ನಿಗೂಢ ಕಲ್ಲೇಟು?

Spread the love
Share Button

“ನಿಗೂಢ ಕಲ್ಲೇಟಿಗೆ ಮಕ್ಕಳು ತತ್ತರ”  ಹೀಗೊಂದು ವರದಿ ಇತ್ತೀಚೆಗೆ (ಸೆಫ್ಟಂಬರ್ 12, 2019) ಉದಯವಾಣಿ ಪತ್ರಿಕೆಯ ಮುಖಪುಟದಲ್ಲಿ ಬಂದಿತ್ತು. ಬಾಗಲಕೋಟೆ ಜಿಲ್ಲೆಯ (ಗುಳೇದಗುಡ್ಡ) ಬಾದಾಮಿಯ ಎಂಜಿನವಾರಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯೊಂದರಲ್ಲಿ ನಡೆದ ಘಟನೆ. ಶಾಲೆಯೊಳಗೆ ಮಕ್ಕಳು ಬಂದೊಡನೆ, ಮಕ್ಕಳ ಮೇಲೆ ಎಲ್ಲೆಲ್ಲಿಂದಲೋ ದೊಡ್ಡ ದೊಡ್ಡ ಗಾತ್ರದ ಕಲ್ಲುಗಳು ಬೀಳುತ್ತಿವೆ ಎಂದು ವರದಿಯಾಗಿತ್ತು. ಕೈ, ಕಾಲು, ತಲೆಗೆ ಗಾಯವಾಗಿ ಮಕ್ಕಳು ನರಳುತ್ತಿದ್ದಾರೆ. ಗ್ರಾಮಸ್ಥರು ನೀಡಿದ ದೂರಿನ ಮೇರೆಗೆ ಪರಿಶೀಲಿಸಲು ಹೋದ ಪೊಲೀಸರ ಎದುರು ಸಹಾ ಕಲ್ಲುಗಳು ಬಿದ್ದವಂತೆ! ನನಗೆ ಇದನ್ನು ಓದಿ ಅಚ್ಚರಿಯೆನಿಸಲಿಲ್ಲ. ಯಾಕೆಂದರೆ ನನ್ನ ಬಾಲ್ಯದಲ್ಲಿ (35 ವರ್ಷಗಳ ಹಿಂದೆ) ಈ ತರದ ಘಟನೆಯನ್ನು ಕೇಳಿದ್ದು ಮಾತ್ರವಲ್ಲದೆ ನೋಡಿಯೂ ಇದ್ದೆ.

ನಮ್ಮ ಮನೆಯ ಪಕ್ಕ ಅಂದರೆ ಸುಮಾರು ಇನ್ನೂರು ಮೀಟರ್ ದೂರದಲ್ಲಿ ಮುಸ್ಲಿಂ ಸಮುದಾಯದವರ ಒಂದು ಮನೆಯಿತ್ತು. ಹಾಲು, ಮಜ್ಜಿಗೆ ತೆಗೆದುಕೊಂಡು ಹೋಗಲು, ಅವರ ಮನೆಯವರು ನಮ್ಮ ಮನೆಗೆ ಬರುತ್ತಿದ್ದುದು ಸಾಮಾನ್ಯವಾಗಿತ್ತು. ಮನೆಯಾತನ ಹೆಸರು ಮೋನು. ಆತನಿಗೆ ಎರಡು ಹೆಂಡತಿಯರು. ಇಬ್ಬರದೂ ಒಂದೇ ಹೆಸರು-ಬೀಪಾತುಮ್ಮ. ನಮ್ಮ ಮನೆಯವರೆಲ್ಲಾ ಅವರಿಬ್ಬರನ್ನು ದೊಡ್ಡ ಬೀಪಾತ್ತು ಹಾಗೂ ಸಣ್ಣ ಬೀಪಾತ್ತು ಎಂದು ಕರೆಯುತ್ತಿದ್ದೆವು. ದೊಡ್ಡ ಬೀಪಾತ್ತುವಿಗೆ ಎರಡು ಗಂಡು ಮಕ್ಕಳಾದ ಮೇಲೆ ಸಣ್ಣ ಬೀಪಾತ್ತುವನ್ನು ಮೋನು ಮದುವೆಯಾಗಿದ್ದನು. ಸಣ್ಣ ಬೀಪಾತ್ತುವಿಗೂ ಒಂದು ಹೆಣ್ಣು ಮಗು ಹುಟ್ಟಿತ್ತು. ಎಲ್ಲವೂ ಚೆನ್ನಾಗಿಯೇ ನಡೆಯುತ್ತಿದ್ದಾಗ, ಮೋನುವಿನ ಮನೆಯಲ್ಲಿ ಒಂದು ವಿಲಕ್ಷಣ ಘಟನೆ ಸಂಭವಿಸಲು ಶುರುವಾಯಿತು.

