ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು: ಪುಟ 12

Spread the love
Share Button


ಪುರಿಯ ಸವಿನೆನಪಲ್ಲಿ…

ನಮ್ಮಲ್ಲೊಬ್ಬರು ಪಂಡಾರವರಲ್ಲಿ ಕೇಳಿದರು, “ದೇವರ ಮೂರ್ತಿ ಮರದಿಂದ ತಯಾರಾದುದರಿಂದ ಅಭಿಷೇಕ ಹೇಗೆ ನಡೆಯುವುದು?” ಅದಕ್ಕವರು, “ಹೌದು, ಇಲ್ಲಿ ಮೂರ್ತಿಗೆ ಅಭಿಷೇಕ ಮಾಡುವ ಬದಲು ಪ್ರತಿಬಿಂಬ ಸ್ನಾನವಾಗುತ್ತದೆ. ಅಂದರೆ, ಮೂರ್ತಿಯ ಎದುರು ಕನ್ನಡಿ ಹಿಡಿದು, ಅಲ್ಲಿಯ ಪ್ರತಿಬಿಂಬಕ್ಕೆ ಅಭಿಷೇಕ ಮಾಡಲಾಗುವುದು. ಜ್ಯೇಷ್ಠ ಹುಣ್ಣಿಮೆಗೆ ಮಾತ್ರ ಮೂರ್ತಿ ಸ್ನಾನ” ಎಂದರು. ಮುಂದಕ್ಕೆ ಅವರು ಹೇಳಿದಂತೆ, ದಿನದಲ್ಲಿ ಏಳು ಬಾರಿ ಮೂರ್ತಿಯ ಅಲಂಕಾರ, ಉಡುಗೆಗಳನ್ನು  ತೆಗೆದು, ಕೈಯಿಂದಲೇ ನೂತು ನೈದ ಹತ್ತಿ ಬಟ್ಟೆಯಿಂದ, ಬೇರೆ ಬೇರೆ ಅರ್ಚಕರು ಮೂರ್ತಿಗಳ ಅಲಂಕಾರ ಮಾಡುವರು. ಹಾಗೆಯೇ, 8, 12,ಅಥವಾ18 ವರ್ಷಗಳಿಗೊಮ್ಮೆ, ಆಷಾಢ ಮಾಸದಲ್ಲಿ ಎರಡು ಅಮಾವಾಸ್ಯೆಗಳು ಬಂದಾಗ, ನವ ಕಳೇಬರ ( ಹಳೆ ಶರೀರವನ್ನು ಬಿಸುಟು, ಹೊಸ ಶರೀರವನ್ನು ಹೊಂದುವುದು) ಎಂಬ ವಿಧಿಯನ್ನು ಆಚರಿಸಲಾಗುತ್ತದೆ. ಪವಿತ್ರ ಕಹಿಬೇವಿನ ಮರದ ದಿಮ್ಮಿ(ದಾರು)ಗಳನ್ನು ದೇಗುಲದ ಉತ್ತರದ ಹಸ್ತಿದ್ವಾರದ ಮೂಲಕ ಒಳಗೆ ತಂದು ಹೊಸ ಮೂರ್ತಿಗಳನ್ನು ನಿರ್ಮಿಸಿ ರತ್ನವೇದಿ ಮಂಟಪದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಮೊದಲಿನ ಮೂರ್ತಿಗಳನ್ನು ದೇಗುಲದ ಹಿಂಭಾಗದಲ್ಲಿ, ಹಿಂದಿನ ಮೂರ್ತಿಗಳನ್ನು ಹೂತಲ್ಲಿ, ಅವುಗಳ ಮೇಲೆಯೇ ಇರಿಸಿ ಹೂಳಲಾಗುವುದು.ಈ ವಿಶೇಷ ಮೂರ್ತಿಗಳಿಗೆ ಪಾದಗಳಿಲ್ಲ.. ದೇವನು ನಡೆಯಬೇಕಾಗಿಲ್ಲ, ಅವನು ಸರ್ವಂತರ್ಯಾಮಿ. ಹಸ್ತಗಳಿಲ್ಲ.. ಅವನಿಗೆ ಅದರ ಅಗತ್ಯವೂ ಇಲ್ಲ.ಸಕಲ ಜೀವರಾಶಿಗಳ ಹಸ್ತಗಳೂ ಅವನವೇ. ಅದರದರ ರಕ್ಷೆ-ಶಿಕ್ಷೆಗಳು ಅದೇ ಕೈಗಳಿಂದಲೇ ಆಗುತ್ತವೆ. ಮೊಗದಲ್ಲಿ ಸದಾ ತೆರೆದ ಕಣ್ಣುಗಳು..ಜೀವರಾಶಿಗಳ ಒಳಿತು ಕೆಡುಕುಗಳನ್ನು, ಚಲನವಲನಗಳನ್ನು ಗಮನಿಸುತ್ತಾ, ಎಚ್ಚರಿಕೆ ನೀಡುತ್ತಿರುತ್ತವೆ.

ಆಷಾಢಮಾಸದಲ್ಲಿ ಜಗತ್ಪ್ರಸಿದ್ಧ ಪುರಿ ಶ್ರೀ ಜಗನ್ನಾಥ ದೇವರ ಮಹಾರಥೋತ್ಸವ. 45 ಅಡಿಗಳಷ್ಟು ಎತ್ತರದ ಮೂರು ರಥಗಳು ಮೂರು ಕಿ.ಮೀ.ದೂರದ ಗುಂಡಿಚ ದೇಗುಲದ ವರೆಗೆ ಜನರಿಂದಲೇ ಎಳೆಯಲ್ಪಡುತ್ತದೆ. ಕೊನೆಯ ದಿನ ಜಗನ್ನಾಥನು ಲಕ್ಷ್ಮೀದೇವಿ ಜೊತೆ ಗುಪ್ತಯಾತ್ರೆ ಮಾಡುವುದೂ ವಿಶೇಷ. ಇಂಗ್ಲಿಷರ ಕಾಲದಲ್ಲಿ, ಜಗನ್ನಾಥನ ಹೆಸರು ಅವರ ಬಾಯಿಯಲ್ಲಿ ಜಗ್ಗರ್ ನಾಟ್ ಆಗಿ ಬದಲಾವಣೆಯಾಗಿದ್ದು ಎಲ್ಲರಿಗೂ ತಿಳಿದ ವಿಷಯವೇ. ರಥೋತ್ಸವದ ಸಮಯದಲ್ಲಿ ಇಲ್ಲಿಯ ವಸತಿಗೃಹಗಳಲ್ಲಿ ರೂಂಗಳು ಸಿಗುವುದೇ ದುರ್ಲಭ.. ಒಂದು ವೇಳೆ ಸಿಕ್ಕಿದರೂ,  ದಿನವೊಂದಕ್ಕೆ ಒಂದು ಲಕ್ಷಕ್ಕಿಂತಲೂ ಹೆಚ್ಚು ಬಾಡಿಗೆಯಿರುವುದು ತಿಳಿದು ಮೂಕ ವಿಸ್ಮಿತರಾದೆವು. ಸಮುದ್ರ ತೀರದಲ್ಲಿರುವ ಈ ದೇವಾಲಯದ ಹೊರಗಡೆ ಸತತವಾಗಿ ಸಮುದ್ರಘೋಷವು ಕೇಳಿ ಬಂದರೆ, ದೇಗುಲದ ಆವರಣದೊಳಗೆ ಅದು ಕೇಳಿಸದಿರುವುದು ಇಲ್ಲಿನ ವಿಶೇಷತೆಗಳಲ್ಲೊಂದು. ಸಾಮಾನ್ಯವಾಗಿ ಗಾಳಿಯು, ಹಗಲು ವೇಳೆ ನೆಲದಿಂದ ಸಮುದ್ರದ ಕಡೆಗೆ ಹಾಗೂ ರಾತ್ರಿ ಸಮುದ್ರದಿಂದ ನೆಲದ ಕಡೆಗೆ ಬೀಸುವುದು ರೂಢಿ. ಅದರೆ ಇಲ್ಲಿ ತದ್ವಿರುದ್ಧ.

ನಮ್ಮೆಲ್ಲರ ಮಧ್ಯಾಹ್ನದ ಊಟ ಭುಬನೇಶ್ವರದಲ್ಲಿ ತಯಾರಿಸಿ ತರಬೇಕಿದ್ದುದರಿಂದ ತಡವಾಗುವುದಾಗಿ ತಿಳಿಸಿದ್ದರು. ಉರಿ ಬಿಸಿಲಿನಲ್ಲಿ ಚುರುಗುಟ್ಟುತ್ತಿರುವ ಹೊಟ್ಟೆಯೊಳಗೆ ತುಸು ಮಹಾಪ್ರಸಾದವು ತಲಪಿತ್ತು. ಮುಂದಕ್ಕೆ ಪಂಡಾರವರು ತಮ್ಮ ಮಾಹಿತಿ
ಖಜಾನೆಯನ್ನು ಸದ್ಯಕ್ಕೆ ಬರಿದುಗೊಳಿಸಿ ನಮ್ಮನ್ನು ಮುಂದಕ್ಕೆ ಬೀಳ್ಕೊಟ್ಟರು. ಅಲ್ಲಿಯೇ ಇನ್ನೊಂದು ಕಡೆ ಹಂಚುತ್ತಿದ್ದ ಸಿಹಿಯಾದ ಪ್ರಸಾದವನ್ನು ಪಡೆದುಕೊಂಡು ಕೈತೊಳೆದು, ಹೊರ ಬಂದಾಗ ತಿಳಿಯಿತು, ನಾವು ಹೋಗಲಿರುವ ಹೋಟೆಲ್ ಸ್ವಲ್ಪ ದೂರವಿದೆಯೆಂದು. ನಮ್ಮ ಚಪ್ಪಲಿ, ಮೊಬೈಲ್ ಗಳನ್ನು ಹಿಂತಿರುಗಿ ಪಡೆದು ಮೋಡರ್ನ್ ಹೋಟೇಲಿಗೆ ತಲಪಿ ಊಟದ ಬರವಿಗಾಗಿ ಕಾದು, ಸ್ವಲ್ಪ ಹೊತ್ತಿನಲ್ಲೇ, ಪಕೋಡ, ಪಾಯಸಗಳ ಸಹಿತ ಸವಿಯಾದ ಊಟ ನಮ್ಮ ಮುಂದೆ, ಮಧ್ಯಾಹ್ನ 2:45.  ಹೋಟೆಲ್ ನವರು, ಆ ಕಷ್ಟಗಳ ನಡುವೆಯೂ, ಅವರಲ್ಲಿರುವ ಅಲ್ಪ ಸ್ವಲ್ಪ ನೀರನ್ನೇ ಕೊಟ್ಟು ಮಹದುಪಕಾರ ಮಾಡಿದುದನ್ನು ಎಂದೂ ಮರೆಯುವಂತಿಲ್ಲ.

ನಮ್ಮ ಪ್ರವಾಸಿ ಬಂಧುಗಳಾದ ಕೇಶವಣ್ಣ, ಗೋಪಾಲಣ್ಣ, ನಾರಾಯಣಣ್ಣ ಕುಟುಂಬದವರೆಲ್ಲಾ ಮಹಾಪ್ರಸಾದದ ಭೋಜನವನ್ನು ಸವಿದು ನಮ್ಮೆದುರು ಬಂದಾಗ, ನಾವೇ ಉಂಡಷ್ಟು ಖುಷಿಯಾಯಿತು. ನಮಗೋ, ಬಾಲಣ್ಣನವರು ಕಷ್ಟಪಟ್ಟು ಒದಗಿಸಿದ ಸವಿಯೂಟಕ್ಕೆ ನ್ಯಾಯ ಒದಗಿಸಿದ ತೃಪ್ತಿ. ಆಮೇಲೆ, ಐದು ಗಂಟೆ ಹೊತ್ತಿಗೆ ಅತ್ಯಂತ ಮಹತ್ವದ, ಪವಿತ್ರ ಕಾರ್ಯಕ್ರಮವನ್ನು ವೀಕ್ಷಿಸಲು ಪುನಃ ದೇಗುಲಕ್ಕೆ ಹೋಗುವುದಿತ್ತು. ಆ ಮಧ್ಯೆಯ ವಿರಾಮ ಸಮಯದಲ್ಲಿ ನಾವು ಕೆಲವರು, ಪುರಿಯ ಸ್ಮರಣಾರ್ಥವಾಗಿ ಏನಾದರೂ ಖರೀದಿಸಲು ಹೊರನಡೆದೆವು. ಆದರೆ ಮೊದಲೇ ತಿಳಿಸಿದಂತೆ, ಮೂರ್ನಾಲ್ಕು ಅಂಗಡಿಗಳು ಮಾತ್ರ ತೆರೆದಿದ್ದುವು. ಹಾಗೆಯೇ ರಸ್ತೆ ಬದಿಯಲ್ಲಿಯೂ ಅಲ್ಪ ಸ್ವಲ್ಪ ಮಾರಾಟ ನಡೆದಿತ್ತು. ಅಲ್ಲಿಯೇ ಸುತ್ತಾಡಿ, ಕೆಲವು ವಸ್ತುಗಳನ್ನು ಖರೀದಿಸಿ, ಐದು ಗಂಟೆಗೆ ನಡೆಯುವ ಧ್ವಜಾರೋಹಣವನ್ನು ವೀಕ್ಷಿಸಲು,ಎಲ್ಲರೂ ದೇವಾಲಯಕ್ಕೆ ನಾಲ್ಕೂವರೆ ಗಂಟೆಗೇ ವಾಪಾಸಾಗಿ,   ಅನುಕೂಲವಾದ ಜಾಗ ಹಿಡಿದು, ಆ ಸುಸಂದರ್ಭಕ್ಕಾಗಿ ತುಂಬಾ ಕಾತುರದಿಂದ ಕಾಯತೊಡಗಿದೆವು. ಸರಿಯಾಗಿ ಐದುಗಂಟೆಗೆ, ಬಗಲಲ್ಲಿ ಕೆಂಪು, ಹಳದಿ ಪತಾಕೆಗಳನ್ನು ಹೊತ್ತು, ಯುವಕನೊಬ್ಬ  ದೇಗುಲದ ಗೋಪುರವನ್ನು ಮೊಗ ಎದುರಾಗಿ ಸರಸರನೆ ಏರುವ ಪರಿಯೇ ಅದ್ಭುತ! ಅತ್ಯಂತ ಮೇಲಿನ ಗೋಲಾಕಾರದ  ಗೋಪುರಕ್ಕಿರುವ ಕಬ್ಬಿಣದ ಸಂಕಲೆಯನ್ನೇ ಏಣಿಯಂತೆ ಬಳಸಿ, ತನ್ನಲ್ಲಿರುವ ಪತಾಕೆಗಳನ್ನು ಮೇಲಿನ ಸುದರ್ಶನ ಚಕ್ರಕ್ಕೆ ಕಟ್ಟಿ, ಅಲ್ಲಿದ್ದವುಗಳನ್ನು ತನ್ನ ಬಗಲಿಗೇರಿಸಿಕೊಂಡು, ಹತ್ತಿದಂತೆಯೇ ಸರಸರನೆ ಇಳಿದು, ಹದಿನೈದು ನಿಮಿಷಗಳಲ್ಲಿ ತನ್ನ ಕೆಲಸವನ್ನು ಪೂರೈಸಿದ್ದು ನೋಡಿ ನಮಗೆಲ್ಲಾ ಪರಮಾಶ್ಚರ್ಯ! ಅಂತೂ, ಶ್ರೀ ಜಗನ್ನಾಥ ದೇವರ ಕೃಪೆ ನಮ್ಮ ಮೇಲೆ ಎಣೆ ಇಲ್ಲದೆ ಹರಿದುದಂತೂ ಸತ್ಯ! ಇದನ್ನೆಲ್ಲಾ ನೋಡುವ ಭಾಗ್ಯ, ಆ ಕಷ್ಟದ ಸಮಯದಲ್ಲಿ ಒದಗುವುದೇ ದುಸ್ಸಾಧ್ಯವಾಗಿತ್ತಲ್ಲವೇ? ಮಂಗಳಕರ ಕಾರ್ಯವನ್ನು ಕಣ್ಣಾರೆ ಕಂಡು ಪುನೀತರಾಗಿ, ದೇಗುಲಕ್ಕೆ ಒಂದು ಪ್ರದಕ್ಷಿಣೆ ಹಾಕಲು ಹೊರಟಾಗ,ಕೆಲವರು ತಲೆ ಮೇಲೆ ಬುಟ್ಟಿಯಲ್ಲಿ, ಮಹಾಪ್ರಸಾದವನ್ನಿಟ್ಟುಕೊಂಡು ಹೊರಗಡೆ ಒಯ್ಯುವುದು ಕಾಣಿಸಿತು, ಎಲ್ಲಿಗೆಂದು ಆಗ ತಿಳಿಯಲಿಲ್ಲ.. ಆದರೆ ಈಗ ತಿಳಿದಿದೆ, ಅದು ಆನಂದ ಬಾಜಾರಿಗಿರಬೇಕು.

 

ದೇಗುಲದ ಆವರಣದೊಳಗೆ ಪ್ರದಕ್ಷಿಣೆ ಹಾಕುತ್ತಿದ್ದಂತೆ, ನಮಗೆ ಇನ್ನೊಂದು ಆಶ್ಚರ್ಯ ಕಾದಿತ್ತು.. ಗೋಪುರವೇರಿ ಪತಾಕೆ ಬದಲಿಸಿದ ಯುವಕ ಮತ್ತು ಅವರ ತಂಡ ಅಲ್ಲೇ ಜಗಲಿ ಮೇಲೆ ಸಿಕ್ಕಿದರು! ನಾವು ಬಹಳ ಸಂತಸದಿಂದ ಅವರೊಡನೆ ಮಾತಾಡಿ ಮಾಹಿತಿ ಪಡೆದೆವು. ಒಂದೇ ಕುಟುಂಬದವರು ಆ ಕೆಲಸ ಮಾಡುವರಲ್ಲದೆ, ಅದಕ್ಕಾಗಿ ಪರಿಣಿತರ ನೇತೃತ್ವದಲ್ಲಿ ಸತತ ಅಭ್ಯಾಸವೂ ನಡೆಯುವುದಂತೆ. ಹೌದು..ಅಭ್ಯಾಸವಿಲ್ಲದೆ ಅಲ್ಲಿ ಹತ್ತುವಂತೆಯೇ ಇಲ್ಲ..ನಾವು ನೋಡುವವರಿಗೇ ಎದೆ ಝಲ್ ಎನ್ನುವುದು.. ಹೆದರಿಕೆಯಿಂದ! ಆ ಪುಣ್ಯ ಕಾರ್ಯನಿರತರೆಲ್ಲರಿಗೂ ಶುಭ ಹಾರೈಸಿ ಮುಂದುವರಿದೆವು. ಅದಾಗಲೇ ಸಂಜೆ ಗಂಟೆ ಆರು..ಕತ್ತಲಾವರಿಸುತ್ತಿತ್ತು. ಬಾಲಣ್ಣನವರು ನಮ್ಮನ್ನು ಅಲ್ಲಿಯ ಪ್ರಸಿದ್ಧ ಗೋಲ್ಡನ್ ಬೀಚಿಗೆ ಕರೆದೊಯ್ಯುವ ಯೋಜನೆಯಲ್ಲಿದ್ದರು. ಅಟೋರಿಕ್ಷಾಗಳಿಗೂ ಕೊರತೆ.. ಅಂತೂ ಸ್ವಲ್ಪ ಕಷ್ಟದಲ್ಲಿಯೇ ಎಲ್ಲರನ್ನೂ ಪ್ರತ್ಯೇಕ ರಿಕ್ಷಾಗಳಲ್ಲಿ ಬೀಚಿಗೆ ಕರೆದೊಯ್ದರು. ಅಲ್ಲಿಗೆ ತಲಪಿದಾಗ ಪೂರ್ತಿ ಕತ್ತಲಾಗಿದ್ದರೂ, ತಂಗಾಳಿಗೆ ಮೈಯೊಡ್ಡಿ, ತೀರದಲ್ಲಿ ನಡೆದಾಡುವ ಉತ್ಸಾಹ ಮಾತ್ರ ಕುಗ್ಗಿರಲಿಲ್ಲ. ನಾವು ಸ್ವಲ್ಪ ಮಂದಿ ಪಂಗಡ ಮಾಡಿಕೊಂಡು ಸುತ್ತಾಡಿದೆವು. ಕತ್ತಲಲ್ಲಿ ನೀರಿಗಿಳಿಯಲು ಭಯವೆನಿಸಿದರೂ, ನಾವು ಕೆಲವರು ಖುಷಿಯಾಗಿ, ತೆರೆಯ ನೀರಲ್ಲಿ ಕಾಲು ತೋಯಿಸಿ ಸಂಭ್ರಮಿಸಿದೆವು. ಸರಿಯಾಗಿ ಏಳು ಗಂಟೆಗೆ ಒಂದೆಡೆ ಸೇರಲು ಹೇಳಿದ್ದರಿಂದ ಎಲ್ಲರೂ ಅಲ್ಲಿ ಒಟ್ಟುಗೂಡಿದಾಗ ತಿಳಿಯಿತು, ಮೂರು ಜನ ಗೆಳತಿಯರು ನಾಪತ್ತೆ. ಕಂಡು ಕೇಳರಿಯದ ಊರು, ಕತ್ತಲೆ ಬೇರೆ,ಜೊತೆಗೆ ಮೊಬೈಲ್ ಕೂಡಾ ಸಿಗ್ನಲ್ ಕೊರತೆಯಿಂದ ಸಿಗುತ್ತಿರಲಿಲ್ಲ. ಎಲ್ಲರೂ ಗಾಬರಿಯಿಂದ ಒಬ್ಬರಿಗೊಬ್ಬರು ಪ್ರಶ್ನಿಸುವುದೇ..”ನೀವು ನೋಡಿದಿರಾ?”.. “ನಿಮಗೆ ಸಿಕ್ಕಿದರಾ?”..ಎಂದು. ಹದಿನೈದು ನಿಮಿಷಗಳ ಹುಡುಕಾಟದ ಬಳಿಕ ಅವರ ಭೇಟಿಯಾದಾಗ ಎಲ್ಲರ  ಮುಖದಲ್ಲಿಯೂ ನೆಮ್ಮದಿಯ ನಗು.

ಮುಂದಿನ ನಮ್ಮ ಪ್ರಯಾಣ ಕೋಲ್ಕತ್ತಾಕ್ಕೆ. ಪುರಿಯಿಂದ  ಹೌರಾ  ನಿಲ್ದಾಣಕ್ಕೆ ರಾತ್ರಿ 10:30ಕ್ಕೆ ನಮ್ಮ ರೈಲು. ಪುರಿ ನಿಲ್ದಾಣಕ್ಕೆ ಕರೆದೊಯ್ಯಲು ನಮ್ಮ ಸುಖಾಸೀನ ಬಸ್ಸು ತಯಾರಾಗಿ ನಿಂತಿತ್ತು. ನಮ್ಮ ಎಲ್ಲಾ ಲಗೇಜ್ ಗಳ ಸಹಿತ ಅಲ್ಲಿಗೆ ತಲಪಿದಾಗ ರಾತ್ರಿ 8:30. ಬ್ಯಾಗ್ ಗಳ ರಾಶಿ ನಿಲ್ದಾಣದ ಅನತಿ ದೂರದಲ್ಲಿದ್ದರೂ, ನಿಲ್ದಾಣದೊಳಗಡೆ ಕೊಂಡುಹೋಗಲು ಕೂಲಿಯವನು ತಗಾದೆ ತೆಗೆದಾಗ, ನಮ್ಮ ನಮ್ಮ ಲಗೇಜ್ ಗಳನ್ನು ನಾವೇ, ಒಬ್ಬರಿಗೊಬ್ಬರು ಸಹಕರಿಸುತ್ತಾ   ನಿಲ್ದಾಣದೊಳಗೆ ಹೋದೆವು. ಆದರೆ ಅಲ್ಲಿ ಕಂಡದ್ದೇನು.. ನಿಲ್ದಾಣದ ಮಾಡುಗಳೆಲ್ಲ ಚಂಡಮಾರುತದ ಪ್ರಚಂಡ ಶಕ್ತಿಗೆ ಕಿತ್ತು ಹಾರಿ ಹೋಗಿ ಪೂರ್ತಿ ಹಾಳಾಗಿತ್ತು. ಇದನ್ನು ಕಂಡು ಮನಸ್ಸು ಮುದುಡಿತು. ನಿಲ್ದಾಣದಲ್ಲಿ ಜನರೇಟರ್ ಬಳಸಿ ತುರ್ತು ಬೆಳಕಿನ ವ್ಯವಸ್ಥೆ ಮಾಡಿದ್ದರು. ವಿಶ್ರಾಂತಿ ಕೊಠಡಿಗಳಲ್ಲಿ ಬೆಳಕಿಲ್ಲದ ಕಾರಣ  ಎಲ್ಲರೂ ಅವರವರ ಮೊಬೈಲ್  ಟಾರ್ಚ್ ಬೆಳಕನ್ನು ನೀಡಿ ಕೋಣೆಯನ್ನು ಬೆಳಗಿಸಿದೆವು. ಆ ಮಂದ ಬೆಳಕಿನಲ್ಲಿಯೇ,  ನಮ್ಮ ನಳಪಾಕ ತಜ್ಞರೊಡನೆ ಬಂದ ಟೊಮೆಟೊ ಬಾತ್, ಮೊಸರನ್ನ, ಪಕೋಡಗಳ ಸವಿಯೂಟ ಎಲ್ಲರ ಹೊಟ್ಟೆ ತಣಿಸಿತು. ಸರಿಯಾದ ಸಮಯಕ್ಕೆ ನಮ್ಮ ರೈಲು ಪ್ರಯಾಣ ಆರಂಭ…ತಂಪಾದ ಹವಾನಿಯಂತ್ರಿತ  ಬೋಗಿಯಲ್ಲಿ ಕೋಲ್ಕತ್ತಾದೆಡೆಗೆ.  ಶ್ರೀ ಜಗನ್ನಾಥ ದೇವರ ಮಹಿಮೆಯನ್ನು ನೆನೆಯುತ್ತಾ..ಸುಖನಿದ್ರೆ…

(ಮುಂದುವರಿಯುವುದು..)

ಹಿಂದಿನ ಪುಟ ಇಲ್ಲಿದೆ : ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು: ಪುಟ 11

-ಶಂಕರಿ ಶರ್ಮ, ಪುತ್ತೂರು.

5 Responses

 1. km vasundhara says:

  ಪ್ರತಿಬಿಂಬ ಸ್ನಾನ, ನವಕಳೇಬರ ಮಾಹಿತಿ ಅಚ್ಚರಿ ಎನಿಸಿತು… ನಿಮ್ಮೊಡನೆ ನಾನೂ ಪ್ರವಾಸ ಮಾಡುತ್ತಿರುವಂತೆ ಭಾಸವಾಗುವಂತೆ ಪ್ರತೀ ಮಾಹಿತಿಯನ್ನೂ ಹಂಚಿಕೊಳ್ಳುತ್ತೀರಿ… ಧನ್ಯವಾದಹಳು ಮೇಡಂ…

 2. ನಯನ ಬಜಕೂಡ್ಲು says:

  ಮೇಡಂ ಜಿ, ನಮ್ಮ ಮೇಲೂ ಆ ಜಗನ್ನಾಥನ ಕೃಪೆ ಇದೆ ಇಲ್ಲ ಅಂದ್ರೆ ನೋಡಲಾಗದಿದ್ರೂ ಓದುತ್ತಾ ಅವನ ಸನ್ನಿಧಿಯಲ್ಲಿ ಏನೆಲ್ಲಾ ಇದೆ ಅಂತ ನಾವು ಇಷ್ಟೊಂದು ಸವಿವರವಾಗಿ ತಿಳ್ಕೊಳ್ಲಿಕ್ಕೆ ಆಗ್ತಿತ್ತಾ?
  Beautiful

 3. ನಿಮ್ಮಕಥನ ಒಳ್ಳೆಯದಾಗಿ ಬರುತ್ತಿದೆ ಶಂಕರಿಶರ್ಮಾ.

 4. ಕನ್ನಡ ಪ್ರವಾಸ ಕಥನ ಸಾಹಿತ್ಯಕ್ಕೆ ಹೊಸ ಆಶಾಕಿರಣ ನಿಮ್ಮ ಬರಹವು ಮೇಡಂ

 5. Shankari Sharma says:

  ಲೇಖನವನ್ನು ಓದಿ, ಮೆಚ್ಚಿ ಪ್ರತಿಕ್ರಿಯಿಸಿದ ಪ್ರೀತಿಯ ಸುರಗಿ ಹೂಗಳಿಗೆ ಹೃತ್ಪೂರ್ವಕ ಕೃತಜ್ಞತೆಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: