ನಗುವಿಗೂ ‘ವಿಶ್ವದಿನ’….
ಪ್ರತಿ ವರ್ಷ , ಮೇ ತಿಂಗಳ ಪ್ರಥಮ ಭಾನುವಾರದಂದು ‘ವಿಶ್ವ ನಗೆ ದಿನ’ ವನ್ನು ಆಚರಿಸಲಾಗುತ್ತದೆ. ಈ ಪರಿಕಲ್ಪನೆಯನ್ನು ಹುಟ್ಟುಹಾಕಿದ ಕೀರ್ತಿ ಮುಂಬೈಯ ಡಾ. ಮದನ್ ಕತಾರಿಯ ಅವರಿಗೆ ಸಲ್ಲುತ್ತದೆ. ಇವರು ತಮ್ಮ Laughter Yoga ಎಂಬ ಸಿದ್ಧಾಂತದ ಮೂಲಕ 1998 ರಲ್ಲಿ ‘ಜಗತ್ತಿನ ಶಾಂತಿಗಾಗಿ ನಗೆ‘ ಎಂಬ ಪರಿಕಲ್ಪನೆಯನ್ನು ಪ್ರಚುರಪಡಿಸಿದರು. ನಗೆಯ ಗುಣಾತ್ಮಕ ಅಂಶಗಳಿಂದ ಜಗತ್ತಿನಲ್ಲಿ ಶಾಂತಿಯನ್ನು ವರ್ಧಿಸಬಹುದು ಎಂಬ ಉದ್ದೇಶದಿಂದ ಅವರು ಪ್ರಚುರ ಪಡಿಸಿದ ತತ್ವವು ಎಷ್ತು ಪ್ರಸಿದ್ದವಾಗಿದೆ ಎಂದರೆ ಇಗ ಪ್ರಪಂಚದ 72 ದೇಶಗಲ್ಲಿ ‘ನಗೆ ಕ್ಲಬ್’ ಗಳು ರೂಪುಗೊಂಡಿವೆ!
ನಗೆ ಹುಮ್ಮಸ್ಸನ್ನು ತುಂಬುತ್ತದೆ. ಹಲವಾರು ಆರೋಗ್ಯ ಸಮಸ್ಯೆಗಳಿಗೆ ನಗೆಯೇ ಔಷಧಿಯಾಗಿ ಕೆಲಸ ಮಾಡುತ್ತದೆ. ನಗೆ ಖಿನ್ನತೆಯನ್ನು ದೂರ ಮಾಡುತ್ತದೆ. ನಗೆ ಸಾಂಕ್ರಾಮಿಕವೂ ಹೌದು. ನಗೆ ಭಾಂಧವ್ಯವನ್ನು ಹೆಚ್ಚಿಸುತ್ತದೆ. ನಗೆ ಎಂಬ ಹೂ ಬಾಣವನ್ನು ತಪ್ಪಾದ ಸ್ಥಳದಲ್ಲಿ ಮತ್ತು ಅನುಚಿತ ಸನ್ನಿವೇಶಗಳಲ್ಲಿ ಪ್ರಯೋಗಿಸಿದರೆ ಮಾತ್ರ ಇತರರಿಗೆ ಕಿರಿಕಿರಿ, ಮುಜುಗರ ಉಂಟಾಗಬಲ್ಲುದು.
ನಗೆಯಲ್ಲು ಹಲವು ಬಗೆ. ಬೆಳಗಾದರೆ ನಮ್ಮ ದಿನ ನಗೆಯಿಂದಲೇ ಆರಂಭವಾಗುತ್ತದೆ. ಹಾಗಿದ್ದರೇ ಸೊಗಸು. ಮನೆಗೆ ದಿನಾ ಬರುವ ಕೆಲಸದಾಕೆ, ಹಾಲು ಮಾರುವವನು, ಪೇಪರ್ ಹಾಕುವ ಹುಡುಗ…ಇಂತವರನ್ನು ಕಂಡಾಗ ಒಂದು ಸಣ್ಣ ಪರಿಚಯದ ನಗೆ . ಮನೆಯಲ್ಲಿ ಪುಟ್ಟ ಮಗುವಿದ್ದರೆ, ಕಂದನ ಹೂನಗೆಗೆ, ಕೇಕೆ ಸದ್ದಿಗೆ ಮನ ಸೋಲದವರೇ ಇಲ್ಲ. ಬೆಳಗಿನ ವಾಯುವಿಹಾರಕ್ಕೆ ಹೊರಟಾಗ ದಾರಿಯಲ್ಲಿ ಯಾರಾದರೂ ಪರಿಚಿತ ಸಿಕ್ಕರೆ ಒಂದು ನಗೆ. ಅವರು ತಮ್ಮ ಜತೆಯಲ್ಲಿ ನಾಯಿಯನ್ನೂ ವಾಕ್ ಮಾಡಿಸುತ್ತಾ, ಬೇರೆಯವರ ಮನೆಯ ಮುಂದೆ ಅದು ತನ್ನ ಸಕಲ ಕೆಲಸವನ್ನು ಪೂರೈಸಲು ಅವಕಾಶ ಕೊಡುವುದನ್ನು ಕಂಡಾಗ ಸ್ವಲ್ಪ ತಾತ್ಸಾರದ ಜತೆಗೆ, ಸದ್ಯ ಈ ಮಹಾಶಯ ನಮ್ಮ ಮನೆ ಮುಂದೆ ನಾಯಿ ತರಲಿಲ್ಲವಲ್ಲ ಎಂದ ವ್ಯಂಗ್ಯ ನಗೆ.
ಇನ್ನೂ ನಸುಕಿನಲ್ಲಿಯೇ ಪಕ್ಕದ ಮನೆಯ ಕೌಂಪೌಂಡ್ ಗೆ ಕೈಚಾಚಿ ಆ ಮನೆಯವರು ಹೂ ಕೀಳುವ ಮೊದಲು ತಾನು ಹೂ ಕೀಳುವ ಭರದಲ್ಲಿ ಕಾಲು ಉಳುಕಿಸಿಕೊಳ್ಳುವ ಅಜ್ಜಿಯ ಸಾಹಸಕ್ಕೆ ಎಸೆಯುವ ಕುಚೋದ್ಯದ ನಗೆ. ಆಫೀಸಿಗೆ ಹೋಗುವಾಗ ದಾರಿಯಲ್ಲಿ ಸಿಗುವ ಪರಿಚಿತರಿಗೆ ದೂರದಿಂದಲೇ ರಾಜಕಾರಣಿ ಶೈಲಿಯಲ್ಲಿ ಕೈ ಬೀಸುತ್ತಾ ಚೆಲ್ಲುವ ಔಪಚಾರಿಕ ನಗೆ. ಗ್ರಾಹಕರಿಂದಲೋ, ಬಾಸ್ ನಿಂದಲೋ ಆಗಷ್ಟೇ ಬೈಸಿಕೊಂಡಿದ್ದರೆ ಅದು ಇತರರಿಗೆ ಗೊತ್ತಾಗದಿರಲಿ ಎಂಬ ಉದ್ದೇಶದಿಂದ ಚೆಲ್ಲುವ ಪೆಚ್ಚು ನಗೆ, ವಯೋಮಾನಕ್ಕೆ ತಕ್ಕಂತ ತುಂಟ ನಗೆ, ಬಹಳ ಸಮಯ ನಂತರದ ಭೇಟಿಯಾದ ಸ್ನೇಹಿತರನ್ನೋ, ಸಂಬಂಧಿಯನ್ನೋ ಕಂಡಾದ ತಾನಾಗಿ ಹೊಮ್ಮುವ ಆತ್ಮೀಯ ನಗೆ……ಇತ್ಯಾದಿ.
ಕೆಲವರು ಸಹಜವಾಗಿ ಮುಗುಳುನಗೆ ಪ್ರಿಯರಾದರೆ ಇನ್ನು ಕೆಲವರಿಗೆ ಸಶಬ್ದವಾಗಿ , ಪಕ್ಕದಲ್ಲಿ ಯಾರಾದರೂ ಇದ್ದರೆ ಅವರಿಗೊಂದು ಗುದ್ದು ಕೊಟ್ಟು ನಕ್ಕರೇ ಸಮಾಧಾನ. ಸಣ್ಣ ‘ಹೆ.ಹೆ’ ಉದ್ಗಾರದಿಂದ ಹಿಡಿದು, ಕತ್ತೆಯಂತೆ ಕಿರಿಚುವುದು, ಕುದುರೆಯಂತೆ ಕೆನೆಯುವುದು, ಶಂಖಘೋಷದಂತೆ ಹೂಂಕರಿಸುವುದು, ಭೂಕಂಪವಾದಂತೆ ನಗುವುದು ….ಒಂದೇ, ಎರಡೇ? ಕೆಲವೊಮ್ಮೆ ಇದರ ಜತೆಗೆ ಅಯಾಚಿತವಾಗಿ ನಗೆ ಸಾಂಕ್ರಾಮಿಕವಾಗಿಬಿಡುತ್ತದೆ. ತರಗತಿಯಲ್ಲಿ , ನಗೆಹಬ್ಬಗಳಲ್ಲಿ ನಗಲೆಂಬ ಉದ್ದೇಶದಿಂದಲೇ ಹೇಳಿದ ಜೋಕ್ಸ್ ಗಳಿಗೆ ನಗುವುದು ನಿರೀಕ್ಷಿತ. ಆದರೆ ಮೀಟಿಂಗ್ ನಲ್ಲಿ, ಸೆಮಿನಾರ್ ನಲ್ಲಿ, ಗಂಭೀರವಾದ ವಿಷಯ ಪ್ರಸ್ತಾವನೆಯಾಗುತ್ತಿರುವಾಗ, ಎಲ್ಲರೂ ತದೇಕಚಿತ್ತರಾಗಿ ಆಲಿಸುತ್ತಿರುವಾಗ ಯಾರೋ ಒಬ್ಬರ ಮೊಬೈಲ್ ರಿಂಗ್ ಟೋನ್ ಅನುದ್ದೇಶಿತವಾಗಿ ಚಾಲೂ ಆಗಿ “ಕುಣಿದು ಕುಣಿದು ಬಾರೆ…” ಹಾಡು ಕೇಳಿಬಂದರೆ ಹೇಗಿರುತ್ತದೆ? ಶಿಸ್ತಿನ ಸಿಪಾಯಿಯಾದವರಿಗೂ ಒಂದು ಕ್ಷಣ ಸಾಂಕ್ರಾಮಿಕ ನಗೆಯಿಂದ ತಪ್ಪಿಸಿಕೊಳ್ಳಲಾಗುವುದಿಲ್ಲ!
ಇನ್ನು ಕೆಲವರಿಗೆ ನಗುವುದೇ ಸಹಜ ಧರ್ಮ. ತನಗೆ ಏನೇ ವೈಯುಕ್ತಿಕ ಸಮಸ್ಯೆ ಇದ್ದರೂ ಸದಾ ಮುಗುಳುನಗೆ ಬೀರಬೇಕಾದ ಸ್ವಾಗತಕಾರಿಣಿ, ಪ್ರತಿ ಪ್ರಯಾಣಿಕರನ್ನೂ ನಗುನಗುತ್ತಲೆ ವಿಚಾರಿಸುವ ಗಗನಸಖಿ…ಇತ್ಯಾದಿ.
ಡಿ.ವಿ.ಜಿ ಯವರು ಮಂಕುತಿಮ್ಮನ ಕಗ್ಗದಲ್ಲಿ ನಗುವಿನ ಬಗ್ಗೆ ” ನಗುವು ಸಹಜದ ಧರ್ಮ; ನಗಿಸುವುದು ಪರ ಧರ್ಮ, ನಗುವ ಕೇಳುತ ನಗುವುದತಿಶಯದ ಧರ್ಮ, ನಗುವ ನಗಿಸುವ ನಗಿಸಿ ನಗುತ ಬಾಳುವ ವರವಮಿಗೆ ನೀನು ಬೇಡಿಕೊಳೊ – ಮಂಕುತಿಮ್ಮ” ಎಂದಿದ್ದಾರೆ. ಎಲ್ಲರೂ ನಕ್ಕು ಹಗುರಾಗೋಣ.
– ಹೇಮಮಾಲಾ. ಬಿ.
ನಿಮ್ಮ ಬರಹವು ತುಂಬಾ ಉತ್ತಮವಾಗಿದ್ದು ಓದುತ್ತಿದ್ದಂತೆ ನಗೆ ತರಿಸುತ್ತಿತ್ತು 🙂 🙂
ನಮ್ಮ ನಿಮ್ಮ ಎಲ್ಲರ ಹಾಸ್ಯ ನಗೆ ಚಕ್ರವರ್ತಿ ಶ್ರೀ ನರಸಿಂಹರಾಜು ಅವರಿಗೆ ನಮ್ಮ ನಮನ !
ನಗೆಯು ಬರುತಿದೆ ನನಗೆ ನಗೆಯು ಬರುತಿದೆ! ನಗುವುದೇ ಸ್ವರ್ಗ, ಅಳುವುದೇ ನರಕ! ನಗುನಗುತ ನಲೀ ನಲೀ ಏನೇ ಅಗಲಿ!
ನಗುವುದೋ ಅಳುವುದೋ ನೀವೇ ಹೇಳೀ !The beauty of human connection is that it’s beside you, in front of you, a smile away, not a mile away.