ಸಣ್ಣ ಬೀಪಾತ್ತುವಿನ ಮೇಲೆ ಕಲ್ಲುಗಳು ಬೀಳಲು ಶುರುವಾಯಿತು.  ಬೆಳಿಗ್ಗೆ, ಮಧ್ಯಾಹ್ನ, ರಾತ್ರಿ ಎನ್ನದೆ ಯಾವುದಾದರೂ ಹೊತ್ತಿನಲ್ಲಿ ಬೀಪಾತ್ತುವಿನ ಮೇಲೆ ಕಲ್ಲುಗಳು ಬೀಳುತ್ತಿದ್ದವು. ಕೆಲವು ದಿನ ಜಾಸ್ತಿ, ಕೆಲವು ದಿನ ಕಡಿಮೆ. ಕೆಲವೊಮ್ಮೆ ಮನೆಯ ಒಳಗೆ, ಕೆಲವೊಮ್ಮೆ ಹೊರಗೆ. ಕಲ್ಲುಗಳು ಎಲ್ಲಿಂದ ಬರುತ್ತವೆ ಎಂದು ಯಾರಿಗೂ ಗೊತ್ತಾಗುತ್ತಿರಲಿಲ್ಲ. ದೊಡ್ಡ ದೊಡ್ಡ ಗಾತ್ರದ ಕಲ್ಲುಗಳು ಗಾಳಿಯಲ್ಲಿ ತೇಲಿ ಬಂದು ಸಣ್ಣ ಬೀಪಾತ್ತುವಿನ ಮುಖ ಹಾಗೂ ಮೈಯನ್ನು ಸವರಿಕೊಂಡು ಬಳಿಕ ನೆಲಕ್ಕೆ ಬೀಳುತ್ತಿದ್ದವು. ಬೀಳುವ ಮೊದಲು, ಕಲ್ಲುಗಳು ಯಾರ ಕಣ್ಣಿಗೂ ಗೋಚರಿಸುತ್ತಿರಲಿಲ್ಲ. ಆದರೆ ಬಿದ್ದ ನಂತರ ಕಲ್ಲುಗಳು ಎಲ್ಲರ ಕಣ್ಣಿಗೂ ಕಾಣುತ್ತಿದ್ದವು. ಪಕ್ಕದಲ್ಲಿಯೇ ಇರುವ ಗುಡ್ಡಗಳ ಮೇಲಿರುವ ಕಲ್ಲುಗಳನ್ನು ಯಾರಾದರೂ ಬಿಸಾಡಿ, ಉಪದ್ರ ಮಾಡುತ್ತಿದ್ದಿರಬಹುದು ಅಂತ ನಾವಂದುಕೊಂಡಿದ್ದೆವು. ಅಸಲಿಗೆ ಆ ನಮೂನೆಯ ಕಲ್ಲುಗಳು ಅಲ್ಲಿಯ ಪರಿಸರದಲ್ಲಿ ಇರಲೇ ಇಲ್ಲ. ಸಹಜ ಕುತೂಹಲದಿಂದ ಕಲ್ಲುಗಳನ್ನು ನೋಡಲು ಹೋದ ನಾವು ಕಲ್ಲುಗಳ ಗಾತ್ರ ನೋಡಿ ದಂಗಾಗಿದ್ದೆವು. ಕಲ್ಲುಗಳ ಗಾತ್ರ ನೋಡಿದರೆ ಯಾರಾದರೂ ಬೆಚ್ಚಿ ಬೀಳಲೇಬೇಕು! ಕಟ್ಟುಮಸ್ತಾದ ಆಳಿಗೂ ಅಂತಹ ಕಲ್ಲುಗಳನ್ನು ಎತ್ತಿ ಬಿಸಾಡಲು ಸಾಧ್ಯವಿಲ್ಲ.  ಯಾರಾದರೂ ಎಸೆದಿರಬಹುದು ಅಂದುಕೊಂಡರೂ, ಅಷ್ಟು ದೊಡ್ಡ ಕಲ್ಲು  ತಲೆಯ ಮೇಲೆ ಅಥವಾ ಮೈಮೇಲೆ ಬಿದ್ದರೆ ಬೀಪಾತ್ತು ಅಲ್ಲಿಯೇ ಗೊಟಕ್ ಆಗಬೇಕಿತ್ತು. ಹಾಗಾದರೆ ಕಲ್ಲುಗಳು ಎಲ್ಲಿಂದ ಬರುತ್ತವೆ? ಹೇಗೆ ಬರುತ್ತವೆ? ಮನೆಯಲ್ಲಿ ಐದಾರು ಜನರಿರುವಾಗ ಸಣ್ಣ ಬೀಪಾತ್ತುವಿನ ಮೇಲೆ ಮಾತ್ರ ಯಾಕೆ ಬೀಳುತ್ತವೆ? ಅಂತ ಮನೆಯಲ್ಲಿ  ಚರ್ಚೆ ನಡೆಯುತ್ತಿತ್ತು. ಭ್ರಮೆ ಅನ್ನುವ ಹಾಗಿಲ್ಲ. ಯಾಕೆಂದರೆ ಬಿದ್ದ ಕಲ್ಲುಗಳ ರಾಶಿಯನ್ನು ನಾವೆಲ್ಲರೂ ನೋಡಿದ್ದೆವು. ಮತ್ತು ಅಂತಹ ಕಲ್ಲುಗಳು ನಮ್ಮ ಆಸುಪಾಸಿನಲ್ಲೆಲ್ಲೂ ಕಾಣಸಿಗುತ್ತಿರಲಿಲ್ಲ,

ಮನೆಯ ಆವರಣ ಪ್ರವೇಶಿಸಿದೊಡನೆಯೇ ಬೀಳುವ ಕಲ್ಲುಗಳ ತಾಡನದಿಂದ ಬೀಪಾತ್ತುವಿನ ಮುಖ ಹೆಚ್ಚಾಗಿ ದಪ್ಪವಾಗಿ ಬಾತುಕೊಂಡಿರುತ್ತಿತ್ತು. ಅವಳೇನಾದರೂ ಮಗುವನ್ನು ಎತ್ತಿಕೊಂಡಿದ್ದರೆ, ಆಗ ಅವಳ ಮೇಲೆ ಕಲ್ಲುಗಳು ಬೀಳುತ್ತಿರಲಿಲ್ಲವಂತೆ. ತನ್ನ ಗಂಡನ ಮೊದಲನೆಯ ಹೆಂಡತಿಗೆ ತಾನಲ್ಲಿರುವುದು ಇಷ್ಟವಿಲ್ಲದುದರಿಂದ ತನ್ನನ್ನು ಓಡಿಸಲು ಅವಳೇ ಏನೋ ಮಾಟ ಮಂತ್ರ ಮಾಡಿಸಿರಬೇಕು ಅನ್ನುವುದು ಸಣ್ಣ ಬೀಪಾತ್ತುವಿನ ನಂಬಿಕೆಯಾಗಿತ್ತು. ಕುಟ್ಟಿಚಾತ್ತನ್ ಹತ್ತಿರ ಮಾಡಿಸಿರಬೇಕು ಎಂದು ಊರವರು ಮಾತನಾಡಿಕೊಳ್ಳುತ್ತಿದ್ದರು.

ಬೀಳುವ ಕಲ್ಲುಗಳಿಂದ ತಪ್ಪಿಸಿಕೊಳ್ಳಲು ಎಷ್ಟೋ ಸಲ ಬೀಪಾತ್ತು ತನ್ನ ತಾಯಿಯ ಮನೆಗೆ ಹೋಗುತ್ತಿದ್ದಳು. ಇನ್ನು ಕಲ್ಲುಗಳು ತನ್ನ ಮೇಲೆ ಬೀಳಲಿಕ್ಕಿಲ್ಲ ಅಂದುಕೊಂಡು ಗಂಡನ ಮನೆಗೆ ಬಂದರೆ, ಅವಳೆಣಿಕೆ ತಲೆಕೆಳಗಾಗುತ್ತಿತ್ತು. ಕಲ್ಲುಗಳು ಅವಳ ಮೇಲೆ ಬೀಳುತ್ತಿದ್ದವು. ಸಣ್ಣ ಬೀಪಾತ್ತು ನಮ್ಮ ಮನೆಗೆ ಬಂದು ಅವಳು ಪಡುತ್ತಿರುವ ಕಷ್ಟಗಳನ್ನು ಹೇಳಿಕೊಳ್ಳುತ್ತಿದ್ದಳು.  ನನ್ನ ಅಮ್ಮನ ಹತ್ತಿರ ಬೀಪಾತ್ತು ಅಲವತ್ತುಕೊಳ್ಳುತ್ತಿದ್ದಳು “ನಾನೆಂತ ಮಾಡುವುದು ಅಕ್ಕ, ನಾನು ಯಾರಿಗೂ ಅನ್ಯಾಯ ಮಾಡಿಲ್ಲ. ಈ ನೋವನ್ನು ಸಹಿಸಿಕೊಳ್ಳುವುದಕ್ಕಿಂತ ಸತ್ತುಬಿಡುವ ಅನ್ನಿಸ್ತದೆ. ಮಗುವಿನ ಮುಖ ನೋಡಿ ಸುಮ್ಮನಿದ್ದೇನೆ. ನೋಡೋಣ, ದೇವರಿದ್ದಾರೆ”. ಅವಳನ್ನವಳೇ ಸಮಾಧಾನಿಸಿಕೊಂಡು ಮನೆಯಿಂದ ನನ್ನಮ್ಮ ಕೊಟ್ಟ ನೀರುಮಜ್ಜಿಗೆ ಕುಡಿದು ಹೊರಡುತ್ತಿದ್ದಳು. ಹಲವು ಹರಕೆಗಳನ್ನು ದೇವರಿಗೆ ಹೇಳಿಕೊಂಡಿದ್ದಳು ಬೀಪಾತ್ತು. ಕಲ್ಲು ಬೀಳುವ ವಿದ್ಯಮಾನ  ಸುಮಾರು ಮೂರು ತಿಂಗಳು ಮುಂದುವರಿದಿತ್ತು. ಆಮೇಲೆ ನಿಂತು ಹೋಯಿತು.

ಗುಳೇದಗುಡ್ಡದಲ್ಲಿ ನಡೆದ ಘಟನೆಯು ನನ್ನ ನೆನಪಿನ ಕೋಶದಲ್ಲಿ ಅವಿತಿದ್ದ ಬೀಪಾತ್ತುವಿನ ಕತೆಯನ್ನು ಮತ್ತೊಮ್ಮೆ ಜ್ಞಾಪಿಸಿತು. ಗುಳೇದಗುಡ್ದದಲ್ಲಿ ನಡೆದ ಘಟನೆ ಹಾಗೂ ಬೀಪಾತ್ತುವಿನ ಮೇಲೆ ಕಲ್ಲು ಬೀಳುತ್ತಿದ್ದ ಘಟನೆಯಲ್ಲಿ ಯಾವುದೇ ವ್ಯತ್ಯಾಸ  ನನಗೆ ಕಾಣಲಿಲ್ಲ. ಆದರೆ ಬೀಪಾತ್ತುವಿನ ಮೇಲೆ ಬಿದ್ದ ಕಲ್ಲುಗಳನ್ನು ನಾನು ಕಂಡಿದ್ದೇನೆ. ವೈಜ್ಞಾನಿಕ ದೃಷ್ಟಿಕೋನದಿಂದ ಆಲೋಚಿಸಿ ಕಲ್ಲು ಬೀಳುವ ವಿದ್ಯಮಾನ ಯಾಕಾಗಿ ಅಥವಾ ಹೇಗಾಗುತ್ತದೆ ಎಂಬುದಕ್ಕೆ ಉತ್ತರವನ್ನು ಹುಡುಕುವ ಪ್ರಯತ್ನದಲ್ಲಿ ಸೋತಿದ್ದೇನೆ. ಯಾರಿಂದಲೂ ನನಗೆ ಸಮರ್ಪಕ ಉತ್ತರ ಸಿಕ್ಕಿಲ್ಲ.. ಆದರೆ ಇಂದಿಗೂ ಸಹಾ ಈ ಘಟನೆಯ ಕಾರಣ ಉತ್ತರವಿಲ್ಲದ ಪ್ರಶ್ನೆಯಾಗಿಯೇ ಉಳಿದುಕೊಂಡಿದೆ. ಗುಳೇದಗುಡ್ಡದ ನಡೆದ  ಘಟನೆಯನ್ನೋದಿ ಅದೇ ಪ್ರಶ್ನೆ ಭೂತಾಕಾರವಾಗಿ ಬೆಳೆದು ನಿಂತಿದೆ.

– ಡಾ.ಕೃಷ್ಣಪ್ರಭಾ, ಮಂಗಳೂರು

4 Responses

 1. Santosh Shetty says:

  ಕೊನೆಗೂ ತಮ್ಮ ಊರಿನಲ್ಲಿ ನಡೆದ ಆ ಘಟನೆ ಅಂದಿನ, ಆ ಕಾಲಮಾನಕ್ಕನುಗುಣವಾಗಿ ಉತ್ತರವಿಲ್ಲದ ಪ್ರಶ್ನೆ ಯಾಗಿ ಯೇ ಉಳಿಯಿತು (ಅಷ್ಟಕ್ಕೂ ಆಗ ತಮ್ಮ ವಯಸ್ಸು ಕೇವಲ ೧೩). ಆದರೆ ಬಾಗಲಕೋಟೆ ಪ್ರಕರಣಕ್ಕೆ ಕೊನೆಗೂ ಉತ್ತರ ಸಿಕ್ಕಿತು.

  ದೈವಿಕ ತೆ ಬಗ್ಗೆ ಅಂದು, ತಮಗಿದ್ದ ವಿಪರೀತ ನಂಬಿಕೆ ಗಳು ತಮ್ಮನ್ನ ವೈಜ್ಞಾನಿಕ ರೀತಿಯಲ್ಲಿ ಯೋಚಿಸುವಲಿ
  ವಿಫಲಗೊಳಿಸಿರಬಹುದು.

  ಮೂರುವರೆ ದಶಕಗಳ ಹಿಂದಿನ ಆ ಘಟನೆ ತಮ್ಮ ಸಮಕಾಲೀನ ರಾದ ನಮ್ಮ ಎಲ್ಲ ರ ಗ್ರಾಮೀಣ ಬದುಕನ್ನ ಪ್ರತಿಫಲಿಸುವಂತಿದೆ.
  ಧನ್ಯ ವಾದಗಳು.. ಕೃಷ್ಣ ಪ್ರಭಾ!

 2. Krishnaprabha says:

  ಚೆನ್ನಾಗಿ ವಿಮರ್ಶೆ ಮಾಡಿದ್ದೀರಿ..ಜೊತೆಗೆ ಗುಳೇದಗುಡ್ಡದ ಘಟನೆಗೆ ಉತ್ತರ ಸಿಕ್ಕಿದೆ ಎಂಬ ಮಾಹಿತಿ ನೀಡಿರುವಿರಿ. ಕಣ್ಣಿಗೆ ಕಾಣಿಸಿಕೊಳ್ಳದೆ ಯಾರಾದರೂ ಮಾಡಿರಬಹುದು…
  ಧನ್ಯವಾದಗಳು

 3. Shankari Sharma says:

  ಹೌದು..ಉತ್ತರ ಸಿಗದ ಕೌತುಕಗಳು ಜಗತ್ತಿನಲ್ಲಿ ಕಂಡುಬರುತ್ತವೆ. ಲೇಖನ ಚೆನ್ನಾಗಿದೆ ಮೇಡಂ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: