ಅಹಾಹಾ….ಚಹಾ ಕಹಾನಿ

Share Button

ನಿಸರ್ಗದಲ್ಲಿ ದೊರೆಯುವ ವಸ್ತುಗಳನ್ನು ಬಳಸಿ, ಅತ್ಯಂತ ಕಡಿಮೆ ಪರಿಷ್ಕರಣೆಗೊಳಪಡಿಸಿ, ತಯಾರಿಸಿದ ಆಹಾರವನ್ನಾಗಲೀ, ಪೇಯವನ್ನಾಗಲೀ ತಾಜಾ ಆಗಿ ಸೇವಿಸುವುದು ಒಳ್ಳೆಯ ಆಹಾರಾಭ್ಯಾಸ ಹಾಗೂ ಇದು ಉತ್ತಮ ಆರೋಗ್ಯಕ್ಕೆ ಪೂರಕ. ಅಕ್ಟೋಬರ್ 16 ರಂದು ‘ವಿಶ್ವ ಆರೋಗ್ಯ ದಿನ’ . ಈ ನಿಟ್ಟಿನಲ್ಲಿ ಕೆಲವು ಆರೋಗ್ಯಕರವಾದ ‘ಚಹಾ’ಗಳ ವೈಶಿಷ್ಟ್ಯಗಳು ಹಾಗೂ ಅವುಗಳ ತಯಾರಿಕಾ ವಿಧಾನಗಳು ಇಲ್ಲಿವೆ:

1. ಲೆಮನ್ ಗ್ರಾಸ್ ಚಹಾ

ವಿಶೇಷತೆ: ಖಾಲಿ ನಿವೇಶನಗಳಲ್ಲಿ ಹಾಗೂ ಬೆಟ್ಟಗಳಲ್ಲಿ  ನಿಂಬೆಯ ಪರಿಮಳವನ್ನು ಹೊಂದಿರುವ ‘ಲೆಮನ್ ಗ್ರಾಸ್’  ಎಂಬ ಹುಲ್ಲಿನ ವರ್ಗಕ್ಕೆ ಸೇರಿದ ಸಸ್ಯ ಕಾಣಸಿಗುತ್ತದೆ. ಇದನ್ನು ಕುಂಡದಲ್ಲಿಯೂ ಬೆಳೆಸಬಹುದು. ಈ ಹುಲ್ಲು ಮೊನಚಾಗಿರುವುದರಿಂದ, ಗಿಡದಿಂದ ಕೀಳುವಾಗ, ಚಾಕು/ಕತ್ತರಿಯನ್ನು ಬಳಸಿ ಜಾಗರೂಕತೆಯಿಂದ ಕತ್ತರಿಸಬೇಕು. ನಿಂಬೆಯ ಪರಿಮಳವುಳ್ಳ ಆದರೆ ಹುಳಿ ಇಲ್ಲದ ಈ ಚಹಾವು ಕುಡಿಯಲು ಹಿತವಾಗಿರುತ್ತದೆ. ಇದು ಗ್ಯಾಸ್ಟ್ರಿಕ್ ಸಮಸ್ಯೆಗೆ ಹಾಗೂ ಶರೀರದಲ್ಲಿರುವ ಕೆಟ್ಟ ಕೊಲೆಸ್ಟರಾಲ್  ಅನ್ನು ಕಡಿಮೆಹೊಳಿಸಲು ಸಹಕಾರಿ.

ಬೇಕಾಗುವ ಸಾಮಗ್ರಿಗಳು:

  1. ಕತ್ತರಿಸಿದ ಲೆಮನ್ ಗ್ರಾಸ್ : 2 ದಂಟು
  2. ನೀರು      :    2  ಕಪ್
  3. ಸಕ್ಕರೆ ಅಥವಾ ಬೆಲ್ಲದ ಪುಡಿ : ಒಂದು ಟೀ ಚಮಚ
  4. ಚಹಾಪುಡಿ(ಬೇಕಿದ್ದರೆ)      :   ಕಾಲು ಚಮಚ

ತಯಾರಿಸುವ ವಿಧಾನ:  ಮೊದಲು ಲೆಮನ್ ಗ್ರಾಸ್ ಗೆ ನೀರು ಹಾಕಿ ಚೆನ್ನಾಗಿ ಕುದಿಸಿ.  ಅಮೇಲೆ ಬೇಕಿದ್ದರೆ ಚಹಾಪುಡಿ, ಸಕ್ಕರೆ ಅಥವಾ ಬೆಲ್ಲದ ಪುಡಿ ಬೆಲ್ಲ ಸೇರಿಸಿ ಪುನ: ಕುದಿಸಿ, ಸೋಸಿ, ಕುಡಿಯಿರಿ.
2. ತುಳಸಿ ಚಹಾ

ವಿಶೇಷತೆ: ಸಾಮಾನ್ಯವಾಗಿ ಹೆಚ್ಚಿನ ಋತುಗಳಲ್ಲಿಯೂ ಸುಲಭವಾಗಿ ಲಭ್ಯವಿರುವ  ತುಳಸಿಯು ಆಯುರ್ವೇದ ಔಷಧಿ ತಯಾರಿಕೆಗೂ ಬಳಕೆಯಾಗುತ್ತದೆ. ತುಳಸಿ ಚಹಾದ ಸೇವನೆಯು ಶೀತ, ಕೆಮ್ಮು ಮೊದಲಾದ ಬಾಧೆಗಳನ್ನು ಶಮನಗೊಳಿಸುತ್ತದೆ.

ಬೇಕಾಗುವ ಸಾಮಗ್ರಿಗಳು:

  1. ಸ್ವಚ್ಚಗೊಳಿಸಿದ ತುಳಸಿ ಎಲೆಗಳು: 20
  2. ನೀರು :    2  ಕಪ್
  3. ಬೆಲ್ಲ/ ಜೇನುತುಪ್ಪ :  ಒಂದು ಟೀ ಚಮಚ
  4. ಚಹಾಪುಡಿ(ಬೇಕಿದ್ದರೆ) :   ಚಿಟಿಕೆಯಷ್ಟು

ತಯಾರಿಸುವ ವಿಧಾನ:  ತುಳಸಿ ಎಲೆಗಳನ್ನು  ಪಾತ್ರೆಯಲ್ಲಿ ತೆಗೆದುಕೊಂಡು ನೀರು ಹಾಕಿ ಚೆನ್ನಾಗಿ ಕುದಿಸಿ.  ತುಳಸಿಗೆ ಸ್ವಲ್ಪ ಒಗರು ರುಚಿ ಇರುವುದರಿಂದ, ರುಚಿ,ಬಣ್ಣ ಹೆಚ್ಚಿಸಬೇಕೆಂದಿದ್ದರೆ ಮಾತ್ರ ಚಹಾಪುಡಿ  ಸೇರಿಸಿ. ಈ ಮಿಶ್ರಣವನ್ನು ಕುದಿಸಿ, ಸೋಸಿ. ಆಯ್ಕೆಗೆ ತಕ್ಕಂತೆ ಬೇಕಿದ್ದರೆ ಬೆಲ್ಲ ಅಥವಾ ಜೇನುತುಪ್ಪ ಸೇರಿಸಿ ಕುಡಿಯಬಹುದು.


3. ದಾಸವಾಳ ಹೂವಿನ ಚಹಾ

ವಿಶೇಷತೆ:
  ದಾಸವಾಳ ಹೂವಿನ ಚಹಾದ ಸೇವನೆಯಿಂದ ಮನಸ್ಸು ಉಲ್ಲಸಿತವಾಗುತ್ತದೆ ಹಾಗೂ ರಕ್ತದೊತ್ತಡ ಕಡಿಮೆಯಾಗುತ್ತದೆ. ಇದು ಪಿತ್ತಜನಕಾಂಗದ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ.

ಬೇಕಾಗುವ ಸಾಮಗ್ರಿಗಳು:

  1. ಕೆಂಪು ದಾಸವಾಳದ ಹೂವು : 4
  2. ನೀರು      : 2  ಕಪ್
  3. ಸಕ್ಕರೆ :  2  ಟೀ ಚಮಚ
  4. ನಿಂಬೆಹಣ್ಣು (ಚಿಕ್ಕದು) :   1

ತಯಾರಿಸುವ ವಿಧಾನ:  ಪಾತ್ರೆಯಲ್ಲಿ ನೀರನ್ನು ಕುದಿಸಿ. ದಾಸವಾಳದ ಹೂಗಳನ್ನು ತೊಳೆದು  ಹೂವಿನ ಪಕಳೆಗಳನ್ನು ಬೇರ್ಪಡಿಸಿ  ಕುದಿಯುವ ನೀರಿಗೆ ಹಾಕಿ. ಹೂವಿನ ಬಣ್ಣ ನೀರಿಗೆ ಬಂದಾಗ ಸೋಸಿ. ಈ ಚಹಾಕ್ಕೆ ಯಾವುದೇ ವಿಶಿಷ್ಟವಾದ  ಸ್ವಾದ ಇಲ್ಲದಿರುವುದರಿಂದ ಅಗತ್ಯಕ್ಕೆ ತಕ್ಕಂತೆ ಸಕ್ಕರೆ  ಹಾಗೂ ನಿಂಬೆಹಣ್ಣಿನ ರಸ ಸೇರಿಸಿ ಕುಡಿಯಿರಿ.

4.ದೊಡ್ಡಪತ್ರೆ ಚಹಾ

ವಿಶೇಷತೆ: ದೊಡ್ಡಪತ್ರೆಯೂ ತುಳಸಿಯಂತೆಯೇ   ಔಷಧೀಯ ಗುಣವುಳ್ಳ ಹಿತ್ತಲ ಗಿಡ. ಇದರ ಸೇವನೆಯಿಂದ ಕಫ, ಶೀತ, ಕೆಮ್ಮು, ಮಕ್ಕಳಲ್ಲಿ ಕಾಣಿಸುವ ಜ್ವರ ಮೊದಲಾದುವುಗಳಿಗೆ  ಉಪಶಮನ ದೊರೆಯತ್ತದೆ.

ಬೇಕಾಗುವ ಸಾಮಗ್ರಿಗಳು:

  1. ದೊಡ್ಡಪತ್ರೆ ಎಲೆಗಳು: 6
  2. ನೀರು :    2  ಕಪ್
  3. ಕಲ್ಲುಸಕ್ಕರೆ/ಜೇನುತುಪ್ಪ: ಸಿಹಿಗೆ ತಕ್ಕಷ್ಟು

ತಯಾರಿಸುವ ವಿಧಾನ:  ತೊಳೆದ ದೊಡ್ಡಪತ್ರೆ  ಎಲೆಗಳನ್ನು  ಪಾತ್ರೆಯಲ್ಲಿ ತೆಗೆದುಕೊಂಡು ನೀರು ಹಾಕಿ ಚೆನ್ನಾಗಿ ಕುದಿಸಿ.ಸೋಸಿ. ಸಿಹಿಗೆ ತಕ್ಕಷ್ಟು ಕಲ್ಲುಸಕ್ಕರೆ ಅಥವಾ ಜೇನುತುಪ್ಪ ಸೇರಿಸಿ ಕುಡಿಯಬಹುದು.

ಮೇಲೆ ಹೇಳಿದ ಎಲ್ಲಾ ಹರ್ಬಲ್ ಚಹಾಗಳನ್ನು ಸಕ್ಕರೆ ಸೇರಿಸದೆಯೂ ಕುಡಿಯಬಹುದು. ಚಹಾವನ್ನು ತಂಪು ಮಾಡಿ ಕುಡಿಯಬೇಕಿದ್ದರೆ, ಸೋಸಿದ ಡಿಕಾಕ್ಷನ್ ಅನ್ನು ಪ್ರಿಜ್ಜಿನಲ್ಲಿರಿಸಿ ಅಥವಾ ಒಂದೆರಡು   ಐಸ್ ಕ್ಯೂಬ್ ಸೇರಿಸಿದರಾಯಿತು.

-ಹೇಮಮಾಲಾ.ಬಿ

7 Responses

  1. ವಿಜಯಾಸುಬ್ರಹ್ಮಣ್ಯ , says:

    ಒಳ್ಳೆಯ ,ವಿವಿಧ ,ಸ್ವಾಧಿಷ್ಠ ಯುಕ್ತ ಹೊಸಬಗೆಯ *ಚಾ* ತಯಾರಿಕೆ.

  2. ನಯನ ಬಜಕೂಡ್ಲು says:

    Beautiful ಹೇಮಕ್ಕ. ಒಂದೇ ತರದ ಟೀ ಕುಡಿದು ಬೇಜಾರಾಗದ ಹಾಗೆ ಹಾಗು ಉತ್ತಮ ಆರೋಗ್ಯಕ್ಕೆ ನಿಮ್ಮ. ಬರಹದಲ್ಲಿರುವ ಮಾಹಿತಿಗಳು ಉಪಯುಕ್ತ ☕☕

  3. Harshitha says:

    Good recipes … beautiful presentation…

  4. ಶಿವಮೂರ್ತಿ.ಹೆಚ್. says:

    ಅತ್ಯುತ್ತಮ ಮಾಹಿತಿ

  5. Shankari Sharma says:

    ಆಹಾ..ಸೂಪರ್ ಚಹಾಗಳನ್ನು ಕುಡಿದಂತೆಯೇ ಆಯ್ತು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: