ಗುಳಿಗ ಭೂತ-{ಮಕ್ಕಳ ಕಥೆ}
ಅರುಂಧತಿ ಅಜ್ಜಿಗೆ, ಒಬ್ಬನೇ ಒಬ್ಬ ಮೊಮ್ಮಗ ಹರ್ಷ. ಅಜ್ಜಿ ತನ್ನ ಅಪರೂಪದ ’ಮೊಮ್ಮಗನನ್ನು ಮುಚ್ಚಟೆಯಿಂದ ನೋಡುತ್ತಿದ್ದಂತೆ ಹರ್ಷನಿಗೂ ಅಜ್ಜಿಯಲ್ಲಿ ಇನ್ನಿಲ್ಲದ ಅಕ್ಕರೆ!.ಹರ್ಷ ಈಗ ಆರನೇ ತರಗತಿ ಕನ್ನಡ ಮಾಧ್ಯಮದಲ್ಲಿ ಕಲಿಯುವ ವಿದ್ಯಾರ್ಥಿ.ಆತ ತೊದಲು ಮಾತಿಗಾರಂಭಿಸಿದಾಗಿನಿಂದಲೇ ಅವನು ನಿದ್ದೆ ಮಾಡಬೇಕೂಂದ್ರೆ ಅಜ್ಜಿಯ ಪಕ್ಕ ಮಲಗಿ ಆಕೆಯ ಬಾಯಿಂದ ಕತೆ ಕೇಳಿದರೇ ಸೈ!. ಸಂಜೆಯ ಹೊತ್ತಿಗೆ ಅಮ್ಮ ಮಗನನ್ನ ಹೊಟ್ಟೆ ತುಂಬಿಸಿ ಅಜ್ಜಿಗೊಪ್ಪಿಸಿ ಬಿಟ್ಟರಾಯ್ತು.ಮತ್ತೆ ನಿದ್ದೆ ಮಾಡಿಸುವ ಜವಾಬ್ದಾರಿ ಅಜ್ಜಿದು!.
ಹುಡುಗನ್ನ ಆಂಗ್ಲ ಮಾಧ್ಯಮ ಶಾಲೆಗೆ ಹಾಕೋಣಾಂತ ಅವನ ಅಪ್ಪ ವಾಸುದೇವಶರ್ಮನ ಅಭಿಲಾಶೆಯಿದ್ದರೂ “ಪ್ರಾಥಮಿಕ ಹಂತದಲ್ಲಿ ನಮ್ಮಮಕ್ಕಳು ಮಾತೃಭಾಷೆಯನ್ನೇ ಕಲಿಬೇಕು.ಇಲ್ಲದೆ ಹೋದ್ರೆ;ಅವು ಆಂಗ್ಲಭಾಷೆ ಉರುಹೊಡೆಯುವ ಯಂತ್ರಗಳೇ ಸರಿ. ಅವುಗಳ ನಿಜವಾದ ಪ್ರತಿಭೆ ಅರಳುವುದಿಲ್ಲ”. ಎಂಬುದು ಅರುಂಧತಿ ಅಜ್ಜಿಯ ವಾದ. ಬಾಲವಾಡಿ, ಒಂದನೆ, ಎರಡನೆ ಪ್ರಾಥಮಿಕ ಕಲಿಯುತ್ತಿದ್ದಾಗಲೇ ಹರ್ಷನಿಗೆ ನೆರೆಮನೆ ಆನಂದ, ಇನ್ನೊಬ್ಬ ಬೇರೆ ಊರಿಂದ ಬರುವವ ಸುಮುಖ.ಇವರು ಆತ್ಮೀಯ ಗೆಳೆಯರಾದರು. ತನಗೆ ಅಜ್ಜಿ ದಿನಕ್ಕೊಂದು ಕತೆ ಹೇಳೋರು!.ಎಂದು ಗೆಳೆಯರೆದುರು ಬಿಚ್ಚಿಕೊಂಡಾಗ; ಅವರಿಬ್ಬರಿಗೂ ಹರ್ಷನ ಅಜ್ಜಿಯಂತಾ ಅಜ್ಜಿ ತಮಗೂ ಬೇಕಿತ್ತು ಎಂಬ ಹಂಬಲ!.ಅಜ್ಜಿಕತೆ ಯಾವ ಮಕ್ಕಳಿಗೆ ಇಷ್ಟವಾಗೊಲ್ಲಹೇಳಿ?. “ನನ್ನ ಅಜ್ಜಿ, ಕತೆ ಹೇಳೋಲ್ಲ. ಅಮ್ಮನಿಗೂ ಅಜ್ಜಿಗೂ ಮಾತುಕತೆನೇ ಇಲ್ಲ” ಎಂದು ಸುಮುಖ ಹೇಳಿದರೆ; “ನಮ್ಮ ಮನೆಯಲ್ಲಿ ಅಜ್ಜಿನೇ ಇಲ್ಲ” ಎಂದು ಸಪ್ಪೆ ಮುಖ ಮಾಡೋನು ಆನಂದ!.
ಸಂಜೆ ಶಾಲೆಯಿಂದ ವಾಪಾಸಾಗುತ್ತಿದ್ದಂತೆ “ಹರ್ಷಾ.., ಆ ಒಂದುದಿನ ನಿನ್ನಜ್ಜಿ ಹೇಳಿದ ಗುಡ್ಡೆದೆವ್ವದ ಕತೆ ಚೆನ್ನಾಗಿತ್ತು ಕಣೋ. ಮತ್ತೆ ಅಂತದೇ ಸ್ವಾರಸ್ಯವುಳ್ಳ ಬೇರೆ ಕತೆ ಹೇಳಿದ್ರಾ?” ಆನಂದನಿಗೆ ಕುತೂಹಲ!. “ ಇಲ್ಲ ಕಣೋ ಅಜ್ಜಿ ಊರಿನಲ್ಲಿರಲಿಲ್ಲ.ನಿನ್ನೆ ಬಂದ್ರು.ನಿನ್ನೆ ಅವ್ರಿಗೆ ಸುಸ್ತಾಗಿತ್ತು. ಇವತ್ತು ಹೇಳೋರು. ನೀನು ಬರ್ತಿಯಾ?” ಭೂತ ಕತಾಶ್ರವಣಕ್ಕೆ ಗೆಳೆಯನ ಆಹ್ವಾನ ಸಿಕ್ಕಿದ್ದೇ ತಡ ಆನಂದನಿಗೆ ಮಹದಾನಂದವಾಯ್ತು. “ಸರಿ, ಸಂಜೆ ಬರ್ತೀನಿ ಕಣೋ” ಎಂದು ಬೀಳ್ಕೊಂಡ.
ಸಂಜೆ ಊಟ ತೀರಿಸಿದ ಹರ್ಷ ಅಜ್ಜಿಯ ಮಡಿಲಿಗೆ ಬಂದು ಬಿದ್ದು “ಕತೆ ಹೇಳಜ್ಜಿ” ಎಂದು ಗೋಗರೆದ. “ಯಾವ ಕತೆ ಹೇಳ್ಲಿ ಪುಟ್ಟಾ?..” ಅಜ್ಜಿ ಯೋಚಿಸುತ್ತಿದ್ದಂತೆ ; “ಅಯ್ಯೋ..,ನಾಲ್ಕು ದಿವ್ಸ ಅತ್ತೆ ಮನೆಯಲ್ಲಿದ್ದು ಬಂದು ಮರ್ತು ಬಿಟ್ಟಿಯಾ?. ಇನ್ನೂ ಭೂತದ ಕಥೆ ಹೇಳ್ತಿ ಅಂದಿದ್ದೆಯಲ್ಲಾ!”.ನೆನಪಿಸಿದನವ. “ಹೌದಲ್ವಾ….,ಯಾವುದು ಹೇಳ್ಲಿಯಪ್ಪಾ..!” ರಾಗಎಳೆಯುತ್ತಾ ಅಜ್ಜಿ ಪ್ರಾರಂಭಿಸಿದರು.ಅಷ್ಟರಲ್ಲಿ ನೆರೆಮನೆ ಆನಂದನೂ ಮನೆಯೊಳಗೆ ಪ್ರವೇಶಿಸಿದ.
“ಓಹೋ ಆನಂದ ಬಂದಿಯೇನೋ .ಕೂತ್ಕೋಪ್ಪ. ಇಂದು ಯಾವ ಕತೆ ಹೇಳ್ಲಿ? “ ಎಂದು ಮಕ್ಕಳಿಬ್ಬರ ಮುಖ ನೋಡುತ್ತಿದ್ದಂತೆ ಹೊರ ಜಗಲಿಯಿಂದ “ಅಮ್ಮಾ., ಅಮ್ಮೋರೆ,” ಎಂಬ ಕರೆ ಕೇಳಿಸಿತು. “ವಾಸು ಯಾರು ಕರೆಯುತ್ತಿದ್ದಾರೆ ನೋಡೋ” ಅಜ್ಜಿ ಮಗನಿಗೆ ವಹಿಸಿದರು. “ಅದು ಆಚಕರೆ ಐತ್ತಪ್ಪಣ್ಣ.” ಹೊರಗಿಣುಕಿ ನೋಡಿ ಹೇಳಿದ ವಾಸು. “ನಾನು ಅಮ್ಮೋರೆ ಐತ್ತಪ್ಪ” ಎಂದಾಗ ; “ಏನೋ ವಿಷಯ ಈ ಕತ್ತಲೆಯಲ್ಲಿ?” “ಅಮ್ಮಾ ನಿನ್ನೆ ಕೇಳಿದ ಗುಳಿಗನ ಪೆಟ್ಟು ಇವತ್ತೂ ಕೇಳಿತು.ಗುಳಿಗನಿಗೇನೋ ಕೋಪ ಬಂದಿದೆ!” ಭಯ ಮಿಶ್ರಿತ ದನಿಯಲ್ಲಿ ಉಸುರಿದ ಐತ್ತಪ್ಪ. “ಏನೂ ಹೆದರ್ಬೇಡ,ನಾಳೆ ನೋಡೋಣ. ಗುಳಿಗ ಏನೂ ಮಾಡೋಲ್ಲ.ಮನೆಗೆ ನಡಿ” ಎಂದರು ಹರ್ಷನ ಅಪ್ಪ ವಾಸು.
“ಗುಳಿಗ ಎಂದರೆ ಏನಜ್ಜಿ!?” ಮಕ್ಕಳಿಬ್ಬರೂ ಏಕಕಾಲಕ್ಕೆ ಪ್ರಶ್ನೆ ಹಾಕಿದರು. “ಗುಳಿಗ, ಎಂದರೆ ಅದೊಂದು ಭೂತ. ಧೂಮಾವತಿ ಹಿರಿಭೂತವಾದರೆ; ಗುಳಿಗ, ತುಂಡು ಭೂತ!. ಗುಳಿಗ ಎಂದ್ರೆ ಅದು ಶಿವನ ಒಂದು ‘ಗಣ’ ವಂತೆ, ಜಾಗ ಕಾಯುವ ಸೇನಾಪತಿಯಂತೆ!.” ಅಜ್ಜಿ ಹೇಳುತ್ತಿದ್ದಂತೆ “ಅದು ಪೆಟ್ಟು ಹಾಕುವುದು ಹೇಗೆ ಯಾರಿಗೆ?” ಹರ್ಷನ ಕುತೂಹಲ!. ಅದಕ್ಕೆ ಕೊಡಬೇಕಾದ ಹರಿಕೆ, ಸೇವೆ ತೀರಿಸದಿದ್ದರೆ ಅದು ಯಾವುದಾದರೊಂದು ರೂಪದಲ್ಲಿ ಉಪದ್ರ ಕೊಡುತ್ತದಂತೆ!.ಹಾದಿ ನಡೆಯುವಾಗ ದಾರಿ ತಪ್ಪಿಸುತ್ತದೆ.ಮನೆಯ ಆಸು-ಪಾಸಿನಲ್ಲಿ ಯಾವುದಾದರು ಮರಕ್ಕೋ,ಗೋಡೆಗೋ ಅಡಿಕೆಮರದ ಹಾಳೆಯಿಂದ ಪೆಟ್ಟು ಹಾಕಿದ ಸದ್ದು ಕೇಳಿಸುತ್ತದೆ.
“ದೂಮಾವತಿ ಭೂತದಷ್ಟು ಶಕ್ತಿ ಇಲ್ಲದಿದ್ದರೂ ತನಗೆ ಬೇಕಾದಂತೆ ಆಗದಿದ್ದರೆ ; ದೈವಭಕ್ತರಿಗೆ ಉಪದ್ರವ ಕೊಡುವ ತಾಕತ್ತಿದೆ ಅದಕ್ಕೆ!.ಹಾಗಾಗಿ ಕೆಲವು ಕಡೆ ಗುಳಿಗನ ಕಟ್ಟೆ ಮಾಡಿ, ಅಲ್ಲಿ ಗುಳಿಗನ ಕೋಲ ಮಾಡಿಸ್ತಾರೆ. ಗುಳಿಗನ ಕೋಲ ನೋಡಿದ್ದೀರೇನೊ ಮಕ್ಕಳೆ?”. ಅಜ್ಜಿಯ ಪ್ರಶ್ನೆಗೆ , “ಇಲ್ಲ ಅಜ್ಜೀ ..,” ಇಬ್ಬರೂ ದನಿಗೂಡಿಸಿದವು. “ಸಂಜೆ ಹೊತ್ತಿಗೆ ಗುಳಿಗನ ಕೋಲ ಮಾಡ್ತಾರೆ.ಅದಕ್ಕೆ ದೂಮಾವತಿಯಷ್ಟು ವೇಷ-ಭೂಷಣವಿಲ್ಲ. ಮುಖಕ್ಕೆ ಅಡಿಕೆ ಹಾಳೆಯ ಮುಖವಾಡ. ಅದರಲ್ಲಿ ಹಣೆಭಾಗಕ್ಕೆ ಕಪ್ಪು ಬಣ್ಣದ ನಾಮ.ಕೆನ್ನೆ ಭಾಗಕ್ಕೂ ಕಪ್ಪು ಲೇಪ!.ಎಳೆ ತೆಂಗಿನ ಮಡಲಿನ ಸಿಂಗಾರದಂತೆ ಕತ್ತರಿಸಿಕೊಂಡು ಸೊಂಟಕ್ಕೆ ಸುತ್ತೂ ಸುತ್ತೋದು{ಆಟಿ ಕಳಂಜನ ವೇಷದಂತೆ}.ಒಂದುಕೈಯಲ್ಲಿ ಮಣಿ,ಇನ್ನೊಂದರಲ್ಲಿ ಶೂಲದಂಥ ಆಯುಧ. ಇನ್ನೊಬ್ಬ ಹಾಡು ಹೇಳ್ತಾ ಡೋಲು ಬಾರಿಸ್ಕೊಂಡು ಗುಳಿಗನ್ನ ಕುಣಿಸೋನು!”.
“ಅದು ಎಲ್ಲಿ ಇದೆ ಅಜ್ಜೀ? “ ಆನಂದನ ಪ್ರಶ್ನೆ?. ನಮ್ಮ ಆಚಕರೆ ಐತ್ತಪ್ಪಣ್ಣನ ಮನೆಯ ಮೇಲಿನ ಗುಡ್ಡದಲ್ಲಿ ಗುಳಿಗನ ಕಟ್ಟೆ ಇದೆ. ವರ್ಷಕ್ಕೊಮ್ಮೆ ಅಲ್ಲಿ ಗುಳಿಗನ ಕೋಲವೂ ನಡೆಯುತ್ತಿದೆ.ಈ ಬಾರಿ ಆತ ಗುಳಿಗನ ಕೋಲ ಮಾಡಿಸಿಲ್ಲ. ಅದಕ್ಕಾಗಿ ಆತನಿಗೆ ಮಾನಸಿಕವಾಗಿ ಗುಳಿಗನ ಹೆದರಿಕೆಯಿಂದ ಹೀಗೆಲ್ಲ ಭ್ರಮಿಸುತ್ತಾನೆ!.” ಅಜ್ಜಿ ನುಡಿದಾಗ ವಾಸು, “ಹೌದಮ್ಮಾ.ಅಡಿಕೆ ಹಾಳೆ ಎತ್ತರದಿಂದ ಬಂಡೆಕಲ್ಲಿಗೆ ಬಿದ್ದ ಸದ್ದಿಗೆ ಅವನು ’ಗುಳಿಗನ ಪೆಟ್ಟು’ ಎಂದು ಭ್ರಮೆಪಟ್ಟಿದ್ದಾನೆ” ಎಂದರು. ಐತ್ತಪ್ಪಣ್ಣನ ಗುಳಿಗನ ಹೆದರಿಕೆಗೆ ಇನ್ನೊಂದು ಕತೆ ಕೇಳಿ” ಎಂದು ಅಜ್ಜಿ ಪೀಠಿಕೆ , ತೆಗೆದಾಗ ಮಕ್ಕಳಿಬ್ಬರೂ ಕುತೂಹಲದಿಂದ ಅಜ್ಜಿಯಮೊಗವನ್ನೇ ನೋಡಿದುವು!. “ಹರ್ಷಾ.., ಐತ್ತಪ್ಪಣ್ಣ ನಮ್ಮಲ್ಲಿಗೆ ದಿನಾ ಕೆಲಸಕ್ಕೆ ಬರೋನು ತಾನೇ? ಅವನಿಗೆ ತೋಟದಲ್ಲಿ ಆಗಾಗ ಗುಳಿಗ ಹೊಡೆಯೋ ಪೆಟ್ಟು ಕೇಳಿಸೋದು!. ಅದೂ ಬೆಳ್ಳಂ-ಬೆಳಗ್ಗೆ!.ಅದನ್ನು ಪರೀಕ್ಷಿಸಿ ನೋಡ ಬೇಕೆಂದು ನಿನ್ನಜ್ಜ ಒಂದಿನ ಪ್ರಾಥಃ ಕಾಲ ನಾಲ್ಕು ಗಂಟೆಗೇ ಆತನ ಮನೆಯ ಸುತ್ತ ತಿರುಗಾಡಿದರಂತೆ.ಹೆಜ್ಜೆ ಸಪ್ಪಳಕ್ಕೆ ಆತ ಎದ್ದು ಹೊರಗೆ ಬಂದು ನೋಡುವ ಹೊತ್ತಿಗೆ ಅಜ್ಜ ಅವನಿಗೆ ತಿಳಿಯದ ಹಾಗೆ ಅಡಗೋದು, ಆತ ಒಳಗೆ ಹೋಗಿ ಮಲಗಿದ ಮೇಲೆ ವಾಪಾಸು ಹೆಜ್ಜೆ ಸಪ್ಪಳ. ಹೀಗೆ ಎರಡು,ಮೂರು ಬಾರಿ ಆಗಿದ್ದರಿಂದ ಆತ ವಿಪರೀತ ಹೆದರ್ಕೊಂಡು ಕೆಲಸಕ್ಕೇ ಬರಲಿಲ್ಲ!. “ಆತನಿಗೆ ಗುಳಿಗನ ಉಪದ್ರದಿಂದ ಜ್ವರ ಬಂದಿದೆ” ಎಂದಳಂತೆ ಅವನ ಹೆಂಡತಿ. ಅಜ್ಜಿಯ ಮಾತಿಗೆ ಮಕ್ಕಳಿಬ್ಬರೂ “ಅಂದು ನಮ್ಮಜ್ಜನೇ ಗುಳಿಗ” ಎಂದು ಮುಖ,ಮುಖ ನೋಡ್ಕೊಂಡು ಕಿಸಿ-ಕಿಸಿ ನಕ್ಕರು. “ನಾವು ತೋಟಕ್ಕೆ ಹೋದಾಗಲೂ ಗುಳಿಗ ಹೊಡೆಯುವುದಿಲ್ಲ ಅಲ್ವಾ ಅಜ್ಜಿ?” ತುಸು ಅಂಜಿಕೆಯೊಂದೆಗೆ ಕೇಳಿದ ಆನಂದ. “ಇಲ್ಲ ಮರೀ..,ಅದು ನಮಗೆಲ್ಲ ಏನೂ ಮಾಡಲ್ಲ. ಗುಳಿಗನ ಕಟ್ಟೆಯಲ್ಲಿ ಕೋಲ ಕೊಡೋರಿಗೆ, ಅದರ ನಂಬೋರಿಗೆ, ಅದರ ತರಾಟೆ. ನಮ್ಮಲ್ಲಿ ಅದಕ್ಕೆ ಕಟ್ಟೆಯೂ ಇಲ್ಲ. ನಮಗೆ ಅದೇನೂ ಮಾಡಲ್ಲ. ಕೆಲವು ಸರ್ತಿ ಗುಳಿಗ ದಾರಿಹೋಕರಿಗೆ ದಾರಿ ತಪ್ಪಿಸಿ ಬಿಡ್ತದೆಯಂತೆ!.ಒಮ್ಮೆ ಇದೇ ಐತ್ತಪ್ಪಣ್ಣ ಕೆಲಸ ತೀರ್ಸಿ ಪಟ್ಟಾಂಗಹೊಡೆದು ಹೋಗೋ ಹೊತ್ತಿಗೆ ರಾತ್ರಿ ಎಂಟು ಗಂಟೆ!.ಅಮಾವಸ್ಯೆ ದಿನ ಬೇರೆ!. ಸೂಟೆ ಬೀಸ್ಕೊಂಡು ಹೋದೋನು ವಾಪಾಸು ಬಂದ.ಯಾಕೋ ವಾಪಾಸು ಬಂದೆ? ಎಂದ್ರೆ, ಅವನಿಗೆ ಆಶ್ಚರ್ಯ!!. ತಾನು ದಾರಿ ತಪ್ಪಿ ವಾಪಾಸು ಇಲ್ಲಿಗೇ ಬಂದೆನೋ?! ಎಂದು!. ಸರಿ,ಮಕ್ಕಳೆ ಇವತ್ತಿಗೆ ಈ ಕತೆ ಸಾಕು. ಇನ್ನೊಂದು ದಿನ ಇಂತದೇ ಇನ್ನೊಂದು ಭೂತದ ಕತೆ ಕೇಳುವಿರಂತೆ”. ಎಂದರು ಅಜ್ಜಿ
-ವಿಜಯಾಸುಬ್ರಹ್ಮಣ್ಯ,ಕುಂಬಳೆ.
ಧನ್ಯವಾದ ಸಂಪಾದಕಿ ಹೇಮಮಾಲಾ ಹಾಗೂ ಓದುಗ ಬಳಗಕ್ಕೆ.
ಭಯಂಕರ ಚಂದದ ಕಥೆ ವಿಜಯಕ್ಕ.