ನನ್ನ ಗಾಂಧಿ
ನಾನು ಭಾರತ ಕಂಡ ರಾಜಕೀಯ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಜನಿಸಿದವನು. ಹಾಗಾಗಿ ನಾನು ಅದನ್ನು ಬಳಸುವುದು ಹೀಗೆ -” ನಾನು ಹುಟ್ಟಿದಾಗ ದೇಶದಲ್ಲಿ ತುರ್ತು ಪರಿಸ್ಥಿತಿ ಇತ್ತು!”. ನಿಜ, ಆ ತುರ್ತಿಗಾಗಿ ನಾನು ಹುಟ್ಟಿರಲಿಲ್ಲ, ಆದರೂ ಆ ಸಂದರ್ಭದಲ್ಲಿ ಜನಿದವರಿಗೆ ಸಾಮಾನ್ಯವಾಗಿ ಅದರ ಭಾವ ತೀವ್ರತೆ ಮತ್ತು ಸಾಂದರ್ಭಿಕ ಕಳವಳ ಅರ್ಥವಾಗುತ್ತದೆ ಎಂಬುದೇ ನನ್ನ ಮಾತಿನ ಹಿಂದಿರುವ ಮನೋಧರ್ಮ. ಹಾಗೆ ಎಪ್ಪತ್ತರ ದಶಕದಲ್ಲಿ ಜನಿಸಿದವರಿಗೆ ಗಾಂಧಿ ಪರಿಚಯವೂ ಪುಸ್ತಕಗಳ ಮೂಲಕವೇ ಸಾಧ್ಯ. ನಾನು ಮಾಧ್ಯಮಿಕ ಶಾಲೆಯಲ್ಲಿ ಓದುವಾಗ ನನಗೆ ಇತಿಹಾಸ ಪಠ್ಯ ಪರಿಚಯಿಸಿದ್ದು ಗಾಂಧಿಯನ್ನು ಮಹಾತ್ಮನಾಗಿ, ನೆಹರೂ ರವರನ್ನು ಚಾಚಾ ಆಗಿ. ಆದರೆ ನನ್ನ ಸಾಹಿತ್ಯ ಪಠ್ಯ ಕಟ್ಟಿಕೊಟ್ಟ ಅನುಭೂತಿಯೇ ಬೇರೆ. ಆ ಮೂಲಕ ನನಗೆ ಗಾಂಧಿ ಎಂದರೆ ರಾಷ್ಟ್ರಪಿತ ಅಷ್ಟೇ ಅಲ್ಲ, ಆತ ಪೋರಬಂದರಿನ ಪುತಲೀಬಾಯಿಯ ಪುಟ್ಟ ಪೋರ. ಕರಮಚಂದ ಎಂಬ ಪಕ್ಕಾ ವ್ಯಾಪಾರಿಯ ಮಗ ಮೋಹನದಾಸ! ತನ್ನ ತಾಯಿಯ ಉಪವಾಸ ವ್ರತ ಮುಗಿಯಲು ಚಂದ್ರ ಬಂದನೇ ಇಲ್ಲವೇ ಎಂದು ಕಾತರಿಸುತ್ತಿದ್ದ ಆ ಹುಡುಗ ನನ್ನ ವಾರಿಗೆಯವ!!
ನನ್ನ ಓದು ವಿಸ್ತರಿಸಿದಂತೇ ನನ್ನೊಳಗಿನ ಮೋಹನದಾಸನೂ ದೊಡ್ಡವನಾದ. ಅವ ಮನೆಯಲ್ಲಿ ತುಡುಗು ಮಾಡಿದ್ದ, ಕದ್ದು ಮೋಟು ಬೀಡಿ ಸೇದಿದ್ದ, ಸೆರೆ ಮಾಂಸದ ರುಚಿ ನೋಡಿದ್ದ ಗೆಳೆಯರ ಸಂಗಡ ಆತನೂ ಇದ್ದ. ಅಷ್ಟೇ ಏಕೆ, ಬ್ಯಾರಿಸ್ಟರ್ ಪದವಿಗಾಗಿ ಓದಲು ವಿದೇಶಕ್ಕೆ ಹೋಗಿದ್ದ ಮೋಹನದಾಸ ಅಲ್ಲಿ ವಾಸ್ತವಿಕ ಜಗತ್ತಿಗೆ ದಾಸರಾದವರನ್ನು ಹತ್ತಿರದಿಂದ ಕಂಡಿದ್ದ. ಓದು ಮುಗಿಯುವ ಮೊದಲೇ ಮದುವೆಯಾಗಿದ್ದ ಆ ಮೋಹನದಾಸ ನಾಲ್ಕು ಮಕ್ಕಳ ತಂದೆಯಾದರೂ ಮಡದಿಯ ಮೋಹ ಬಿಡದೇ, ತಂದೆ ಕರಮಚಂದರು ಸಾವಿನ ಹಾಸಿಗೆಯಲ್ಲಿದ್ದಾಗ ಹೆಂಡತಿಯನ್ನು ಹಾಸಿಗೆಗೆ ಕರೆದೊಯ್ದು ಅಗುಳಿ ತೆಗೆಯುವ ಹೊತ್ತಿಗೆ ತಂದೆ ತೀರಿದ್ದನ್ನು ನೋಡಿ ಆತನ ವಿಷಯಾಸಕ್ತಿಗೆ ಆತನೇ ಹಳಹಳಿಸಿದ್ದ. ಬದುಕನ್ನೇ ತಾನು ಕಂಡುಕೊಂಡ ಸತ್ಯದ ಮುಖಾಮುಖಿಯಾಗಲು, ಸದಾ ಪ್ರಯೋಗಕ್ಕೆ ಒಡ್ಡಿಕೊಳ್ಳಲು ಮುಡಿಪಾಗಿಟ್ಟ ಆತ ಅಸಾಮಾನ್ಯ ಅನ್ನಿಸಿರಲಿಲ್ಲ. ಅವ ಶ್ರೀಸಾಮಾನ್ಯರಲ್ಲಿ ಅಸಾಮಾನ್ಯ ಎನ್ನಿಸಿದ್ದು ಆತ ಸಂಸಾರಿಯಾಗಿದ್ದೂ ಬ್ರಹ್ಮಚರ್ಯವನ್ನು ವ್ರತವಾಗಿ ಸ್ವೀಕರಿಸಿದ್ದಾಗ. ದಾಂಪತ್ಯ ಎಂಬುದು ಆತನೊಬ್ಬನದೇ ಅಲ್ಲ, ಅದು ಆತನ ಸಂಗಾತಿ ಕಸ್ತೂರಬಾರವರ ಹಕ್ಕೂ ಹೌದು. ಅಂತಹ ಸಹಜೀವಿಯ ಹಕ್ಕನ್ನು ಗೌರವಿಸದ ಈ ಅಪ್ರಜಾಸತ್ತಾತ್ಮಕ ನಡೆಯನ್ನು ಪ್ರಶ್ನಿಸಿದ್ದ ನನ್ನ ಮನದಲ್ಲಿ ಮೋಹನದಾಸನ ಬಗ್ಗೆ ತಕರಾರೂ ಒಂದು ಮೂಡಿತ್ತು. ಈ ಸಂದರ್ಭದಲ್ಲೇ ನಾನು ರಿಚರ್ಡ್ ಅಟೆನ್ ಬರೋ ನಿರ್ದೇಶನದ ಗಾಂಧಿಯನ್ನು ನೋಡಿದ್ದೆ. ಆಗ ನನ್ನೊಳಗಿನ ಗಾಂಧಿ ಮತ್ತಷ್ಟು ಅರ್ಥವಾಗಿ, ಆಪ್ತನೂ ಆಗಿದ್ದು. ಸಾಮಾನ್ಯ ಬುದ್ದಿಮತ್ತೆಯ, ಲಂಪಟನಲ್ಲದಿದ್ದರೂ ವಿಷಯಾಸಕ್ತ, ಪ್ರಜಾಪ್ರಭುತ್ವವಾದಿಯಾದರೂ ಪುರುಷ ಪ್ರಧಾನ ಸಂಸ್ಕೃತಿಯ ಮನೋಭಾವ ಹೊಂದಿದ್ದ ಗಾಂಧಿ ಆ ರೈಲು ಪ್ರಯಾಣದ ನಂತರ ಬೇರೆಯಾಗಿಯೇ ಕಂಡವರು. ತಾನು ತೊಟ್ಟಿದ್ದ ಆ ಪೋಷಾಕುಗಳನ್ನೆಲ್ಲಾ ಕಳಚಿ ನಿರುಮ್ಮಳವಾಗಿ ಮುಂಡು ತೊಟ್ಟು ಶಲ್ಯ ಹೊದೆದ ಗಾಂಧಿ ನನ್ನ ಆವರೆಗಿನ ಗೊಂದಲಗಳನ್ನೂ ನಿವಾರಿಸಿದ್ದರು.
ಸತ್ಯ ಹರಿಶ್ಚಂದ್ರ ಕತೆ, ಬ್ರಟೆಂಡ್ ರಸೆಲ್ ರ ಪ್ರಬಂಧಗಳ ಬೆಳಕಿನಲ್ಲೇ ತನ್ನ ದಾರಿಯನ್ನು ಕಂಡುಕೊಂಡ ಈ ಪಥಿಕ ಪರಿವ್ರಾಜಕ ತಮ್ಮ ನಂಬುಗೆಯ ಸತ್ಯವನ್ನು ತಾವೇ ಪರಿಕಿಸಿ ಮರು ಶೋಧಿಸುತ್ತಾ ನಡೆದವರು. ಅವರು ದಕ್ಷಿಣ ಆಫ್ರಿಕಾದಿಂದ ಮರಳಿ ಭಾರತಕ್ಕೆ ಬಂದುದು, ಸ್ವಾತಂತ್ರ್ಯ ಹೋರಾಟದಲ್ಲಿ ಅಹಿಂಸಾತ್ಮಕ ಮಾರ್ಗವನ್ನು ಪರಿಚಯಿಸಿ ಮುನ್ನಡೆಸಿದ್ದು ಐತಿಹಾಸಿಕ ದಾಖಲೆ. ಆದರೆ ತನ್ನ ಗಳಿಕೆಯನ್ನೆಲ್ಲಾ ಬಿಟ್ಟುಕೊಟ್ಟು ಸ್ವಯಂ ಬಡತನವನ್ನು ಆಹ್ವಾನಿಸಿದ ಧೀಮಂತಿಕೆ, ತನ್ನ ಮಕ್ಕಳ ಪ್ರತಿರೋಧವನ್ನು ಮಮತೆಯಿಂದಲೇ ಎದುರಿಸಿ, ಅವರನ್ನು ಸಾರ್ವಜನಿಕಗೊಳಿಸದೇ ಧೀಮಂತರನ್ನಾಗಿಸಿದ ಪರಿ, ಇಳಿ ವಯಸ್ಸಿನಲ್ಲಿ ಪ್ರೇಮದ ಅಮಲು ಆವರಿಸಿದಾಗ ಗೆಳೆಯ ರಾಜಾಜಿಯವರ ಕಿವಿ ಮಾತು ಕೇಳುವ ಸಮಕಾಲೀನ ಪ್ರಬುದ್ಧ ಮಿತ್ರ ರವೀಂದ್ರನಾಥ ಟಾಗೋರರ ಬಳಿ ತಪ್ಪೊಪ್ಪಿಕೊಳ್ಳುವ ಗಾಂಧಿ ನನ್ನ ಆಪ್ತ. ಅವರ ರಾಜಕೀಯ ಸಿದ್ಧಾಂತ ಮತ್ತು ಆರ್ಥಿಕ ದರ್ಶನಗಳ ಬಗ್ಗೆ ಹಲವು ಚರ್ಚೆಗಳಿರಬಹುದು. ಅವುಗಳಿಂದ ಕೆಲವು ನೇತ್ಯಾತ್ಮಕ ಪರಿಣಾಮವೂ ಆಗಿರಬಹುದು. ಆದರೆ ಕುಷ್ಠರೋಗಿಗಳನ್ನು ಎಲ್ಲರಂತೆ ಎಂದು ಘೋಷಿಸಿ ಉಪಚರಿಸಿದ, ನಿಮ್ನ ವರ್ಗದ ಸಾಮಾಜಿಕ ಬಹಿಷ್ಕೃತರನ್ನು ಹರಿಯ ಜನ ಎಂದು ಕರೆದು ಆದರಿಸಿದ, ತನ್ನ ಇಂದ್ರಿಯ ಸಂಯಮವನ್ನು ತಾನೇ ನಿಕಷಕ್ಕೊಡ್ಡಿ ಪರೀಕ್ಷಿಸಿದ ಗಾಂಧಿ ಯಾವುದೋ ಸಿದ್ಧಾಂತವನ್ನು ಪ್ರತಿಪಾದಿಸಿದವರಲ್ಲ. ಅದನ್ನು ಬದುಕಿದವರು.
‘ಬಾಳ್ವೆಯೇ ಬೆಳಕು’ ಎಂದರು ಶಿವರಾಮ ಕಾರಂತರು.ಗಾಂಧಿಯೂ ಹಾಗೇ, ಆ ಬೆಳಕನ್ನು ತಾವೇ ಬದುಕಿನ ಮೂಲಕ ಹೊಮ್ಮಿಸಿದರು. ಅವರು ಅರ್ಥಶಾಸ್ತ್ರಜ್ಞರು ಅಲ್ಲದಿರಬಹುದು. ಆದರೆ ಭಾರತ ಎಂಬ ಹಳ್ಳಿಗಳೇ ತುಂಬಿದ ರಾಷ್ಟ್ರದ ನಿಜವಾದ ಇಕಾನಮಿ ಇದರ ಕೃಷಿ ಮತ್ತು ಗುಡಿ ಕೈಗಾರಿಕೆಯಲ್ಲಿದೆ ಎಂದು ಅವರಿಗೆ ಗೊತ್ತಿತ್ತು. ಸ್ವಧರ್ಮ ನಿಧನಂ ಶ್ರೇಯಃ ಎಂಬುದನ್ನು ನಂಬಿದ್ದರೂ ಪರ ಧರ್ಮ ಸಹಿಷ್ಣುವಾಗಿ ಅವರದು ಆದರ್ಶದ ನಡೆ. ರಾಜಕೀಯ ಗಾಂಧಿಯವರಿಗೆ ಎಂದೂ ಚದುರಂಗದಾಟ ಆಗಿರಲಿಲ್ಲ. ಭಗತ್ ಸಿಂಗ್, ಅಂಬೇಡ್ಕರ್ ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್ ರೊಂದಿಗೆ ಅವರ ಭಿನ್ನ ಅಭಿಪ್ರಾಯಗಳು ಏನೇ ಇದ್ದರೂ ಅವರೆಲ್ಲರ ಗುರಿಯ ಬಗ್ಗೆ ಗೌರವವೂ ಇತ್ತು.
ಹಾಗೆಂದೇ ನನ್ನ ಗಾಂಧಿ ಒಬ್ಬ ಶ್ರೀಸಾಮಾನ್ಯರ ಅಸಮಾನ್ಯ ಮನುಷ್ಯ. ಎಳೆಯ ಹುಡುಗನಾಗಿದ್ದಾಗ ಚಿಕ್ಕ ವಯಸ್ಸಿನ ಮೋಹನದಾಸ್ ಕರಮಚಂದ ಆಪ್ತವಾದಂತೇ, ಈಗ ನಲವತ್ತರ ಗಡಿ ದಾಟುತ್ತಿರುವಾಗ ಮಧ್ಯ ವಯಸ್ಕ ಗಾಂಧಿ ಹೆಚ್ಚು ಅರ್ಥವಾಗುತ್ತಿದ್ದಾರೆ! ಪ್ರಾಯಶಃ ಮಾಗಿದ ಗಾಂಧಿ ಅರ್ಥವಾಗಲು ನಾನೂ ಮಾಗಬೇಕೇನೋ!?
-ಡಾ. ಆನಂದ್ ಋಗ್ವೇದಿ, ದಾವಣಗೆರೆ
ಇಡೀ ಗಾಂಧಿ ಅನ್ನೋ ಮಹಾತ್ಮನ ಬದುಕನ್ನು ಪುಟ್ಟ ಬರಹದೊಳಗೆ ಸೆರೆಹಿಡಿದ ರೀತಿ ಚಂದ. ಗಾಂಧೀಜಿಯ ವ್ಯಕ್ತಿತ್ವವನ್ನು ಅರ್ಥೈಸಿದ ರೀತಿಯೂ ಸೊಗಸಾಗಿದೆ
ಗಾಂಧೀಜಿಯವರ ವ್ಯಕ್ತಿತ್ವವನ್ನು ಅರ್ಥೈಸಿದ ಪರಿ ಅನನ್ಯವಾಗಿದೆ. ಚಿಕ್ಕ ಚೊಕ್ಕ ಬರಹ ಚೆನ್ನಾಗಿದೆ.