ವಿಜ್ಞಾನ

ನಿದ್ದೆ‌ ಏಕೆ ಬರುತ್ತಿಲ್ಲ??

Share Button

ಕತ್ತಲಾವರಿಸಿ ಪರಿಸರವು ನಿಶ್ಶಬ್ದವಾಗುತ್ತಿದ್ದಂತೆಯೇ ಆ ದಿನದ ಜಂಜಾಟಗಳನ್ನೆಲ್ಲ ಮರೆತು ಮೈ-ಮನಸ್ಸುಗಳನ್ನು ಹಗುರವಾಗಿಸಲು ಎಲ್ಲರೂ ಬಯಸುವುದು ಒಂದು ಸುಖವಾದ ನಿದ್ದೆ. ಇನ್ನು ಕೆಲವರಿಗೆ ರಾತ್ರಿಯಾಗುತ್ತಿದ್ದಂತೆಯೇ ನಿದ್ದೆ ಬರದಿದ್ದರೆ ಎಂಬ ಚಿಂತೆ.ಇಡೀ ಜಗತ್ತು ಶಾಂತವಾಗಿ ಮಲಗಿ ನಿದ್ರಿಸುತ್ತಿರುವಾಗ ಒಂಟಿಯಾಗಿ ನಿದ್ದೆ ಇಲ್ಲದೆ ಚಡಪಡಿಸುವುದೆಂದರೆ ಅದು ಅತ್ಯಂತ ಅಸಹನೀಯ.

ಉತ್ತಮ ಆಹಾರ, ಗಾಳಿ, ನೀರು ಹೇಗೆ ಶರೀರಕ್ಕೆ ಅಗತ್ಯವೋ ಹಾಗೆಯೇ ನಿದ್ದೆ ಕೂಡ. ನಿದ್ರಿಸುವುದರಿಂದ ಮನಸ್ಸು ಉಲ್ಲಸಿತವಾಗುತ್ತದೆ; ಶರೀರದ ವಿವಿಧ ಕೋಶಗಳು ಮತ್ತು ಅಂಗಾಂಗಗಳು ದುರಸ್ತಿಗೊಂಡು ಸಮರ್ಪಕವಾಗಿ ಕಾರ್ಯನಿರ್ವಹಿಸಲು ಅಣಿಯಾಗುತ್ತವೆ; ಹಾಗೆಯೇ ಶರೀರದ ಜೈವಿಕ ಗಡಿಯಾರವು (Biological Clock)  ಸುಸ್ಥಿತಿಯಲ್ಲಿರುತ್ತದೆ.

ನ್ಯಾಷನಲ್ ಸ್ಲೀಪ್ ಫ಼ೌಂಡೇಷನ್ (NSF) ಹಲವಾರು ಸಂಶೋಧನೆಗಳನ್ನು ನಡೆಸಿ ವಿವಿಧ ವಯೊಮಾನಕ್ಕನುಗುಣವಾಗಿ ಸಾಮಾನ್ಯ ನಿದ್ರಿಸುವ ಅವಧಿಯನ್ನು ನಿಗದಿಪಡಿಸಿದೆ. ಇದರ ಪ್ರಕಾರ-

6-13  ವರ್ಷ – 9-11 ಗಂಟೆ
14-17 ವರ್ಷ – 8-10 ಗಂಟೆ
18-25 ವರ್ಷ – 7-9  ಗಂಟೆ
26-64 ವರ್ಷ – 7-9  ಗಂಟೆ
65  ವರ್ಷ ಮೇಲ್ಪಟ್ಟವರಿಗೆ 6-7 ಗಂಟೆ ನಿದ್ದೆಯ ಅವಶ್ಯಕತೆಯಿದೆ.

ಇಂದಿನ ಆಧುನಿಕ ಜೀವನಶೈಲಿಯ ಒತ್ತಡದಿಂದಾಗಿ ನಿದ್ದೆ ಎನ್ನುವುದು ಹಲವರಿಗೆ ದೂರದ ಮಾತು. ಆದುದರಿಂದ ಈಗೀಗ ನಿದ್ರಾಹೀನತೆಯು ಎಲ್ಲಾ ವಯೋಮಾನದವರಲ್ಲೂ ಕಾಣಿಸಿಕೊಳ್ಳತೊಡಗಿದೆ. ಇದಕ್ಕಾಗಿ ಮಾತ್ರೆಗಳನ್ನು ಸೇವಿಸುವವರ ಸಂಖ್ಯೆಯೂ ಅಧಿಕವಾಗಿದೆ.

ನಿದ್ರಾಹೀನತೆ ಎಂದರೇನು?
ಮಲಗಿ ತುಂಬ ಹೊತ್ತಾದರೂ ನಿದ್ದೆ ಬಾರದೇ ಇರುವುದು, ಮಧ್ಯದಲ್ಲಿ ಎಚ್ಚರಗೊಂಡು ಪುನ: ನಿದ್ದೆ ಬಾರದಿರುವುದು ಅಥವಾ ಮುಂಜಾವು ತುಂಬ ಬೇಗನೇ ಎಚ್ಚರಗೊಳ್ಳುವುದಕ್ಕೆ ನಿದ್ರಾಹೀನತೆ (Insomnia) ಎನ್ನುತ್ತಾರೆ. ಹಾಗೆಯೇ ಮೇಲ್ಕಾಣಿಸಿದ ಅವಧಿಯಷ್ಟು ನಿದ್ದೆಯಿಲ್ಲದಿದ್ದರೂ ಅದು ನಿದ್ರಾಹೀನತೆಯಾಗುತ್ತದೆ.

ಕಾರಣಗಳೇನು?

1.ತಾಂತ್ರಿಕ ಉಪಕರಣಗಳ ಅತಿಯಾದ ಬಳಕೆ: ಅತಿಯಾದ ಹಾಗೂ ಸಮಯದ ಇತಿಮಿತಿ ಇಲ್ಲದೆ ಮೊಬೈಲ್, ಇಂಟರ್ನೆಟ್, ಕಂಪ್ಯೂಟರ್ ಬಳಕೆ, ಗೇಮ್‌ಗಳ ಗೀಳು-ಇವುಗಳಿಂದಾಗಿ ಮನಸ್ಸು ಶಾಂತಗೊಳ್ಳಲು ಸಮಯವೇ ಇಲ್ಲದಂತಾಗಿದೆ.
2.ಆರೋಗ್ಯಕ್ಕಿಂತ ಉದ್ಯೋಗದ ಮೇಲೆ ಇಡುವ ಪ್ರಾಮುಖ್ಯತೆ-ಉತ್ತಮ ಜೀವನಕ್ಕಾಗಿ ಹಾಗೂ ಔದ್ಯೋಗಿಕ ಕ್ಷೇತ್ರದಲ್ಲಿರುವ ಸ್ಪರ್ಧೆಯಿಂದಾಗಿ 24 x 7 ದುಡಿಯುವಂತಹ ಹಂಬಲ ಅಥವಾ ಅನಿವಾರ್ಯತೆ.
3. ಮಾನಸಿಕ ಒತ್ತಡ-ಉದ್ಯೋಗ,ಕೌಟುಂಬಿಕ,ಆರ್ಥಿಕ ಸಮಸ್ಯೆಗಳ ಕುರಿತು ತೀವ್ರವಾದ ಆಲೋಚನೆ.
4. ಶಾರೀರಿಕ ಕಾಯಿಲೆಗಳು.
5.ವಯೋಸಹಜ-ಸಾಮಾನ್ಯವಾಗಿ ೬೦ವರ್ಷ ದಾಟಿದ ಮೇಲೆ ಶರೀರದ ಜೈವಿಕ ಗಡಿಯಾರದಲ್ಲಾಗುವ ಬದಲಾವಣೆಯಿಂದಾಗಿ, ನಿವೃತ್ತಿ ಜೀವನದ ಪರಿಣಾಮ, ಸ್ತ್ರೀಯರಲ್ಲಿ ಮುಟ್ಟು ನಿಲ್ಲುವ ಪ್ರಕ್ರಿಯೆ(45 ವರ್ಷದ ನಂತರ)ಗಳಿಂದ ನಿದ್ರಾಹೀನತೆ ಸಹಜ. ಈ ಸಂದರ್ಭಗಳಲ್ಲಿ ಹಗಲು/ ಮುಸ್ಸಂಜೆ ನಿದ್ದೆ ತೂಗಿದಂತಾಗಿ ರಾತ್ರಿ ನಿದ್ದೆ ಬರದೇ ಇರುವುದು ಸಾಮಾನ್ಯ.
6.ಅತಿಯಾದ ಪ್ರಯಾಣ.
7.ಕಾಫ಼ಿ,ಟೀ, ಸಿಗರೇಟ್, ತಂಬಾಕು ಹಾಗೂ ಮದ್ಯಗಳ ಅತಿಯಾದ ಸೇವನೆ.

ನಿದ್ರಾಹೀನತೆಯ ಪರಿಣಾಮಗಳು:
ನಿದ್ರಾಹೀನತೆಯಿಂದಾಗಿ ಶಾರೀರಿಕವಾಗಿ ತಲೆನೋವು,ತಲೆ ತಿರುಗುವುದು, ಕಣ್ಣು ಉರಿ, ಸುಸ್ತು, ವಾಕರಿಕೆ, ಅಜೀರ್ಣ,ಹೊಟ್ಟೆ ಉರಿ, ಮಲಬದ್ಧತೆ ಹಾಗೂ ಮೈ ಕೈ ನೋವು ಕಾಣಿಸಿಕೊಳ್ಳುವುದು. ಹಾಗೆಯೇ ಮಾನಸಿಕವಾಗಿ ಮರೆವು, ಅಸಹನೆ, ಸಿಟ್ಟು, ಉದ್ವೇಗ, ಖಿನ್ನತೆ ಇತ್ಯಾದಿ ಉಂಟಾಗಬಹುದು.

ನಿದ್ರಾಹೀನತೆಗೆ ಪರಿಹಾರಗಳೇನು?
1.ಉತ್ತಮ ದಿನಚರಿಯನ್ನು ಅನುಸರಿಸುವುದು. ರಾತ್ರಿ ಮಲಗುವ ಹಾಗೂ ಬೆಳಗ್ಗೆ ಏಳುವ ಸಮಯವನ್ನು ಸ್ಥಿರವಾಗಿ ಪಾಲಿಸುವುದು.
2.ನಿಯಮಿತ ಯೋಗ ಹಾಗೂ ಧ್ಯಾನದ ಅಭ್ಯಾಸ.
3.ಆಹಾರ ಕ್ರಮ:

  • ರಾತ್ರಿ ಲಘುವಾದ ಆಹಾರವನ್ನು ಸೇವಿಸಬೇಕು.
  • ಪೋಷಕಾಂಶಗಳಾದ ಟ್ರಿಪ್ಟೊಫಾನ್,ಮೆಗ್ನೀಶಿಯಂ, ಕ್ಯಾಲ್ಶಿಯಂ ಹಾಗೂ ವಿಟಾಮಿನ್ ಇರುವಂತಹ ಆಹಾರ ವಸ್ತುಗಳನ್ನು ಸೇವಿಸಬೇಕು.ಇವುಗಳು ನಿದ್ದೆಯನ್ನು ಉತ್ತೇಜಿಸುತ್ತವೆ.ಉದಾ: ಹಾಲು, ಪಾಲಕ್, ಹರಿವೆ, ಬೆಂಡೆಕಾಯಿ, ,ನೆಲಗಡಲೆ ಬೀಜ, ಸೂರ್ಯಕಾಂತಿ ಬೀಜ,ಎಳ್ಳು, ಪಿಸ್ತ,ಬಾದಾಮಿ, ಬಾಳೆಹಣ್ಣು,ಬಟರ್ ಫ್ರೂಟ್,ಆಪಲ್,ಅಕ್ಕಿ,ಗೋಧಿ, ಜೋಳ,ಓಟ್ಸ್ ಇವುಗಳಿಂದ ತಯಾರಿಸಿದಂತಹ ಪದಾರ್ಥಗಳು.
  • ಕಾಫಿ, ಟೀ, ಮಸಾಲೆಯುಕ್ತ ಖಾರ ಹಾಗೂ ಎಣ್ಣೆ ತಿಂಡಿಗಳನ್ನು ಕಡಿಮೆ ಮಾಡಬೇಕು.
  • ಮಲಗುವುದಕ್ಕಿಂತ ೨-೩ಗಂಟೆ ಮೊದಲು ಆಹಾರ ಸೇವಿಸುವುದು. ನಂತರ ಲಘುವಾಗಿ ವಾಕಿಂಗ್ ಮಾಡುವುದು.ಇದರಿಂದ ಒಂದು ಹಂತದ ಜೀರ್ಣ ಕ್ರಿಯೆ ಮುಗಿದು ಶರೀರವು ನಿದ್ರಿಸಲು ತಯಾರಾಗುವುದು.
  • ರಾತ್ರಿ ಈ ಪಾನೀಯಗಳನ್ನು ಸೇವಿಸಬಹುದು-ಒಂದು ಲೋಟ ಹಾಲಿಗೆ ಒಂದು ಚಮಚ ಅಶ್ವಗಂಧ ಚೂರ್ಣವನ್ನು ಸೇರಿಸಿ ಕುದಿಸಿ ಕುಡಿಯಬೇಕು/ ೫-೭ ಪುದೀನ ಎಲೆಗಳನ್ನು ಒಂದು ಲೋಟ ನೀರಲ್ಲಿ ಕುದಿಸಿ ಕುಡಿಯಬೇಕು/ ಪಾಲಕ್ ಪುದೀನ ಜ್ಯೂಸ್ / ಮುಳ್ಳುಸೌತೆ, ಪಾಲಕ್, ಶುಂಠಿ, ನಿಂಬೆರಸ,ಜೇನು ಸೇರಿಸಿ ಜ್ಯೂಸ್ ಮಾಡಿ ಕುಡಿಯಬೇಕು.

4.ಮನಸ್ಸನ್ನು ಶಾಂತವಾಗಿಡಲು ಉತ್ತಮ ಪುಸ್ತಕಗಳನ್ನು ಓದುವುದು ಅಥವಾ ಹಿತವಾದ ಸಂಗೀತವನ್ನು ಕೇಳಬಹುದು.
5.ಮಲಗುವ ಮೊದಲು ಮನಸ್ಸಿಗೆ ಕ್ಷೋಭೆ ತರುವಂತಹ ವಿಷಯಗಳನ್ನು ನೋಡದಿರುವುದು. ಉದಾ: ಕ್ರೈಂ ನ್ಯೂಸ್, ಹಾರರ್ ಶೋ
6.ಉತ್ತಮ ಗಾಳಿ ಸಂಚಾರ ಇರುವ ಕೋಣೆಯಲ್ಲಿ ಮಲಗುವುದು.
7.ಜೀವನದಲ್ಲಿ ಸಾಧಿಸಿದಂತಹ ಉತ್ತಮ ಕಾರ್ಯಗಳು, ಸಂತೋಷದಾಯಕವಾದ ಘಟನೆಗಳು ಮೊದಲಾದ ಧನಾತ್ಮಕ ಆಲೋಚನೆಗಳೊಂದಿಗೆ ಮಲಗಬೇಕು.
ಈ ರೀತಿಯಾಗಿ ಆರೋಗ್ಯಕರ ಜೀವನಶೈಲಿ, ಆಹಾರಕ್ರಮ ಹಾಗೂ ಸಕಾರಾತ್ಮಕ ಆಲೋಚನೆಗಳನ್ನು ಪಾಲಿಸಿದರೆ ಸುಖವಾದ ನಿದ್ದೆಯನ್ನು ಗಳಿಸುವುದು ಕಷ್ಟವೇನಿಲ್ಲ.

ಸೂಚನೆ: ಅತಿಯಾದ ನಿದ್ರಾಹೀನತೆಯಿದ್ದಲ್ಲಿ ವೈದ್ಯರ ಸಲಹೆ ಪಡೆಯಬೇಕು.

-ಡಾ.ಹರ್ಷಿತಾ ಎಂ.ಎಸ್ , ಬಳ್ಳಾರಿ

29 Comments on “ನಿದ್ದೆ‌ ಏಕೆ ಬರುತ್ತಿಲ್ಲ??

  1. ಸಕಾಲಿಕ ಲೇಖನ. ಸದ್ಯ ಹೆಚ್ಚಿನವರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ . ಈ ಸಮಸ್ಯೆಗೆ ಕಾರಣಗಳು , ಹಾಗು ಪರಿಹಾರ ಎರಡನ್ನೂ ಸರಳವಾಗಿ ಸೂಚಿಸಿದ ರೀತಿ ಚೆನ್ನಾಗಿದೆ .

  2. ಒಳ್ಳೆಯ ಲೇಖನ, ನಿದ್ರಾಹೀನತೆಯನ್ನು ತಡೆಯಲು ಉತ್ತಮ ಸಲಹೆಗಳು, ಇದನ್ನು ಪಾಲಿಸುವುದು ಸಾಧ್ಯವೋ ಎಂದು ಆಲೋಚಿಸಬೇಕು,

  3. ಒಳ್ಳೆಯ ಮಾಹಿತಿಯುಕ್ತ ಲೇಖನ..ಧನ್ಯವಾದಗಳು ಡಾಕ್ಟರ್. ಧ್ಯಾನ, ಯೋಗಗಳೂ ಕೆಲವೊಮ್ಮೆ ಉಪಯುಕ್ತವೆನಿಸುತ್ತವೆ ಅಲ್ಲವೇ?

  4. ಇಂದಿನ ಪೀಳಿಗೆಗೆ ಸರಿಯಾದ ಲೇಖನ…. ತುಂಬಾ ಚೆನ್ನಾಗಿದೆ…!

  5. ಆರೋಗ್ಯ ಚೆನ್ನಾಗಿ ಇದೆ ಆದರೆ ರಾತ್ರಿ 3ಗಂಟೆಯ ನಂತರ ನಿದ್ರೆ ಬರುವುದಿಲ್ಲ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *