ನನ್ನ ದೃಷ್ಟಿಯಲ್ಲಿ ಗಾಂಧೀ ತಾತ – ಸ್ವಗತ
ಅಕ್ಟೋಬರ್ 2 ಗಾಂಧೀ ಜಯಂತಿ . ಗಾಂಧೀಜಿಯವರ ಜನ್ಮ ದಿನ . ಇದೇ ದಿನ ಇನ್ನೊಬ್ಬ ಸ್ವಾತಂತ್ರ್ಯ ಹೋರಾಟಗಾರ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಜನ್ಮ ದಿನವೂ ಹೌದು . ಸರಕಾರಿ ಶಾಲೆ, ಕಚೇರಿಗಳಲ್ಲಿ ಗಾಂಧೀಜಿಯವರ ಭಾವಚಿತ್ರವನ್ನು ಇಟ್ಟು ಪೂಜೆ ಮಾಡುತ್ತಾರೆ. ಶಾಲೆಗಳಲ್ಲಿ ಮಕ್ಕಳಿಗೆ ಸಿಹಿ ತಿಂಡಿಯನ್ನು ಹಂಚಿ , ರಘುಪತಿ ರಾಘವ ಹಾಗೂ ಇತರ ದೇಶಭಕ್ತಿಯ ಹಾಡುಗಳನ್ನು ಹಾಡಿಸಿ, ಗಾಂಧೀಜಿಯ ಕಥೆಗಳು ಹಾಗು ಆತ್ಮ ಚರಿತ್ರೆಯನ್ನು ಹೇಳಲಾಗುತ್ತದೆ .
ಮನ ಬಾಲ್ಯದ ದಿನಗಳ ಕಡೆಗೆ ಓಡುತ್ತಿದೆ. ಆ ಮುಗ್ಧ ವಯಸ್ಸಲ್ಲಿ ಗಾಂಧೀ ತಾತನ ಹಿರಿಮೆಯನ್ನು ಹಾಡಿ, ಗಾಂಧಿ ಎಂದರೆ ಚರಕ, ಉಪ್ಪಿನ ಸತ್ಯಾಗ್ರಹ , ಮಕ್ಕಳ ನೆಚ್ಚಿನ ತಾತ, ಆಡಂಬರವಿಲ್ಲದ ಎರಡೇ ಎರಡು ತುಂಡು ಬಟ್ಟೆಯನ್ನು ಧರಿಸಿರುವ ದೇಶ ಪ್ರೇಮಿ ಎಂಬ ಕಲ್ಪನೆ .
ಓ ಮುಗ್ಧ ಮನವೇ , ಕಾಲ ಬದಲಾದಂತೆ , ಬುದ್ಧಿ ಬೆಳೆದಂತೆ ನೀನೇಕೆ ಹೀಗೆ ಬದಲಾಗುತ್ತಿರುವೆ?. ಯಾವುದೋ ದಳ್ಳೂರಿ , ಯಾರದೋ ಪಿತೂರಿ, ಇನ್ನಾರದೋ ಒಡಕು ಮಾತಿಗೆ ಏಕೆ ದಾಳವಾಗುತ್ತಿರುವೆ ?. ಎಲ್ಲಾ ಘಟನೆಗಳಿಗೂ ಅದರದ್ದೇ ಆದ ಆಯಾಮವಿದ್ದಿರುತ್ತದೆ . ಒಳ್ಳೆಯದನ್ನು ತೆಗೆದುಕೊಂಡು, ಕೆಟ್ಟದ್ದನ್ನು ಕೆದಕದೆ ಬಿಟ್ಟು ಬಿಡು. ನಿನಗೇಕೆ ಸಲ್ಲದ ವಿವಾದ?, ಸ್ವಾತಂತ್ರ್ಯದ ಹೋರಾಟದಲ್ಲಿ ಗಾಂಧೀಜಿಯ ನಾಯಕತ್ವ , ಇಂದು ಇತಿಹಾಸ . ಅಧಿಕಾರಕ್ಕಾಗಿ ಕೆಲವೊಂದು ಕ್ರೂರ , ಸ್ವಾರ್ಥ ಮನಸುಗಳು ಮಣ್ಣಾದ ಇತಿಹಾಸವನ್ನು ಹೇಗೆ ಬೇಕಾದರೂ ತಿರುಚಬಲ್ಲವು. ಆದರೆ ಆಗಿರುವ ಬದಲಾವಣೆ, ಸುಧಾರಣೆಗಳು ಸುಳ್ಳು ಹೇಳಲಾರವು.
ದ್ವೇಷದ ಕಿಚ್ಚು ಹಚ್ಚಿ ಮನಗಳ ಸುಡುವುದಾದರೆ ಓ ಮನವೇ ನೀ ಬೆಳೆಯದಿರು, ಓ ಬಾಲ್ಯವೇ ನೀ ಮುಗ್ಧತೆಯ ದಾಟಿ ಬೆಳೆಯದಿರು .
ಗಾಂಧಿ ಎಂದರೆ ಮಕ್ಕಳ ಪ್ರೀತಿಯ ಬಾಪೂಜಿ , ಸ್ವದೇಶೀ ಚಳುವಳಿಯ ಹರಿಕಾರ, ಎಲ್ಲಾ ಧರ್ಮಗಳನ್ನು ಗೌರವಿಸಿದ ಅದ್ಭುತ ವ್ಯಕ್ತಿತ್ವ, ದೇಶದ ಸ್ವಾತಂತ್ರ್ಯಕ್ಕಾಗಿ ಜೀವ ತೇಯ್ದ ಜನ ನಾಯಕ, ಉಪ್ಪಿನ ಸತ್ಯಾಗ್ರಹ ಹಾಗು ಅಸಹಕಾರ ಚಳುವಳಿಗೆ ಮುನ್ನುಡಿ ಬರೆದಾತ, ಸ್ವಾತಂತ್ರ್ಯದ ಸಲುವಾಗಿ ಹಲವು ಬಾರಿ ಸೆರೆಮನೆ ವಾಸ ಕಂಡ ಜೀವ, ಸತ್ಯ ಹಾಗು ಅಹಿಂಸಾ ತತ್ವವನ್ನು ಬೋಧಿಸಿದ ವ್ಯಕ್ತಿತ್ವ . ಇಷ್ಟು ಅರ್ಥವಾಗುವಷ್ಟು ಬೆಳೆದರೆ ಸಾಕು ಮನಸೇ.
ಇದಕ್ಕಿಂತ ಹೊರತಾದ ಕಲ್ಪನೆಯಲ್ಲಿ ನೀ ಮುಳುಗದಿರು. ಕಥೆಗಳು ಮನಸೋ ಇಚ್ಛೆ ಹುಟ್ಟಬಲ್ಲವು , ಆದರೆ ಒಳ್ಳೆಯದನ್ನು ಗುರುತಿಸುವ ವಿವೇಚನೆ ನಿನ್ನಲ್ಲಿರಲಿ.ಬದಲಾವಣೆ ಜಗದ ನಿಯಮ .ಒಳ್ಳೆಯ ಬದಲಾವಣೆಗೆ ನಾಂದಿ ಹಾಡು. ಕ್ರೌರ್ಯ , ಹಿಂಸೆಯನ್ನುಂಟು ಮಾಡುವಂತಹ ಆಲೋಚನೆ, ಮಾತು ಬೇಡ.
ಬ್ರಿಟಿಷರ ಕಪಿ ಮುಷ್ಟಿಯಿಂದ ದಾಸ್ಯದಿಂದ ನಮ್ಮ ದೇಶವನ್ನು ಮುಕ್ತಗೊಳಿಸಲು ಹೋರಾಡಿದ , ಶ್ರಮಿಸಿದ, ಆ ರಾಷ್ಟ್ರಪಿತನಿಗೊಂದು ನಮನ .
ಜೈ ಹಿಂದ್
– ನಯನ ಬಜಕೂಡ್ಲು
ಉತ್ತಮ ಲೇಖನ.