ಬಿನ್ನಹ
ಹೇ ಬರಿಗೈ ದೊರೆಯೇ,
ಕಥೆಯೊಂದನು ಬರೆಯಲನುವಾದಾಗ,
ಸಾಕೇನು ನಾಲ್ಕು ಪಾತ್ರ?
ಮತ್ತದರ ಸುತ್ತ ಸಿಕ್ಕು
ತುದಿಮುರಿದ ಉಗುರಿನ
ಮಧ್ಯೆ ಸಿಕ್ಕ ಕೂದಲಂತ ಕಥೆ
ಬೇಸಿಗೆಯ ಮಧ್ಯಾಹ್ನದ ಧಗೆಗೆ
ಎಲ್ಲಿಂದಲೋ ಬೀಸುವ ಒದ್ದೆ ಗಾಳಿ
ನೀನೇ ಬರೆದು ಮರೆತ ಅರ್ಧಕವಿತೆಗೆ ಸರಿದು ಕೂರುವ ಕರ್ಮ
ಕೊನೆಯಿಂದ ಮೊದಲಿಗೆ ಬರುವ
ತಂತ್ರ – ಪ್ರತಿತಂತ್ರ
ವಾಗ್ವಾದ ,ಪದವೈಭವ.
ಈ ಸರ್ಕಸ್ಸುಗಳ ದಾಟಿ
ಪಾತ್ರಗಳೆಷ್ಟು ಆಯಾಸಗೊಂಡಿರಬೇಕು?
ನೀನು ಬರೆದ ಕಥೆಗಿಂತ
ಬರೆಯದ್ದೇ ಹೆಚ್ಚು ಜೀವಂತ
ಬರೆಯುವುದಾದರೆ ಬರಿ
ಮೊಗ್ಗರಳಿ ಹೂವಾಗುವ ನಾಜೂಕು
ಅಮ್ಮನ ಮನೆಸೀರೆಯ ಹಿತ
ಅಪ್ಪನ ಜೇಬಿನ ಕೇಸರಿ ಪೆಪ್ಪರಮಿಂಟು
ಮುಗ್ಧ ಕಂದನ ಕೇಕೆಯಂತಹ
ಕಥೆಗಳನು
ವಾಸ್ತವವೇ ಕ್ರೂರವಾದ ದಿನಗಳಲಿ
ನೀ ಕಟ್ಟುವ ಲೋಕವಾದರೂ
ಕತ್ತು ಹಿಚುಕದಿರಲಿ ಕಥೆಗಾರ
ಓದುಗರ ಮೇಲಿಷ್ಟು ಕರುಣೆಯಿರಲಿ
-ಎಸ್ ನಾಗಶ್ರೀ, ಬೆಂಗಳೂರು
Nice
ಕವನ ಭಾವ ಇಷ್ಟವಾಯಿತು ..
ಸೂಪರ್. ಇವತ್ತಿನ ಬರಹಗಳ ವಾಸ್ತವ ಅಡಗಿದೆ ನಿಮ್ಮ ಸಾಲುಗಳಲ್ಲಿ.
Super nagashree kavithe chennagidhe
್SUUPER
ಭಾವಪೂರ್ಣ ಕವನ ಚೆನ್ನಾಗಿದೆ.