ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು: ಪುಟ 2
ಡಬಲ್ ಬೆಡ್ ಡಿಲಕ್ಸ್ ರೂಮು ತುಂಬಾ ಚೆನ್ನಾಗಿತ್ತು. ಆ ಎಲ್ಲಾ ಇಲ್ಲಗಳ ಮಧ್ಯೆಯೇ ನಮಗೆಲ್ಲಾ ಏನೂ ಕೊರತೆಯಾಗದಂತೆ ನಿರಂತರ ವಿದ್ಯುತ್ , ನೀರು ಒದಗಿಸಿ ಅನುಕೂಲ ಮಾಡಿಕೊಟ್ಟ ಹೋಟೆಲ್ ನವರ ಜೊತೆಗೆ ಬಾಲಣ್ಣನವರಿಗೂ ಎಷ್ಟು ಧನ್ಯವಾದ ಹೇಳಿದರೂ ಸಾಲದು. ಇವುಗಳ ಮಧ್ಯೆಯೇ ಅತೀ ಮುಖ್ಯವಾದ ಕೆಲಸವೊಂದು ನಮ್ಮ ಹೋಟೆಲಿನ ಪಕ್ಕದಲ್ಲಿ ನಡೆಯುವುದು ಕಂಡಾಗ, ಆಕ್ಷಣದ ಅಗತ್ಯತೆಗೆ ಮನುಷ್ಯ ಎಷ್ಟು ಬದ್ಧನಾಗಿರುವನೆಂದು ಆಶ್ಚರ್ಯವಾಗುತ್ತದೆ. ಪುಟ್ಟ ಅಂಗಡಿಯ ಮುಂದೆ ರಾಶಿ ರಾಶಿಯಾಗಿ ಬಿದ್ದಿದ್ದವು..ಚಿಕ್ಕ, ದೊಡ್ಡ ಜನರೇಟರ್ ಗಳು, ರಿಪೇರಿಗಾಗಿ!
ಮೂರು ಮಹಡಿಯ ಆ ಕಟ್ಟಡದ ಮೇಲಿನ ಅಂತಸ್ತು ನಮಗಾಗಿ ಬಿಟ್ಟುಕೊಟ್ಟಿದ್ದರಿಂದ, ನಮ್ಮ ಅನ್ನಪೂರ್ಣೇಶ್ವರರು (ಅಡಿಗೆಯವರು) ಹಾಗೂ ನಮ್ಮದೇ ಸಾಮ್ರಾಜ್ಯ! ಅದಾಗಲೇ ನಮ್ಮಿಂದ ಮೊದಲೇ ಅಲ್ಲಿ ಬಂದು ಸೇರಿದ್ದ ಇತರ ಸಹ ಪ್ರವಾಸಿ ಬಂಧುಗಳ ಜೊತೆಗೆ ಹಸಿದ ಹೊಟ್ಟೆಗೆ ಸವಿಯಾದ ಭೋಜನ ಸೇರಿದಾಗಲೇ ಎಲ್ಲರೊಡನೆ ಮಾತು ಸುರು. ಅದಾಗಲೇ ತಿಳಿಯಿತು, ಹವ್ಯಕ ಬಂಧುಗಳು ಅಪರಿಚಿತರಾಗಿ ಉಳಿಯದೆ ಪರಸ್ಪರ ಸ್ನೇಹ, ಪ್ರೀತಿಯ ಬೆಸುಗೆಯಲ್ಲಿ ಬಂಧಿಸಲ್ಪಟ್ಟಾಗಿತ್ತು. ಆ ಸ್ನೇಹಕೂಟದಲ್ಲಿ ಹೆಚ್ಚಿನವರೆಲ್ಲಾ ಮೊದಲಿನ ಕೆಲವು ಪ್ರವಾಸಗಳಲ್ಲಿ ಜತೆಗೂಡಿದವರಾಗಿದ್ದರು. ಊಟದ ಜೊತೆ ಜೊತೆಗೆ ಬಾಲಣ್ಣನವರಿಂದ ಆ ದಿನದ ಕಾರ್ಯಕ್ರಮಗಳ ಬಗ್ಗೆ ಸವಿವರಣೆ ಹಾಗೂ ಸೂಕ್ತವಾದ ಸಲಹೆಗಳು ಉಪಯುಕ್ತವಾಗಿದ್ದವು. ಹೊಟ್ಟೆ ತುಂಬಿದ ಉತ್ಸಾಹದಲ್ಲಿ, ನಮಗಾಗಿ ಕಾದಿದ್ದ ದೊಡ್ಡ A/C Luxury ಬಸ್ಸಿನಲ್ಲಿ ಆಸೀನರಾದಾಗ ಎಲ್ಲರ ಮೊಗದಲ್ಲಿ ಹೊಸ ಕಳೆ! 33 ಜನರೊಡಗೂಡಿ ಜಯಘೋಷದೊಂದಿಗೆ ಬಸ್ಸು ಹೊರಟಾಗ ನನಗನ್ನಿಸಿದ್ದು, ಧ್ವನಿವರ್ಧಕವಿದ್ದರೆ ಚೆನ್ನಾಗಿತ್ತೆಂದು. ಹಾಂ..ಆಗಲೇ ಆ ದೇವ ತಥಾಸ್ತು ಅಂದಂತೆ ಮೈಕ್ ಒಂದು ಮೆಲ್ಲ ಹೊರಬಂದು ಮಹೇಶಣ್ಣನ ಕೈಯಲ್ಲಿ ರಾರಾಜಿಸುತ್ತಿತ್ತು. ಯಾವುದೇ ಕಾರ್ಯಕ್ರಮದ ಯಶಸ್ಸಿಗೆ ಮೊದಲನೆಯದಾಗಿ ದೇವರನ್ನು ಪ್ರಾರ್ಥಿಸುವುದು ರೂಢಿ. ಸುಬ್ರಹ್ಮಣ್ಯ ಶರ್ಮರು ಸುಶ್ರಾವ್ಯವಾಗಿ ದೇವರ ನಾಮವನ್ನು ಹಾಡುವುದರ ಮೂಲಕ ನಮ್ಮ ಈ ಪ್ರವಾಸ ಕಾರ್ಯಕ್ರಮಕ್ಕೆ ಶುಭ ಚಾಲನೆ ನೀಡಿದರು.
(ಮುಂದುವರಿಯುವುದು..)
ಹಿಂದಿನ ಪುಟ ಇಲ್ಲಿದೆ : ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು: ಪುಟ 1
-ಶಂಕರಿ ಶರ್ಮ, ಪುತ್ತೂರು.
ಆಸಕ್ತಿಕಾರಕ ನಿರೂಪಣೆ 🙂
ಧನ್ಯವಾದಗಳು ಶ್ರುತಿ ಮೇಡಂ
Nice one . ಓದುತ್ತಲೇ ಮನಸು ನಿಮ್ಮ ವಿವರಣೆಯ ಜೊತೆ ಜೊತೆಗೆ ಕಲ್ಪನೆಯ ಲೋಕದೊಳಗೆ ಸಾಗುತ್ತಿದೆ. ನಾವು ಸ್ವತಃ ಅಲ್ಲಿ ಇದ್ದೆವೇನೋ ಅನ್ನೋ ಭಾವ ಮೂಡುತ್ತದೆ
ಧನ್ಯವಾದಗಳು ನಯನ ಮೇಡಂ
ಒಳ್ಳೆಯ ಲೇಖನ
ಅನಿತಾರವರಿಗೆ ಧನ್ಯವಾದಗಳು
ಲೇಖನ ಚೆನ್ನಾಗಿದೆ. ಶಂಕರಿ ಶರ್ಮಾ ಅವರು ಪ್ರವಾಸ ಮಾಡಿ ಕಣ್ಣಿಗೆ ಕಟ್ಟಿದಂತೆ ವಿವರಿಸಿದರು. ಸ್ವತಹ:ಹೋಗಲಾರದವರಿಗೆ ಇದೊಂದು ಉತ್ತಮ ಬರಹ, ಓದಲೆ ತುಂಬಾ ಖುಷಿ ನೀಡಿದೆ.
ಧನ್ಯವಾದಗಳು ಸರ್