ಪುರಾಣ ಪುನೀತೆ, ಮಾತಾಮಯಿ ಅನಸೂಯ
ಸಂಸಾರದಲ್ಲಿ ಮಿಕ್ಕೆಲ್ಲರ ಶೀಲಕ್ಕಿಂತ ಗೃಹಿಣಿಯಾದವಳ ಶೀಲಕ್ಕೆ ಹೆಚ್ಚು ಮಹತ್ವ. ಅದನ್ನು ಅಳೆದು ತೂಕನೋಡುವುದು, ಗುಣಾವಗುಣಕ್ಕೆ ಮೇಲ್ಮೆ-ಕೀಳ್ಮೆಗಳ ಗರಿಷ್ಟ-ಕನಿಷ್ಟಗಳ ಪಟ್ಟಿ ಕೊಡುವುದು, ಅನಾದಿಕಾಲದಿಂದಲೇ ಬಂದ ಪದ್ಧತಿ. ಹಾಗೆಯೇ ಕೆಲವು ಸನ್ನಿವೇಶಗಳಲ್ಲಿ ಗೃಹಿಣಿಯರನ್ನು ಸತ್ವಪರೀಕ್ಷೆಗೆ ಒಳಪಡಿಸುದೂ ಇದೆ. ಇಂತಹ ಸಂದರ್ಭಗಳಲ್ಲಿ, ಮಾನಿನಿಯರು ತಮ್ಮ ಬುದ್ಧಿ, ವಿವೇಕ, ಜಾಣ್ಮೆಯಿಂದ ವ್ಯವಹರಿಸಬೇಕೆಂದು ಅನಸೂಯ ಎಚ್ಚರಿಸುತ್ತಾಳೆ.
ಅತ್ರಿಮುನಿಯ ಪತ್ನಿ ಅನಸೂಯ. ಈಕೆಯ ತಂದೆ ಕರ್ದಮಮುನಿ. ಸ್ವಾಯಂಭುವಿನ ಪುತ್ರಿಯಾದ ದೇವಹೂತಿಯೇ ಅನಸೂಯಳ ತಾಯಿ. ಅರುಂಧತಿ, ಶಾಂತಿ, ಖ್ಯಾತಿ, ಗತಿ, ಕಲೆ, ಶ್ರದ್ಧೆ, ಹವಿರ್ಭುವಿಕ್, ಕ್ರಿಯೆ ಮೊದಲಾದವರು ಅನಸೂಯೆಯ ಸಹೋದರಿಯರು. ಪಾತಿವ್ರತ್ಯದ ಪರೀಕ್ಷೆಗೊಳಪಟ್ಟು ಜಯಶಾಲಿಯಾದ ಅನಸೂಯೆಯ ಕತೆ ನಾರೀಲೋಕಕ್ಕೇ ಆದರ್ಶ. ತ್ರಿಮೂರ್ತಿಗಳೆಲ್ಲರೂ ಅವಳ ಶಕ್ತಿಯನ್ನು ಒರೆಹಚ್ಚಲು ಹೋಗಿ, ಕೊನೆಗೆ ಆ ಮೂವರೂ ಆಕೆಯ ಮಕ್ಕಳಾಗಿ ಮಡಿಲಲ್ಲಿ ಮಲಗುವಂತಹ ಪರಿಸ್ಥಿತಿ ವಿಚಿತ್ರವೂ ಕುತೂಹಲಭರಿತವೂ ಆದ ಕತೆ, ಅನಸೂಯ ಮಹಾಪತಿವ್ರತೆ. ಈಕೆಯ ಪಾತಿವ್ರತ್ಯವನ್ನು ಕೆಡಿಸಬೇಕೆಂದು ಅವಳ ಗೃಹಕ್ಕೆ ತ್ರಿಮೂರ್ತಿಗಳು ಅತಿಥಿಗಳಾಗಿ ಹೋಗುತ್ತಾರೆ. ಮನೆಗೆ ಬಂದ ಅತಿಥಿಗಳನ್ನು ಆದರಿಸುವುದು, ಸತ್ಕಾರ ಮಾಡುವುದು, ಭಾರತೀಯ ನಾರಿಗೆ ಸನಾತನ ಕಾಲದಿಂದಲೇ ಕೊಡಮಾಡಿದ ಧರ್ಮ. ಮನೆಯಲ್ಲಿ ಗಂಡಸರಿಲ್ಲದೆ ಹೋದರೂ ಮನೆಯೊಡತಿ ಊಟೋಪಚಾರಗಳನ್ನಿತ್ತು ಸತ್ಕರಿಸಬೇಕಾಗುತ್ತದೆ. ಅತ್ರಿಮುನಿ ಮನೆಯಲ್ಲಿಲ್ಲದ ಹೊತ್ತು ನೋಡಿಕೊಂಡು ತ್ರಿಮೂರ್ತಿಗಳು ಅನಸೂಯೆಯ ಅತಿಥಿ ಸತ್ಕಾರಕ್ಕಾಗಿ ಬರುತ್ತಾರೆ. ಬಂದವರು ಬ್ರಹ್ಮ, ವಿಷ್ಣು, ಮಹೇಶ್ವರ. ಮೂವರೂ ಆಕೆಯಲ್ಲಿ “ನೀನು ವಿವಸ್ತ್ರಳಾಗಿ ನಮಗೆಲ್ಲ ಉಪಚರಿಸಬೇಕೆಂದು” ತಮ್ಮ ವಿಚಿತ್ರ ಬೇಡಿಕೆಯನ್ನು ಮುಂದಿಡುತ್ತಾರೆ. ಬಂದ ತ್ರಿಮೂರ್ತಿಗಳ ಬೇಡಿಕೆ! ಅದೂ ವಿಚಿತ್ರ ಕೋರಿಕೆ!!. ಅನಸೂಯ ಒಳಗೆ ಹೋಗಿ ಆಳವಾಗಿ ಚಿಂತಿಸಿ ಒಂದು ನಿರ್ಧಾರಕ್ಕೆ ಬರುತ್ತಾಳೆ. ಒಂದಿಷ್ಟು ಉದಕವನ್ನು ತಂದು ಅವರ ಮೈಮೇಲೆ ಪ್ರೋಕ್ಷಣೆ ಮಾಡುತ್ತಾಳೆ.
ಏನಾಶ್ಚರ್ಯ…| ತಕ್ಷಣವೇ ಆ ಮೂವರೂ ಶೈಶಾವಸ್ಥೆಯ ಹಾಲು ಹಸುಳೆಯರಾಗುತ್ತಾರೆ.ಮೂವರು ಹಸುಳೆಯರೂ ತಾಯ ಹಾಲಿಗಾಗಿ ಹಂಬಲಿಸಿ ಅಳುವುದನ್ನು ನೋಡಿದ ಆಕೆ ದಿಕ್ಕೇ ತೋಚದೆ ಕಂಗೆಡುತ್ತಾಳೆ. ಅಲ್ಲಿ ಮತ್ತೊಂದು ವಿಸ್ಮಯಕಾರಿ ಘಟನೆಯೂ ಒದಗಿ ಹೋಗುತ್ತದೆ. ಅಳುವ ಮಕ್ಕಳನ್ನು ಸಂತೈಸ ಹೋದ ಅನಸೂಯೆಯ ಮಾತೃಪ್ರೇಮ ಉಕ್ಕಿ ಹರಿದಂತೆ ಆಕೆಯ ಸ್ತನಗಳಲ್ಲಿ ಹಾಲೂ ಹರಿಯುತ್ತದೆ!. ಮೂವರು ಶಿಶುಗಳಿಗೂ ಅನಸೂಯ ಹಾಲೂಡಿಸುತ್ತಾಳೆ. ಹೊರಗೆ ಹೋದ ಅತ್ರಿಮುನಿ ಹಿಂತಿರುಗಿದಾಗ ತನ್ನ ಮಡದಿಯ ಮಡಿಲಲ್ಲಿ ಮೂರು ಹಾಲು ಹಸುಳೆಗಳು ಮಲಗಿರುವುದು ಕಾಣುತ್ತಾನೆ!.ಅನಸೂಯ ನಡೆದ ವಿಚಾರವನ್ನೆಲ್ಲ ಪತಿಗೆ ತಿಳಿಸಿದಾಗ ಅತ್ರಿಮುನಿ ಆನಂದದಿಂದ ಆ ಮಕ್ಕಳಿಗೆ, ದತ್ತಾತ್ರೇಯ, ಚಂದ್ರ, ದೂರ್ವಾಸ, ಎಂದು ಹೆಸರಿಡುತ್ತಾನೆ. ಮುಂದಿನ ಹಂತದಲ್ಲಿ ತ್ರಿಮೂರ್ತಿಗಳು ತಮ್ಮ ತಪ್ಪನ್ನು ಒಪ್ಪಿಕೊಳ್ಳುತ್ತಾರೆ.
ಶ್ರೀರಾಮನು ಅರಣ್ಯವಾಸದಾಲ್ಲಿದ್ದಾಗ ಸೀತಾದೇವಿಗೆ ಸ್ತ್ರೀಯರ ಸೌಮಾಂಗಲ್ಯವನ್ನು ವೃದ್ಧಿಗೊಳಿಸುವ ಗಂಧ-ಮಾಲಾದಿಗಳನ್ನೂ ವಜ್ರದ ಓಲೆಗಳನ್ನೂ ನೀಡಿ ಪತಿವ್ರತೆಯಾಗೆಂದು ಹರಸಿದವಳು ಅನಸೂಯ . ಇಂದಿನ ದಿನಗಳಲ್ಲಿ ಸ್ತ್ರೀಯರು ಪ್ರಥಮವಾಗಿ ಎದುರಿಸಬೇಕಾಗಿ ಬರುವುದು ಕಾಮುಕರಕಣ್ಣು. ಅಂತಹ ಅನಿರೀಕ್ಷಿತ ಅಸಹನೀಯ ಸನ್ನಿವೇಶಗಳಲ್ಲಿ ಸಹನೆ,ಗಟ್ಟಿ ಎದೆಗಾರಿಕೆ,ಆತ್ಮವಿಶ್ವಾಸ, ಹಾಗೂ ತಕ್ಷಣ ತಪ್ಪಿಸಿಕೊಳ್ಳುವ ಉಪಾಯವನ್ನು ತನ್ಮೂಲಕ ಬೋಧಿಸುತ್ತಾಳೆ ಅನಸೂಯ. ಇಂತಹ ಸನ್ನಿವೇಶಗಳಲ್ಲಿ ಸಂದರ್ಭೋಚಿತ ಸರಿಯಾದ ಚಿಂತನೆಯನ್ನು ಕಂಡುಕೊಳ್ಳಬೇಕೆಂಬುದೇ ಸ್ತ್ರೀಕುಲಕ್ಕೆ ಅನಸೂಯಳ ಸಂದೇಶ.
-ವಿಜಯಾಸುಬ್ರಹ್ಮಣ್ಯ, ಕುಂಬಳೆ
ತುಂಬಾ ಚೆನ್ನಾಗಿದೆ . ಇಂದಿಗೂ ಅನುಸೂಯಳ ಹೆಸರು ಜನಜನಿತ .
ಚೆಂದ ನಿರೂಪಣೆ, ಒಳ್ಳೆಯ ಸಂದೇಶ