ಪರಾಗ

ಜೇನು ಹಲಸು

Share Button

ಗಾಢ ನಿದ್ದೆಯಿಂದ ಎಚ್ಛರಗೊಂಡ ಸುಮಿತ್ರ ಮಗಳನ್ನು ತಬ್ಬಿ ಮಲಗಲು ಅವಳ ಮೇಲೆ ಕೈ ಇಟ್ಟಳು. ಅಲ್ಲಿ ಮಗಳಿರಲಿಲ್ಲ. ಬಚ್ಚಲು ಮನೆಗೆ ಹೋಗಿರಬಹುದೆಂದು ಕಾದು ಕಾಣದೆ ಮೆಲ್ಲನೆ ಎದ್ದಳು. ಮನೆಯ ಒಳಗೂ ಹೊರಗೂ ಹುಡುಕಿದಳು. ಹೌದು ಆ ಜೇನು ಹಲಸಿನ ಕೆಳಗೆ ನಿಂತಿರುವುದು ಅವಳೆ ! ಜೊತೆಗೆ ನೌಫಲ್ ಇದ್ದಾನೆಂದು ಬೆಳಂದಿಗಳು ಸಾರಿ ಹೇಳಿತು. ಎಷ್ಟು ದಿನಗಳಿಂದ ನಡೆಯುತ್ತಿದೆ ಈ ಬೆಳದಿಂಗಳಾಟ ? ಏನೂ ತಿಳಿಯದಂತೆ ನಿಟ್ಟುಸಿರು ಬಿಟ್ಟು ಮತ್ತೆ ಬಂದು ಮಲಗಿ ಯೋಚಿಸಿದಳು.

ಇಪ್ಪತ್ತು ವರ್ಷಗಳ ಹಿಂದೆ ತಾನೂ ಕೃಷ್ಣನೂ ಬೆಳದಿಂಗಳ ರಾತ್ರಿಯಲಿ ಇದೇ ಜೇನು ಹಲಸಿನ ಕೆಳಗೆ, ಸಂಧಿಸುತ್ತಿದ್ದೆವು. ಅದೆಷ್ಟು ಸುಂದರ ರಾತ್ರಿಗಳನ್ನು ಕಳೆಯುತ್ತಾ ಬದುಕಿನ ಕನಸ್ಸು ಕಂಡಿದ್ದೆ ? ಪ್ರತಿಫಲವೇ ಅಮ್ಮು. ಹೊಟ್ಟೆಯಲ್ಲಿ ಭ್ರೂಣವಾದಾಗಲೇ ಕೃಷ್ಣ ಊರು ಬಿಟ್ಟ.

ಅಂದಿನಿಂದ ಇಪ್ಪತ್ತು ವರ್ಷಗಳು ಅಮ್ಮುವಿಗಾಗೆ ಬದುಕಿದ್ದೆ. ಅಪ್ಪ, ಅಮ್ಮ ಬಂಧುಗಳೆಲ್ಲಾ ನಾನೆ ಆಗಿದ್ದೆ. ಆದರೆ ಅಮ್ಮು ಈಗ ಅದೇ ಹಾದಿ ಹಿಡಿದಿದ್ದಾಳೆ. ದೀಪಾವಳಿ ಆಚರಿಸಲು ತಂದಿಟ್ಟ ಸಾಮಾನುಗಳೆಲ್ಲಾ ಅಣಕಿಸಿದಂತಾಯಿತು. ನಸುಕಿನಲ್ಲೇ ಎದ್ದು ಗೋಪಾಲನ ಬರ ಹೇಳಿ ಇಡೀ ಊರು ಹಂಚಿ ತಿನ್ನುತ್ತಿದ್ದ ಜೇನು ಹಲಸಿನ ಮರವನ್ನು ಕಡಿಸಿದಳು. ತಾನೂ ನೈಟಿಯನ್ನು ಸೊಂಟಕ್ಕೆ ಸಿಕ್ಕಿಸಿ ಒಂದು ಕೈಯಲ್ಲಿ ಮಂಡೆ ಕತ್ತಿ ಹಿಡಿದು ಮನಸ್ಸಿಗೆ ಬಂದಂತೆ ಕೊಂಬೆಗಳನ್ನು ಕಡಿದು ಕೊಚ್ಚಿದಳು. ಅಷ್ಟೂ ವರ್ಷಗಳ ಉಬ್ಬಸವನ್ನೂ ಕೊಂಬೆಗಳ ಸವರುತ್ತಾ ಹಲ್ಲು ಕಚ್ಚಿ ಕಕ್ಕಿದಳು. ಕಚ್ಚಿದರೆ ಬಾಯೊಳಗೆ ಜೇನು ಸುರಿಯುತ್ತಿದ್ದ ಜೇನು ಹಲಸು ಇನ್ನಿಲ್ಲವಾಯಿತು.

ಅಮ್ಮನ ಉಸಿರು ಅಮ್ಮುವಿನ ಜೀವವನ್ನು ಹೊಕ್ಕಿತು. ದೀಪಾವಳಿಯ ಸಡಗರವನ್ನು ಏನು ನಡೆದೇ ಇಲ್ಲವೆಂಬಂತೆ ಸವಿದರು. ಸಂಜೆ ಒಳ್ಳೆಯ ಜಾಗ ನೋಡಿ ಜೇನು ಹಲಸಿನ ಬೀಜ ಬಿತ್ತಿದಳು. ಹಣತೆಗಳನ್ನು ಹಚ್ಚಿಟ್ಟು ಅದರ ಬೆಳಕಿನಲ್ಲೆ ಅಮ್ಮನನ್ನು ನೋಡಿದಳು. ಅಮ್ಮನ ಹೆಗಲ ಬಳಸಿ ನಿನಗೆ ಬೇಡವಾದ ಹಲಸು ನನಗೂ ಬೇಡ… ಹೊಸ ಹಲಸುಗಳು ಹುಟ್ಟಿ ಬರಲಿ ಎಂದು ಕೆನ್ನೆಗೆ ಮುತ್ತಿಕ್ಕಿದಳು.

ಆ ದೀಪಾವಳಿಯ ರಾತ್ರಿ ಸುಮಿತ್ರ ಮಗಳನ್ನು ತಬ್ಬಿ ಮಲಗಿ ನಿದ್ರಾಲೋಕವನ್ನು ಹೊಕ್ಕಳು. ಅಲ್ಲಿ ಸುಂದರ ಕನಸ್ಸೊಂದ ಕಂಡಳು.

– ಸುನೀತಾ, ಕುಶಾಲನಗರ

8 Comments on “ಜೇನು ಹಲಸು

  1. ಚಿಕ್ಕದಾಗಿ ಚೊಕ್ಕದಾಗಿ ಅಮ್ಮ ಮಗಳ ಬಾಂಧವ್ಯವನ್ನು ಕಟ್ಟಿ ಕೊಟ್ಟಿರುವ ಸುನೀತ ಮೇಡಂ ರವರಿಗೆ ಧನ್ಯವಾದಗಳು.

  2. Nice story.
    ಎಲ್ಲಾ ಮಕ್ಕಳು ಹೀಗೆ ತಮ್ಮ ಅಮ್ಮನ ಮನಸ್ಸನ್ನು ಅರಿತು ಸಾಗುವಂತಿದ್ದರೆ ನೋವೇ ಇರುವುದಿಲ್ಲ

  3. ಹಾಲು ಜೇನು , ಮಧು ಚಂದ್ರ ,ಇವು ಪ್ರೇಮಿಗಳ ಹಾಗೂ ಪ್ರೇಮದ ಆರೋಗ್ಯಕ್ಕೆ ಒಳ್ಳೆಯದು.. ಇಲ್ಲಿ ಜೇನು ಹಲಸು ಕದ್ದು ಕೂಡುವ ಪ್ರೇಮದ ಸಂಕೇತ ಆಗಿದೆ ಹಾಗೂ ಮುಂದಿನ ನೋವಿಗೆ ಕಾರಣ ಆಗಿದೆ ಅದನ್ನು ಮನಸ್ಸಿಗೆ ಎಷ್ಟೇ ನೋವಾದರೂ ಲೆಕ್ಕಿಸದೆ ಕಡಿದದ್ದೇ ಸರಿ!. ಆದರೂ ಜೇನು ಹಲಸು ಒಂದು ಹಣ್ಣಾಗಿ ಅಥವಾ ಪ್ರೀತಿ ಪ್ರೇಮದ ಸಂಕೇತವಾಗಿಯಾದರೂ ಬೇಕಲ್ಲವೆ!? ಹಾಗೆ ಅದರ ಬೀಜವನ್ನು ನೆಡಲಾಗಿದೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *