ಧಾವಂತ ಧಾವಿಸುವ ಕಾಲುಗಳ ಕಾಲಡಿಗೆ
ಎಷ್ಟೊಂದು ದಾರಿಗಳು….
ಅನಿಯಮಿತ ನಡೆದಾಡುವ ಹಾದಿಯ ತುಂಬ
ಅದೆಷ್ಟು ಗುರಿಗಳು……
ದಮ್ಮು ಕಟ್ಟುತ್ತ ಕೆಮ್ಮುವ ಅಪ್ಪನ
ದವಖಾನೆಗೆ ಸೇರಿಸುವ ಆತುರ ಮಗಳಿಗಾದರೆ,
ಚಿಂದಿ ಆಯ್ದ ಹುಡುಗ ಹೊರಲಾರದೆ ಹೊತ್ತು
ದಾಪುಗಾಲಲ್ಲಿ ಬರುವುದರ ಕಾಯುವ ಅಮ್ಮ
ಭಿಕ್ಷೆ ಬೇಡುವ ಅಜ್ಜಿಯ ಇಂಗಿದ ಕಣ್ಣುಗಳ ಭಾವ
ಅರಿಯದು ಈ ಊರು!
ರಸ್ತೆ ದಾಟಲು ಪರದಾಡುವ ಅಜ್ಜನ
ಸಹಾಯಕೆ ಇಲ್ಲಿ ಯಾರು?
ತಳ್ಳುಗಾಡಿಯಾತನ ಚಿಕ್ಕ ಲಾಭದಲ್ಲೇ
ನಡೆಯಬೇಕಿದೆ ದೊಡ್ಡ ಕನಸು .
ಎ ಸಿ ಕಾರೊಳಗಿನ ತಂಪು ಗ್ಲಾಸಿನ
ಕಣ್ಣಿನ ಚಿಕ್ಕ ಮನಸ್ಸು
ಯಾರು ಕಂಡರಿಯದ ಕಾಣದ ಕಡಲಿನಾಚೆ
ಅತ್ತಿಂದಿತ್ತ ಚಲಿಸುತ್ತಿದೆ-
ಲೆಕ್ಕವಿಲ್ಲದಷ್ಟು ಹಿಮ್ಮಡಿ ಒಡೆದ ಪಾದಗಳು…
ಏನೆಲ್ಲ ಲೆಕ್ಕಾಚಾರವಿಟ್ಟಿದ್ದಾರೋ
ಲೆಕ್ಕವಿಟ್ಟವರಾರು?
ಈ ನುಣುಪು ಪಾದದವರ
ಮಾರುಕಟ್ಟೆಯಲ್ಲಿ…….
– ಸಂಗೀತ ರವಿರಾಜ್ , ಕೊಡಗು
ತುಂಬಾ ಇಷ್ಟ ಆಯಿತು ಕವನ.
ಸುಂದರ ಕವನ , ನಗರದ ಬದುಕಿನ ಅನಾವರಣ.
ಇಷ್ಟವಾಯಿತು. ಚೆಂದದ ಕವನ
ಆಸೆ ಬುರುಕ ಸಮಾಜದ ಇನ್ನೊಂದು ಮುಖ ಚೆನ್ನಾಗಿ ಅನಾವರಣವಾದ ಚಂದದ ಕವನ.