ಮಗುವಿನ ನಗು!
ಮಕ್ಕಳು ತಮ್ಮ ನಗುವಿನ ಮೂಲಕ ಅಪರಿಚಿತರನ್ನು ಪರಿಚಿತರನ್ನಾಗಿ ಮಾಡಿ ಕೊಳ್ಳುತ್ತವೆ.ನಮ್ಮನ್ನೂ ಮಕ್ಕಳಾಗಿಸುತ್ತಾ ತಮ್ಮ ಎತ್ತರಕ್ಕೆ ನಮ್ಮನ್ನು ಕುಗ್ಗಿಸಿ ಬಿಡುತ್ತವೆ.
ಸದ್ಗುರು ಹೇಳುತ್ತಾರೆ “ಮಗುವಿನ ಬೆಳವಣಿಗೆಗೆ ಅತ್ಯಂತ ಪ್ರಮುಖ ಒಂದು ವಿಷಯವೆಂದರೆ ಪ್ರಕೃತಿ ಮತ್ತು ಪಂಚಭೂತಗಳ ಸಂಪರ್ಕ.ಆರೋಗ್ಯವಂತ ದೇಹವಿಲ್ಲದೆ ಆರೋಗ್ಯವಂತ ಮನಸ್ಸಿಲ್ಲ”.
ಒಂದು ತಿಂಗಳ ಹಿಂದೆ ಕುಕ್ಕರಹಳ್ಳಿಕೆರೆಯಲ್ಲಿ ಪಕ್ಷಿಗಣತಿ ಮಾಡುತ್ತಾ ಸಾಗುತ್ತಿದ್ದ ನಮ್ಮ ಮುಂದೆ ಒಂದು ಮಗು ತಾಯಿಯ ಜೊತೆ ಹೆಜ್ಜೆ ಹಾಕುತ್ತಾ ಎದುರಲ್ಲಿ ಬರುತಿತ್ತು, ಮೊದಲು ನಕ್ಕಿದ್ದು ನಾನಾ ಮಗುವಾ ಗೊತ್ತಿಲ್ಲ.ಅದರ ನಗು ತನ್ನ ಎತ್ತರಕ್ಕೆ ನನ್ನ ಕುಗ್ಗಿಸಿ ಫೋಟೋ ಕ್ಲಿಕಿಸುವಂತೆ ಮಾಡಿತು ಆ ನಿಷ್ಕಲ್ಮಶ ನಗು ನನ್ನನ್ನು ಇನ್ನಷ್ಟು ಕ್ಲಿಕಿಸುವಂತೆ ಮಾಡಿತು. 🙂
ನಗುವಿಗೆ ಭಾಷೆ,ದೇಶದ ಹಂಗಿಲ್ಲ.
ಟೀನಾ ಹೆಸರಿನ ಆ ಮಗು ತಂದೆ ತಾಯಿ ಜೊತೆ ಚೈನಾದೇಶದಿಂದ ಮೈಸೂರಿಗೆ ಅದು ಕುಕ್ಕರಹಳ್ಳಿ ಕೆರೆಗೆ ಬಂದಿತ್ತು. ನಡುವೆ ಮಾತಿಲ್ಲ ಕತೆ ಇಲ್ಲ ಬರೀ ರೋಮಾಂಚನ ಕೆರೆಯ ಸೌಂದರ್ಯದಂತೆ.
ನಮ್ಮ ಕುಟುಂಬ ಈಗ ಐದು ತಲೆಮಾರು ಕಂಡಿದೆ.ಮೊದಲ ತಲೆಮಾರಿನ ದಂಪತಿಗಳಿಗೆ ಮಕ್ಕಳಿರಲವ್ವಾ ಮನೆ ತುಂಬಾ ಎನಿಸಿ ಒಂಬತ್ತು ಪಡೆದು ಎಂಟು ಉಳಿಯಿತು. ವಂಶವೃಕ್ಷ ಕವಲು ಒಡೆಯುತ್ತಾ…ಅದು ಮುಂದುವರಿಯಿತು, ಜೊತೆಗೆ ಕೆಲವರಿಗೆ ಒಂದು ಎರಡು ಬೇಕು ಮೂರುನಾಲ್ಕು ಸಾಕು ಎನಿಸಿತು.ನಂತರದವರಿಗೆ ನಾವು ಇಬ್ಬರು ನಮಗಿಬ್ಬರೂ,…ಆರತಿಗೊಂದು ಕೀರುತಿಗೊಂದು?
ಆನಂತರದವರಿಗೆ ನಾವಿಬ್ಬರು ನಮಗೊಬ್ಬರು ಎಂದು ನಿಟ್ಟುಸಿರು ಬಿಡುವುದರೊಳಗೆ ನಾಲ್ಕು ಮತ್ತು ಐದನೇ ತಲೆಮಾರಿನ ಎರಡು ಕುಡಿಗಳು ಇನ್ನೂ ಮುಂದೆ ಸಾಗಿ ನಾವೇ ಮಕ್ಕಳು ನಮಗೇಕೆ ಮಕ್ಕಳು ಎಂಬ ನಿರ್ಧಾರಕ್ಕೆ ಬಂದಿದ್ದಾರೆ.
ಸ್ವಾತಂತ್ರ್ಯ ಪೂರ್ವದಲ್ಲಿ ಸರಾಸರಿ ಸಾವಿನ ಆಯಸ್ಸು ಇಪ್ಪತ್ತೆಂಟು ವರ್ಷವಂತೆ! ದೇಶ ವೈದ್ಯಕೀಯವಾಗಿ ಬೆಳೆದಂತೆ ಈಗ ಸರಾಸರಿ ದುಪ್ಪಟ್ಟು ಆಗಿರಬಹುದು.
1947ರಲ್ಲಿ ಅಂದಾಜು ಜನಸಂಖ್ಯೆ ಮೂವತ್ತಾರು ಕೋಟಿ ಇದ್ದದ್ದು ಈಗ ನೂರು ಮೂವತ್ತು ಕೋಟಿ ದಾಟಿದೆ.ಭೂಮಿ ಮಾತ್ರ ಒಂದಿಂಚು ಹೆಚ್ಚಿಲ್ಲ.
ಸಾವನ್ನು ನಿಯಂತ್ರಿಸಿಕೊಳ್ಳುವ ನಾವು ಹುಟ್ಟನ್ನು ನಿಯಂತ್ರಿಸಿ ಕೊಳ್ಳುವುದಿಲ್ಲ ಏಕೆ ಭೂಮಿ ‘ಬೆವರು’ತ್ತಿದೆ.
ಮೊನ್ನೆ ನಾಲ್ಕನೇ ತಲೆಮಾರಿನ ಕುಟುಂಬ ಒಂದಕ್ಕೆ ಹೊಸ ಹೆಣ್ಣು ಮಗು ಬಂತು ನಗುವಿನ ಮೂಲಕ ಅಪರಿಚಿತನಾದ ನನ್ನನ್ನು ಪರಿಚಯಿಸಿಕೊಂಡಿತು.
ಇನ್ನೂ ಮದುವೆ ಆಗಿಲ್ಲವಾ?ಆಗೋದಿಲ್ಲ(ವಾ?),ಇನ್ನೂ ಮಕ್ಕಳಾಗಿಲ್ಲವಾ?,ಮಕ್ಕಳು ಬೇಡ (ವಾ?) ನಾಲ್ಕು ಮತ್ತು ಐದನೇ ತಲೆಮಾರು ಈ ವೈರುಧ್ಯಗಳ ನಡುವೆ ಸಾಗಿದೆ.
ಮಕ್ಕಳ ದಿನಾಚರಣೆ ಶುಭಾಶಯಗಳು ಇರುವವರಿಗೂ, ಇಲ್ಲದವರಿಗೂ,ಬೇಕೆನ್ನುವವರಿಗೂ,ಬೇಡ ಎನ್ನುವವರಿಗೂ.
– ಶೈಲೇಶ್.ಎಸ್.
ಚೆನ್ನಾಗಿದೆ ಸರ್ ಬರಹ. ಪ್ರಸ್ತುತ ಪರಿಸ್ಥಿತಿಯನ್ನು ತೆರೆದಿಟ್ಟಿದ್ದೀರಿ . ಮದುವೆ , ಮಕ್ಕಳು, ಸಂಸಾರ ಎಲ್ಲವೂ ಅಧ:ಪತನದ ಹಾದಿಯಲ್ಲಿ ಸಾಗುತ್ತಿದೆ. ಮದುವೆಯಾದರೂ ಮಕ್ಕಳೇ ಬೇಡ ಅನ್ನುವ ಮನಸ್ಥಿತಿಯಲ್ಲಿದೆ ಈಗಿನ ಜನರೇಷನ್. Nice article
ಮಕ್ಕಳ ಮುಗ್ಧ ನಗು ಎಲ್ಲರನ್ನೂ ಸೆಳೆಯುತ್ತದೆ.
ಪುಟ್ಟ ಮಕ್ಕಳ ಮುಗ್ಧತೆಯಂತೆಯೇ ಇದೆ ಈ ಸುಂದರ ಲೇಖನ ಕೂಡಾ..
ಮಾನವನನ್ನು ಸಂಪತ್ತು ಎಂದು ಪರಿಗಣಿಸಲಾಗಿದೆ . ಜನಸಂಖ್ಯೆಯನ್ನು ದೇಶದ ಸಂಪತ್ತು ಎಂದು ಹೇಳುತ್ತಾರೆ. ಆದರೆ ಮಿತಿಮೀರದಂತೆ ತಡೆಯಬೇಕಾದುದು ಸಹ ದೇಶದ ಅವಶ್ಯಕತೆ ಆಗಿದೆ !. “ನಮಗೇಕೆ ಮಕ್ಕಳು !?.” ಈ ರೀತಿಯ ಚಿಂತನೆಯನ್ನು ಸ್ವಲ್ಪಮಟ್ಟಿಗೆ ತಿದ್ದಬೇಕಾದೀತು . ಕೊನೆ ಪಕ್ಷ ಅನಾಥ ಮಕ್ಕಳಿಗಾದರೂ ನಾಥರಾಗುವ ಶಕ್ತಿ ಇದ್ದರೆ ಅದನ್ನಾದರೂ ಸಾಧಿಸಬಹುದು ?