ಒಂದು ಮರದಿಂದ ಕಲಿಯಬೇಕಿದೆ….

Share Button

ಕತ್ತಲೆಯ ಗರ್ಭದಲ್ಲಿ ಹುಗಿದು
ಹಾಕಿದರೂ, ಕಾದು ಕಾದು
ಸಮಯಕ್ಕೆ ಸರಿಯಾಗಿ ಮೇಲೆದ್ದು
ಬರುವ  ಬಗೆಯನು….
,
ಕಡಿಯುವ, ಕತ್ತಿ ಸವರುವ ಮಂದಿ
ಪಕ್ಕದಲ್ಲಿದ್ದರೂ; ತಂಪು ಗಾಳಿ
ತೂಗಿಕೊಂಡು, ಹಕ್ಕಿ ಅಳಿಲುಗಳ
ಬಳಿಗೆ ಕರೆಯುವ ಒಲವನು….
.
‘ಕಳೆ’ಯ ಗೆಳೆತನದೊಡನೆ ಕಳೆಯದೇ
ಬಾಳಲು; ಮೇಯಲು ಬರುವ
ಪಶುಗಳ ಸಾಲುಸಾಲಿನ ನಡುವೆ ಅಡಗಿ-
ಕಾಲಡಿ ಸಿಲುಕಿ ನಡುಗದೇ,
ಗುಡುಗಿ, ಗಟ್ಟಿಯಾಗಲು….
.
ಕಾಲಕಾಲಕ್ಕೆ  ನೀರ ಹನಿಸುತ್ತಿದ್ದವರು
ಕಾಣೆಯಾದರೂ, ಮುಗಿಲ ಕಂಬನಿಯನೇ
ಕುಡಿದು ಮೊಗ್ಗು ಅರಳಿಸಿ, ಕಾಯಿ
ಕಚ್ಚಿ , ಹಣ್ಣಾಗುವ ಬೆಡಗನು….
.
ಬಿರುಗಾಳಿ-ಬಿರುಮಳೆಯೆಂಬುದೆಲ್ಲಾ
ಒಂದು ಸಹಜ ರೂಢಿಯೆಂದುಕೊಂಡು,
ಋತು ಪ್ರವಾಹದಲಿ ತೇಲಿ-
ಸಾಗಿ ಮಾಗುವ ಬಗೆಯನು ಒಂದು
ಮರದಿಂದ ಕಲಿಯಬೇಕಿದೆ..
.

ಒಂದು ಮರದಿಂದಲೇ
ಕಲಿಯಬೇಕು ಇದನು..
ಎತ್ತರ ಬೆಳೆದೂ ಆಳದಲಿ ಬೇರಿನ
ಅಸ್ತಿತ್ವ ಉಳಿಸಿಕೊಂಡು ಮೌನದಲಿ
ಧ್ಯಾನಸ್ಥವಾಗುವ  ಸ್ಥಿತಿಯನು..

-ವಸುಂಧರಾ ಕೆ. ಎಂ., ಬೆಂಗಳೂರು

4 Responses

  1. Hema says:

    ನಿಜ ಮರದಿಂದ ಕಲಿಯುವಂತಾದ್ದು ಬಹಳ ಇದೆ..ಕವನ ಇಷ್ಟವಾಯಿತು…

  2. ಕಲಾ ಚಿದಾನಂದ says:

    ತುಂಬಾ ಚೆನ್ನಾಗಿದೆ.

  3. ನಯನ ಬಜಕೂಡ್ಲು says:

    Beautiful. ಮರದ ಕಥೆಯಲ್ಲಿ ಬದುಕಿನ ಪಾಠ ಅಡಗಿದೆ .

  4. Shankari Sharma says:

    ಮನಮುಟ್ಟುವ ಸುಂದರ ಕವನ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: