ಕಿರು ನಾಟಕ: *ಮೂರು ಕೋತಿಗಳು*
*ದೃಶ್ಯ 1*
(ನಗರದ ಹೃದಯಭಾಗದಲ್ಲಿರುವ ಉದ್ಯಾನದಲ್ಲಿ ಮೂರು ಕೋತಿಗಳನ್ನು ಆಕರ್ಷಣೆಗಾಗಿ ಇಡಲಾಗಿದೆ. ಮೊದಲನೇ ಕೋತಿ ಕಣ್ಣು,ಎರಡನೇ ಕೋತಿ ಕಿವಿ,ಮೂರನೇ ಕೋತಿ ಬಾಯಿ ಮುಚ್ಚಿಕೊಂಡಿದೆ. ಉದ್ಯಾನದ ಎದುರು ಜನನಿಬಿಡವಾದ ರಸ್ತೆ, ಸುತ್ತಲೂ ಬಾನೆತ್ತರದ ಕಟ್ಟಡಗಳು, ಮಾಲ್ ಗಳು ಎಲ್ಲವೂ ಇದೆ. ಒಂದು ವೇಳೆ ಈ ಕೋತಿಗಳು ಎಲ್ಲವನ್ನೂ ಗ್ರಹಿಸಿ ಮಾತನಾಡುವಂತಿದ್ದರೆ….)
(ಸಂಜೆ ಸುತ್ತಾಡಲು ಬಂದ ಪ್ರೇಮಿಗಳಿಬ್ಬರು ಉದ್ಯಾನದ ಕಲ್ಲುಹಾಸಿನಲ್ಲಿ ಬಂದು ಕುಳಿತರು)
ಪ್ರಿಯತಮೆ: ಏಯ್ ವಿಕ್ಕಿ ಅಲ್ನೋಡೋ…ಆ ಹೆಂಗಸು ಅಷ್ಟೊಂದು ಅಳ್ತಿದ್ದಾಳೆ.
ಪ್ರಿಯಕರ: ಸುಮ್ನಿರು ಪವಿ. ಬೇರೆಯವರ ವಿಷಯ ನಮಗ್ಯಾಕೆ? ನಾವು ಈ ಸಂಜೆ ಎಂಜಾಯ್ ಮಾಡೋಣ.
ಪ್ರಿಯತಮೆ: ಅದೂ ಹೌದು. ಯಾರಿಗೇನಾದರೆ ನಮಗೇನು? ಆ ಜೂಸ್ ಕೊಡು. ಲೇಸ್ ಪ್ಯಾಕೆಟ್ ಓಪನ್ ಮಾಡು ವಿಕ್ಕಿ..(ಅವರಿಬ್ಬರು ಜೂಸ್ ಕುಡಿದು, ಲೇಸ್ ತಿಂದು ಬಾಟಲಿ, ಪ್ಲಾಸ್ಟಿಕ್ ಇತ್ಯಾದಿಗಳನ್ನು ಅಲ್ಲಿಯೇ ಎಸೆದು ಹೋಗುತ್ತಾರೆ)
ಕೋತಿ 1: ಹಾ ಹಾ…ಇದೇನು ಬುದ್ಧಿವಂತರೋ ಇವರು..
ಕೋತಿ 2: ಹತ್ತಿರದಲ್ಲೇ ಕಸದ ತೊಟ್ಟಿ ಇದ್ದರೂ ತಿಂದಲ್ಲೇ ಎಸೆದು ಹೋದರಲ್ಲೋ…
ಕೋತಿ 3: ಅವರೆಲ್ಲಾ ವಿದ್ಯಾವಂತರು. ವಿವೇಕವುಳ್ಳವರು…
*ದೃಶ್ಯ 2*
(ಉದ್ಯಾನದ ಎದುರಿಗಿದ್ದ ರಸ್ತೆಯಲ್ಲಿ ಕಾರೊಂದು ಬಂದು ನಿಂತಿತು. ಅದರೊಳಗಿಂದ ನಾಲ್ಕು ಜನ ದಾಂಡಿಗರು ಅಪ್ರಾಪ್ತ ಬಾಲಕಿಯನ್ನು ಎಳೆದುಕೊಂಡು ಬರುತ್ತಿದ್ದಾರೆ)
ಬಾಲಕಿ: ಅಯ್ಯೋ ಬಿಡಿ. ನನಗೆ ಹೆದರಿಕೆಯಾಗುತ್ತಿದೆ.
ದಾಂಡಿಗ 1: ಏಯ್…ಸುಮ್ನಿರೇ…ಇಲ್ಲಾಂದ್ರೆ ಕೊಂದಾಕಿ ಬಿಡ್ತೀವಿ.
ಬಾಲಕಿ: ಬೇಡ ಮಾಮ…ಬೇಡ.. ನನಗೇನೂ ಮಾಡಬೇಡ.
ದಾಂಡಿಗ 2: ನಾವು ಹೇಳಿದ ಹಾಗೆ ಕೇಳಿದರೆ ಸರಿ..
ದಾಂಡಿಗ 3: ಮುಚ್ಚುಬಾಯಿ..(ಅವಳ ಬಾಯಿಗೊಂದು ಬಟ್ಟೆ ಬಿಗಿಯುತ್ತಾನೆ)
ದಾಂಡಿಗ 4: ಶುರು ಹಚ್ಚ್ಕೊಳ್ರೋ..ಬೇಗ..ಬೇಗ..( ನಾಲ್ವರೂ ಆ ಬಾಲಕಿಯನ್ನು ಹದ್ದಿನಂತೆ ಕುಕ್ಕಿ ಕುಕ್ಕಿ ತಿಂದರು)
ಕೋತಿ 1: ಇವರೇನು ಮಾನವರೋ…ಇವರಿಗೆ ಕರುಣೆ ಎಂಬುದೇ ಇಲ್ಲವೇ?…
ಕೋತಿ 2: ಪಾಪ!!! ಪುಟ್ಟ ಹುಡುಗಿ…ಕರುಳು ಕಿತ್ತು ಬರುತ್ತದೆ.
ಕೋತಿ 3: ಲೋ…ಇವರೆಲ್ಲಾ ಮಹಾ ಬುದ್ಧಿವಂತರು ಕಣೋ. ಇವರಿರೋದೇ ಹೀಗೇ…
( ಮರುದಿನ ವೃದ್ಧನೊಬ್ಬ ಜಾಗಿಂಗ್ ಮುಗಿಸಿ ಉದ್ಯಾನದಲ್ಲಿ ಕುಳಿತು ಪೇಪರ್ ಓದುತ್ತಿರುತ್ತಾನೆ. ಮೊದಲ ಪುಟದಲ್ಲೇ ದೊಡ್ಡದಾಗಿ ಕೊಟ್ಟಿದೆ.. *ಬೀದಿನಾಯಿಗಳಿಗೆ ಬಲಿಯಾದ ಅಪ್ರಾಪ್ತ ಬಾಲಕಿ* ಎಂದು. ಕೋತಿಗಳ ಕಣ್ಣು ಮಂಜಾಗುತ್ತದೆ)
*ದೃಶ್ಯ 3*
ಕೋತಿ 1: ಅದೇನೋ ಖಾಯಿಲೆಯಂತೆ. ಯಾರೂ ಮನೆಯಿಂದ ಹೊರಗೆ ಬರುತ್ತಿಲ್ಲವಂತೆ.
ಕೋತಿ 2: ಹೌದು… ನೋಡು..ಆ ರಸ್ತೆ, ಆ ಮಾಲ್, ಆ ಥಿಯೇಟರ್ ಎಲ್ಲವೂ ಜೀವರಹಿತವಾಗಿದೆ.
ಕೋತಿ 3: ಆದರೆ ನಮ್ಮ ಎದುರಿನ ಪ್ಲಾಟ್ ನಲ್ಲಿರುವ ಮನೋಜ್ ಡಾಕ್ಟರ್ ಮಾತ್ರ ಎಂದಿಗಿಂತ ಹೆಚ್ಚಾಗಿ ಕಾರ್ಯನಿರತರಾಗಿದ್ದಾರೆ.
(ಅಷ್ಟರಲ್ಲಿ ರಸ್ತೆಯಲ್ಲೇನೋ ಗಲಾಟೆ ಕೇಳುತ್ತದೆ)
ಮೊದಲ ವ್ಯಕ್ತಿ: ಈ ಆಂಬುಲೆನ್ಸ್ ಇಲ್ಲಿಗೆ ತರಬೇಡಿ. ಈ ವೈದ್ಯರ ಶವವನ್ನು ಬೇರೆ ಎಲ್ಲಿಯಾದರೂ ಕೊಂಡೋಗಿ..
ಎರಡನೇ ವ್ಯಕ್ತಿ: ಇಲ್ಲಿ ಸಂಸ್ಕಾರ ಮಾಡಿದರೆ ನಮ್ಮ ಇಡೀ ಊರಿಗೇ ಅಪಾಯವಿದೆ. ಹಿಂತಿರುಗಿ ಹೋಗಿ…
ಮೂರನೇ ವ್ಯಕ್ತಿ: ಇಳಿಯೋ ಕೆಳಗೆ…(ಆಂಬುಲೆನ್ಸ್ ಡ್ರೈವರ್ ಗೆ ಹೊಡೆದೇ ಬಿಟ್ಟ) (ಗಲಾಟೆ ಜೋರಾಗಿ ಹೊಡೆತ ಬಡಿತ ಆಗಿ ಆಂಬುಲೆನ್ಸ್ ಮರಳಿ ಎಲ್ಲಿಗೋ ಹೋಗುತ್ತದೆ)
ಕೋತಿ ೧: ಪಾಪ…ರಾತ್ರಿ ಹಗಲು ತನ್ನ ಜೀವವನ್ನು ಲೆಕ್ಕಿಸದೆ ಸೇವೆಗೈದ ಆ ಡಾಕ್ಟರ್…
ಕೋತಿ ೨: ಎಷ್ಟೊಂದು ಕರ್ತವ್ಯನಿರತನಾಗಿದ್ದ. ದಿನಾ ಬೆಳಿಗ್ಗೆ ಜಾಗಿಂಗ್ ಮಾಡ್ತಾ ಇಲ್ಲಿ ಬರ್ತಿದ್ದ. ಇನ್ನು ಅವನನ್ನು ನೋಡಲಾಗದು…
ಕೋತಿ ೩: ಈ ಮಾನವರು ಕೃತಘ್ನರು ಕಣ್ರೋ. ಅದಿಕ್ಕೆ ಅವರು ಶ್ರೇಷ್ಠ ಜೀವಿಗಳಿರಬೇಕು. ನಾವಿನ್ನು ಕಿವಿ,ಕಣ್ಣು, ಬಾಯಿ ಮುಚ್ಚಿ ಕುಳಿತರಾಗದು. ಪ್ರತಿಕ್ರಿಯಿಸೋಣ…
(ಮಾನವೀಯತೆಯನ್ನು ಮರೆತ ಇಂದಿನ ಆಧುನಿಕ ಸಮಾಜದ ಚಿತ್ರಣ ಇದು. ನರಸತ್ತಂತಿರುವುದನ್ನು ಬಿಟ್ಟು ಎಲ್ಲಿ ಯಾವಾಗ ಕೇಳಬೇಕೋ, ನೋಡಬೇಕೋ, ಮಾತಾನಾಡಬೇಕೋ ಅಲ್ಲಿ ಪ್ರತಿಕ್ರಿಯಿಸಿ ಹೃದಯವಂತಿಕೆ ಮೆರೆಯೋಣ…)
-ಪರಿಣಿತ ರವಿ
ಸೊಗಸಾದ ಸಕಾಲಿಕ ನಾಟಕ ಗುಚ್ಛ ಮನಮುಟ್ಟುವಂತಿದೆ.