ಲಹರಿ

ಕಾಲ ಬದಲಾಗಿಹುದು ನಿಜ

Share Button

 


ಮಗಳಿಗೆ ಕಥೆ ಹೇಳುತ್ತಿದ್ದೆ. ಮಹಾಭಾರತದಲ್ಲಿ ಅರ್ಜುನನು ದ್ರೌಪದಿಯನ್ನು ಗೆದ್ದು ಕರೆತಂದಿದ್ದನ್ನು ತಾಯಿ ಕುಂತಿಗೆ ಕೂಗಿ ಹೇಳಿದಾಗ, ಹಣ್ಣು ಎಂದು ತಿಳಿದ ಕುಂತಿ ಒಳಗಿನಿಂದಲೇ, ತಂದಿದ್ದನ್ನು ನೀವು ಐದೂ ಜನ ಸಮಾನಾಗಿ ಹಂಚಿಕೊಳ್ಳಿ ಎಂದಳು. ಹಾಗಾಗಿ ದ್ರೌಪದಿ ಐದೂ ಜನರನ್ನು ಮದುವೆಯಾಗಬೇಕಾಯಿತು ಎಂದೆ. ನನ್ನ ಮಗಳು ಏನೋ ಗಾಢ ಆಲೋಚನೆಯಲ್ಲಿದ್ದಂತೆ ಕಂಡು ಬಂತು. ಅದ್ಯಾವ ಪ್ರಶ್ನೆ ನನ್ನ ಚಿನಕುರಳಿಯಿಂದ ತೂರಿಬರುತ್ತದೆಯೋ ಎಂದು ಕಾಯುತ್ತಿದ್ದೆ. ‘ಅಮ್ಮಾ, ಕುಂತಿ ಅಕಸ್ಮಾತ್, ತಂದ ಹಣ್ಣನ್ನು ಐದೂ ಜನ ಸಮಾನಾಗಿ ಕತ್ತರಿಸಿ ಹಂಚಿಕೊಳ್ಳಿ ಎಂದಿದ್ದರೆ’ ಎನ್ನುತ್ತಿದ್ದಂತೆ ನನ್ನ ಬಾಯಿ ಬೀಗ ಬಡಿದುಕೊಂಡಿತು.
ಈಗಿನ ಮಕ್ಕಳನ್ನು ಅಷ್ಟು ಸುಲಭವಾಗಿ ಯಾಮಾರಿಸಲು ಸಾಧ್ಯವಿಲ್ಲ ಬಿಡಿ. ಪ್ರಶ್ನೆಗೊಂದು ಪ್ರಶ್ನೆ, ಉತ್ತರಕ್ಕೆ ಮತ್ತೊಂದು ಪ್ರಶ್ನೆ ರೆಡಿಯಾಗಿಟ್ಟುಕೊಂಡಿರುತ್ತವೆ. ಶಿಕ್ಷಕರನ್ನು ಕಂಡರೇನೇ ಕಾಲುಗಳೆಲ್ಲಾ ಥರಥರ ನಡುಗುತ್ತಿದ್ದ ನಮ್ಮ ಕಾಲವೆಲ್ಲಿ? ಶಿಕ್ಷಕರ ಜೊತೆಗೆ ಸಲೀಸಾಗಿ ಸ್ನೇಹಿತರಂತೆ ಬೆರೆತು ಅನಿಸಿದ್ದನ್ನು ನೇರವಾಗಿ ಹೇಳುವ, ಗೊತ್ತಿಲ್ಲದ್ದನ್ನು ಕೇಳಿ ತಿಳಿದುಕೊಳ್ಳುವ ಇಂದಿನ ಪೀಳಿಗೆಯೆಲ್ಲಿ? ಇವರನ್ನು ನೋಡುತ್ತಿದ್ದರೆ ನಾವೆಲ್ಲಾ ಬಹಳ ದಡ್ಡರು, ಹೆಡ್ಡರೇನೋ ಎನಿಸುತ್ತದೆ.

