ವಿಖ್ಯಾತ ವಿದುರ
‘ಋಣಾನುಬಂಧ ರೂಪೇಣ ಪಶು , ಪತ್ನಿ, ಸುತಾಲಯಾಂ’ ಎಂಬ್ ಲೋಕೋಕ್ತಿಯಂತೆ, ಹೆಂಡತಿ, ಮಕ್ಕಳು , ದನಕರುಗಳು ಎಲ್ಲವೂ ಋಣಾನುಬಂಧದಂತೆ ಸಿಗುತ್ತದೆಯಂತೆ. ಒಳ್ಳೆಯ ಪತ್ನಿ, ಗುಣವಂತರಾದ ಮಕ್ಕಳು, ಒದಗಬೇಕಿದ್ದರು, ಪೂರ್ವಪುಣ್ಯ ಸುಕೃತವೂ ಇರಬೇಕೆಂದು ಹಿರಿಯರ ಅನುಭವದ ಮಾತು. ಈ ಬಾಂಧವ್ಯಗಳು ತಾಯಿಯಿಂದ ಮಕ್ಕಳಿಗೆ, ಮಕ್ಕಳಿಂದ ತಾಯಿಗೆ, ರವಾನಿಸಲ್ಪಡುತ್ತವೆ. ತಾಯಿ ಒಳ್ಳೆಯವಳಾದರೆ ಮಕ್ಕಳೂ ಒಳ್ಳೆಯವರಾಗುತ್ತಾರೆ. ಆಷ್ಟು ಮಾತ್ರ ಸಾಲದು.ತಾಯಿಯಾದವಳು ತಾನು ಗರ್ಭಿಣಿಯಾಗಿದ್ದಾಗ ಯಾವ ರೀತಿಯಿಂದ ಇರುತ್ತಾಳೋ, ಆ ತೆರನಾದ ಮಕ್ಕಳು ಜನಿಸುತ್ತವಂತೆ. ಬಸುರಿಯಾಗಿದ್ದವಳು ಒಳ್ಳೆಯದನ್ನೇ ಚಿಂತಿಸುತ್ತಾ, ಹಸನ್ಮುಖಿಯಾಗಿದ್ದುದಾದರೆ ಸರ್ವಗುಣ ಸಂಪನ್ನನಾದ ,ಮಗನು ಜನಿಸುವನಂತೆ. ಇಂತಹ ಪುರಾತನ ಸತ್ಯ ಇತ್ತೀಚೆಗೆ ವೈಜ್ಞಾನಿಕವಾಗಿ ದೃಢಪಟ್ಟಿದೆ. ಈ ಸತ್ಯವನ್ನು ಸಹಸ್ರ ಸಹಸ್ರ ವರ್ಷಗಳ ಹಿಂದೆ ವ್ಯಾಸ ಮಹರ್ಷಿಗಳು ವಿದುರನ ಪಾತ್ರದ ಮೂಲಕ ಲೋಕಕ್ಕೆ ಪ್ರಚುರಪಡಿಸಿದ್ದಾರೆ ಎಂಬುದನ್ನರಿತಾಗ ಹಿಂದೂಗಳಾದ ನಮಗೆ ಹೆಮ್ಮೆಯಾಗುತ್ತದೆ.
ವಿದುರ ಜನನ
ಮಹಾಭಾರತದ ಶಂತನು ಮಹಾರಾಜನಿಗೆ ಶಂತನು ಮಹಾರಾಜನಿಗೆ ಮೊದಲನೆ ಪತ್ನಿ ಭೀಷ್ಮನ ತಾಯಿಯಾದರೆ ಎರಡನೇ ಸತಿ ಸತ್ಯವತಿ. ಬೆಸ್ತರಾಜನ ಮನೆಯಲ್ಲಿ ಬೆಳೆಯುವ ಉಪರಿಚರವಸುವಿನ ಮಗಳಾದ ಇವಳನ್ನು ಭೀಷ್ಮನು ತಂದು ತನ್ನ ತಂದೆಗೆ ಮಾಡಿಸುತ್ತಾನೆ. ಇವಳ ಮಕ್ಕಳಾದ ಚಿತ್ರಾಂಗದ, ವಿಚಿತ್ರವೀರ್ಯರು ಸಂತಾನಹೀನರಾಗಿ ಸಾಯುತ್ತಾರೆ. ಭರತ ವಂಶದ ಉದ್ಧಾರಕ್ಕಾಗಿ ತನ್ನ ಸೊಸೆಯಾದ ಅಂಬಿಕೆ ಮತ್ತು ಅಂಬಾಲಿಕೆಯರಿಗೆ ವ್ಯಾಸರಿಂದ ಸಂತಾನವಾಗುವಂತೆ ಸತ್ಯವತಿ ಹೇಳಿಕೊಳ್ಳುತ್ತಾಳೆ. ಅಂಬಿಕೆಯು ನಾಚುತ್ತಾ ಕಣ್ಣುಮುಚ್ಚಿಕೊಂಡು ಹಾಗೂ ಅಂಬಾಲಿಕೆಯ ಹೆದರಿ ಬಿಳಿಚಿಕೊಂಡು ವ್ಯಾಸರಿದ್ದೆಡೆಗೆ ಪುತ್ರಾಪೇಕ್ಷೆಯಿಂದ ಹೋಗುತ್ತಾರೆ. ಪರಿಣಾಮವಾಗಿ, ಅಂಬಿಕೆಗೆ ಕುರುಡನಾದ ದೃತರಾಷನೂ ಅಂಬಾಲಿಕೆಗೆ ಬಿಳಿಚಿದ ಪಾಂಡುವೂ ಜನಿಸುವರು. ಇಷ್ಟರಿಂದ ಸಮಾಧಾನವಾಗದ ಸತ್ಯವತಿಯು ಇನ್ನೋರ್ವ ದೋಷರಹಿತನಾದ ಮಗುವನ್ನು ಪಡೆಯಲು ಮತ್ತೊಮ್ಮೆ ಅಂಬಿಕೆಯನ್ನು ವ್ಯಾಸರ ಸಂಗಕ್ಕೆ ಹೋಗಲು ಪ್ರೋತ್ಸಾಹಿಸುತ್ತಾಳೆ. ಆದರೆ ಅಂಬಿಕೆಯಾದರೋ ಈ ಬಾರಿ ತನ್ನ ದಾಸಿಯನ್ನು ಕಳುಹಿಸುತ್ತಾಳೆ. ದಾಸಿ, ಹೆದರದೆ, ನಾಚದೆ, ಧೈರ್ಯದಿಂದ ಸಮಾಧಾನ ಚಿತ್ತಳಾಗಿ ವ್ಯಾಸರಿದ್ದೆಡೆಗೆ ಹೋಗುತ್ತಾಳೆ. ಇದರ ಫಲವಾಗಿ ದಾಸಿಗೆ ಗುಣಶೀಲನೂ ಮೇಧಾವಿಯೂ, ಸದ್ಗುಣ ಸಂಪನ್ನನೂ ಆತ್ಮಜ್ಞಾನಿಯೂ ಹರಿಭಕ್ತನೂ ಆದ ವಿದುರನು ಜನಿಸುತ್ತಾನೆ.
ವಿದುರನು ಧರ್ಮರಾಜನಂತೆ ಯಮದೇವತೆಯ ಅಂಶದವನು. ಧರ್ಮನೀತಿಗೆ ಇನ್ನೊಂದು ಹೆಸರು ವಿದುರ. ಅವನು ದಾಸಿಯ ಪುತ್ರನಾದರೂ ಮಹಾಭಾರತದ ಹಲವಾರು ಕಡೆ ಧರ್ಮರಾಯನಿಗೆ, ಕೌರವನಿಗೆ ಸುವಿಚಾರವನ್ನು ಧರ್ಮ ಸೂಕ್ಷವನ್ನು ಬೋಧಿಸಿ ಎಚ್ಚರಿಸುವುದನ್ನು ಕಾಣುತ್ತೇವೆ. ಧರ್ಮ ಬೋಧಿಸುವಾಗ ನಿಷ್ಪಕ್ಷಪಾತ ದೃಷ್ಟಿಯಿಂದ ಹಾಗೂ ಕುಲದ ಹಿತ ದೃಷ್ಟಿಯಿಂದ ನಿಷ್ಟುರವಾಗಬೇಕಾದಲ್ಲಿ ಕಾಠಿಣ್ಯವನ್ನೂ ತೋರುತ್ತಾನೆ.
ಸತ್ಯವತಿಯ ಅಪ್ಪಣೆಯಂತೆ ವ್ಯಾಸನಿಯೋಗ ಪದ್ಧತಿಯಲ್ಲಿ ಹುಟ್ಟಿದುದರಿಂದ ವಿದುರ ಅರಮನೆಯಲ್ಲೇ ಬೆಳೆಯುತ್ತಾನೆ. ದೇವಕನೆಂಬ ದೊರೆಯ ಪುತ್ರಿ ಪಾರಸವಿ ಎಂಬವಳ ಜೊತೆ ವಿದುರನಿಗೆ ಭೀಷ್ಮನು ಮದುವೆ ಮಾಡಿಸುತ್ತಾನೆ. ಧರ್ಮ, ಅರ್ಥಗಳಲ್ಲಿ ನಿಪುಣನಾಗಿ ಲೋಭ-ಕ್ರೋಧಗಳಿಲ್ಲದವನಾಗಿ ಮುಂದಾಲೋಚನೆಯುಳ್ಳವನಾಗಿ, ಇಂದ್ರಿಯ ನಿಗ್ರಹವುಳ್ಳವನಾಗಿ ಕುರುವಂಶಕ್ಕೆ ಹಿತ ಬಯಸುವವನಾಗಿ ಜೀವಿಸಿದ ವಿದುರ.
ಪಾಂಡುವು ರಾಜನಾಗಿದ್ದಾಗ ವಿದುರನಿಗೆ ಅರಮನೆಯಲ್ಲಿ ಬಹಳ ಗೌರವವಿತ್ತು. ಪಾಂಡು ಅರಣ್ಯವಾಸಿಯಾದಾಗ ಅರಮನೆಯಲ್ಲಿ ಅವನಿಗೆ ತೇಜೋವಧೆ ಆರಂಭವಾಯಿತು. ಕುರುಡ ದೊರೆಯಾದ ಧೃತರಾಷ್ಟ್ರನ ಮನಸೂ ಕುರುಡಾಗಿತ್ತು. ಅವನೆಂದೂ ವಿದುರನನ್ನು ಆದರಿಸಲಿಲ್ಲ. ಧರ್ಮವನ್ನು ಪಾಲಿಸಲೂ ಇಲ್ಲ.
ವಿದುರ ನೀತಿ
ಧರ್ಮನೀತಿಗೆ ಇನ್ನೊಂದು ಹೆಸರು ವಿದುರ. ಅವನು ಧೃತರಾಷ್ಟ್ರನಿಗೂ ಕೌರವನಿಗೂ ನಾನಾ ಸಂದರ್ಭದಲ್ಲಿ ನೀತಿ ಬೋಧಿಸುತ್ತಾನೆ. ಅದು ವಿದುರ ನೀತಿ ಎಂದೇ ಲೋಕಪ್ರಸಿದ್ದ. ದೃತರಾಷ್ಟ್ರನಿಗೆ, ಮಹಾಭಾರತ ಯುದ್ದಕ್ಕೆ ಮೊದಲು ಒಂದು ಸಂದರ್ಭದಲ್ಲಿ ಹೇಳುತ್ತಾನೆ ‘ಮಹಾರಾಜ, ಪ್ರಾಣಿವರ್ಗದಲ್ಲಿ ಸತ್ಯಧರ್ಮದಿಂದ ವರ್ತಿಸುವುದು ಸಮಸ್ತ ತೀರ್ಥಗಳಲ್ಲಿ ಸ್ನಾನ ಮಾಡುವುದಕ್ಕೆ ಸಮಾನ.ಮಗನ ಮೇಲಿನ ವ್ಯಾಮೋಹದಿಂದ ಕಪಟ ದಾರಿಯಲ್ಲಿ ವ್ಯವಹರಿಸಬೇಡ. ಉತ್ತಮ ದಾರಿಯಲ್ಲಿ ನಡೆದರೆ ದೇವಾದಿ ದೇವತೆಗಳು ತಥಾಸ್ತು ಎಂದು ಶುಭಫಲವನ್ನೀಯುತ್ತಾರೆ. ವಿದ್ಯಾವಂತನಾಗಿದ್ದರೂ ಅವಿವೇಕಿಯಾಗಿದ್ದರೆಅವನು ವಿದ್ಯಾವಂತನಾಗಲಾರ. ಒಬ್ಬ ಬಿಲ್ಲ್ಗಾರನಿಂದ ಹೂಡಲ್ಪಟ್ಟ ಬಾಣವು ಶತ್ರುವನ್ನು ನಾಶಪಡಿಸಬಹುದು.ಆದರೆ ದುರ್ಬುದ್ದಿಯಿಂದ ಕೂಡಿದ ರಾಜನ ಯೋಚನೆಯಿಂದ ಇಡೀ ರಾಜ್ಯವನ್ನು ನಾಶಮಾಡಬಹುದು. ವಿವೇಕಿಯು ಪ್ರಶಸ್ತವಾದುದನ್ನು ಆಚರಿಸಬೇಕು . ನಿಂದನೆಗೆ ಕಾರಣವಾದುದನ್ನು ತ್ಯಜಿಸಬೇಕು. ಕೋಪ, ದರ್ಪ, ಸ್ವಪ್ರತಿಷ್ಠೆ, ಮದ, ಮಾತರ್ಯದಿಂದಾಗಿ ಪುರುಷಾರ್ಥವನ್ನು ಕೈಬಿಡಬಾರದು, ಪ್ರಾರಂಭಿಸಿದ ಒಳ್ಳೆಯ ಕೆಲಸಕ್ಕೆ ಏನಾದರೂ ಅಡ್ಡಿ ಆತಂಕಗಳಾದರೆ ಭ್ರಮನಿರಸನ ಹೊಂದಿ ಅರ್ಧದಲ್ಲಿ ಕೈಬಿಡುವುದು ವಿವೇಕಿಯ ಲಕ್ಷಣವಲ್ಲ. ಯುದ್ಧವನ್ನು ಕೈಬಿಟ್ಟು ಪಾಂಡವರೊಡನೆ ರಾಜಿ ಮಾಡಿಕೊಂಡು ಅವರಿಗೆ ಸಲ್ಲಬೇಕಾದ ರಾಜ್ಯವನ್ನು ಅವರಿಗೇ ಬಿಟ್ಟುಕೊಡೆಂದು’ ಕೌರವನಿಗೆ ವಿದುರ ಪರಿಪರಿಯಾಗಿ ಹೇಳುತ್ತಾನೆ. ಆದರೆ ಕೌರವ ವಿದುರನನ್ನು ಹಿಯಾಳಿಸುತ್ತಾನೆ. ತೇಜೋವಧೆ ಮಾಡುತ್ತಾನೆ. ಇದರಿಂದ ಮನನೊಂದ ವಿದುರ ತಾನೆಂದೂ ಇನ್ನೂ ಶಸ್ತಾಸ್ತಗಳನ್ನು ಮುಟ್ಟಲಾರೆನೆಂದ ಪ್ರತಿಜ್ಞೆ ಮಾಡುತ್ತಾನೆ.
ಮಹಾಭಾರತ ಯುದ್ಧಾನಂತರ ತನ್ನ ಮಕ್ಕಳು, ಬಂಧುಗಳೆಲ್ಲರೂ ಮಾಡಿದುದನ್ನು ಸ್ಮರಿಸುತ್ತಾ ಕಂಗೆಟ್ಟು ಚಿಂತಾಕ್ರಾಂತನಾಗಿ ಕುಳಿತಿರುವ ದೃತರಾಷ್ಟ್ರನನ್ನು ವಿದುರ ಸಾಂತ್ವನಿಸುತ್ತಾನೆ. ‘ಮಹಾರಾಜಾ, ಹುಟ್ಟಿದ ಜೀವಿಯು ಒಂದಲ್ಲ ಒಂದು ದಿನ ಮರಣಿಸಲೇಬೇಕು. ವಿವೇಕಿಯಾದವನು ಸತ್ತವರಿಗಾಗಿ ದುಃಖಿಸುತ್ತಾ ಕುಳಿತಿರಬಾರದು. ಕುರುಭೂಮಿಯಲ್ಲಿ ಸೆಣಸಾಡಿದವರಾದ ನಿನ್ನ ಮಕ್ಕಳು ವೀರ ಸ್ವರ್ಗವನ್ನು ಪಡೆದಿದ್ದಾರೆ. ಶೋಕದಿಂದ ನರಳಿ ಮರಣ ಪಡೆಯುವುದು ನಿನಗೆ ಯೋಗ್ಯವಲ್ಲ.
ಈ ಸಮಯದಲ್ಲಿ ನಿನ್ನನ್ನು ನೀನೇ ಸಮಾಧಾನಪಡಿಸಿಕೊಳ್ಳಬೇಕು. ಕಾಲ, ಎಲ್ಲವನ್ನೂ ಮರೆಸುತ್ತದೆ. ಕಾಲವು ಎಲ್ಲರನ್ನೂ ಪಕ್ಷಗೊಳಿಸುತ್ತದೆ. ಆಗಿ ಹೋದ ಘಟನೆಗೆ ಮನಸನ್ನು ಬೇರೆಡೆಗೆ ಹರಿಯಬಿಡುವುದೇ ದುಃಖದ ಉಪಶಮನಕ್ಕೆ ಇರುವ ಬಾಗಿಲು. ಮನುಷ್ಯನ ಜೀವನವೆಂದರೆ ಒಂದು ಮಡಕೆಯಿದ್ದಂತೆ. ಮಣ್ಣಿನಿಂದ ತಯಾರಿಸುಲ್ಲಿಂದ ಹಿಡಿದು ಉಪಯೋಗಿಸುವ ಯಾವುದೇ ಹಂತದಲ್ಲಿ ಅದು ಒಡೆಯಬಹದು. ಹಾಗೆಯೇ ನಮ್ಮ ದೇಹವೂ ಅಷ್ಟೆ. ಹುಟ್ಟಿದಂದಿನಿಂದ ಯಾವುದೇ ಘಳಿಗೆಯಲ್ಲಿ ಬಿದ್ದು ಹೋಗಬಹುದು. ಒಡೆದು ಹೋದ ಮಣ್ಣಿನ ಮಡಕೆಗಾಗಿ ಚಿಂತಿಸಿ ಫಲವಿಲ್ಲವಲ್ಲ!! ಸಂಸಾರದಲ್ಲಿ ನಮ್ಮ ಜೀವನ ರೀತಿಯೂ ಹಾಗೆಯೇ ಇರುತ್ತದೆ.
ಮನುಷ್ಯರಿಗೆ ಅವರ ದೇಹವೇ ರಥವಾಗಿದ್ದು ಬುದ್ದಿ ಸಾರಥಿಯಾಗುತ್ತದೆ.ಇಂದ್ರಿಯಗಳು ಕುದುರೆಯಾಗಿರುತ್ತದೆ. ಇಂದ್ರಿಯಗಳು ಕುದುರೆಯಾಗಿರುತ್ತದೆ.ಇಂದ್ರಿಯಗಳು ಕುದುರೆಗಳಾಗಿರುತ್ತವೆ. ಮನಸ್ಸು ರೂಪದಂತಿರುವ ಕುದುರೆಗಳನ್ನು ಯಾವಾತನು ಹಿಂಬಾಲಿಸುತ್ತಾನೋ ಅವನು ಸಂಸಾರ ಚಕ್ರದಲ್ಲಿ ನಿರಂತರವೂ ಸುತ್ತುತ್ತಾನೆ. ಇದಕ್ಕಾಗಿ ಪ್ರತಿಯೊಬ್ಬನೂ ಜಿತೇಂದ್ರಯನಾಗಿರಬೇಕು. ದಯೆ, ತ್ಯಾಗ ಮತ್ತು ಅಪ್ರಮಾದ ಈ ಮೂರು ನಮ್ಮನ್ನು ಪರಬ್ರಹ್ಮನ ಬಳಿ ಕೊಂಡೊಯ್ಯುವ ಅಶ್ವಗಳಾಗಿವೆ. ಇವುಗಳನ್ನುಶೀಲವೆನ್ನುವ ಕಡಿವಾಣದಿಂದ ಯಾವನು ಕಟ್ಟಿಹಾಕುತ್ತಾನೆಯೋ ಅವನೇ ಮೋಕ್ಷವನ್ನು ಪಡೆಯಲು ಅರ್ಹನಾಗುತ್ತಾನೆ. ಧೃತರಾಷ್ಟ್ರ ನೀನು ಸೂಕ್ಷ್ಮ ಬುದ್ದಿಯಿಂದ ದುಃಖವನ್ನು ತ್ಯಜಿಸು. ಮಾನವ ಜನ್ಮ ಅತಿ ದೊಡ್ಡದು. ಬರಿದೆ ಜೀವನವನ್ನು ಹಾಳುಗೆಡಹಬೇಡ ಎಂದು ಮುಂತಾಗಿ ಧೃತರಾಷ್ಟ್ರನನ್ನು ಸಾಂತ್ವನಿಸುತ್ತಾನೆ ವಿದುರ. ಅವನು ದಾಸಿಯ ಪುತ್ರನಾದರೂ ಧರ್ಮದೇವತೆಯ ಅಂಶದವನು. ಹಾಗಾಗಿ ವಿದುರನನ್ನು ಅಂದಿನ ಸಮಾಜದಲ್ಲಿ ಹಾಗೂ ಅರಮನೆಯಲ್ಲಿ ಗೌರವಿಸಿದರು. ಧೃತರಾಷ್ಟ್ರ ಹಾಗೂ ವಿದುರ ವೇದವ್ಯಾಸರ ಪುತ್ರರು. ಈ ನಿಟ್ಟಿನಲ್ಲಿ ಧೃತರಾಷ್ಟ್ರ ಅಣ್ಣ, ವಿದುರ ತಮ್ಮ . ಹೀಗಿದ್ದರೂ ಏನಾದರೂ ಸಮಸ್ಯೆ ಎದುರಾದಾಗ ಧೃತರಾಷ್ಟ್ರ ವಿದುರನಲ್ಲಿ ಪರಿಹಾರ ಕೇಳುವುದಿತ್ತು. ಗಮನೀಯವಾದುದೂ ಗಣನೀಯವಾದುದೂ ಆದ ಪಾತ್ರ ವಿದುರನದು. ಸಾಕ್ಷಾತ್ ಬೃಹಸ್ಪತಿಯೇ ಇವನಿಗೆ ಸಕಲ ರಾಜನೀತಿ, ಶಾಸ್ತ್ರಗಳನ್ನು ಉಪದೇಶಿಸಿದ.
ವಿದುರಾವಸಾನ
ಮಹಾಭಾರತ ಯುದ್ಧಾನಂತರ ವಿದುರನು ಆಹಾರಗಳನ್ನು ತ್ಯಜಿಸಿ ಕೇವಲ ಪಾಯುಸೇವನೆಯಿಂದ ದಿನಗಳನ್ನು ಕಳೆದನು. ಘೋರ ತಪಸ್ಸಿನಿಂದಾಗಿ ದೇಹ ಸವೆದು ಹೋಗಿತ್ತು. ಕಾಡಿನೊಳಗಿದ ವಿದುರನನ್ನು ಹುಡುಕುತ್ತಾ ಧರ್ಮಜನು ಬರುತ್ತಾನೆ. ವಿದುರನ ಮುಂದೆ ನಿಂತು ಯುಧಿಷ್ಠಿರನು ನಿನ್ನನ್ನು ನೋಡುವುದಕ್ಕಾಗಿ ಹಸ್ತಿನಾವತಿಯಿಂದ ಇಲ್ಲಿಗೆ ಬಂದಿರುತ್ತೇನೆ ಎನ್ನುತ್ತಾನೆ. ನೆಟ್ಟ ದೃಷ್ಟಿಯಿಂದ ನೋಡಿದಾಗ ಈರ್ವರ ನೇತ್ರಗಳು ಪರಸ್ಪರ ಒಂದಾಗುತ್ತವೆ. ವಿದುರನು ಯೋಗ ಬಲದಿಂದ ಯುಧಿಷ್ಠಿರನ ದೇಹವನ್ನು ಪ್ರವೇಶಿಸುತ್ತಾನೆ. ಅವನ ಅಂಗಾಂಗಗಳೂ, ಪ್ರಾಣೇಂದ್ರಿಯಗಳೂ ಧರ್ಮನಂದನದ ಲೀನವಾಗುತ್ತವೆ. ಕಾಟು ಮರಗಳ ಮಧ್ಯೆ ಅಪರೂಪದ ಶ್ರೀಗಂಧದ ಮರದಂತೆ ಧೃತರಾಷ್ಟ ಕೌರವಾದಿಗಳ ನಡುವೆ ವಿದುರ ಶೋಭಿಸುತ್ತಾನೆ, ಈ ಪುಣ್ಯ ಪುರುಷನೂ ಇವನನ್ನು ಚಿತ್ರಿಸಿದ ವ್ಯಾಸರೂ ಇಂದೂ ನಮಗೆ ಪ್ರಸ್ತುತರಾಗಿಯೇ ಇದ್ದಾರೆ.
-ವಿಜಯಾ ಸುಬ್ರಹ್ಮಣ್ಯ, ಕುಂಬಳೆ
ವಿದುರ, ಮಹಾಭಾರತದ ಪ್ರಮುಖ ಪಾತ್ರಗಳಲ್ಲೊಂದು. ವಿವರವಾದ ವಿದುರನ ಪಾತ್ರ ವಿಶ್ಲೇಷಣೆ ಚೆನ್ನಾಗಿ ಮೂಡಿ ಬಂದಿದೆ ವಿಜಯಕ್ಕ.
ಧನ್ಯವಾದಗಳು ಶಂಕರಿಶರ್ಮ.