ಎಂಜಿನಿಯರುಗಳಿಗೊಂದು ಸಲಾಂ

Share Button

“ಇತಿಹಾಸ ಹಲವರನ್ನು ನಿರ್ಮಿಸುತ್ತದೆ. ಆದರೆ ಕೆಲವರು ತಾವೇ ಇತಿಹಾಸ ನಿರ್ಮಿಸುತ್ತಾರೆ. ಅಂತಹವರಲ್ಲೊಬ್ಬರು ಸರ್ ಎಂ ವಿಶ್ವೇಶ್ವರಯ್ಯನವರು” ಇದು ನನ್ನ ಮಾತುಗಳಲ್ಲ. 2005ರಲ್ಲಿ ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯ ಜೀವನ-ಸಾಧನೆ ಎಂಬ ಪುಸ್ತಕ ಎರಡನೆಯ ಮುದ್ರಣ ಕಂಡಾಗ, ಅದರ ಪ್ರಕಾಶಕರಾದ ಶ್ರೀ ಪ್ರಕಾಶ್ ಕಂಬತ್ತಳ್ಳಿ ಅವರು ಬರೆದ ಮುನ್ನುಡಿಯ ಕೆಲವು ಸಾಲುಗಳು.  1960 ರಲ್ಲಿ ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯರವರಿಗೆ ನೂರು ವರ್ಷ ತುಂಬಿದಾಗ ಅವರ ಜೀವನ- ಸಾಧನೆ ಬಗ್ಗೆ ಶ್ರೀ ತಿ. ತಾ. ಶರ್ಮ (ತಿರುಮಲೆ ತಾತಾಚಾರ್ಯ ಶರ್ಮ) ಅವರು ಬರೆದ ಪುಸ್ತಕ ಅಂದಿನ ಪ್ರಧಾನಿ ಪಂಡಿತ ಜವಾಹರಲಾಲ ನೆಹರು ಅವರಿಂದ ಬಿಡುಗಡೆಯ ಭಾಗ್ಯ ಪಡೆದಿತ್ತು. ಹೌದು, ಶ್ರೀ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಇವರ ಹೆಸರು ಭಾರತೀಯರೆಲ್ಲರಿಗೂ ಚಿರಪರಿಚಿತ ಹೆಸರು. ಆಧುನಿಕ ಕರ್ನಾಟಕದ ಮಹಾನ್ ಶಿಲ್ಪಿ ಎಂದರೂ ತಪ್ಪಾಗಲಾರದು. ಕೃಷ್ಣರಾಜ ಸಾಗರ ಆಣೆಕಟ್ಟು ನಿರ್ಮಾತೃವಾಗಿ, ಮೈಸೂರಿನ ಅರಸರಾದ ನಾಲ್ವಡಿ ಕೃಷ್ಣರಾಜ ಒಡೆಯರ ದೂರದರ್ಶಿತ್ವವನ್ನು ಸಾಕಾರಗೊಳಿಸಿದ ಧೀಮಂತ ಮೇಧಾವಿ. ಭಾರತರತ್ನ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ.

ಸರ್ ಎಂ  ವಿಶ್ವೇಶ್ವರಯ್ಯನವರ ಸಾಧನೆಗಳು ಒಂದೆರಡಲ್ಲ. ಒಟ್ಟಿನಲ್ಲಿ ಹೇಳಬೇಕೆಂದರೆ ಅವರೊಬ್ಬ ಮೇಧಾವಿ ಇಂಜಿನಿಯರ್, ದಕ್ಷ ಆಡಳಿತಗಾರ, ಉತ್ತಮ ಆರ್ಥಿಕ ತಜ್ಞ, ಶಿಸ್ತಿನ ಸಿಪಾಯಿ.  ಅವರೊಳಗೊಬ್ಬ ಛಲಗಾರ. ವೃತ್ತಿಯಲ್ಲಿ ಪ್ರಾಮಾಣಿಕತೆ, ಸೇವಾನಿಷ್ಠೆ. ಕರ್ನಾಟಕದಲ್ಲಿ ಶಿಕ್ಷಣ, ತಾಂತ್ರಿಕ ವಿದ್ಯಾಭ್ಯಾಸ ಹಾಗೂ ಕೈಗಾರಿಕಾ ವಿಕಾಸಕ್ಕೆ ಕಾರಣಕರ್ತರೆಂದು ಹೇಳಿದರೂ ತಪ್ಪಾಗದು. ಅವರ ಸಮಯಪ್ರಜ್ಞೆ ಮತ್ತು ಪ್ರಾಮಾಣಿಕತೆಯ ಬಗ್ಗೆ ಅದೆಷ್ಟೋ ಕತೆಗಳು  ಜನಜನಿತವಾಗಿದ್ದವು. ಅಂದಿನ ದಿನಗಳಲ್ಲಿ ವಿದ್ಯುಚ್ಚಕ್ತಿ ಇರಲಿಲ್ಲವಾದುದರಿಂದ ರಾತ್ರಿ ಹೊತ್ತು ಮೋಂಬತ್ತಿಗಳನ್ನು ಉಪಯೋಗಿಸುತ್ತಿದ್ದರು. ರಾತ್ರಿ ಹೊತ್ತಿನಲ್ಲೂ ಕಛೇರಿಯ ಕೆಲಸಗಳನ್ನು ಮಾಡುತ್ತಿದ್ದ ವಿಶ್ವೇಶ್ವರಯ್ಯನವರು ಸರ್ಕಾರದ ಕೆಲಸ ಮಾಡುವಾಗ ಮಾತ್ರ ಸರಕಾರ ಕೊಟ್ಟ ಮೋಂಬತ್ತಿ ಉಪಯೋಗಿಸಿ, ತಮ್ಮ ವೈಯಕ್ತಿಕ ಓದು ಅಥವಾ ಇತರ ಕೆಲಸಗಳಿಗೆ, ತಮ್ಮ ಸ್ವಂತ ಖರ್ಚಿನಲ್ಲಿ ಕೊಂಡ ಮೋಂಬತ್ತಿಯನ್ನು ಬಳಸುತ್ತಿದ್ದರಂತೆ. 102 ವರ್ಷ ಬದುಕಿ ಬಾಳಿದ ಸರ್ ಎಂ  ವಿಶ್ವೇಶ್ವರಯ್ಯನವರ ಜನ್ಮದಿನವನ್ನು ಎಂಜಿನಿಯರ್ಸ್ ಡೇ ಎಂದು ಆಚರಿಸುತ್ತಾರೆ.

ವಿಜ್ಞಾನ ಮತ್ತು ತಂತ್ರಜ್ಞಾನ ಎರಡು ಪರಸ್ಪರ ಬೆಸೆದುಕೊಂಡ ಶಬ್ದಗಳು ಮಾತ್ರವಲ್ಲ. ಅವೆರಡರ ನಡುವೆ ಅವಿನಾಭಾವ ಸಂಬಂಧ. ವಿಜ್ಞಾನದ ಬೆಳವಣಿಗೆಯಾಗಬೇಕಾದರೆ ತಂತ್ರಜ್ಞಾನ ಹೇಗೆ ಅಗತ್ಯವೋ, ಅದೇ ರೀತಿ ತಂತ್ರಜ್ಞಾನದ ಬೆಳವಣಿಗೆಯಲ್ಲಿ ವಿಜ್ಞಾನದ ಪಾತ್ರ ಮಹತ್ವದ್ದು. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಊಹಿಸಲೂ ಅಸಾಧ್ಯವಾದ ಸಾಧನೆಗಳಾಗಿವೆ. ನಿಮಿಷಕ್ಕೊಂದರಂತೆ ಹೊಸ ಅವಿಷ್ಕಾರಗಳಾಗುತ್ತಿವೆ. ಶಿಕ್ಷಣ, ಕೃಷಿ, ಕೈಗಾರಿಕಾ, ತಂತ್ರಜ್ಞಾನ, ವಿಜ್ಞಾನ ಮುಂತಾದ  ಕ್ಷೇತ್ರಗಳಲ್ಲಾಗಿರುವ ಸಂಶೋಧನೆಗಳಿಂದಾಗಿ, ಜನ ಸಾಮಾನ್ಯರ ದೈನಂದಿನ ಜೀವನದಲ್ಲಿ ಅಮೂಲಾಗ್ರ ಬದಲಾವಣೆಗಳಾಗಿವೆ.  ಈ ನಿಟ್ಟಿನಲ್ಲಿ  ವಿಜ್ಞಾನಿಗಳ ಹಾಗೂ ಎಂಜಿನಿಯರುಗಳ ಪಾತ್ರವಿದೆಯೆಂದರೆ ತಪ್ಪಾಗಲಾರದು. ದೈನಂದಿನ ಜೀವನದಲ್ಲಿ ನಾವು ಉಪಯೋಗಿಸುವ ಪ್ರತಿಯೊಂದು ವಸ್ತುವಿನ/ಶಕ್ತಿಯ ಹಿಂದೆ ಎಂಜಿನಿಯರಿಂಗ್ ಕ್ಷೇತ್ರದ ಕೊಡುಗೆಯಿದೆ. ಎಂಜಿನಿಯರಿಂಗ್ ಕ್ಷೇತ್ರದ ವ್ಯಾಪ್ತಿ ಹೆಚ್ಚಾಗುತ್ತಲಿದೆ.

1990ರ ದಶಕದಲ್ಲಿ ನಮ್ಮ ಕರ್ನಾಟಕ ರಾಜ್ಯದಲ್ಲಿ ಬೆರಳೆಣಿಕೆಗೆ ಸಿಗುತ್ತಿದ್ದ ಎಂಜಿನಿಯರಿಂಗ್ ಕಾಲೇಜುಗಳ ಜೊತೆಗೆ ಹಲವು ಕಾಲೇಜುಗಳು ಸೇರಿಕೊಂಡಿವೆ. ಬಹುರಾಷ್ಟೀಯ ಕಂಪೆನಿಗಳ ಪ್ರವೇಶದಿಂದ, ಎಂಜಿನಿಯರಿಂಗ್ ಪದವೀಧರರಾದ ಕೂಡಲೇ ಉತ್ತಮ ವೇತನ ಪಡೆಯುವ  ವಿಫುಲ ಉದ್ಯೋಗಾವಕಾಶಗಳ ಅರಿವಾದೊಡನೆಯೇ, ಪದವಿಪೂರ್ವ ತರಗತಿಗಳಲ್ಲಿ ವಿಜ್ಞಾನ ವಿಭಾಗವನ್ನು ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿತ್ತು. ತನಗೆ ಬೇಕಾದ ಎಂಜಿನಿಯರಿಂಗ್ ಕಾಲೇಜಿನಲ್ಲಿ, ತನ್ನ ಆಯ್ಕೆಯ ವಿಷಯದ ಶಿಕ್ಷಣಕ್ಕೆ ಪ್ರವೇಶ ಸಿಗಬೇಕೆಂದಾದರೆ JEE, CET, COMEDK ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ಪಡೆಯುವ ಅನಿವಾರ್ಯತೆ ವಿದ್ಯಾರ್ಥಿಗಳಿಗೆ ಎದುರಾಯಿತು. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಒಳ್ಳೆಯ ಅಂಕ ಗಳಿಸಿದರೂ ಸಹಾ, ಯಾವುದೇ ಮೀಸಲಾತಿಯ ಒಳಗೆ ಬಾರದ, ಆದರೆ ಕಡಿಮೆ ಆದಾಯವಿರುವ ಎಷ್ಟೋ ಬಡ ಪ್ರತಿಭಾವಂತ ಮಕ್ಕಳಿಗೆ ಎಂಜಿನಿಯರಿಂಗ್ ಶಿಕ್ಷಣ ಪಡೆಯುವುದು ಗಗನಕುಸುಮವಾಗಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗುತ್ತಿದೆ. ಕರ್ನಾಟಕವನ್ನೇ ತೆಗೆದುಕೊಂಡರೆ, ಅಂತಹ ವಿದ್ಯಾರ್ಥಿಗಳಿಗೆ ಕಡಿಮೆ ಶುಲ್ಕ ಕಟ್ಟಿ, ಎಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಲು, SNQ (Super Numerary Quota) ಕೋಟಾದಡಿ ಸೀಟುಗಳು ಲಭ್ಯವಿವೆ.

ಈಗ, ಎಂಜಿನಿಯರ್ ಪದವೀಧರರ ಸಂಖ್ಯೆ ಜಾಸ್ತಿಯಾಗಿದೆ. ಆದರೆ ಅಷ್ಟೇ ಸಂಖ್ಯೆಯ ಉದ್ಯೋಗಾವಕಾಶಗಳಿಲ್ಲ. ಇತ್ತೀಚಿನ ವರ್ಷಗಳಲ್ಲಿ, ಕೆಲವು ಎಂಜಿನಿಯರಿಂಗ್ ಕಾಲೇಜುಗಳಲ್ಲಿ ದಾಖಲಾತಿ ಇಳಿಮುಖವಾಗುತ್ತಿದೆ.  ಈ ವರ್ಷವೂ ಸುಮಾರು 27,000 ಕ್ಕಿಂತ ಜಾಸ್ತಿ ಸೀಟುಗಳು ಖಾಲಿ ಉಳಿದಿವೆಯಂತೆ.  ನನ್ನ ಅಧ್ಯಾಪನ ವೃತ್ತಿಯ ಮೊದಲ ಕೆಲವು ವರ್ಷಗಳಲ್ಲಿ (ಪದವಿ ಹಾಗೂ ಪದವಿಪೂರ್ವ ಎಂದು ಬೇರ್ಪಡುವ ಮೊದಲು) ಕಲಿಸಿದ ವಿದ್ಯಾರ್ಥಿಗಳನೇಕರು ಎಂಜಿನಿಯರಿಂಗ್ ಓದಿ ಒಳ್ಳೊಳ್ಳೆಯ ಉದ್ಯೋಗದಲ್ಲಿದ್ದಾರೆ, ಹಲವರು ವಿದೇಶದಲ್ಲಿದ್ದಾರೆ. ಎಲ್ಲಿಯಾದರೂ ಮುಖತಃ ಅಥವಾ ಮುಖಪುಸ್ತಕದಲ್ಲಿ ಕಾಣಸಿಕ್ಕಿದರೆ ಅವರ ಮೊದಲನೇ ಪ್ರಶ್ನೆ “ನೀವು ಇನ್ನೂ ಅದೇ ಕಾಲೇಜಿನಲ್ಲಿದ್ದೀರಾ?”. ಹೆಚ್ಚಿನ ವೇತನ ಪಡೆಯಲೋಸುಗ ಅಥವಾ ಅಭದ್ರತೆಯಿದ್ದರೆ ಒಂದು companyಯಿಂದ ಇನ್ನೊಂದು companyಗೆ ಆಗಾಗ ಹಾರುತ್ತಿರುವ ಅವರಿಗೆ, ತಮಗೆ ಕಲಿಸಿದ ಉಪನ್ಯಾಸಕರು ಅದೇ ಕಾಲೇಜಿನಲ್ಲಿಯೇ ಇರುವುದನ್ನು ನೋಡಿ ಆಶ್ಚರ್ಯವಾಗಿ ತೋರುತ್ತಿರಬಹುದು.

ಆದರೆ, ಕಳೆದ 25 ವರ್ಷಗಳಿಂದ ಹೆಚ್ಚಿದ ಎಂಜಿನಿಯರುಗಳ ಸಂಖ್ಯೆಯಿಂದಾಗಿ, ಕೌಟುಂಬಿಕವಾಗಿ, ಸಾಮಾಜಿಕವಾಗಿ  ಹಾಗೆಯೇ ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ  ಧನಾತ್ಮಕ ಹಾಗೂ ಋಣಾತ್ಮಕ ಬದಲಾವಣೆಗಳಾಗಿವೆ.  ಕಡು ಬಡತನದಲ್ಲಿ ಬೆಳೆದ ಎಷ್ಟೋ ಯುವಕರು/ಯುವತಿಯರು ಎಂಜಿನಿಯರಿಂಗ್ ಪದವಿ ಪಡೆದು, ಮನೆಯ ಆರ್ಥಿಕ ಸ್ಥಿತಿಯನ್ನು ಸುಧಾರಿಸಿ, ಅವರ ಹೆತ್ತವರ ಖುಷಿಗೆ ಕಾರಣರಾಗಿದ್ದಾರೆ. ಸರ್ಕಾರದ ಬೊಕ್ಕಸ ತುಂಬುವಲ್ಲಿ ಎಂಜಿನಿಯರುಗಳದು ಪಾಲಿದೆ. ಅನೇಕರು ಉದ್ಯೋಗದ ಕಾರಣದಿಂದಾಗಿ ನಿಮಿತ್ತ ವಿದೇಶಗಳನ್ನು ನೋಡುವ ಮನದಾಸೆಯನ್ನು ಪೂರೈಸಿಕೊಂಡಿದ್ದಾರೆ. ವಿದೇಶದಲ್ಲಿರುವ ಮಗನ/ಮಗಳ ಭೇಟಿಗೆಂದು ಅಮೇರಿಕಾ, ಕೆನಡಾ, ಆಸ್ಟ್ರೇಲಿಯಾ ಮತ್ತು ಹಲವು ಐರೋಪ್ಯ ದೇಶಗಳಿಗೆ ಭೇಟಿ ನೀಡಿ ಬದುಕನ್ನು ಸಂಭ್ರಮಿಸುವ ತಂದೆ-ತಾಯಿಯರ ಸಂಖ್ಯೆಯೂ ಏರಿದೆ. ಮದುವೆಯಾದ ಮಗ/ಮಗಳು ವಿದೇಶದಲ್ಲಿದ್ದರೆ, ಅವರಿಗೆ ಮಗು ಆಗುವ ಸಂದರ್ಭದಲ್ಲಂತೂ ಅಪ್ಪ-ಅಮ್ಮನನ್ನು ಕರೆಸಿಕೊಳ್ಳದವರೇ  ಇಲ್ಲ.

ಆದರೂ ವಿದೇಶಕ್ಕೆ ಪ್ರತಿಭಾ ಪಲಾಯನಗೈಯುವವರಲ್ಲಿ, ಎಂಜಿನಿಯರುಗಳ ಸಂಖ್ಯೆಯೇ ಅಧಿಕವಾಗಿದೆ. ಉನ್ನತ ಶಿಕ್ಷಣ ಪಡೆಯಲೆಂದು ವಿದೇಶಕ್ಕೆ ಹೋಗಿ, ಅಲ್ಲೇ ನೆಲೆಯೂರುತ್ತಾರೆ. ಅದರಿಂದಾಗಿ, ಬೆಳೆದ ಮಕ್ಕಳು ಹತ್ತಿರದಲ್ಲಿಲ್ಲ ಅನ್ನುವ  ಕೊರಗಿನಿಂದ ವಯಸ್ಸಾದ ತಂದೆ ತಾಯಿಗಳಿಬ್ಬರೇ ಮನೆಯಲ್ಲಿರಬೇಕಾದ ಅಭದ್ರ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಹೊಸದಾಗಿ ಉದ್ಯೋಗ ಪಡೆದ ಎಂಜಿನಿಯರ್ ಹುಡುಗನಿಗೆ ವರ್ಷಕ್ಕೆ ಹಲವು ಲಕ್ಷಗಳ  ಪ್ಯಾಕೇಜ್. ಅವನ ಅಪ್ಪ-ಅಮ್ಮ ಇಬ್ಬರಿಗೂ ಮಗ ದುಡಿದು ತರುವ ಹಣದ ಅವಶ್ಯಕತೆಯಿಲ್ಲ. ಅಂತಹ ಸಂದರ್ಭದಲ್ಲಿ, ಹಣವನ್ನು ನೀರಿನಂತೆ ಪೋಲು ಮಾಡುವ ಮನಸ್ಥಿತಿ ಬೆಳೆದುಬಿಡುತ್ತದೆ. ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಳ್ಳುವವರೂ ಇಲ್ಲವೆಂದಿಲ್ಲ. ಮದುವೆಯ ವಿಷಯ ಬಂದಾಗ, ಎಂಜಿನಿಯರಿಂಗ್ ಓದಿದ ಹುಡುಗರು ತನಗೆ ಎಂಜಿನಿಯರಿಂಗ್ ಓದಿದ ಹುಡುಗಿಯೇ ಬೇಕೆಂದು ಪಟ್ಟು ಹಿಡಿಯುತ್ತಾರೆ. ಪಾಳಿಯಲ್ಲಿ ಕೆಲಸ ಮಾಡಬೇಕಾದ ಅನಿವಾರ್ಯತೆಯಿಂದಾಗಿ, ಕೆಲವೊಮ್ಮೆ ವಾರಪೂರ್ತಿ ಗಂಡ ಹೆಂಡತಿಯರು ಪರಸ್ಪರ ಮುಖ ನೋಡಿಕೊಳ್ಳದಂತಹ ಪರಿಸ್ಥಿತಿ ಎದುರಾಗಿದೆ. ಇನ್ನು ಮಗುವಿಗೆ ಅಜ್ಜಿಯೇ ಅಮ್ಮನಾಗಬೇಕಾದ ಅನಿವಾರ್ಯತೆ.

ಅದೇನೇ ಇರಲಿ, ಎಂಜಿನಿಯರುಗಳ ಕೈಯಲ್ಲಿ ಒಂದು ದೇಶದ ಭವಿಷ್ಯವಿದೆ. ಓರ್ವ ಉತ್ತಮ ಎಂಜಿನಿಯರ್ ಆದವನಿಗೆ, ಅಂತಾರಾಷ್ಟೀಯ ಮಟ್ಟದಲ್ಲಿ ನಡೆಯುವ ಕ್ಷಿಪ್ರ ಪರಿವರ್ತನೆಗಳು ಮತ್ತು ಅವಿಷ್ಕಾರಗಳ ಬಗ್ಗೆ ಅರಿವಿರಬೇಕು. ಯುವ ಎಂಜಿನಿಯರುಗಳ ಮುಂದೆ ಹಲವು ಸವಾಲುಗಳಿವೆ. ಸವಾಲುಗಳನ್ನು ಮೆಟ್ಟಿ ನಿಂತು, ಬದುಕಿನಲ್ಲಿ ಎದುರಾಗುವ ಸೋಲು-ಗೆಲುವುಗಳನ್ನು ಸಮಚಿತ್ತದಿಂದ ಸ್ವೀಕರಿಸುವ ಮನೋಭಾವನೆಯನ್ನು ಬೆಳೆಸುವಲ್ಲಿ ಅವರು ಪಡೆದ ಎಂಜಿನಿಯರಿಂಗ್ ಶಿಕ್ಷಣ ಸಹಕಾರಿಯಾಗಬೇಕು. ಸರ್ ಎಂ ವಿಶ್ವೇಶ್ವರಯ್ಯನವರು ಹೇಳಿದಂತೆ, ಓರ್ವ ಎಂಜಿನಿಯರಿಂಗ್ ಪದವೀಧರನ ವಿದ್ಯಾಭ್ಯಾಸದ ಮಟ್ಟ, ಗಳಿಸಿರುವ ತಾಂತ್ರಿಕ ನೈಪುಣ್ಯತೆ, ಪಡೆದ ಅನುಭವಗಳು ಅವನ ಯೋಗ್ಯತೆಯನ್ನು ನಿರ್ಧರಿಸುತ್ತವೆ. ಪ್ರಸ್ತುತ ಇವೆಲ್ಲವುಗಳ ಜೊತೆ ಉತ್ತಮ ಸಂವಹನಾ ಸಾಮರ್ಥ್ಯವು ಕೂಡಾ ಒಳ್ಳೆಯ ಉದ್ಯೋಗ ಪಡೆಯಲು ಮಾನದಂಡವಾಗಿದೆ.  ಸರ್ ಎಂ ವಿಶ್ವೇಶ್ವರಯ್ಯನವರು ಬದುಕಿನಲ್ಲಿ ಪಾಲಿಸಿದ ಆದರ್ಶಗಳು ಎಲ್ಲರಿಗೆ ಮಾದರಿಯಾಗಲಿ. ರಾಷ್ಟ್ರ ನಿರ್ಮಾಣದಲ್ಲಿ ಅಳಿಲುಸೇವೆಗೈಯುತ್ತಿರುವ, ಸರ್ ಎಂ ವಿಶ್ವೇಶ್ವರಯ್ಯನವರಂತೆ ಹೊಸ ಇತಿಹಾಸವನ್ನು ಬರೆದಿಡಲು ಶಕ್ತರಾದ, ಎಲ್ಲಾ ಎಂಜಿನಿಯರುಗಳಿಗೊಂದು ಸಲಾಂ.

-ಡಾ.ಕೃಷ್ಣಪ್ರಭಾ, ಮಂಗಳೂರು

4 Responses

  1. ನಯನ ಬಜಕೂಡ್ಲು says:

    ಚೆನ್ನಾಗಿದೆ ಮೇಡಂ. ಸಾಕಷ್ಟು ವಿಚಾರಗಳನ್ನೊಳಗೊಂಡ ಮಾಹಿತಿಪೂರ್ಣ ಬರಹ.

  2. Shankari Sharma says:

    ಬರಹ ಚೆನ್ನಾಗಿದೆ.

  3. Krishnaprabha says:

    ಒಮ್ಮೆ ವಿದ್ಯಾರ್ಥಿ ಜೀವನವನ್ನು ಮೆಲುಕುಹಾಕುವಂತೆ ಮಾಡಿ ದ ತಮಗೆ ನನ್ನ ಧನ್ಯವಾದಗಳು.
    ಪ್ರಾಯಶಃ ಆಧುನಿಕತೆಯ ದಾರಿಯಲ್ಲಿ, ಮುಖವಾಡ ದ ಜೀವನದಲ್ಲಿ ಸರ್. ಎಂ. ವಿ ಯಂಥ ಮಹನೀಯರನ್ನ ಮರೆತಿದ್ದೆ.
    ಸರಳ ನೇರ ನುಡಿ… ಇಷ್ಟ ಆಯ್ತು…

    Comment by Santosh in my FB ಲಿಂಕ್

    ಧನ್ಯವಾದಗಳು ಸಂತೋಷ್

  4. Krishnaprabha says:

    ನಯನಾ ಹಾಗೂ ಶಂಕರಿ ಅವರಿಗೂ ಧನ್ಯವಾದಗಳು…

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: