ಕರೋನಾಗೆ ರಿಟರ್ನ್ ಗಿಫ್ಟ್
ಏನಾಗಿದೆ ಈಗ
ಕ್ಷಣಗಳು ಮಾತ್ರ ಕಲ್ಲೋಲ
ಆತ್ಮಸ್ಥೈರ್ಯವಲ್ಲ
ಸಮೂಹಗಳು ಮಾತ್ರ ಸಂಕ್ಷೋಭಿತ
ಸಹಾಯ ಮಾಡುವ ಹೃದಯಗಳಲ್ಲ
ಎಷ್ಟು ಕಂಡಿಲ್ಲ ನಾವು
ಕಾಲರಾ ಬಂದು ಎಷ್ಟು ಹಳ್ಳಿಗಳು ಕಂಗೆಟ್ಟಿಲ್ಲ
ಕನಸಿನಲ್ಲಾದರೂ ಕಾಣುತ್ತದಯೇ ಕಾಲರಾ ಈಗ
ಪ್ಲೇಗ್ ಅನ್ನು ಜಯಿಸಿದ ಮಂದಹಾಸದಿಂದಲೇತಾನೆ
ಚಾರ್ಮಿನಾರ್ ಅನ್ನು ನಿರ್ಮಿಸಿಕೊಂಡದ್ದು
ಕಳೆದ ಕಾಲ ಯಾವಾಗಲೂ ವಿಜಯಗಳನ್ನೇ ನೆನಪಿಸುತ್ತದೆ
ವರ್ತಮಾನವೆಂದಿಗೂ ಸವಾಲುಗಳನ್ನೇ ತೋರುತ್ತದೆ
ಭವಿಷ್ಯತ್ತು ಸದಾ ಆಸೆಗಳನ್ನೇ ಒಟ್ಟುಗೂಡಿಸುತ್ತದೆ
ಕುಗ್ಗುವುದು ತಾತ್ಕಾಲಿಕ
ಯುದ್ಧಭೂಮಿಯಲ್ಲಿಳಿದಾಗ
ಹಿಂದಿರುಗುವುದು ಬೆನ್ನು ತೋರುವುದು ನಮಗೆ ತಿಳಿಯದು
ಯುದ್ಧವು ಯಾವ ರೂಪದಲ್ಲಿ ಬಂದರೇನು
ಮಿಸೈಲ್ ಆದರೂ- ವೈರಸ್ ಆದರೂ
ಹೆಚ್ಚಿನ ವ್ಯತ್ಯಾಸವೇನಿರುತ್ತೆ!
ನಿಂಗೆ ಚೆನ್ನಾಗಿ ತಿಳಿದಿದೆ
ಜೀವೇಚ್ಛೆಯಿಂದ ಜನಿಸಿದ ದೇಹ ನಮ್ಮದು
ಎಷ್ಟು ಬಾರಿ ಯುದ್ಧ ಪ್ರಸವಗಳನ್ನ ಕಂಡಿಲ್ಲ
ಅಂಕೆಯನ್ನು ನಮ್ಮ ಆಕಾಂಕ್ಷೆಯನ್ನಾಗಿ ಮಾರ್ಪಡಿಸಿಕೊಂಡಿಲ್ಲ
ಕರೋನ ಪಾಸಿಟಿವ್ ಆದರೇನಂತೆ
ಸಕಾರಾತ್ಮಕ ದೃಷ್ಟಿಯು ನಮ್ಮ ಮುಂದಿದೆಯೆಂದಾಗ
ಸಾಮಾಜಿಕ ಅಂತರ ನಮ್ಮ ಅಸ್ತ್ರವಾದಾಗ
ಜನತಾ ಕರ್ಫ್ಯೂ ನಮ್ಮ ಕವಚವಾದಾಗ
ಇದೀಗ ಕ್ವಾರಂಟೈನೇ ನಮ್ಮ ವಾಲೆಂಟೈನ್
ಇನ್ನು, ಕರೋನಾವು ಕರಗಿ ಕಣ್ಮರೆಯಾಗುವುದಿಲ್ಲವೇ
ಕ್ಯಾ ಕರೋನ ಅಂತ ದೀನವಾಗಿ ದುಂಬಾಲು ಬೀಳಬೇಡ
ಕಳ್ಳತನವಾಗಿ ಪ್ರವೇಶಿಸಿದ ಕರೋನಗೆ ಕರುಣೆ ತಿಳಿಯದು
ಕ್ಯಾ ಕರೋಗೆ ಅಂತ ತಿರುಗಿಬೀಳು ಪ್ರಶ್ನಿಸು
ಲೆಕ್ಕವಿಡಬೇಕಾದದ್ದು ಹೋದ ಪ್ರಾಣಗಳನ್ನಲ್ಲ
ನಿತ್ಯ ರಣರಂಗದಲ್ಲಿ ಕರೋನ ಎಷ್ಟು ಲಕ್ಷ ಕೈಗಳ ಕೈಯಲ್ಲಿ
ಸೋತುಹೋಗಿದೆಯೋ ಆ ಲೆಕ್ಕವನ್ನು ನೋಡೋಣ
ನಮ್ಮ ಲೇಖನಿಗಳನ್ನು ಖಡ್ಗಗಳನ್ನಾಗಿಸಿ ಕವಿ ಸೈನಿಕರಾಗೊಣ
ಅಸ್ತ್ರವಿಲ್ಲದೇ-ಕ್ಷತಗಾತ್ರರಾಗಿ ಉಳಿಯದೆ
ರಥ ಗಜ ತುರಗ ಪರಿವಾರದ ಅವಶ್ಯಕತೆಯಿಲ್ಲದೆ
ಧೈರ್ಯ ಸಂಕಲ್ಪ ಜೀವನೇಚ್ಛೆಯೇ ಸೈನ್ಯವಾಗಿ
ಪ್ರತಿಯುದ್ಧವನ್ನು ಸಾರೋಣ
ದೇಹ ದೇಶದಲ್ಲಿ ನಡೆಯುವ ಅಂತರ್ಯುದ್ಧವಿದು
ಆತ್ಮಸ್ಥೈರ್ಯದಿಂದ ಎದುರಿಸೋಣ
ಕಾವ್ಯ ಚಿಕಿತ್ಸೆಯಿಂದ ಮಾನಸಿಕ ಸಿದ್ಧತೆಯನ್ನು ತುಂಬೋಣ
ಎಷ್ಟೋ ಯುದ್ಧಗಳನ್ನ ನೋಡಿದೀವಿ-ಆದರೆ ಇದೇ ಬೇರೆ
ಗುಂಪು ಗುಂಪಾಗಿ ಕೂಡಿ ಮಾಡುವುದಲ್ಲ
ಒಬ್ಬೊಬ್ಬರೇ ಒಬ್ಬೊಬ್ಬರಾಗಿ ಸಾಮೂಹಿಕ ಹೋರಾಟವನ್ನು ಮಾಡಬೇಕು
ಈ ಯುದ್ಧದಲ್ಲಿ ಒಬ್ಬೊಬ್ಬರು ಒಂದು ಒಂಟಿ ಸೈನಿಕ
ಏಕಾಕಿ ಮಾನವನ ಸುತ್ತ ಅಕ್ಷರಗಳ ರಕ್ಷಣೆಯ ವಲಯವನ್ನು ಹೆಣಿಯೋಣ ಬನ್ನಿ
ಕಬಳಿಸಲು ಹೊಂಚುಹಾಕಿದ ಕರೋನವನ್ನು ಕೊನೆಗಾಣಿಸುವ ಚೈತನ್ಯವನ್ನು ತುಂಬೋಣ
ವಿಮಾನಗಳಿಂದ ಆಮದಾಗುತ್ತಿರುವ
ಮಹಮ್ಮಾರಿಗೆ ಐಸೋಲೇಷನ್ ವ್ಯೂಹದ ನಮಸ್ಕಾರ ಮಂತ್ರದಿಂದ
ರಿಟರ್ನ್ ಗಿಫ್ಟ್ ಕೊಡೋಣ ಬನ್ನಿ!
ತೆಲುಗು ಮೂಲ : ಐನಂಪೂಡಿ ಶ್ರೀಲಕ್ಷ್ಮಿ
ಅನುವಾದ : ರೋಹಿಣಿಸತ್ಯ
ಒಳ್ಳೆಯ ಆತ್ಮ ವಿಶ್ವಾಸ ಹುಟ್ಟಿಸಬಲ್ಲ ಕವನ. ಲೇಖಕಿ ರೋಹಿಣಿ ಸತ್ಯ ಅವರಗೆ ಧನ್ಯವಾದಗಳೊಂದಿಗೆ ರಾಮನವಮಿಯ ಶುಭಾಶಯಗಳು.
ನನ್ನ ತಮ್ಮ, ತಂಗಿ ಹಾಗೂ ಅಮ್ಮ ಕಾಲರಾ ಪೀಡಿತರಾಗಿ, ನಂತರ ಗೆದ್ದು ಬಂದ ನೆನಪು ಮನಃಪಟಲದಲ್ಲಿ ಮಾಸದೆ ಉಳಿದಿದೆ… ಒಳ್ಳೆಯ ವಿಚಾರಧಾರೆಯುಳ್ಳ ಕವನ
ಆಶಾವಾದ ತುಂಬಿದ ಕವಿತೆ. ಚೆನ್ನಾಗಿದೆ
ಸದ್ಯದ ಪರಿಸ್ಥಿತಿಯನ್ನು ಎದುರಿಸುವಲ್ಲಿ ಪ್ರೇರಣೆ ತುಂಬುವ ಸಾಲುಗಳು.
ಆತ್ಮವಿಶ್ವಾಸವನ್ನು ತುಂಬಬಲ್ಲ ಸಮಯೋಚಿತ ಕವನ ಚೆನ್ನಾಗಿದೆ.