ಸದ್ದಿರದ ಸುದ್ದಿಗಳು
ಹೊತ್ತಲ್ಲದ ಹೊತ್ತಲ್ಲಿ ಪದೇ ಪದೇ ಗುನುಗುನಿಸುವ ಹಾಡೊಂದು ನೀನು/
ತನ್ನಷ್ಟಕ್ಕೇ ತಾ ಪುಟಿದೇಳುವ ಉತ್ಸಾಹಕ್ಕೆ ಗೊತ್ತಿರದ ಸ್ಪೂರ್ತಿಯೊಂದು ನೀನು//
ಆ ರೆಪ್ಪೆ ಮಿಟುಕಿದಷ್ಟು ಬಾರಿ ಕ್ಷಣಕ್ಕೊಮ್ಮೆ ಕಾಣೆಯಾಗಿ ವಾಪಸ್ಸಾಗುವ ನಾನು/
ಮೆದು ಕುಣಿತದ ಕಣ್ಣ ಹುಬ್ಬು ಹುಟ್ಟು ಹಾಕುವ ಅನುಭವವೊಂದು ನೀನು//
ಸರಸರನೆ ಸೆಳೆದೆಳೆದು ಸಾಗರ ಒಳಗೆಳೆದುಕೊಂಡಂತೆ ಸಂಜೆ ಸೂರ್ಯನನ್ನು/
ಮರಳು ದಡದ ಮೇಲೆ ಮೆಲ್ಲಗೆ ಮೆಲುಕುವ ಮಲ್ಲಿಗೆ ದಂಡೆಯೊಂದು ನೀನು//
ನೀ ಬರುವ ಸಮಯಕ್ಕೆ ಕಾಯುವ ಭಾವಗಳು ಹರಿಯುವವು ಮಳೆಗಾಲದ ಹೊಳೆಯಾಗಿ/
ಹೋಗಿ ಮೈಯೊಡ್ಡಿ ನೆನೆಯುವ ಗುಂಗಿಗೆ ರಂಗೇರಿಸುವ ಮಳೆಬಿಲ್ಲೊಂದು ನೀನು//
ಕಂಡು ಹಿಡಿಯಬೇಕು ಹೊಸ ಸೂತ್ರ ನೀ ಕೊಟ್ಟ ಕನಸುಗಳ ಕಚಗುಳಿ ಲೆಕ್ಕ ಹಾಕಲು/
ಆ ಮೂಗಿನ ನತ್ತು ಪ್ರತಿ ರಾತ್ರಿಗಳ ಮತ್ತು ಜೀವ ತಳೆಯುವ ಜಾಗರಣೆಯೊಂದು ನೀನು//
ಮಟಮಟ ಮಧ್ಯಾಹ್ನ ಕಪ್ಪು ಬಿಳಿ ಮೋಡಗಳ ಪಯಣ ಧರೆಗಿಳಿಯಲು ಅನುರಾಗ/
ಕಳೆದೋಗುವ ಮುನ್ನ ವ್ಯರ್ಥವಾಗಿ ಚಳಿಗಾಲ ಹಿಡಿದಪ್ಪಿದ ಎಳೆಬಿಸಿಲೊಂದು ನೀನು//
ಇಲ್ಲದೊಂದು ಕವಿತೆಯದು ಕಾಡುವಂತಹ ಒನಪು ಹೊದ್ದುಕೊಂಡು ಬಿಸುಪು/
ಸುಮ್ಮಸುಮ್ಮ ನಗುವ ಸದ್ದಿರದ ಸಂಗತಿಗಳಿಗೆ ಸುದ್ದಿಯಾಗುವ ನೆಪವೊಂದು ನೀನು//
-ಬಸವರಾಜ ಕಾಸೆ , ವಿಜಯಪುರ
ಚಂದದ ಕವನ
ಸುಂದರವಾದ ಸಾಲುಗಳು.
ಗಝಲ್ ತರಹ ಚೆನ್ನಾಗಿದೆ.