ಚಿಕ್ಕವರಿದ್ದಾಗ ಒಮ್ಮೊಮ್ಮೆ ಯಾವುದಾದರೂ ಹಣ್ಣಿನ ಬೀಜವನ್ನು ಗೊತ್ತಾಗದೇ ನುಂಗಿಬಿಟ್ಟರೆ ಮುಗಿಯಿತು ನಮ್ಮ ಕಥೆ. ಅಣ್ಣಂದಿರೆಲ್ಲಾ ನಾಳೆ ನಿನ್ನ ತಲೆಯ ಮೇಲೆ ಗಿಡ ಹುಟ್ಟುತ್ತದೆ ಎಂದು ಹೆದರಿಸಿಬಿಡುತ್ತಿದ್ದರು. ಅಂದು ರಾತ್ರಿಯೆಲ್ಲಾ ತಲೆಯನ್ನು ಮುಟ್ಟಿ ನೋಡಿದ್ದೇ ನೋಡಿದ್ದು, ಅದೇ ಗುಂಗಿನಲ್ಲಿ ಮಲಗಿ ಮರುದಿನ ಎದ್ದ ತಕ್ಷಣ ಮೊದಲು ಕನ್ನಡಿಯ ಮುಂದೆ ನಿಂತು ತಲೆಯನ್ನು ಪರೀಕ್ಷೆ ಮಾಡಿ, ಅಬ್ಬಾ! ಸಧ್ಯ ಬೆಳೆದಿಲ್ಲ ಎಂದು ಸಮಾಧಾನ ಮಾಡಿಕೊಳ್ಳುತ್ತಿದ್ದೆ. ಅಷ್ಟರಲ್ಲಿ ನೀನು ಮಲಗಿದಾಗ ನಾವೇ ಕಿತ್ತುಹಾಕಿದ್ದು ಎಂದು ಅಣ್ಣಂದಿರು ಪೋಸು ಕೊಟ್ಟಾಗ ಎಷ್ಟೋ ವರ್ಷಗಳ ಕಾಲ ಅದು ನಿಜವೆಂದೇ ನಂಬಿದ್ದೆ. ಎಷ್ಟೋ ಸಲ ಬಿದ್ದು ಏಟು ಮಾಡಿಕೊಂಡು, ಜೋರಾಗಿ ಅಳಲು ಶುರುಮಾಡುತ್ತಿದ್ದಂತೆ ಅಜ್ಜಿ ನನಗಿಂತಾ ಜೋರಾಗಿ ‘ಅಯ್ಯಯ್ಯೋ, ಎಷ್ಟು ಜೋರಾಗಿ ಬಿದ್ದಿದ್ದೀಯಾ, ನೆಲ ಒಡೆದು ಸಿಳುಕಿ ಹೋಯಿತು, ಇನ್ನು ಅಜ್ಜ ಬಂದು ಬಯ್ಯುತ್ತಾರೆ ತಡೀ’ ಎನ್ನುತ್ತಿದ್ದಂತೆ ನೆಲದಲ್ಲಿ ಇಲ್ಲದ ಸಿಳುಕನ್ನು ಹುಡುಕುತ್ತಾ ಅಳು ಗಾಯಬ್ ಆಗುತ್ತಿತ್ತು.

ಕತ್ತಲಲ್ಲಿ ಇಲ್ಲದ ಗುಮ್ಮನಿಗೆ ಹೆದರಿ ಸಾಯುತ್ತಿದ್ದೆವು. ಗೂರ್ಖಾನ ಹೆಸರು ಹೇಳಿ, ಊಟ ಮಾಡದಿದ್ದರೆ ಬೇಗನೆ ಮಲಗದಿದ್ದರೆ ಗೂರ್ಖಾ ಹಿಡಿದುಕೊಂಡು ಹೋಗುತ್ತಾನೆ ಎನ್ನುತ್ತಿದ್ದಂತೆ ಗಪ್‌ಚಿಪ್. ಆಗಾಗ ಅವನ ಲಾಟಿ, ಗೇಟಿಗೆ ಬಡಿಯುವ ಶಬ್ದ ಕೇಳಿ ಎದೆ ಢವಢವ ಹೊಡೆದುಕೊಳ್ಳುತ್ತಿತ್ತು. ತಂದ ಹೂವನ್ನೆಲ್ಲಾ ನನ್ನೊಬ್ಬಳ ತಲೆಗೇ ಮುಡಿಸಬೇಕು ಎಂದು ಹಠ ಮಾಡಿದಾಗ, ಅತ್ತೆ ಮುಡಿಸಿದಂತೆ ಮಾಡಿ ಕನ್ನಡಿಯಲ್ಲಿ ತೋರಿಸಿ ನಂತರ ಅದನ್ನು ಸರಿ ಮಾಡುವ ನೆಪದಲ್ಲಿ ಕತ್ತರಿಸಿ ಬಚ್ಚಿಟ್ಟುಕೊಳ್ಳುತ್ತಿದುದು ಗೊತ್ತೇ ಆಗುತ್ತಿರಲಿಲ್ಲ.

( PC: ಸಾಂದರ್ಭಿಕ ಚಿತ್ರ, ಅಂತರ್ಜಾಲ)

ಸೋದರತ್ತೆಯರ ಲಂಗವನ್ನು ಹಾಕಿಕೊಂಡು ನೆಲ ಬಳಿದು ಓಡಾಡುತ್ತಿದ್ದೆವು. ಬಟ್ಟೆಯ ಗೊಂಬೆಯನ್ನು ಮಾಡಿ ಅದಕ್ಕೆ ಸೀರೆ ಉಡಿಸಿ ಜೋಲಿಗೆ ಹಾಕಿ ಲಾಲಿ ಹಾಡುತ್ತಿದ್ದೆವು. ಒಮ್ಮೊಮ್ಮೆ ಐಟೆಕ್ಸ್ ಕುಂಕುಮದ ಟ್ಯೂಬನ್ನು ದಿಂಬಿಗೆ ಕಣ್ಣು, ಮೂಗು, ಬಾಯಿ ಬಳಿದು ಬಡಿಸಿಕೊಂಡಿದ್ದೂ ಉಂಟು. ಜಗಳವಾಡಿದಾಗ ಅಣ್ಣನಿಗೆ ಹೊಡೆಯುವ ತನಕ ಬಿಡುತ್ತಿರಲಿಲ್ಲ, ಅವನ ಬೆನ್ನ ಮೇಲೆ ಅಮ್ಮ ತನ್ನ ಎಡಗೈಯನ್ನು ಇಟ್ಟು ತನ್ನ ಕೈಗೇ ಜೋರಾಗಿ ಹೊಡೆದುಕೊಂಡಾಗ ಅಣ್ಣ ಇನ್ನೂ ಜೋರಾಗಿ ನಗುತ್ತಿದ್ದ, ಅಳೋ ಎಂದು ಅಮ್ಮ ಗದರಿದಾಗ ಅತ್ತಂತೆ ನಾಟಕವಾಡುತ್ತಿದ್ದ. ಆಗ ಖುಷಿಯಿಂದ ಚಪ್ಪಾಳೆ ತಟ್ಟುತ್ತಿದ್ದೆ. ಹೇಳಿದ ಮಾತು ಕೇಳದಿದ್ದರೆ ತಡೀ, ನಿಮ್ಮ ಶಾಲೆಗೆ ಬಂದು ನಿಮ್ಮ ಟೀಚರ್‌ಗೆ ಹೇಳುತ್ತೇನೆ ಎಂದು ಹೆದರಿಸಿದ ತಕ್ಷಣ ಅಮ್ಮನ ಕೆಲಸ ಸರಾಗ. ಪಾಸಾಗಲು ನವಿಲು ಗರಿ ಪುಸ್ತಕದಲ್ಲಿ ಇಡುತ್ತಿದ್ದುದು, ಹೂವಿನ ಪೊಕಳೆಗಳನ್ನು ಪಾಸು, ಫೇಲು ಎಂದು ಕೊನೆ ಪಕಳೆ ಬರುವ ತನಕ ಕಿತ್ತು ಹಾಕಿದ್ದು, ಕಪ್ಪು ಇರುವೆ ಕೈಮೇಲೇರಿದರೆ ಪಾಸು, ಕೆಳಗಿಳಿದರೆ ಫೇಲು ಎಂದು ಅದರ ಚಲನೆಯನ್ನು ಆತಂಕದಿಂದ ಗಮನಿಸುತ್ತಾ ಕೂಡುತ್ತಿದ್ದುದು ನಗು ತರಿಸುತ್ತದೆ. ಪುಸ್ತಕ ತುಳಿದರೆ ಅಥವಾ ಎಂಜಲು ಹಚ್ಚಿ ಪುಟ ತಿರುವಿದರೆ ಸರಸ್ವತಿಗೆ ಸಿಟ್ಟು ಬರುತ್ತದೆ, ಸುಳ್ಳು ಹೇಳಿದರೆ ನಾಲಿಗೆಯಲ್ಲಿ ಹುಳ ಬೀಳುತ್ತದೆ ಎಂದು ಅಂಥಹ ಸಾಹಸಕ್ಕೆ ಕೈಹಾಕುತ್ತಿರಲಿಲ್ಲ. ಸಿನೆಮಾದಲ್ಲಿ ಹೀರೋ ಫೈಟಿಂಗ್ ಮಾಡುವಾಗ ಭಕ್ತಿಯಿಂದ ಕಣ್ಮುಚ್ಚಿ ದೇವರನ್ನು ನೆನೆಸುತ್ತಾ ಹೀರೋ ಫೈಟಿಂಗ್‌ನಲ್ಲಿ ಗೆದ್ದರೆ ನಿನಗೆ ಐದು ಪೈಸೆ ಹಾಕುತ್ತೇನೆ ಎಂದು ಬೇಡಿಕೊಳ್ಳುತ್ತಿದ್ದೆ. ಮದರ್ ಪ್ರಾಮಿಸ್ ಅಥವಾ ತಾಯಾಣೆ ಹಾಕಿದರೆ ಕೊಟ್ಟ ಮಾತು ಎಂದಿಗೂ ತಪ್ಪುತ್ತಿರಲಿಲ್ಲ, ಅಕಸ್ಮಾತ್ ತಪ್ಪಿಬಿಟ್ಟರೆ ಅಂದೆಲ್ಲಾ ಘಳಿಗೆಗೊಮ್ಮೆ ಅಮ್ಮನ ಬಳಿ ಹೋಗಿ ಅಮ್ಮನಿಗೆ ಏನಾಗಿಬಿಟ್ಟಿದೆಯೋ ಎಂದು ಗಾಬರಿಯಿಂದ ಪರೀಕ್ಷಿಸುವುದೇ ಕೆಲಸ. ಎರಡು ಮೂರು ದಿನ ಆತಂಕದಿಂದ ಹೊರಬರುತ್ತಿರಲಿಲ್ಲ.

ಈಗಿನ ಬಹಳಷ್ಟು ಮಕ್ಕಳು ಸಹಜವಾಗಿಯೇ ಅಪ್ಪಟ ವಾಸ್ತವತಾವಾದಿಗಳು. ಪರೀಕ್ಷಿಸದೆ ಏನನ್ನೂ ನಂಬರು. ಕಾಗಕ್ಕ, ಗುಬ್ಬಕ್ಕ, ಚಂದಮಾಮನ ಕಥೆಗೆ ಮಾರುಹೋಗುವವರಲ್ಲ. ಕೈಕಾಲಿಗೆ ಕೆಲಸ ಕೊಡದ ಮೊಬೈಲಿನಲ್ಲೇ ಆಟ ಎಲ್ಲಾ. ಬೇಕೆಂದಿದ್ದು ಬೇಕೇಬೇಕು. ಸಾವಿರಾರು ರೂಪಾಯಿ ತೆತ್ತು ಖರೀದಿಸಿದ ಬಾರ್ಬಿ, ಜೆಸಿಬಿ ಗೊಂಬೆಗಳು ಕೆಲ ದಿನಗಳ ಆಸಕ್ತಿ ಅಷ್ಟೇ, ಬಂದ ವೇಗದಲ್ಲೇ ಮತ್ತೆ ಮೂಲೆಗುಂಪು. ಮತ್ತೆ ಹೊಸದಕ್ಕೆ ತುಡಿತ. ಕಾಲ ನಿಜಕ್ಕೂ ತುಂಬಾ ಬದಲಾಗಿದೆ.

-ನಳಿನಿ. ಟಿ. ಭೀಮಪ್ಪ. ಧಾರವಾಡ

4 Comments on “ಕಾಲ ಬದಲಾಗಿಹುದು ನಿಜ

  1. ಮೇಡಂ, ಬಹಳ ಸೊಗಸಾಗೈತ್ರಿ ನಿಮ್ ಬರಹ .
    ಆಗಿನ ಕಾಲದಲ್ಲಿ ಮಕ್ಕಳು ಪೆದ್ದುಗಳನ್ನಿಸಿದ್ರು ಕೂಡ ಸಾಮಾನ್ಯ ಜ್ಞಾನ, ಜೀವನ ಹೇಗ್ ಮಾಡ್ಬೇಕು ಅನ್ನೋ ವಿಚಾರದಾಗ ಬುದ್ದಿವಂತರಿದ್ರು ನೋಡ್ರಿ . ಆದ್ರೆ ಈಗಿನ್ ಕಾಲದ ಬುದ್ದಿವಂತ ಹೈಕ್ಳು ಒಂದು ತರಾ ಪೆದ್ದುಗಳು . ಕಂಪ್ಯೂಟರ್ ತರ, ಸಿಸ್ಟಮ್ ಹೆಂಗ್ ಸೆಟ್ ಮಾಡಿರ್ತೀವೋ ಅಷ್ಟೇ ಕೆಲ್ಸ ಮಾಡ್ತಾವೆ , ಅದು ಬಿಟ್ಟು ಬೇರೇನೂ ಬರಾಂಗಿಲ್ಲ ಪೆದ್ ಮುಂಡೆವುಗಳು .

  2. ಹೌದು..ಈಗಿನ ಮಕ್ಕಳಲ್ಲಿ ಸಹಜ ಮುಗ್ಧತೆ ಮರೆಯಾಗುತ್ತಿದೆ. ಚೆಂದದ ಬರಹ

  3. ಲೇಖನ ಓದಿ ಬಾಲ್ಯದ ನೆನಪಾಯಿತು…ನೀವು ಹೇಳಿದ್ದು ಸರಿ ಮೇಡಮ್…ಈಗಿನ ಮಕ್ಕಳು ನಮ್ಮಂತಿಲ್ಲ..

  4. ಸೊಗಸಾದ ಲೇಖನ.‌..ನಮ್ಮನ್ನು ಬಾಲ್ಯಕ್ಕೆ ಕೊಂಡು ಹೋಯ್ತಲ್ಲಾ!

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *