದ್ದಿಸಿಕೊಳ್ಳುವುದನ್ನು ಹಾಗೆಯೇ ಬಿಟ್ಟ ಕಣ್ಣಿನಿಂದ ನೋಡುತ್ತಿದ್ದೆವು. ನಾವು ಇದ್ದೊಂದು ಕೊಡೆಯನ್ನು ಜತನದಿಂದ ರಕ್ಷಿಕೊಳ್ಳುತ್ತ, ಪುಸ್ತಕ, ಪಾಟಿ ಚೀಲಗಳು ಒದ್ದೆಯಾಗದಂತೆ ಆತಂಕ ಪಡುತ್ತ .. ಒಟ್ಟಿನಲ್ಲಿ ಶಾಲೆ ತಪ್ಪಿಸಿಕೊಳ್ಳುತ್ತಿರಲಿಲ್ಲ. ಜಾಸ್ತಿ ಮಳೆ ಇದ್ದಾಗ ಶಾಲೆಗೆ ( ಯಾಕೋ ‘ಸ್ಕೂಲು’ ಎನ್ನುವ ಶಬ್ದ ಸರಿ ಹೊಂದುತ್ತಿಲ್ಲ ಇಲ್ಲಿ) ರಜೆ ಇರುತ್ತಿತ್ತು. ಇನ್ನು ಪರಿಸರ ದಿನಾಚರಣೆ ಅದು ಇದು ಏನೂ ಗೊತ್ತಿಲ್ಲದಿದ್ದರೂ ಗುಲಾಬಿ,ಮಲ್ಲಿಗೆ, ಕ್ರೋಟನ್ ಎಂದೆಲ್ಲ ಗಿಡಗಳನ್ನು ನಮ್ಮ ಕೊಡೆಯ ನಡುವಿನಲ್ಲಿಟ್ಟುಕೊಂಡು ಬಂದು ಗೆಳತಿಯರೊಂದಿಗೆ ವಿನಿಮಯ ಮಾಡಿಕೊಳ್ಳುತಿದ್ದೆವು. ಈ ಬಾರ್ಟರ್ ಪದ್ಧತಿಯಲ್ಲಿ ನನಗೊಂದು ಆರೆಂಜ್ ಕಲರ್ ನೈಲ್ ಪಾಲಿಶ್ ಕೂಡ ಸಿಕ್ಕಿ ನಾನು ಜಗತ್ತಿನ ಅದೇನೋ ಅದ್ಭುತ ಕಂಡಂತೆ ಸಂಭ್ರಮಿಸಿದ್ದು ಚೆನ್ನಾಗಿ ನೆನಪಿದೆ. ಸಂಜೆ ಮನೆಗೆ ಬಂದಾಗ ಬಿಸಿ ಬಿಸಿ ಹಲಸಿನ ಹಣ ನ ದೋಸೆಯೋ, ಕೆಂಡದಲ್ಲಿ ಸುಟ್ಟ ಹಲಸಿನ ಹಪ್ಪಳವೋ .. ಹೀಗೆಲ್ಲ ಇರುತ್ತಿತ್ತು.
ಹೀಗೆಲ್ಲ ಇರುವ ಮಳೆಗಾಲ ಒಂದು ವಿಲಾಪದಂತೆ, ಎದೆಯ ಸೀಳುವ ನೋವೊಂದರ ವಿಭ್ರಾಂತಿಯಂತೆ, ಯಾರಿಗೂ ಬೇಡವಾದ ಅನಾಥ ಪ್ರಜ್ನೆಯ ಹಳ ಹಳಿಕೆಯಂತೆ ಭಾಸವಾಗುತ್ತ, ಏಕಾಕಿತನದ ಕೂಪವನ್ನೇ ಮಡುಗಟ್ಟಿಸುವಂತೆ ಅನಿಸಲು ಶುರುವಾಗಿದ್ದು ಕಾಲದ ಚೋದ್ಯ. ನನ್ನ ಬೆಂಗಾವಲಾಗಿದ್ದ, ನನ್ನ ಹುಂಬತನಗಳನ್ನು ತಾಳಿಕೊಳ್ಳುತ್ತಿದ್ದ ಅಣ್ಣನೂ ಸೇರಿದಂತೆ ಅತಿ ಆಪ್ತರೆಲ್ಲ ನಾವು ‘ಆಟಿ’ ಎಂದು ಹೇಳುವ ಮಳೆ ಕಾಲದಲ್ಲಿಯೇ ತೀರಿಕೊಂಡಿದ್ದರು. ಆದರೇನು ಕಳೆದು ಹೋದ ಮಳೆಗಾಲಗಳು ಕಲಿಸಿದ ಪಾಠವೇ ಹೋರಾಟ, ನಮ್ಮ ಜೀವಂತಿಕೆಯನ್ನು ಉಳಿಸಿಕೊಳ್ಳುವ ಪ್ರಯತ್ನ.
ಇತ್ತೀಚೆಗೆ ಕಾರ್ಯ ನಿಮಿತ್ತ ಮಂಗಳೂರಿಗೆ ಮರಳಿ ಪಯಣ ಸುತ್ತಿದ್ದಂತೆ ಮಲೆ ನಾಡಿನ ಮಳೆಗಾಲದ ವೈಭವ ಅನಾವರಣವಾಯಿತು. ನಮ್ಮ ಮಂಗಳೂರಿನ ಕಡಲ ತೆರೆಗಳ ಅಬ್ಬರದಂತೆಯೇ ಇಲ್ಲಿನ ಗಾಳಿ ಮಳೆಗಳ ಸುಯಿಲು. ಮಳೆ ಇಲ್ಲದಿದ್ದರೂ ಮಳೆ ನಿಂತ ಮೆಲಿನ ಗುಡ್ಡ ಬೆಟ್ಟಗಳ ಚೆಲುವು ವಣ ಸಲಸದಳ. ಆ ಚಿಗುರು, ನವಿರಾದ ಹಸಿರು ಶಾಲಿನಂತಿರುವ ಬಯಲುಗಳು, ಒದ್ದೆಯಾಗಿ ನಿಂತ ರಾಕ್ ಗಳು, ಗುಡ್ಡದ ತುತ್ತ ತುದಿಯಿಂದ ಧಾರೆಯಾಗಿ ಹರಿದು ಬರುವ ಪರಿಶುದ್ಧ ನೀರು, ಆ ಬೆಟ್ಟದಿಂದ ಈ ಬೆಟ್ಟಕ್ಕೆ ಹತ್ತಿಯಂತೆ ಹಾರಿ ಬರುತ್ತಿರುವ ಮಂಜಿನ ಶುದ್ಧ ಲಾವಣ್ಯ, ಇಂಗ್ಲಿಷ್ ನಲ್ಲಿ ‘ಗ್ರೇಸ್’ ಅಂತಾರಲ್ಲ ಆ ರೀತಿಯ ಚೆಲುವು. ಎಂತಹ ಅರಸಿಕನನ್ನೂ ಮುಗ್ಧನಾಗಿಸುವ, ಎಂತ ವಿಚಾರ ವಾದಿಯನ್ನೂ ಅರೆ ಕ್ಷಣ ಪ್ರಕೃತಿಯನ್ನು, ನಿಸರ್ಗದ ಅಗಾಧತೆಯನ್ನು ಪ್ರೀತಿಸುವಂತೆ ಮಾಡುವ ಸೌಂದರ್ಯ.
ನೀಲಿ ಆಗಸದ ಬೆಳ್ಮೋಡಗಳು ಇನ್ನೇನು ಬೆಟ್ಟದ ಮೇಲೆ ಇಳಿದು ಬರುತ್ತವೆ ಎಂದು ಭಾಸವಾಗುತ್ತಿರುವಾಗಲೇ ಕೇಳಿ ಬರುವ ಜುಳು ಜುಳು ಶಬ್ದ. ಇನ್ನು ಆ ಹಸಿರೋ.. ಅದೆಷ್ಟು ಹಸಿರು ವರ್ಣಗಳು! ಬಿಸಿಲು ಬಿದ್ದಾಗಿನ ತಿಳಿ ಬಣ್ಣದ ಹಸಿರು, ಬಲಿತ ಎಲೆಗಳಿಂದ ಶೋಭಿಸುವ ಕಡು ಕಪ್ಪು ಹಸಿರು, ಬೆಟ್ಟದ ಹುಲ್ಲುಗಾವಲಿನ ಮೇಲಿನ ಬೂದು ಬಣ್ಣ ಮಿಶ್ರಿತ ಹಸಿರು, ಕೆಂಪು, ಹಳದಿ ಎಲೆಗಳ ನಡುವಿನ ಚಿಗುರು ಹಸಿರು.. ಅದೊಂದು ಧರೆಗಿಳಿದ ನಾಕ. ಯಾವ ಊಟಿಗೂ ಕಡಿಮೆ ಇರದ, ಚಿಕ್ಕಮಗಳೂರು, ಚಾರ್ಮಾಡಿ ಘಾಟ್ ಕಡೆಯ ಸೌಂದರ್ಯ ನೋಡುತ್ತಾ ನಾನು ಮಳೆಯ ಸೊಬಗನ್ನು, ಈ ದೇವ ನಿರ್ಮಿತ ಸೃಷ್ಟಿಯ ಮೌನ ಸಾಂತ್ವನವನ್ನು ಮತ್ತೆ ಎದೆಗಿಳಿಸಿಕೊಂಡೆ.
-ಜಯಶ್ರೀ ಬಿ ಕದ್ರಿ, ಮಂಗಳೂರು
ನೆನಪಿನ ದೋಣಿಯ ಪಯಣ ಚೆನ್ನಾಗಿದೆ.
ಬ್ಯೂಟಿಫುಲ್. ಪ್ರಕೃತಿ ಆವರಿಸಿಕೊಂಡುಬಿಟ್ಟಿದ್ದಾಳೆ ಮೇಡಂ ನಿಮ್ಮ ಬರಹದ ತುಂಬಾ. ಎಲ್ಲೆಲ್ಲೂ ಹಸಿರು, ಓದುತ್ತಾ ಮನವೂ ನವಿರು. ಮಸ್ತ್
ಮಳೆಗಾಲದವರ್ಣನೆ ಸುಪರ್‍್ಜಯ
ನಮ್ಮ ಬಾಲ್ಯದ ದಿನಗಳ ನೆನಪುಗಳು ಮರುಕಳಿಸುತ್ತಿವೆ…ಇಡೀ ಶಾಲೆಯಲ್ಲಿ ಒಂದೆರಡು ಅತಿ
ಶ್ರೀಮಂತ ಮಕ್ಕಳನ್ನು ಬಿಟ್ಟರೆ, ಅಧ್ಯಾಪಕರಲ್ಲಿ ಮಾತ್ರ ಕೊಡೆಗಳು. ಎರಡು ವಾರಗಳಿಗೊಮ್ಮೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಹೆಚ್ಚಾಗಿ ಚರ್ಚೆಗೆ ಇರುತ್ತಿದ್ದ ವಿಷಯ…ಕೊಡೆ ಮೇಲೋ..ಗೊರಬೆ ಮೇಲೋ..?..ನಾನು ಯಾವಾಗಲೂ ಗೊರಬೆ ಪರ!
Ellarigu dhanyavaadagslu
ನಿಮ್ಮ ಬರಹ ಹಲವು ಕಾಲ ಮಲೆನಾಡಿನ ಕಾಡಿನ ನಡುವಿನಲ್ಲಿ ವಾರಗಟ್ಟಲೆ ಸೂರ್ಯನನ್ನೇ ಕಾಣದಿದ್ದ ಸಮಯವನ್ನು ನೆನಪಿಸಿತು.ಬಿಸಿ ಕುಕ್ಕರ್ ಮೇಲೆ ,ಫ್ರಿಜ್ ಹಿಂದುಗಡೆ ಮಕ್ಕಳ ಬಟ್ಟೆಗಳನ್ನು ಒಣಗಿಸುತ್ತಿದ್ದುದೂ ಕೂಡ..ಹಳೆನೆನಪು ಮೆಲುಕುಹಾಕುವಂತೆ ಸೊಗಸಾಗಿ ಬರೆದಿರುವಿರಿ.
ಬಹಳ ಚೆಂದದ ಬರಹ
ಪ್ರಕೃತಿಯ ವಿಶ್ಲೇಷಣೆ ಸುಂದರವಾಗಿದೆ. ಮಳೆಗಾಲದ ಚಿತ್ರಣ ಬರೆಯಲಾಗಿದೆ. ಸುಪರ್
ಬಾಲ್ಯದ ಮಳೆಗಾಲದ ನೆನಪುಗಳು ತುಂಬಿದ ಲೇಖನ ತುಂಬಾ ಚೆನ್ನಾಗಿದೆ