ಕೊರೊನಾ ಸಮಯ
‘ಫೆರಾರಿ ಮಾರಿದ ಫಕೀರ'(Monk who sold his Ferrari) ಎಂಬ ರೋಬಿನ್ ಶರ್ಮಾರವರ ಪುಸ್ತಕದಲ್ಲಿ ಏನನ್ನಾದರೂ ಸಾಧಿಸಲು ಇಪ್ಪತ್ತೊಂದು ದಿನ ಪ್ರಯತ್ನ ಪಟ್ಟರೆ ಮಾರನೇ ದಿನ ಪ್ರಯತ್ನ ಪಡದೇ ಆ ಕೆಲಸವನ್ನು ನಾವು ಮಾಡುತ್ತೇವೆ, ಎಂಬುದನ್ನು ಎತ್ತಿ ತೋರಿಸಿದ್ದಾರೆ. ಹೌದು,ನಮಗೀಗ ಕೊರೊನಾ ರಜೆಯೆನ್ನಬೇಕೋ, ಲಾಕ್ ಡೌನ್ ಎನ್ನಬೇಕೋ ದೊರೆತಿದೆ. ಕೆಲವರಿಗೆ ಮನೆಯವರೊಂದಿಗೆ ಕಾಲ ಕಳೆಯಲು ಸಮಯ ಸಿಕ್ಕಿತೆಂಬ ಖುಶಿ,ಇನ್ನು ಕೆಲವರಿಗೆ ಕಚೇರಿ ಕೆಲಸ ಬಿಟ್ಟು ಮನೆಯಲ್ಲೇ ಕೂರಲು ಬೋರು,ಮತ್ತೆ ಕೆಲವರಿಗೆ ದಿನೇ ದಿನೇ ಮಾಡುವ ಕೆಲಸದಿಂದ ಸ್ಬಲ್ಪ ವಿರಾಮ ಸಿಕ್ಕ ಖುಶಿ. ಈ ಇಪ್ಪತ್ತೊಂದು ದಿನ ಏನು ಮಾಡಬೇಕು ಎಂಬ ಯೋಚನೆ ಹಲವರಲ್ಲಿ, ಸಿಕ್ಕ ಸಮಯವನ್ನು ಸರಿಯಾಗಿ ಬಳಸುವ ಯೋಜನೆ ಇನ್ನೂ ಹಲವರದು.
ಬೆಳಿಗ್ಗೆ ಬೇಗನೇ ಎದ್ದು ಮನೆಯವರಿಗೆಲ್ಲ ತಿಂಡಿ ತೀರ್ಥದ ವ್ಯವಸ್ಥೆ ಮಾಡಿ, ಕಚೇರಿಗೆ ಓಡುತ್ತಿದ್ದವರಿಗೆ ಸ್ವಲ್ಪ ಆರಾಮಾಗೆದ್ದು ತಿಂಡಿ ಮುಗಿಸಿ ಮನೆಯಿಂದಲೇ ಕಾರ್ಯನಿರ್ವಹಿಸುವ ಸೌಲಭ್ಯವಿರುವವರು ಗಣಕಯಂತ್ರದ ಮುಂದೆ ಕುಳಿತು ಕೆಲಸಕ್ಕೆ ಕುಳಿತುಕೊಂಡರೆ, ಕಚೇರಿ ಸೇರಲು ವಾಹನ ದಟ್ಟಣೆಯ ನಡುವೆ ಓಡಾಡಬೇಕಾದ ಅನಿವಾರ್ಯತೆಯನ್ನು ದೂರಗೊಳಿಸಿ, ಮನೆಯವರೊಂದಿಗೆ ಸ್ವಲ್ಪ ಸಮಯ ಕಳೆಯುವ ಅವಕಾಶ.ಮಧ್ಯಾಹ್ನದ ಅಡುಗೆ ಮುಗಿಸಿ ಊಟ ಮುಗಿಸಿ ಸಣ್ಣ ನಿದ್ರೆ ತೆಗೆಯುತ್ತ, ಸಂಜೆಯ ಚಹಾ ಹೀರಿ ತಮ್ಮ ಹವ್ಯಾಸಗತ್ತ ಗಮನ ಹರಿಸಿ ಸಮಯದ ಸದುಪಯೋಗ ಪಡೆಯುವ ಅವಕಾಶ.
ಇಷ್ಟು ದಿನ ಮುಂಜಾನೆ ಬೇಗ ಎದ್ದು,ವ್ಯಾಯಾಮ,ಯೋಗ ಶುರು ಮಾಡಿ ದೇಹವನ್ನು ಹಗುರವಾಗಿಸಿ, ಆರೋಗ್ಯವಂತರಾಗುವ ಕನಸು ಕಂಡರೂ ಕೆಲಸದ ನಡುವೆ ಸಮಯ ಹೊಂದಿಸಲಾಗದೇ ಚಡಪಡಿಸಿದವರಿಗೆ ಕಚೇರಿಗೆ ಓಡುವುದು ಕೆಲಸವಿಲ್ಲದಿದುರಿಂದ ವ್ಯಾಯಾಮವನ್ನು ಶುರುಮಾಡಬಹುದೇನೋ.ವಾಕಿಂಗ್ ಹೋಗಬೇಕೆಂದು ಬಯಸಿದವರು ಟೆರೇಸು ಏರಿ ಅಥವಾ ಮನೆಯಲ್ಲೇ ವಾಕಿಂಗ್ ಶುರುಮಾಡಬಹುದು. ಲಘು ಉಪಾಹಾರ ಮಾಡುವ ಯೋಜನೆ ಹೊಂದಿದವರಿಗೂ ಆಹಾರ ಸಾಮಗ್ರಿಗಳನ್ನು ಹೊರಗೆ
ಹೋಗಿ ತರಲು ಸಾಧ್ಯವಾಗದೇ ಇರುವವರು ಯೋಜನೆಯನ್ನು ಕಾರ್ಯರೂಪಕ್ಕೆ ತಂದು ಇರುವುದರಲ್ಲೇ ಹಾಸಿಗೆಯಿದ್ದಷ್ಟೇ ಕಾಲು ಚಾಚುವ ಕ್ರಮವನ್ನು ಜಾರಿಗೊಳಿಸಬಹುದು.(ಮನೆಗೇ ಸಾಮಗ್ರಿಗಳನ್ನು ತಂದುಕೊಡುವ ಸೌಲಭ್ಯ ಇರುವೆಡೆಗೆ ಅದನ್ನು ಬಳಸಿ).
ಮಕ್ಕಳೊಂದಿಗೆ ‘ಅಮ್ಮ ಐದು ನಿಮಿಷವಾದರೂ ನನ್ನೊಂದಿಗೆ ಲುಡೋ,ಕೇರಂ ಆಡು’ ಎಂದು ಕೇಳಿದಾಗ ನಕಾರವೆತ್ತಿದವರು, ಸ್ವಲ್ಪ ಕಾಲಾವಕಾಶವಿರುವುದರಿಂದ ಅವರೊಂದಿಗೆ ಆಡಿ,ಕುಟುಂಬ ಸಮೇತ ಈ ರೀತಿಯ ಆಡುವ ಮಜವೇ ಬೇರೆ. ಮನೆಯ ಗೇಟಿನೊಳಗೆ ಸ್ವಲ್ಪ ಜಾಗವಿದ್ದರೆ ಅವರಿಗೆ ಸೈಕಲ್ ಕಲಿಸುವ ಅವಕಾಶವನ್ನೂ ನೀವು ಬಳಸಿಕೊಳ್ಳಬಹುದು.
ಪುಸ್ತಕಕ್ಕಿಂತ ಉತ್ತಮ ಗೆಳೆಯರುಂಟೆ. ಮನೆಯಲ್ಲಿರುವ ಹಳೆಯ ಪುಸ್ತಕಗಳನ್ನು ಮತ್ತೊಮ್ಮೆ ಓದಲು ಇದೊಂದು ಸುವರ್ಣಾವಕಾಶ. ಹಳೆಯ ಪುಸ್ತಕಗಳನ್ನು ಓದಿ ಬೋರಾದರೆ ಜಂಗಮವಾಣಿಯಲ್ಲಿ ಓದಲು ವಸಂತ ಶೆಟ್ಟಿಯವರು ‘ಮೈಲಾಂಗ್’ ಎಂಬ ಆ್ಯಪ್ ನಲ್ಲಿ ಇತ್ತೀಚಿನ ಕೃತಿಗಳ ಸಂಗ್ರಹವನ್ನು ನಿಮ್ಮಮುಂದಿಟ್ಟಿದ್ದಾರೆ. ಆಡಿಯೋ ಬುಕ್ ಕೂಡ ಇರುವುದರಿಂದ ಬುಕ್ ಕೇಳುವ ಅವಕಾಶವೂ ನಿಮಗಿದೆ. ಕಥೆಗಳನ್ನು ಓದುತ್ತ ಮಕ್ಕಳಿಗೂ ಹೇಳಲು ಮರೆಯದಿರಿ. ಕಥೆ ಕೇಳುತ್ತ ಅವರ ಬುದ್ಧಿಮತ್ತೆ ಚೆನ್ನಾಗಿ ಬೆಳೆಯುವದರೊಂದಿಗೆ, ಏಕಾಗ್ರತೆಯೂ ಬೆಳೆಯುತ್ತದೆ. ಅವರ ಕಥಾ ಸಂಗ್ರಹಗಳೂ ವಿವಿಧ ಆ್ಯಪ್ ನಲ್ಲಿ ಈ ಬುಕ್ ರೂಪದಲ್ಲಿ ಉಚಿತವಾಗಿ ಲಭ್ಯವಿದ್ದು ಅದರ ಉಪಯೋಗ ಪಡೆಯಬಹುದಾಗಿದೆ.
“ನೂರು ದಿನ ನಿಜ ನುಡಿದವನು ಏನು ನುಡಿದರೂ ಅದನ್ನು ಸತ್ಯವೆಂದೇ ಪರಿಗಣಿಸುವ” ಸುಭಾಷಿತವಿರುವ ನಮ್ಮ ನಾಡಿನಲ್ಲಿ ಕಾಲಹರಣ ಮಾಡಲು ಉಪಾಯವಿಲ್ಲವೆಂದು ಹೊರಗೆ ಸುತ್ತಾಡುತ್ತಾ ಪೋಲಿಸರ ಕೈಯಿಂದ ಲಾಟಿಯಿಂದ ಹೊಡೆತ ತಿನ್ನುವ ಬದಲು ನಿಮ್ಮ ಹವ್ಯಾಸಗಳನ್ನು ಬೆಳೆಸುವತ್ತ,ಮಕ್ಕಳೊಂದಿಗೆ ಸಮಯ (ಕುಟುಂಬದವರೊಂದಿಗೆ) ಕಳೆಯುತ್ತ 21 ದಿನಗಳನ್ನು ಕಳೆಯಿರಿ.ಆ ಒಳ್ಳೆಯ ಅಭ್ಯಾಸ 22 ನೇ ದಿನಕ್ಕೂ ನಡೆದು ನಿಮ್ಮಬದುಕನ್ನು ಹಸನಾಗಿಸುತ್ತ ಕೊರೊನಾ ಎಂಬ ಮಹಾಮಾರಿಯನ್ನು ಆಮಂತ್ರಣ ನೀಡಿ ಕರೆಯದೇ ಇರುವಾಗ ಮುಖ ತಿರುಗಿಸಿ ಆ ಅತಿಥಿ ಹೋಗದಿದ್ದರೆ ಕೇಳಿ.
-ಸಾವಿತ್ರಿ ಶ್ಯಾನುಭಾಗ, ಕುಂದಾಪುರ
ಒಳ್ಳೆಯ ಸಾಂದರ್ಭಿಕ ಲೇಖನ.
ರಾಮನವಮಿಯ ಶುಭಾಶಯಗಳು.
ಧನ್ಯವಾದಗಳು
ನಿಮಗೂ ಶುಭಾಶಯಗಳು
ಸಮಯೋಚಿತ ಚಿಂತನಾಲಹರಿ ಹರಿಯಬಿಟ್ಟಿರುವ ಒಳ್ಳೆಯ ಲೇಖನ
ಧನ್ಯವಾದಗಳು
ಉತ್ತಮ ಬರಹ.
ಧನ್ಯವಾದಗಳು
good article sister.
ಪ್ರಕಟಣೆಗಾಗಿ ಧನ್ಯವಾದಗಳು
ಸಕಾಲಿಕ ಲೇಖನ ಚೆನ್ನಾಗಿದೆ.
ಧನ್ಯವಾದಗಳು