ಕಥಾ ಹಂದರದ ಬಗ್ಗೆ ಒಂದಿಷ್ಟು
ಸಾಹಿತ್ಯ ಕ್ಷೇತ್ರ ಎಂದರದು ಅಗಾಧ ಆಲದಮರದಂತೆ. ಅದರಲ್ಲಿ ಕಥಾಕ್ಷೇತ್ರವೆಂಬುದು ಅದರ ಒಂದು ಕೊಂಬೆ ಎನ್ನಬಹುದು. ಈ ಕೊಂಬೆಯಲ್ಲೂ ಎಲೆ, ಮೊಗ್ಗು, ಚಿಗುರುಗಳಾದಿ ಅನೇಕ. ಇದೆಲ್ಲವೂ ಸಾಹಿತ್ಯ ಪ್ರಿಯರಿಗೆ ಸರಸ್ವತಿ ದೇವಿಯ ಕೊಡುಗೆ!.
ಕಥಾಕ್ಷೇತ್ರಃ- ಕಥೆಯಲ್ಲೂ ಹಲವಾರು ವೈವಿಧ್ಯಗಳು. ಪುರಾಣಕಥೆ, ಇತಿಹಾಸಕಥೆ, ಕಾದಂಬರಿ, ನೀಳ್ಗತೆ, ಸಣ್ಣಕಥೆ, ಹಾಸ್ಯಕಥೆ, ಮಿನಿಕಥೆ, ಕಿರುಗತೆ, ನ್ಯಾನೋಕಥೆ, ಹನಿಕಥೆ, ಈಗೀಗ ವಾಟ್ಸಪ್ ಕಥೆಗಳು ಮೊಬೈಲಿನಲ್ಲಿ ಹರಿದಾಡುತ್ತಾ ಇವೆ. ಕಥೆಯು ಕೇಳುವಂತಿದ್ದರೆ ಎಲ್ಲರಿಗೂ ಇಷ್ಟ. ಕಥೆಗೆ ಕಿವಿಗೊಡದವರಾರು ಅಲ್ಲವೇ?.
ಮಕ್ಕಳ ಕಥೆಃ- ಮಕ್ಕಳಿಗೆ ಬಾಲ್ಯದಲ್ಲಿಯೇ ಕಥೆ ಹೇಳಬೇಕು. ಒಳ್ಳೊಳ್ಳೆ ಕಥೆಗಳಿಂದ ಅವರ ಬುದ್ಧಿಯನ್ನು ಅರಳಿಸಬೇಕು. ಸಣ್ಣ ಒಂದು ವರ್ಷದ ಮಗುವೂ ಕಥೆಗೆ ಕಿವಿಗೊಡುತ್ತದೆ. ಅದಕ್ಕೆ ಸ್ಪಂಧಿಸುತ್ತದೆ. ತೀರಾ ಸಣ್ಣ ಮಗುವಿಗೆ ರಾಕ್ಷಸರ,ಭಯಂಕರ ಕಥೆಗಳನ್ನು ಹೇಳಬಾರದು.ಅಂಥಹ ಕಥೆಗೆ ಮಕ್ಕಳ ಮನದಲ್ಲಿ ಆ ಬಗ್ಗೆ ಹೆದರಿಕೆ ಹುದುಗಿಬಿಡುತ್ತದೆ. ಅದರ ಬದಲು ಉತ್ತಮ ಪುರಾಣಪುರುಷರ ಕಥೆಯು ಮಾನವತೆಯಿಂದ ಮಾಧವತೆಯೆಡೆಗೆ ಬಲಿಯಲು ಸಹಕಾರಿ. ಗುಣವಂತರಾದ ಮಕ್ಕಳು ತಯಾರಾಗಬೇಕೆಂದರೆ ಅದರಲ್ಲಿ ಹಿರಿಯರ ಪಾಲು ಅಧಿಕ. ಉದಾ:- ಶಿವಾಜಿಯನ್ನು ವೀರ, ಧೀರನನ್ನಾಗಿ ಮಾಡಿದ; ಆತನ ತಾಯಿ ಜೀಜಾಬಾಯಿಯನ್ನು ಇಲ್ಲಿ ಸ್ಮರಿಸಲೇಬೇಕು, ಮೃಗ-ಪಕ್ಷಿಗಳ ಕಥೆಗಳಿಂದ ಮಕ್ಕಳ ಮನಸ್ಸು ಅರಳುತ್ತದೆ.
ಸಣ್ಣಕಥೆಗಳ ಜನಕ ಮಾಸ್ತಿ ವೆಂಕಟೇಶ ಅಯ್ಯಂಗಾರ್.ಇವರು ಕನ್ನಡದ ಆಸ್ತಿಯೆಂದೇ ಜನಜನಿತವಾದವರು.ಅವರ ಕಾವ್ಯನಾಮ ಶ್ರೀನಿವಾಸ. ನಾಲ್ಕನೇ ಜ್ಞಾನಪೀಠ ಪ್ರಶಸ್ತಿ ವಿಜೇತರು. ಇವರ ತಂದೆ ಶ್ರೀನಿವಾಸ ಅಯ್ಯಂಗಾರ್ ಹಾಗೂ ತಾಯಿ ತಿರುಮಲಾಂಬ.
ಇನ್ನು ಸಣ್ಣಕತೆಯ ರೂಪು-ರೇಶೆ ಒಂದಿನಿತು ಹೇಳುವುದಾದರೆ,
1.ಬುದ್ಧಿಯ ಬೆಳಕು ಸಾಹಿತ್ಯ ಆಗಬೇಕೇ ಹೊರತು ಬುದ್ಧಿಯ ಕೊಳಕು ಆಗಬಾರದು.
2.ಕಥೆ ಪ್ರಾರಂಭಿಸುವ ವಾಕ್ಯ ಕುತೂಹಲ ಹುಟ್ಟಿಸುವಂತಿರಬೇಕು.
3.ಕಥಾವಸ್ತು ಸಾಮಾಜಿಕ ಘಟನೆಗೆ ಹತ್ತಿರವಾಗಿದ್ದರೆ ಉತ್ತಮ.
4.ಕಥೆಯ ಶಿರೋನಾಮೆಯು ಕಥೆಗೆ ಪೂರಕವಾಗಿರಬೇಕು. ಕೆಲವು ಕಥೆಗಳಲ್ಲಿ ಶಿರೋನಾಮೆಗೂ ಕಥೆಗೂ ಸಂಬಂಧವಿಲ್ಲದಂತೆ ಇರುವುದನ್ನು ಕಾಣುತ್ತೇವೆ.
5.ಒಂದಿನಿತು ಹಾಸ್ಯ ಪ್ರಸಂಗವೂ ಇದ್ದರೆ ಉತ್ತಮ.
6.ಕಥೆಯಲ್ಲಿ ಧ್ಯೇಯವಾಕ್ಯಗಳೋ ಮಹಾಪುರುಷರು ಬರೆದಿಟ್ಟಂತಹ ಸೂಕ್ತಿಗಳನ್ನೋ ಸಂದರ್ಭಕ್ಕೆ ತಕ್ಕಂತೆ ಪೋಣಿಸಿಕೊಂಡರೆ; ಆ ಕತೆಗೆ ತೂಕ ಹೆಚ್ಚು.
7.ಕಥೆ ಬರೆದ ಉದ್ದೇಶ ನೀತಿಯುಕ್ತವಾಗಿ ಸಮಾಜ ತಿದ್ದುವಂತಹ ವಿಚಾರಗಳು ಆ ಕಥೆಗೆ ಸಾರ್ಥಕತೆಯನ್ನು ತರುತ್ತವೆ.
8.ಕಥೆಯ ಪ್ರಾರಂಭದಂತೆ ಮುಕ್ತಾಯ ಘಟ್ಟವೂ ಓದುಗರನ್ನು ಹಿಡಿದಿಡುವಂತಿರಬೇಕು. ಈ ಕಥೆ ಇನ್ನೂ ಬೇಕಿತ್ತು ಅನಿಸಬೇಕು.
9. ಒಟ್ಟಿನಲ್ಲಿ ಕಥೆಯು ಓದುಗರ ಮನಸ್ಸನ್ನು ಅರಳಿಸುವಂತಿರಬೇಕು, ಕೆರಳಿಸುವಂತಿರಬಾರದು.
-ವಿಜಯಾಸುಬ್ರಹ್ಮಣ್ಯ,ಕುಂಬಳೆ.
Well said madam ji.
ಕಾಲ ಹೇಗೆ ಬದಲಾಗಿದೆ ಅಂದ್ರೆ ಕಥೆ ಕೇಳುವ ಪುಟ್ಟ ಕಿವಿಗಳಿದ್ರೂ ಹೇಳುವ ವ್ಯವಧಾನ ಹೆತ್ತವರಿಗಿಲ್ಲ . ಅಷ್ಟೊಂದು ಬಿಝಿ ಆಗಿ ಬಿಟ್ಟಿದ್ದೇವೆ ನಾವೆಲ್ಲ. ಮೊಬೈಲ್ ಅನ್ನೋ ಪುಟ್ಟ ಮಾಂತ್ರಿಕ ಪೆಟ್ಟಿಗೆ ಬಂದ ಮೇಲಂತೂ ಯಾವುದಕ್ಕೂ ಸಮಯವಿಲ್ಲ , ಕಥೆಗಳೆಲ್ಲ ಇತಿಹಾಸ ಸೇರಿ ಬಿಟ್ಟಿವೆ. ಅಜ್ಜ ಅಜ್ಜಿ, ಅವರ ನಂಟು, ಬಾಂಧವ್ಯದ ಕುರಿತಾಗಿ ಈಗಿನ ಮಕ್ಕಳಿಗೆ ಏನೂ ಗೊತ್ತಿಲ್ಲ ಕೆಲವು ಕಡೆ .
ನಯನಾ ನೀವು ಹೇಳುವುದು ಸರಿಯಾಗಿಯೇ ಇದೆ. ಈ ಕುರಿತಾಗಿ ವಯಸ್ಕರಿಗೆ ಆ ಬಗ್ಗೆ ತರಗತಿ ತೆರೆಯಬೇಕಾದ ಅನಿವಾರ್ಯತೆ ಇದೆ ಅನಿಸುತ್ತೆ.
ಏನಿದ್ದರೂ ಮಕ್ಕಳು ಹುಶಾರಾಗ ಬೇಕಾದ್ರೆ ಶಿಕ್ಷಕರಂತೆ ಪಾಲಕರು ಎಚ್ಚೆತ್ತುಕೊಳ್ಳಬೇಕು.
ಹೌದು..ಕಥೆ ಪುಸ್ತಕ ಅಂದ್ರೆ ನಾವೆಲ್ಲಾ ಜೀವ ಬಿಡ್ತಿದ್ದೆವು. ಚಂದಮಾಮ, ಬಾಲಮಿತ್ರ..ಆಹಾ..ಎಷ್ಟು ಸುಂದರ. ನಮ್ಮ ಮಕ್ಕಳಿಗೆ, ಅನುಪಮಾ ನಿರಂಜನರ ದಿನಕ್ಕೊಂದು ಕಥೆಯ ಪುಸ್ತಕದ ಕಥೆಗಳು ನನ್ನ
ಖಜಾನೆಯಾಗಿತ್ತು. ಬಾಲಮಂಗಳದ ಡಿಂಗ ನಮ್ಮ ಮಕ್ಕಳ ಹೀರೋ!..ಈಗ ಬರೇ ನೆನಪುಗಳು ಮಾತ್ರ.. ಈ ಮೊಬೈಲಿನ ಭರಾಟೆಯಿಂದ.
ಒಳ್ಳೆಯ ಲೇಖನ ವಿಜಯಕ್ಕ.