ಬದುಕು ಭರವಸೆ
‘
ಬದುಕು ಭರವಸೆಯೊ, ಬವಣೆ ಕಿತ್ತೆಸೆಯೊ,
ಚೈತನ್ಯದ ಬಾಳಿಗೆ ಸಿಹಿನೆನಪುಗಳ ಹೊಸೆಯೊ………
ಹೊಸ ಚಿಗುರಿಗಾಗಿ ಕತ್ತರಿಸುವರು ಗಿಡವ,
ನೀನೇಕೆ ನೆನೆದು ನೆನೆದು ಕೊರಗುವೆ ಹಳೆ ನೋವ?
ಹೊಲಸುಗೈದ ಕೂಸ ಕತ್ತು ಹಿಸುಗುವಳೇ ತಾಯಿ?
ಗೈದ ತಪ್ಪು ತಿದ್ದಿ ನಡೆದರೆ ನೀನೇ ಚಿರಸ್ಥಾಯಿ………
.
ತುಳಿದರೇನು? ಕಡಿದರೇನು? ಮರಳಿ ಮರಳಿ ಬೆಳೆದಿದೆ,
ತುಳಿದರೇನು? ಕಡಿದರೇನು? ಮರಳಿ ಮರಳಿ ಬೆಳೆದಿದೆ,
ಯಾವುದಕೂ ಬಗ್ಗದಿರುವುದಕೆ ಇಂದು ಅದರ ನೆರಳಿದೆ,
ನೋಡು ತಿರುಗಿ ಹಿಂದೆ, ಆದರೆ ನೋವ ಪಡುವುದಕಲ್ಲ,
ಕಲಿತ ಪಾಠ ಸಾವಿರಾರು, ಅದನು ನೀನು ಮರೆಯುವಂತಿಲ್ಲ……..
.
ಮಾತನಾಡದ ಪ್ರಾಣಿಗಳ ಕಣ್ಣೀರ ಯಾರೂ ಅರಿತಿಲ್ಲ,
ಮಾತನಾಡದ ಪ್ರಾಣಿಗಳ ಕಣ್ಣೀರ ಯಾರೂ ಅರಿತಿಲ್ಲ,
ಹಾಗಂತ ಅವುಗಳು ಕೊರಗುತ ಕುಳಿತಿಲ್ಲ,
ದುಡಿಯುತಿಹವು ಪ್ರತಿದಿನ ಅದು ಅವುಗಳ ಸ್ವಭಾವ,
ಸರ್ವಶಕ್ತ ಮನುಜ ನೀನು, ನಿನಗ್ಯಾವ ಅಭಾವ?…..
.
ಬದುಕು ಭರವಸೆಯೊ ಬವಣೆ ಕಿತ್ತೆಸೆಯೊ,
ಬದುಕು ಭರವಸೆಯೊ ಬವಣೆ ಕಿತ್ತೆಸೆಯೊ,
ನಗುವೆಂಬ ವರ ಉಂಟು ಅದು ನಿನ್ನ ದೆಸೆಯೊ,
ನಗುತಲಿರುವ ವ್ಯಕ್ತಿತ್ವ ಎಂದೆಂದಿಗೂ ಚೈತನ್ಯ,
ನಗುನಗುತ ಬಾಳಿದಾಗಲೇ ನಾವು ಅನನ್ಯ……..
.
– ವಿದ್ಯಾಶ್ರೀ ಬಿ. ಬಳ್ಳಾರಿ
Super
ಸುಂದರವಾದ ಕವನ . ಎಲ್ಲೂ ಸೋತು ನಿಲ್ಲಬೇಡ ನಿರಂತರ ಸಾಗುತ್ತಿರು ಅನ್ನುವ ಸಂದೇಶವನ್ನು ನೀಡುವ ಸಾಲುಗಳು , ಜೊತೆಗೆ ಭರವಸೆಯ ಬೆಳಕು .
ಬಾಳಿನಲ್ಲಿ ಭರವಸೆ ಮೂಡಿಸುವ ಸುಂದರ ಕವನ.
ಕವನ ತುಂಬಾ ಇಷ್ಟವಾಯಿತು