ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು : ಪುಟ 13
” ಕೋಲ್ಕತ್ತಾದ ಗ್ಯಾಲರಿಯತ್ತ”
ನಿದ್ದೆಯಿಂದ ಎಚ್ಚೆತ್ತಾಗ ಬೆಳಗಾಗಿತ್ತು. ನಮ್ಮ *ಜಗನ್ನಾಥ ಎಕ್ಸ್ ಪ್ರೆಸ್* ಇನ್ನೂ ಓಡುತ್ತಲೇ ಇತ್ತು. ಸಹ ಪ್ರವಾಸಿಗರ ಬೋಗಿಗಳು ಬೇರೆ ಬೇರೆಯಾಗಿದ್ದರೂ, ಎಚ್ಚರವಾದವರು ಬೇರೆ ಬೋಗಿಗಳಿಗೆ ಹೋಗಿ ಕುಶಲೋಪರಿ ಮಾತನಾಡುತ್ತಿದ್ದಂತೆ, ನಮ್ಮ ಟೂರ್ ಮೆನೇಜರ್ ಬಾಲಣ್ಣನವರು ಬಂದು ಎಲ್ಲರನ್ನೂ,”ನಿದ್ದೆ ಬಂತಾ, ತೊಂದರೆ ಏನೂ ಆಗಲಿಲ್ಲ ತಾನೇ” ಎಂದು ವಿಚಾರಿಸುವಾಗ, ನಮ್ಮ ಬಗ್ಗೆ ಅವರಿಗಿರುವ ಕಾಳಜಿಯನ್ನು ಗಮನಿಸಿ ಹೆಮ್ಮೆ ಎನಿಸಿತು. ಬೆಳಗ್ಗಿನ ಕಾಫಿ, ಟೀ ಅಭ್ಯಾಸವಿದ್ದವರು, ರೈಲಿನಲ್ಲಿ ಮಾರಿಕೊಂಡು ಬರುವವರಲ್ಲಿ ಖರೀದಿಸಿ ಸವಿದು ಖುಷಿಪಟ್ಟರು. ಮುಂಜಾವಿನ ಪ್ರಶಾಂತ ಪ್ರಕೃತಿ ಸೊಬಗನ್ನು ಸವಿಯುವ ಅವಕಾಶವನ್ನು ಯಾರೂ ವ್ಯರ್ಥಗೊಳಿಸಲಿಲ್ಲ. ರೈಲು ದಾರಿಯ ಇಕ್ಕೆಲಗಳಲ್ಲಿದ್ದ ತುಂಬು ನೀರಿನ ಕೊಳಗಳಲ್ಲಿ, ಹೇರಳವಾಗಿ ಬೆಳೆದ ಗುಲಾಬಿ ಬಣ್ಣದ ತಾವರೆ ಹೂಗಳು ಗಮನಸೆಳೆಯುವಂತಿದ್ದವು. ಅಲ್ಲಿಯ ಜನರು, ದೇಗುಲಗಳಿಗೆ ಬರುವ ಭಕ್ತರಿಗೆ ಈ ಹೂಗಳನ್ನು ಮಾರಿ, ಅಲ್ಪಸ್ವಲ್ಪ ಕಾಸು ಗಳಿಸುವುದನ್ನು ಕಾಣಬಹುದು.
ರೈಲು, ಮಹಾನಗರ ಕೋಲ್ಕತ್ತಾ ಸಮೀಪಿಸುತ್ತಿದ್ದಂತೆಯೇ, ಎಲ್ಲರೂ ನಿದ್ದೆಯ ಗುಂಗಿನಿಂದ ಎಚ್ಚತ್ತು ಅವರವರ ಸಾಮಾನುಗಳನ್ನು ಹೊಂದಿಸಿ ಇಳಿಯುವಾಗಲೇ, ದೇಶದ ಅತಿ ದೊಡ್ಡ ರೈಲು ನಿಲ್ದಾಣಗಳಲ್ಲೊಂದಾದ *ಹೌರಾ* ದ ನಿಜ ದರ್ಶನವಾಯಿತು. ಚಿಕ್ಕಂದಿನಲ್ಲಿ ಪಾಠ ಪುಸ್ತಕಗಳಲ್ಲಿ ಓದಿದ ಹೆಸರಿನ ನೆನಪು ಮಾತ್ರವಿತ್ತು. 23 ಪ್ಲಾಟ್ ಫಾರಂಗಳನ್ನು ಹೊಂದಿದ, ದಿನದಲ್ಲಿ ಮಿಲಿಯಗಟ್ಟಲೆ ಪ್ರಯಾಣಿಕರನ್ನು ಸಂಭಾಲಿಸುವ, ದೇಶದ ಅತ್ಯಂತ ದೊಡ್ಡ, ಕ್ಲಿಷ್ಟಕರವಾದ,ದೇಶದ ಅತೀ ಹೆಚ್ಚು ಜನದಟ್ಟಣೆಯ, ಅತ್ಯಂತ ಹಳೆಯ ರೈಲು ನಿಲ್ದಾಣದಲ್ಲಿ ನಿಂತಿರುವುದು ಯೋಚಿಸಿಯೇ ರೋಮಾಂಚನಗೊಂಡೆ. ರೈಲಿನಿಂದ ಕೆಳಗಿಳಿದಾಗ ಕಾಲಿಡಲು ಜಾಗವೇ ಇಲ್ಲದಷ್ಟು ಜನಜಂಗುಳಿ. ಬೇರೆ ಬೇರೆ ಬೋಗಿಗಳಲ್ಲಿದ್ದವರ ಲಗ್ಗೇಜ್ ಗಳನ್ನೆಲ್ಲಾ ಒಟ್ಟುಗೂಡಿಸಿ, ಕೈಗಾಡಿಯವರ ಬಳಿ ಚರ್ಚೆ ನಡೆಸಿ, ಅದರಲ್ಲಿ ಸಾಮಾನುಗಳನ್ನೆಲ್ಲಾ ತುಂಬಿಸಿ,ಎಲ್ಲರೂ ಜೊತೆಯಾಗಿ ಹೊರ ನಡೆಯುತ್ತಿರುವಾಗ ಗೆಳತಿಯೊಬ್ಬಳು ಆಶ್ಚರ್ಯದಿಂದ ಬೆರಳು ಮಾಡಿ “ನೋಡಲ್ಲಿ, ಹೇಗಿದೆಯೆಂದು!” ಎಂದು ತೋರಿಸಿದಾಗ ನೋಡಿದೆ..ಹೌದು, ನಿಜಕ್ಕೂ ಬೆರಗುಗೊಂಡೆ. ಪ್ರಯಾಣಿಕರಿಗಾಗಿ ಅಳವಡಿಸಿದ್ದ ಫ್ಯಾನ್ ಗಳು ಎಷ್ಟು ದೊಡ್ಡವಿದ್ದವೆಂದರೆ, ಅದರ ರೆಕ್ಕೆಗಳೇ ಮೀಟರ್ ಗಟ್ಟಲೆ ಉದ್ದ! ಅಬ್ಬಾ ಎನಿಸಿತು. ಅಂತಹ ಏಳೆಂಟು ಫ್ಯಾನ್ ಗಳು ಅಲ್ಲಿ ತಿರುಗುತ್ತಿದ್ದವೆಂದರೆ, ಆ ಹಾಲ್ ನ ವಿಸ್ತಾರವೆಷ್ಟಿರಬಹುದೆಂದು ಊಹಿಸಿ ನೋಡಿ!
ಹೊರಗಡೆ ಬಂದಾಗ, ಹೋಟೇಲಿಗೆ ಹೋಗಲು ದೊಡ್ಡ ಬಸ್ಸನ್ನೇ ಏರ್ಪಡಿಸಿದರು. ಹೋಟೆಲ್ *ಮಲ್ ಬೆರಿ* ಗೆ ಬಂದಿಳಿದಾಗ ಅದಾಗಲೇ ಗಂಟೆ ಒಂಭತ್ತು ಕಳೆದಿತ್ತು. ಅಲ್ಲಿಯೇ, ಇಬ್ಬರು ಪುಟ್ಟ ಮಕ್ಕಳೊಡನೆ ನಮ್ಮ ಗುಂಪನ್ನು ಸೇರಿಕೊಂಡವರು, ವೀಣಾ ಮರುವಳ ಅವರ ಸೋದರ ಕೃಷ್ಣ ಕುಮಾರ ಹೊಸಮನೆ,ಶಿಲ್ಪ ದಂಪತಿಗಳು. ಹಿರಿಯ ನಾಗರಿಕರ ಬಲ ಜಾಸ್ತಿಯಿದ್ದ ನಮ್ಮ ಗುಂಪಿಗೆ ಈ ಪುಟ್ಟ ಮಕ್ಕಳ ಸೇರ್ಪಡೆ ಎಲ್ಲರಿಗೂ ತುಂಬಾ ಖುಷಿಯನ್ನು ತಂದುಕೊಟ್ಟಿತ್ತು. ಅಡಿಗೆ ತಂಡದವರು ನಮಗಾಗಿ ತಿಂಡಿ, ಕಾಫಿಗಳ ತಯಾರಿ ನಡೆಸುತ್ತಿದ್ದಂತೆ, ನಾವು, ನಮಗಾಗಿ ಕಾದಿರಿಸಿದ್ದ ಅಚ್ಚುಕಟ್ಟಾದ, ಹವಾನಿಯಂತ್ರಿತ ರೂಂ ಗಳಲ್ಲಿ, ರೈಲು ಪ್ರಯಾಣದ ಆಯಾಸವನ್ನು ಪರಿಹರಿಸಿಕೊಂಡು ಮುಂದಿನ ಕಾರ್ಯಕ್ರಮಕ್ಕೆ ಸಿದ್ಧರಾದೆವು. ಕಾಫಿ, ತಿಂಡಿಗಳನ್ನು ಯಥಾನುಶಕ್ತಿ ಉದರಕ್ಕಿಳಿಸಿ ನಮಗಾಗಿ ಕಾದಿರಿಸಿದ್ದ ಬಸ್ಸಿನಲ್ಲಿ, ನಮ್ಮ ಮುಂದಿನ ಪಯಣ, ಕೊಲ್ಕತ್ತಾದ ಅತ್ಯಂತ ಪ್ರಸಿದ್ಧ *ವಿಕ್ಟೋರಿಯಾ ಮೆಮೋರಿಯಲ್* ವೀಕ್ಷಣೆಗೆ..
ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ, ಒಂದೊಮ್ಮೆ, ಅಂದಿನ ಕಲ್ಕತ್ತ ಅವರ ರಾಜಧಾನಿಯಾಗಿತ್ತು. ಮಹಾರಾಣಿ ವಿಕ್ಟೋರಿಯಾ ನೆನಪಿಗಾಗಿ, ನಗರದ ಮಧ್ಯ ಭಾಗದಲ್ಲಿ, ಸುಮಾರು 64ಎಕರೆಗಳಷ್ಟು ಜಾಗದಲ್ಲಿ ಚಂದದ ಹೂದೋಟದೊಂದಿಗೆ, ರಾಜಸ್ಥಾನದ ಜೋಧಪುರದಿಂದ ತರಿಸಲ್ಪಟ್ಟ ಅಮೃತಶಿಲೆಯ, ಸುಂದರ ಕಟ್ಟಡದ ನಿರ್ಮಾಣವು 1906ರಲ್ಲಿ ಆರಂಭಗೊಂಡಿತ್ತು. 1921ರಲ್ಲಿ ಪೂರ್ಣ ಗೊಂಡ ಈ ಬೃಹತ್ ಕಟ್ಟಡದ ಶಿಲ್ಪಕಲಾ ನೈಪುಣ್ಯತೆಯು ನೋಡುಗರ ಮನ ಸೆಳೆಯುವಂತಿದೆ. ಸಾಧಾರಣ 77,000 ಚ.ಅಡಿಗಳಷ್ಟು ವಿಸ್ತೀರ್ಣ ಹೊಂದಿರುವ ಹಾಗೂ ,184ಅಡಿಗಳಷ್ಟು ಎತ್ತರವಿರುವ ಈ ಮಹಾ ಸೌಧವು ಮೂರು ಅಂತಸ್ತುಗಳನ್ನು ಹೊಂದಿದ್ದು, 25ಬಗೆಯ ವಿವಿಧ ಗ್ಯಾಲರಿಗಳನ್ನು ಒಳಗೊಂಡಿದೆ.
ಅವುಗಳಲ್ಲಿ ಬ್ರಿಟಿಷ್ ರಾಜಮನೆತನದ ವಿವರಗಳು, ಅವರ ಪೋಷಾಕುಗಳು, ಕಣ್ಮನ ಸೆಳೆಯುವ ವಿವಿಧ ವರ್ಣಚಿತ್ರಗಳು, ಕಲಾ ಸಂಗ್ರಹಗಳು, ಜೀವಂತವಾಗಿ ಎದ್ದು ಬರುವಂತಿರುವ ಅನೇಕ ತೈಲಚಿತ್ರಗಳು, ವಿಗ್ರಹಗಳು, ತರಹೇವಾರಿ ಆಯುಧಗಳು, ಪುರಾತನ ನಾಣ್ಯಗಳ ಸಂಗ್ರಹ, ಅತ್ಯುತ್ತಮ ಹಳೆ ಪುಸ್ತಕಗಳ ಸಂಗ್ರಹ, ಇನ್ನೂ ಅನೇಕ ಆಶ್ಚರ್ಯಕರ ವಸ್ತುಗಳನ್ನು ಕೂಲಂಕುಶವಾಗಿ ನೋಡುತ್ತಾ, ಆಗಾಗ ಫೋಟೋ ಕ್ಲಿಕ್ಕಿಸುತ್ತಾ ಸಾಗಿದಾಗ ಸಮಯ ಸರಿದುದೇ ತಿಳಿಯಲಿಲ್ಲ. ಕಟ್ಟಡದ ಮಧ್ಯಭಾಗದಲ್ಲಿ ಎತ್ತರವಾದ ಗೋಲಗುಮ್ಮಟದ ನೇರ ಕೆಳಗಡೆ ಸೊಗಸಾದ ವಿಕ್ಟೋರಿಯಾ ರಾಣಿಯ ಅಮೃತಶಿಲೆಯ ವಿಗ್ರಹ ಎಲ್ಲರ ಗಮನ ಸೆಳೆಯುವಂತಿತ್ತು.
ತಂಪಾದ, ಹವಾನಿಯಂತ್ರಿತ ಕಟ್ಟಡದಲ್ಲಿ ಮನಸೂರೆಗೊಳ್ಳುವ ಅನೇಕ ಸಂಗ್ರಹಗಳನ್ನು ನೋಡಿ ದಣಿವು ತಿಳಿಯದಿದ್ದರೂ, ಹೊರಗಡೆ ಬಂದಾಗ ,ಮಧ್ಯಾಹ್ನ ಒಂದು ಗಂಟೆಯ ಬಿರು ಬಿಸಿಲಿನ ತೀಕ್ಷ್ಣತೆಯ ಅರಿವು ಅದಾಗಲೇ ನಮ್ಮ ಅನುಭವಕ್ಕೆ ಬರತೊಡಗಿತು. ಅಲ್ಲಲ್ಲಿ ಹರಡಿ ಹೋಗಿದ್ದ ನಮ್ಮ ಸಹ ಪ್ರವಾಸಿ ಬಂಧುಗಳನ್ನು ಕಲೆಹಾಕಿದರು ಗಣೇಶಣ್ಣ, ಎಂದಿನ ತಮ್ಮ ಸ್ಟೈಲ್ ನಲ್ಲಿ, ತಲೆ ಲೆಕ್ಕ ಹಾಕುತ್ತಾ. ಆಗ ಒಂದು ತಲೆ ಕಡಿಮೆಯಾದುದು ಅವರ ಗಮನಕ್ಕೆ ಬಂತಲ್ಲಾ.. ಕೂಡಲೇ ಎಲ್ಲರಿಗೂ ಆತಂಕ ಸುರು. ಕಳೆದು ಹೋದವರ ಕೈಯಲ್ಲಿ ಮೊಬೈಲು ಕೂಡಾ ಇಲ್ಲದ ಕಾರಣ ಅವರನ್ನು ಹುಡುಕುವುದು ಸುಲಭವಾಗಿರಲಿಲ್ಲ. ಸ್ವಲ್ಪ ಮಂದಿ ಆಕಡೆ ಈಕಡೆ ಹುಡುಕಿದ್ದೂ ಆಯಿತು. ಅನತಿ ದೂರದಲ್ಲಿ ಅವರು ಗೋಚರಿಸಿದಾಗ ನಮ್ಮ ಮನಸ್ಸೂ ನಿರಾಳ!
ಅಲ್ಲಿಯೇ ಕೆಲವು ಕನ್ನಡ ಪ್ರವಾಸಿಗರ ಪರಿಚಯವಾಗಿ, ನಮ್ಮ ಪ್ರವಾಸದ ಬಗ್ಗೆ ವಿವರಿಸಿ, ಅವರಿಗಾಗಿ ನಮ್ಮ Travel 4U ಬಾಲಣ್ಣನವರ ಮಾಹಿತಿಯನ್ನು ಖುಷಿಯಿಂದ ತಿಳಿಸಿದೆವು. ನಮಗಾಗಿ ಕಾದಿದ್ದ ಬಸ್ಸಿನ ಬಳಿ ಬರುತ್ತಿರುವಾಗ, ರಸ್ತೆ ಬದಿಯ ಅಲಂಕೃತ ಕುದುರೆ ಸಾರೋಟುಗಳು ಗಮನ ಸೆಳೆದವು. ಬಸ್ಸು ಹೋಟೇಲಿನತ್ತ ಚಲಿಸುತ್ತಲೇ, ಮಧ್ಯಾಹ್ನದ ಸವಿಯೂಟ ನಮಗಾಗಿ ಕಾದಿರುವುದು ನೆನಪಾಯಿತು…
(ಮುಂದುವರಿಯುವುದು..)
ಹಿಂದಿನ ಪುಟ ಇಲ್ಲಿದೆ : ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು: ಪುಟ 12
-ಶಂಕರಿ ಶರ್ಮ, ಪುತ್ತೂರು.
ಪ್ರವಾಸ ಕಥನ ಓದುವಾಗ, ಅದರೊಳಗೆ ಅನುಭವಿಸುವಾಗ ಖುಶಿಯಾಗುವುದು ಸಹಜ.
ಚೆನ್ನಾಗಿದೆ ಮೇಡಂ, ಮುಂದೇನು ಅನ್ನುವ ಕುತೂಹಲ .
ವಿಜಯಕ್ಕ, ನಯನಾ ಮೇಡಂ..ಧನ್ಯವಾದಗಳು.