ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು: ಪುಟ 16

Share Button


ಕಿಸೆಗಳ್ಳರ ಕಿತಾಪತಿ..!

ಅದಾಗಲೇ ಬೆಳಗ್ಗಿನ ಗಂಟೆ ಒಂಭತ್ತೂವರೆ..ಬಿಸಿಲ ಶಾಖ ಏರುತ್ತಲೇ ಇತ್ತು. ಇತ್ತ ನಾವು ಕಾಳಿ ದೇಗುಲದ ಆವರಣದಲ್ಲಿ ಬಾಲಣ್ಣನವರಿಗಾಗಿ ಕಾದು ಕುಳಿತಿದ್ದಾಗ ಯಾರೋ ಅಂದರು..”ಅನತಿ ದೂರದಲ್ಲೇ ನದಿ ಇದೆ, ಹೋಗಿ ನೋಡಿ ಬರಬಹುದಿತ್ತು”. ಸರಿಯೆಂದು ಅಲ್ಲಿದ್ದ ಸ್ವಲ್ಪ ಮಂದಿ ಎದ್ದು ಹೊರಟಾಗಲೇ ಗಣೇಶಣ್ಣನ ಬುಲಾವ್ ಬಂತು..”ಎಲ್ರೂ ಬನ್ನಿ, ಬೇಲೂರು ಮಠಕ್ಕೆ ದೋಣಿಯಲ್ಲಿ ಹೋಗುವುದಿದೆ..ಆದರೆ ಸ್ವಲ್ಪ ನಡೀಬೇಕು”. ಬೇಲೂರು ಮಠಕ್ಕೆ ಬಸ್ಸಲ್ಲಿಯೇ ಹೋಗಬಹುದಾಗಿದ್ದರೂ, ನಮಗೆ ದೋಣಿ ಪಯಣದ ಸವಿ ಉಣಿಸಲು ಈ ವ್ಯವಸ್ಥೆ ಮಾಡಿದ್ದರು. ತಲೆ ಮೇಲೆ ಟೋಪಿ ತಣ್ಣಗೆ ಕೂತಿದ್ದರೂ, ರವಿ ಪ್ರತಾಪ ತುಂಬಾ ಜೋರಾಗಿಯೇ ಇದ್ದುದರಿಂದ ತಲೆ ಬಿಸಿ ಮಾಡಿಕೊಂಡು, ಬೆವರೊರಸಿಕೊಂಡು ಅವರ ಹಿಂದೆಯೇ ನಡೆದೆವು. ಅವರಿಗೋ ನಮ್ಮ ತಲೆ ಲೆಕ್ಕ ಮಾಡಿ, ಮೊತ್ತ ಸರಿಯಿದ್ದರೆ ಮಾತ್ರ ತೃಪ್ತಿ. ನಮ್ಮ ಬಗಲಲ್ಲಿ ಪುಟ್ಟ ಚೀಲದೊಡನೆ ಪುಟ್ಟ ಛತ್ರಿ ಇದ್ದರೆ ಚೆನ್ನಾಗಿತ್ತು ಎಂದು ನಡೆಯುತ್ತಾ ಯೋಚಿಸಿದ್ದು ಮಾತ್ರ ಸುಳ್ಳಲ್ಲ. ಒಂದೈದು ನಿಮಿಷಗಳ ದೂರದಲ್ಲಿ ಸಿಕ್ಕಿತು ಒಂದು ಪುಟ್ಟ ಅಂಗಡಿ. ನಾವು ರಸ್ತೆಯಲ್ಲಿ ಮುಂದೆ ಹೋದಾಗ ಹಿಂದಿನಿಂದ ಕೇಳಿಸಿತು ಬಾಲಣ್ಣನವರ ಸ್ವರ..”ನಿಲ್ಲಿ ಎಲ್ರೂ” . ಅವರು ಆ ಆಂಗಡಿಯವನೊಡನೆ ಏನೋ ಮಾತಾಡಿ, ನಮಗೆಲ್ಲರಿಗೂ ಕುಡಿಯಲು ಅಲ್ಲಿರುವ ಪಾನೀಯಗಳಲ್ಲಿ ಬೇಕಾದುದನ್ನು ಆರಿಸಿಕೊಳ್ಳಲು ಹೇಳಿದರು. ಮಜ್ಜಿಗೆ ಸಹಿತ ವಿವಿಧ ಪಾನೀಯಗಳು ನಿಮಿಷದಲ್ಲಿ ಖಾಲಿ! ಎಲ್ಲರ ಹೊಟ್ಟೆ ತಣ್ಣಗಾದ ಮೇಲೆ ಮುಖದಲ್ಲಿ ಉತ್ಸಾಹದ ಕಳೆ.

ಅನತಿ ದೂರದಲ್ಲಿ ಕಾಣಿಸಿತು, ನೂರಾರು ಜನರ ಹಿಂಡು. ಬೇಲೂರು ಮಠಕ್ಕೆ ಹೋಗಲಿರುವ ದೋಣಿಯನ್ನು ಏರುವ ಮೊದಲು, ಅದಕ್ಕಾಗಿ ಟಿಕೇಟು ತೆಗೆಯಲು ಜನರು ಕಾದು ಕುಳಿತಿದ್ದರು. ಇಷ್ಟು ಜನರಿಗೆ ಟಿಕೇಟ್ ಸಿಗುವುದು ಕಷ್ಟಸಾಧ್ಯವೆನಿಸಿತು. ಆದರೂ ಹೇಗೋ ಅದನ್ನು ಸಾಧ್ಯವಾಗಿಸುವುದರ ಜೊತೆಗೆ, ಬಾಲಣ್ಣನವರು ತಮ್ಮ ಕೈಯಲ್ಲಿ ಅಪರೂಪದ, ಸಿಹಿಯಾದ ಲಿಚಿ ಹಣ್ಣನ್ನು ತಂದು ಎಲ್ಲರಿಗೂ ಹಂಚಿದ್ದು ತುಂಬಾ ವಿಶೇಷವಾಗಿತ್ತು. ಬಾಯಿ ಸಿಹಿ ಮಾಡಿಕೊಂಡು, ನಮ್ಮ ಸರದಿಗಾಗಿ ಕಾಯುತ್ತಾ ಕುಳಿತೆವು. ಸ್ವಲ್ಪ ಹೊತ್ತಿನಲ್ಲಿ ಸರದಿ ಪ್ರಕಾರ ನಮ್ಮನ್ನು ಉದ್ದವಾದ ಸೇತುವೆ ಮೇಲೆ ಬಿಟ್ಟಾಗ ಜನರ ನೂಕುನುಗ್ಗಲು ತುಂಬಾ ಜೋರಾಗಿತ್ತು. ಸಾಲಾಗಿ ಹೋಗುತ್ತಿದ್ದರೂ ಹಿಂದು ಮುಂದಿನಿಂದ ಒತ್ತರಿಸಲು ಜನ ಪ್ರಯತ್ನಿಸುತ್ತಿದ್ದರು. ಹೂಗ್ಲಿ ನದಿಯ ಮೇಲಿಂದ ಜೋರಾಗಿ ಬೀಸುತ್ತಿದ್ದ ತಂಪು ಗಾಳಿ ನಮ್ಮನ್ನು ಎತ್ತಿ ಎಸೆಯುವಂತೆ ತೋರುತ್ತಿತ್ತು. ಸಂಭಾಳಿಸಿಕೊಂಡು, ಗಾಳಿಯ ಹೊಡೆತವನ್ನು ಸಂತೋಷದಿಂದಲೇ ಅನುಭವಿಸುತ್ತಾ ಮುಂದುಗಡೆ ಕಾಣುತ್ತಿದ್ದ ದೊಡ್ಡದಾದ ದೋಣಿಯನ್ನು ಕಂಡಾಗ  ಮನಸ್ಸು ಸಂಭ್ರಮಿಸಿತು.


ಆದರೆ ಅದಾಗಲೇ ಜನರು ಕ್ಯೂ ತಪ್ಪಿಸಿ ಮುನ್ನುಗ್ಗಿದಾಗ ನಾವೆಲ್ಲರೂ ವಸ್ತುಶಃ ದೋಣಿಯೊಳಗೆ ತಳ್ಳಲ್ಪಟ್ಟೆವು. ಸುಮಾರು ಮುನ್ನೂರು ಜನರು ಸಂಚರಿಸಬಲ್ಲಂತಹ, ದೊಡ್ಡದಾದ ಯಾಂತ್ರೀಕೃತ ದೋಣಿಯಾಗಿತ್ತದು. ಕುಳಿತುಕೊಳ್ಳಲು ಒಳಗಡೆ ಹತ್ತಾರು ಒರಗು ಬೆಂಚುಗಳಿದ್ದವು. ಆ ವಿಶಾಲವಾದ ಜಾಗವು ಅದಾಗಲೇ ತುಂಬಿ ತುಳುಕಿ, ಕುಳಿತುಕೊಳ್ಳುವುದು ಬಿಡಿ, ನಿಂತುಕೊಳ್ಳಲೂ ಜಾಗವಿರಲಿಲ್ಲ!  ನಮ್ಮ ಗುಂಪು ಚದುರಿ ಚೆಲ್ಲಾಪಿಲ್ಲಿಯಾಗಿತ್ತು. ಒಳಗಡೆ ಕಡಲೆಕಾಯಿ, ಮಂಡಕ್ಕಿ ವ್ಯಾಪಾರ ಜೋರಾಗಿಯೇ ನಡೆದಿತ್ತು. ನಾವು ನಮಗೆ ಸಿಕ್ಕಿದ ಜಾಗದಲ್ಲೇ ಸುಧಾರಿಸುತ್ತಾ ಇದ್ದೆವು. ದೋಣಿ ವೇಗವಾಗಿ ನೀರಲ್ಲಿ ಚಲಿಸುವಾಗ ರಭಸದಿಂದ ಹಿಂದೆ ಸರಿಯುವ  ನೀರು, ದೂರದ ಸೇತುವೆ, ಗಿಜುಗುಟ್ಟಿದ ದೋಣಿಯ ಜನರು, ವಿಶಾಲವಾದ ಹೂಗ್ಲಿ ನದಿಯ ಸೊಬಗು ಎಲ್ಲವನ್ನೂ ಕಣ್ತುಂಬಿಕೊಳ್ಳುತ್ತಿರುವಾಗಲೇ….

ಹಾಂ..! ಅಷ್ಟರಲ್ಲೇ ನನ್ನ ಎದುರುಗಡೆ ನಿಂತಿದ್ದ ಸರಸ್ವತಿ ಅಕ್ಕ ಗಾಬರಿಯಿಂದ ನನ್ನ ಬಳಿ ಬಂದರು. ಅವರು ತಮ್ಮ ವ್ಯಾನಿಟಿ ಬ್ಯಾಗ್ ನೊಳಗೆ ಕೈಯಾಡಿಸುತ್ತಾ, ತಮ್ಮ ಪರ್ಸಿಗಾಗಿ ಹುಡುಕಾಡುತ್ತಿದ್ದರು. “ನನ್ನ ಬ್ಯಾಗ್ ನ ಝಿಪ್ ಯಾರೋ ತೆರೆದು, ಅದರೊಳಗಿದ್ದ ಪರ್ಸ್ ತೆಗೆದಿದ್ದಾರೆ..” ಭಯ ಹಾಗೂ ದುಃಖದಿಂದ ಕಂಗಾಲಾಗಿದ್ದರು ಸರಸ್ವತಿ ಅಕ್ಕ. ಕ್ಷಣಾರ್ಧದಲ್ಲಿ ಅವರ ಪರ್ಸನ್ನು ಬ್ಯಾಗಿನಿಂದ  ಕಳ್ಳರು ಲಪಟಾಯಿಸಿದ್ದರು. ಅಗತ್ಯದ ATM ಕಾರ್ಡ್ ಸಹಿತ ಹಣವಿದ್ದುದು ತುಂಬಾ ಚಿಂತಿಸುವ ವಿಷಯವಾಗಿತ್ತು. ಸುದ್ದಿಯು ಕ್ಷಣಾರ್ಧದಲ್ಲಿ ದೋಣಿಯೊಳಗೆ ಹರಡಿತು. ನಾವೆಲ್ಲರೂ ನಮ್ಮ ನಮ್ಮ ಬ್ಯಾಗ್ ಗಳನ್ನು ನೋಡಿಕೊಂಡು, ಏನೂ ಆಗಿಲ್ಲವೆಂದು ಸಮಾಧಾನಪಟ್ಟಿದ್ದಷ್ಟೇ ಬಂತು! ಆದರೆ ಸರಿಯಾಗಿ ನೋಡಿದಾಗ ನಮ್ಮ ಪ್ರಫುಲ್ಲಕ್ಕನ ಹೊಚ್ಚ ಹೊಸ ಬ್ಯಾಗ್ ಬದಿಯಲ್ಲಿ ಸೀಳು ಬಿಟ್ಟಿದ್ದು ಕಂಡಿತು! ಪುಣ್ಯಕ್ಕೆ ಅದರಲ್ಲಿ ಪರ್ಸ್ ಇರಲಿಲ್ಲ. ಇನ್ನು ಏನೆಲ್ಲಾ ಆಗಿದೆಯೋ ಎಂದು ಆತಂಕ ಎಲ್ಲರಿಗೂ..ಚಾಣಾಕ್ಷ, ಭಯಾನಕ ಕಿಸೆಕಳ್ಳರು, ಅತ್ಯಂತ ಹರಿತವಾದ ವಸ್ತುವಿನಿಂದ, ಅತ್ಯಂತ ಚಾಲಾಕಿನಿಂದ ತಮ್ಮ ಕೆಲಸ ಮಾಡಿದ್ದರು! ನಮಗೆ ಹೆದರಿಕೆಯಿಂದ ಮಾತೇ ಹೊರಡಲಿಲ್ಲ. ಆದರೂ, ಅಕ್ಕ ಪಕ್ಕದವರಲ್ಲಿ ವಿಚಾರಿಸಿಯೂ ಆಯ್ತು.. ಏನೂ ಪ್ರಯೋಜನವಾಗಲಿಲ್ಲ. ನನಗಂತೂ ಇಂತಹ ಸನ್ನಿವೇಶ ಎದುರಾದುದು ಇದೇ ಮೊದಲು!

ತಕ್ಷಣವೇ, ನಮ್ಮ ಪ್ರವಾಸದ ಮುಖ್ಯಸ್ಥರಾದ ಬಾಲಣ್ಣನವರು ಕಾರ್ಯಪ್ರವರ್ತರಾಗಿ, ಪೋಲೀಸರನ್ನು ಹಾಗೂ ದೋಣಿಯ ವ್ಯವಸ್ಥಾಪಕರನ್ನು ಸಂಪರ್ಕಿಸಿ ವಿಷಯ ತಿಳಿಸಿದರು ಮತ್ತು ಎಲ್ಲರೂ ತಮ್ಮ ತಮ್ಮ ಬ್ಯಾಗ್ ಗಳ ಬಗ್ಗೆ ಎಚ್ಚರಿಕೆಯಲ್ಲಿರುವಂತೆ ಸೂಚಿಸಿದರು. ದೋಣಿಯೊಳಗೆ ಒಂದು ತರಹ ಗಂಭೀರದ ವಾತಾವರಣ ಹರಡಿತ್ತು. ಎಲ್ಲರ ಮೇಲೂ ಸಂಶಯಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಮಧ್ಯೆ, ಈ ಆತಂಕದ ಪರಿಸ್ಥಿತಿಯಲ್ಲಿ, ದೋಣಿ ವಿಹಾರದ ಸಂತಸವನ್ನು ಯಾರಿಗೂ ಸರಿಯಾಗಿ ಸವಿಯಲಾಗಲೇ ಇಲ್ಲ. ದೋಣಿಯು, ನಾವು ಇಳಿಯುವ ದಡ ತಲಪಿದರೂ, ಯಾರನ್ನೂ ಇಳಿಯಗೊಡಲಿಲ್ಲ. ಅಲ್ಲಿ ಬಲವಾಗಿ ಗೇಟ್ ಮುಚ್ಚಿ, ಪೋಲೀಸರು ಪ್ರತಿಯೊಬ್ಬರ ತಪಾಸಣೆಗೆ ತೊಡಗಿದ್ದರು. ಆ ಸಮಯದಲ್ಲೇ, ನಮ್ಮ ಮನೋರಮ ಅಕ್ಕನವರ ಕಾಲ ಕೆಳಗೆ ಸಿಕ್ಕಿದ ಪರ್ಸೊಂದನ್ನು ಮೇಲೆತ್ತಿ ತೋರಿಸಿ,”ಇದೇ ಪರ್ಸಾ, ನೋಡಿ” ಎಂದು ಗಟ್ಟಿಯಾಗಿ ಹೇಳಿದಾಗ, ಸರಸ್ವತಿ ಅಕ್ಕನವರ ಮುಖದಲ್ಲಿ ನಗು. ಅವರ ಪರ್ಸ್, ಅದರೊಳಗಿದ್ದ ಹಣ ಮಾಯವಾಗಿದ್ದರೂ, ದಾಖಲೆಗಳು ಸುರಕ್ಷಿತವಾಗಿ ಅವರ ಕೈ ಸೇರಿತ್ತು. ನಾವೀತನಕ ಪಡೆದ ದೇವರ ದರ್ಶನ ಫಲವು ಈಗ ಲಭಿಸಿತು ಎನ್ನುವಂತಾಯಿತು! ಪೋಲೀಸರನ್ನು ಕಂಡ ಕಳ್ಳ (ಕಳ್ಳಿ?) ಭಯದಿಂದ ಪರ್ಸನ್ನು ಕೆಳಗೆ ಬಿಸಾಡಿರಬೇಕು. ನದಿ ಬಿಸಾಡದ್ದು ನಮ್ಮ ಪುಣ್ಯ!! ಅಂತೂ ಎಲ್ಲಾ ಸುಖಾಂತ್ಯವಾಯಿತೆಂದುಕೊಂಡು ಬಾಲಣ್ಣನವರಿಗೆ ಧನ್ಯವಾದ ಹೇಳುತ್ತಾ ದೋಣಿ ಇಳಿದಾಗ, ಎಲ್ಲರೂ ಆ ಗುಂಗಿನಿಂದ ಹೊರಬರದೆ ಇದ್ದುದು ಭಾಸವಾಗುತ್ತಿತ್ತು. ಹನ್ನೊಂದು ಗಂಟೆಗೆ ಬೇಲೂರು ಮಠದ ದರ್ಶನ ಸಮಯ ಮುಗಿಯುವುದೆಂದು ಯಾರೋ ಹೇಳಿದಾಗ, ಆ ಕಡೆಗೆ ಬೇಗನೆ ಹೆಜ್ಜೆ ಹಾಕುತ್ತಾ, ಬಿಸಿಲ ಝಳಕ್ಕೆ ನೆರಳನ್ನು ಹುಡುಕುತ್ತಾ ಮಠದತ್ತ ನಡೆದೆವು.

(ಮುಂದುವರಿಯುವುದು..)

ಹಿಂದಿನ ಸಂಚಿಕೆ ಇಲ್ಲಿದೆ: ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು : ಪುಟ 15

-ಶಂಕರಿ ಶರ್ಮ, ಪುತ್ತೂರು.

4 Responses

  1. ನಯನ ಬಜಕೂಡ್ಲು says:

    ಕೆಲವೆಡೆ ನೂಕು ನುಗ್ಗಲಿನ ಸನ್ನಿವೇಶ ನಿರ್ಮಾಣವಾಗೋದ್ರಲ್ಲಿ ಇಂತಹ ಕಳ್ಳರ ಕೈವಾಡವೇ ಇರುತ್ತದೆ .

  2. ASHA nooji says:

    ನಮಗೂ ಹೋದಂತೆ ಭಾಸವಾಯಿತು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: