ಕದ್ದು ತಂದ ಹೂವು ದೇವರಿಗೆ ಪ್ರಿಯವಂತೆ!

Share Button

ಬೆಳಗ್ಗೆದ್ದ ಕೂಡಲೇ ಹಾಲು ಮತ್ತು ಪೇಪರ್ ಬಂದಿದೆಯಾ ನೋಡುವಾ ಅಂತ ಬಾಗಿಲು ತೆರೆದು  ಮನೆಯ ಹೊರಗೆ ಬಂದೆ. ಕೈಯಲ್ಲಿ ಪ್ಲಾಸ್ಟಿಕ್ ಚೀಲ ಹಿಡಿದುಕೊಂಡ ವ್ಯಕ್ತಿಯೊಬ್ಬರು ನಮ್ಮನೆಯ ಗಿಡಗಳಲ್ಲಿ ಅರಳಿದ ಹೂವುಗಳನ್ನು ಕೊಯ್ಯುತ್ತಿದ್ದರು. ನನ್ನನ್ನು ನೋಡಿದ ತಕ್ಷಣ ತನಗೇನೂ ಗೊತ್ತಿಲ್ಲದವರಂತೆ ನಟಿಸುತ್ತಾ ಮುಂದೆ ನಡೆದರು. ನಾನೂ ಏನೂ ಹೇಳಲಿಲ್ಲ. ರಸ್ತೆಬದಿಯಲ್ಲಿಯೇ ಮನೆ ಇರುವುದರಿಂದ, ಮನೆಯ ಆವರಣ ಗೋಡೆಗೆ ತಾಗಿಕೊಂಡಿರುವ  ಗಿಡಗಳಿಂದ ಹೂವು ಕೀಳಲು ತುಂಬಾ ಸುಲಭವಿತ್ತು. ಮರುದಿನವೂ ಇದೇ ಪುನರಾವರ್ತನೆಯಾಯಿತು. ಕೇವಲ ಒಬ್ಬರಲ್ಲ, ಮೂರು ಜನ ಸುಮಾರು ಹದಿನೈದು ನಿಮಿಷಗಳ ಅವಧಿಯಲ್ಲಿ ನಮ್ಮನೆಯಲ್ಲಿ ಅರಳಿದ ಹೂವು ಮಾತ್ರವಲ್ಲ, ನಮ್ಮ ಪಕ್ಕದೆರಡು ಮನೆಗಳ ಗಿಡದಿಂದಲೂ ಹೂವುಗಳನ್ನು ಕಿತ್ತುಕೊಂಡು ಹೋಗುವುದನ್ನು ಕಂಡೆ. ಒಬ್ಬರಂತೂ, ಪಕ್ಕದ ಮನೆಯ ದಾಸವಾಳದ ಗಿಡದಲ್ಲರಳಿದ  ಹತ್ತು-ಹದಿನೈದು ಹೂವುಗಳಲ್ಲಿ ಒಂದೆರಡು ಹೂವು ಮಾತ್ರ ಗಿಡದಲ್ಲಿ ಬಿಟ್ಟು ಉಳಿದ ಹೂವುಗಳನ್ನು ಕೊಯ್ಯುವುದನ್ನು ಕಂಡೆನು. ಹೂವು ಕೊಯ್ಯುವಾಗ ನಾಜೂಕು ಕೂಡಾ ಇರಲಿಲ್ಲ. ಗಿಡದ ಗೆಲ್ಲು ಮುರಿಯುವ ರೀತಿಯಲ್ಲಿ, ಹೂಗಳನ್ನು ಬಾಚಿಕೊಳ್ಳುತ್ತಿದ್ದರು.  ಪ್ರತಿದಿನವೂ ಹೂವುಗಳು ಹೇಗೆ ಮಾಯವಾಗುತ್ತಿತ್ತು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿತ್ತು. ನಿತ್ಯವೂ ಇದೇ ಪರಿಪಾಠ ಮುಂದುವರಿಯುತ್ತಿತ್ತು. ಒಂದು ದಿನ  ಒಬ್ಬರ ಹತ್ತಿರ ಹೇಳಿಯೇ ಬಿಟ್ಟೆ “ನಮಗೂ ಸ್ವಲ್ಪ ಹೂವು ಉಳಿಸಿ, ದೇವರ ಪೂಜೆಗೆ ಬೇಕಾಗ್ತದೆ”. ಕಿವಿಗೆ ಬಿದ್ದರೂ ಕೇಳಿಸದಂತೆ ಮುಂದೆ ನಡೆದರು. ನಂತರದ ದಿನಗಳಲ್ಲೂ ಪರಿಸ್ಠಿತಿಯೇನೂ ಬದಲಾಗಲಿಲ್ಲ.

ನಮ್ಮ ಮನೆಯಿಂದ ಐದಾರು ಮನೆ ಆಚೆಯ ಮನೆಯಲ್ಲಿ ಒಂದು ಸಂಪಿಗೆ ಗಿಡವಿದೆ. ಅದರ ಟೊಂಗೆಗಳು ದಾರಿ ಬದಿಗೆ ಚಾಚಿಕೊಂಡಿವೆ. ಆ ಮನೆಯಾಕೆಯೂ ಹೇಳುತ್ತಿದ್ದರು “ದಾರಿ ಬದಿಗೆ ಚಾಚಿಕೊಂಡ ಟೊಂಗೆಗಳಲ್ಲಿರುವ ಸಂಪಿಗೆ ಹೂವುಗಳು ನಮಗೆ ಸಿಗುವುದೇ ಇಲ್ಲ. ಟೊಂಗೆ ಎಳೆದು, ಬೇಕಾದ್ರೆ ಗೆಲ್ಲು ಮುರಿದಾದ್ರೂ ಹೂಗಳನ್ನು ಬಾಚಿಕೊಳ್ಳುತ್ತಾರೆ. ಕೆಲವೊಮ್ಮೆ ಒಂದೇ ಒಂದು ಸಂಪಿಗೆ ಹೂವು ಸಿಗುವುದಿಲ್ಲ ದೇವರ ಪೂಜೆಗೆ”. ನನ್ನ ಇನ್ನೊಬ್ರು ಸಹೋದ್ಯೋಗಿಯ ಅನುಭವವೂ ಇದೇ ತೆರನಾದದ್ದು “ನಂಗೆ ಜಾಜಿಹೂವು ತುಂಬಾ ಇಷ್ಟ, ಆದ್ರೆ ಸಂಜೆ ಮನೆ ತಲುಪುವಷ್ಟರಲ್ಲಿ ಯಾರಾದರೂ ದಾರಿಹೋಕರು ಜಾಜಿ ಹೂವಿನ ಮೊಗ್ಗುಗಳನ್ನು ಕೊಯ್ದು ಆಗಿರುತ್ತದೆ. ಸಾಕಷ್ಟು ಜಾಗ ಇಲ್ಲದ ಕಾರಣ ಮನೆಯೆದುರೇ ಗಿಡ ನೆಡಬೇಕಾಯ್ತು. ಅದೂ ಬೇರೆ ರಸ್ತೆಬದಿಗೆ ಹಬ್ಬಿಕೊಂಡಿದೆ. ಕೊಯ್ಯುವವರಿಗೆ ಸುಲಭ ಆಯ್ತು”. ಇಂತಹದೇ ಅಭಿಪ್ರಾಯ ವ್ಯಕ್ತಪಡಿಸಿದವರು ಹಲವರು. ವಿಷಯ ಸಣ್ಣದೇ ಆದ್ರೂ, ಯೋಚಿಸಬೇಕಾದಂತಹ ವಿಷಯವೇ.

ಮನುಷ್ಯರೇಕೆ ಹೀಗೆ ಸ್ವಾರ್ಥಿಗಳಾಗುತ್ತಿದ್ದಾರೆ? ನೀರು, ಗೊಬ್ಬರ ಹಾಕಿ ಗಿಡಗಳನ್ನು ಪೋಷಿಸಿದವರಿಗೂ ಹೂವುಗಳು ಬೇಕೆಂಬ ಕನಿಷ್ಟ ಜ್ಞಾನವೂ ಇಲ್ಲವೇ? ದೇವರಂತೂ “ಬೇರೆಯವರ ಮನೆಯಲ್ಲಿ ಬೆಳೆದ ಹೂವುಗಳನ್ನು ಕದ್ದು ತಂದು ನನಗರ್ಪಿಸಿ” ಅಂತ ಹೇಳಿರುವುದಿಲ್ಲ. ಉದ್ಯೋಗ ನಿಮಿತ್ತ ನಗರಕ್ಕೆ ಬಂದು ಬಾಡಿಗೆ ಮನೆಯಲ್ಲಿ ವಾಸಿಸುವ ಕೆಲವರಿಗೆ ಹೂಗಿಡಗಳನ್ನು ಬೆಳೆಯಲು ಅಷ್ಟೊಂದು ಆಸಕ್ತಿ ಇರುವುದಿಲ್ಲ. ಬಹು ಅಂತಸ್ತಿನ ವಸತಿ ಸಮುಚ್ಚಯಗಳಲ್ಲಿ ವಾಸವಿರುವವರಿಗೆ ಹೂಗಿಡಗಳನ್ನು ನೆಡಲು ಜಾಗವಿಲ್ಲ. ದಿನಾಲೂ ಹಣ ಕೊಟ್ಟು ಹೂವು ತರಲು ಮನಸ್ಸಿರುವುದಿಲ್ಲ. ಪೂಜೆಗೆ ಹೂವಿಲ್ಲದಿದ್ದರೆ ಮನಸ್ಸಿಗೆ ಸಮಾಧಾನವಿಲ್ಲ. ಅದಕ್ಕೋಸ್ಕರ ಕಂಡುಕೊಂಡ ಸುಲಭೋಪಾಯವೇ ಬೇರೆಯವರ ಮನೆಯ ಆವರಣದಲ್ಲಿ ಅರಳಿದ ಹೂವುಗಳನ್ನು ಲಪಟಾಯಿಸುವುದು. “ದೇವರ ಪೂಜೆಗೆ ಜಾಸ್ತಿ ಹೂವೇನೂ ಬೇಡ. ಹೇಗೂ ಬೆಳಗಿನ ವಾಕಿಂಗ್ ಹೋಗಲಿಕ್ಕಿದೆ/ಹಾಲು ಮತ್ತು ದಿನಪತ್ರಿಕೆ ತರಲೆಂದು ಪಕ್ಕದ ಅಂಗಡಿಗೆ ಹೋಗಲಿಕ್ಕಿದೆ. ಆಗ ದಾರಿಯಲ್ಲಿ ಹೂಗಳು ಕಾಣಸಿಕ್ಕಿದರೆ ಕೊಯ್ದುಕೊಂಡರಾಯ್ತು” ಎನ್ನುವ ಸರಳ ಯೋಚನೆ ಕೆಲವರದು. ಇಂತಹವರಿಗೆ ಹೂಕಳ್ಳರು ಅಂದರೆ ತಪ್ಪಿಲ್ಲ.

ಹಸಿರೇ ಉಸಿರು ಎಂದು ನಂಬುವವರ ಮನೆಯ ಅಂಗಳದಲ್ಲಿ ಪುಟ್ಟ ಕೈತೋಟ ಇದ್ದೇ ಇರುತ್ತದೆ. ಅಂತಹವರಿಗೆ,      ತರಹೇವಾರಿ ಹೂವಿನ/ಹಣ್ಣಿನ ಗಿಡಗಳನ್ನು ನೆಟ್ಟು, ಪೋಷಿಸುವುದು ದೈನಂದಿನ ಜೀವನದ ಒಂದು ಭಾಗವಾಗಿರುತ್ತದೆ. ಗಿಡದ ಒಡಲ ತುಂಬಾ ಹೂವುಗಳರಳಿದಾಗ ನೋಡಿ ಸಂಭ್ರಮಿಸುತ್ತಾರೆ.  ಎಷ್ಟೋ ಜನರಿಗೆ ಇದರಿಂದ ಮನಸ್ಸಿಗೆ ಶಾಂತಿ, ಸಮಾಧಾನ ಮತ್ತು ಖುಷಿ ಸಿಗುತ್ತದೆ. ಕೆಲವರಂತೂ, ಗುಲಾಬಿಯಂತಹ ಹೂವುಗಳನ್ನು “ತಲೆಗೆ ಮುಡಿದರೆ ಒಂದೇ ದಿನದಲ್ಲಿ ಬಾಡಿ ಹೋಗುತ್ತದೆ” ಎಂದು ಗಿಡದಲ್ಲಿಯೇ ಹೂವುಗಳನ್ನು ಬಿಡುತ್ತಾರೆ. ಇಂತಹವರ ಸಾಲಿಗೆ ಸೇರಿದ ನನ್ನ ಸಹೋದ್ಯೋಗಿಯೊಬ್ಬರು ಅಲವತ್ತುಕೊಳ್ಳುತ್ತಿದ್ದರು “ಗಿಡದಲ್ಲಿರಲಿ ಅಂತ ಗುಲಾಬಿ ಕೊಯ್ಯಲಿಲ್ಲ. ಸಂಜೆ ಹೋಗಿ ನೋಡುವಾಗ ಗಿಡ ಖಾಲಿ ಖಾಲಿ. ತುಂಬಾ ಬೇಸರ ಆಯ್ತು”.

ಸಂಜೆ ಪಕ್ಕದ ಮನೆಯಾಕೆಯ ಜೊತೆ “ಹೂ ಕಳ್ಳರ” ಬಗ್ಗೆ  ಮಾತನಾಡುತ್ತಿರಬೇಕಾದರೆ ಆಕೆಯ ಗಂಡ ಹೇಳಿದ ಮಾತು ತಮಾಷೆಯಾಗಿತ್ತು “ಹೂವುಗಳನ್ನು ತಾನೇ ಅವರು ಕೊಂಡು ಹೋದದ್ದು? ನಿಮ್ಮಲ್ಲಿರೋ ಚಿನ್ನವನ್ನಲ್ಲ ತಾನೇ!. ಅವರು ಮಾಡಿದ ದೇವರ ಪೂಜೆಯ ಪುಣ್ಯದಲ್ಲಿ ನಿಮಗೂ  ಸಣ್ಣ ಪಾಲು ಸಿಗುತ್ತದೆ”. ಅವರ ಧನಾತ್ಮಕ ಚಿಂತನೆಗೆ ತಲೆದೂಗಲೇಬೇಕಾಯ್ತು. ಕದ್ದು ತಂದ ಹೂವು ದೇವರಿಗೆ ಇಷ್ಟ ಅಂತೆ. ಅದಕ್ಕೋಸ್ಕರ ಬೇರೆಯವರ ಮನೆಯಿಂದ ಹೂವುಗಳನ್ನು ಕೊಯ್ಯುತ್ತೇವೆ!” ಅಂತ ದೇವರ ಕಡೆಗೆ ಬೆರಳು ತೋರಿಸಿ ತಮ್ಮ ಕೆಲಸವನ್ನು ಸಮರ್ಥಿಸಿಕೊಳ್ಳುವ “ಹೂಕಳ್ಳರು” ಸಹಾ ನಮ್ಮ ನಡುವೆ ಇದ್ದಾರೆ.

ಕೊನೆಯಲ್ಲಿ ಹೂಕಳ್ಳರಿಗೊಂದು ಕಿವಿಮಾತು. “ನಿಮ್ಮ ಅಭ್ಯಂತರ ಇಲ್ಲದಿದ್ರೆ ನಾನು ಒಂದೆರಡು ಹೂವುಗಳನ್ನು ತೆಗೆದುಕೊಳ್ಳಬಹುದೇ?” ಎಂದು ಹೂಗಿಡಗಳ ಯಜಮಾನರಲ್ಲಿ ವಿನಯದಿಂದ ಕೇಳಿದರೆ ಬಹುಶಃ ಯಾರೂ ಬೇಡ ಅನ್ನಲಾರರು. ಕೇಳಿ ಹೂವುಗಳನ್ನು ಕೊಯ್ದರೆ, ಅಪರಾಧಿ ಪ್ರಜ್ಞೆಯೂ ಕಾಡುವುದಿಲ್ಲ. “ಹೂಕಳ್ಳರು” ಎಂದು ಯಾರೂ ಬೆರಳು ತೋರಿಸುವುದೂ ಇಲ್ಲ.

-ಡಾ.ಕೃಷ್ಣಪ್ರಭಾ, ಮಂಗಳೂರು

21 Responses

  1. Lathagoalskrishna says:

    ನಮಗೂ ಈವಿಷಯ ಬಿಸಿತುಪ್ಪ

  2. Hema says:

    ಇದು ನನ್ನ ಅನುಭವ ಕೂಡ. ಸುತ್ತುಮುತ್ತಲೂ ಗಾಳಿ-ಬೆಳಕು ಚೆನ್ನಾಗಿರಲೆಂದು, ಮನೆ ಕಟ್ಟುವಾಗ ನಮ್ಮ ನಿವೇಶನದ ಒಳಗೆ ನಾಲ್ಕೂ ದಿಕ್ಕಿನಲ್ಲಿ ಕಡೆ ಸ್ವಲ್ಪ ಖಾಲಿ ಜಾಗ ಬಿಟ್ಟು ಕೈತೋಟ, ಹೂತೋಟ ಮಾಡಿಕೊಂಡಿದ್ದೇವೆ. ನಮಗಿಂತ ದೊಡ್ಡ ನಿವೇಶನವುಳ್ಳವರೂ ಕೂಡ, ತಮ್ಮ ಸೈಟಿನಲ್ಲಿ ಒಂದಂಗುಲವೂ ಬಿಡದಂತೆ ಸಿಮೆಂಟ್ ಹಾಕಿ, ನಾವು ಆಸ್ಥೆಯಿಂದ ಬೆಳೆಸಿದ ದಾಸವಾಳ, ಮಲ್ಲಿಗೆ, ವೀಳ್ಯದೆಲೆ, ಕರಿಬೇವು ಇತ್ಯಾದಿಗಳನ್ನು ನಮಗರಿವಿಲ್ಲದಂತೆ ಕೀಳುವಾಗ ಉರಿಗೋಪ ಬರುತ್ತದೆ. ಅವರಿಗಂತೂ ಸಂಕೋಚ. ಮರ್ಯಾದೆ ಇಲ್ಲ, ಇಂಥ ವಿಷಯಕ್ಕೆ ಜಗಳ ಮಾಡಿದರೆ ನಮಗೇ ಮುಜುಗರ ಎಂದು ನಾವೇ ತೆಪ್ಪಗಾಗುತ್ತೇವೆ.

  3. Udaya Shankar Puranika says:

    ಇಂತಹ ಕೊಳಕು ಮನಸ್ಸಿನವರು ದೇವರ ಹೆಸರಲ್ಲಿ ಕಳ್ಳತನ ಮಾಡುತ್ತಾರೆ. ಅವರು ಕಳ್ಳತನ ಮಾಡುತ್ತಿರುವಾಗ ಸಾರ್ವಜನಿಕರು ಛೀಮಾರಿ ಹಾಕಬೇಕು. ಆಗಲಾದರೂ ಈ ಕಳ್ಳರು ಸರಿಹೋಗಬಹುದು.

  4. Thippu Vardhan says:

    ಅದಕ್ಕ ತುಂಬಾ ಜನ ಮುಂಜಾನೆ ವಾಕ್ ಬರುವಾಗ ಕವರ್ ತಂದಿರುತ್ತಾರೆ….ಮನೆಯ ಮುಂದೆ ನೀರು ಹಾಕಿ ಚಮ್ನಾಗಿ ಬೆಳೆಸಿದ ಯಜಮಾನ ಎಚ್ಚರವಾಗುವಷ್ಟರಲ್ಲಿ ಹೂ ಕಿತ್ತುಕೊಂಡು ಹೋಗುತ್ತಾರೆ…ಆಗ ಆ ಮನೆ ಯಜಮಾನ ಅವರಿಗೆ ಶಾಪ ಹಾಕುವ ದೃಶ್ಯ ದಿನಾಲು ನಮ್ಮ ಕಣ್ಣಿ ಕಾಣುತ್ತೆ…ಇವರು ಹಾಕಿದ ಶಾಪ ದೇವರಿಗೆ ಹೂ ಅರ್ಪಿಸಿದ ಮೇಲೆ ತೊಲಗಿಹೋಗುತ್ತಾ…

  5. Vasundhara Kadaluru Mallappa says:

    ವಿಷಯ ಹಳೆಯದ್ದೇ. ಆದರೂ ನಿಮ್ಮ ನಿರೂಪಣಾಕ್ರಮ ಓದುವಿಕೆಗೆ ಹೊಸ ಓಘಕೊಟ್ಟಿದೆ. ಚೆಂದದ ಬರಹ.

  6. ನಯನ ಬಜಕೂಡ್ಲು says:

    ಕೃಷ್ಣಪ್ರಭಾ ಮೇಡಂ , superb , ಚಂದದ ಬರಹ . ನಿಮ್ಮ ಮಾತು ನಿಜ , ಸಿಕ್ಕಿ ಸಿಕ್ಕಿದವರ ಮನೆಯಿಂದ ಹೇಳದೆ ಕೇಳದೆ ಒರಟಾಗಿ , ಸೌಜನ್ಯವೇ ಇಲ್ಲದ ರೀತಿ ನಡೆದುಕೊಂಡು ಹೂ ಕೀಳೋದಕ್ಕಿಂತ , ಆ ಮನೆಯವರ ಬಳಿ ಕೇಳಿ ಕೊಯ್ಯುವು ದರಲ್ಲಿ ಒಂದು ನ್ಯಾಯ ಇದೆ , ಮತ್ತು ಆ ಮನೆಯವರಿಗೂ ಕೇಳಿ ತಗೊಡಿದ್ದಾರೆ ಅನ್ನೋ ಸಮಾಧಾನ ಇರುತ್ತೆ .

  7. Asha Nooji says:

    ಕದ್ದರೇ ..ಅದಕ್ಕೆ ರುಚಿ ,,ಅಲ್ಲವೇ .ಬೆಳೆಸಬೇಕು ,ನೀರು ಹಾಕಬೇಕು .ಇದಾದರೆ .ಸುಲಭವಲ್ಲವೇ ,ಸುಲಭದಲ್ಲಿ …ಸಿಗುವುದು ಆದರೆ .ಯಾರು ತಾನೆ ಕೀಳಲ್ಲ .ಜನರು ಹೇಳುವರು ಬಿಡುವರು ಅವರಿಗಿಲ್ಲ ಪರಿಜ್ಙಾನ ತಮ್ಮ ಪಾಡಿಗೆ ￿ವರು

  8. Nalini Bheemappa says:

    Idara anubhava namagu chennaagi aagide…aaguttide

  9. Shruthi Sharma says:

    ನನ್ನ ಅನುಭವ ಕೂಡಾ ಇದೇ. ಆನೆ ಕದ್ದರೂ ಕಳ್ಳ, ಅಡಿಕೆ ಕದ್ದರೂ ಕಳ್ಳ. ‘ಪೂಜೆಗಾಗಿ’ ಹೂ ಕದಿವ ಅನೇಕರು ಅಸಹ್ಯ ಹುಟ್ಟಿಸುತ್ತಾರೆ. ಸಾಮಾನ್ಯ ಜನರು ಕೂಡ ಇಂತಹ ಕಳ್ಳತನ ಮಾಡುವ ಮನಸ್ಥಿತಿ ಹೊಂದಿರುವುದು ದುರಂತ.

  10. Vasanth Shenoy says:

    Very true. Kastapattu belesida hoo gidadinda ee rithi kaddare thumba bejaraguthe. Devaru avarige olledu madali

  11. Shylajesha S says:

    ಬಾಲ್ಯದಲ್ಲಿ ನಮ್ಮ ಊರಲ್ಲಿ ಹೂ ಕುದಿಯುವ ದೃಶ್ಯ ಸಾಮಾನ್ಯವಾಗಿತ್ತು.ಅದರಲ್ಲೂ ವೃದ್ಧರು ಕೈಯಲ್ಲಿ ಇದ್ದ ಊರುಗೋಲನ್ನು ಹೂ ಕದಿಯಲು ಬಳಸುತ್ತಿದ್ದರು. ಈಗ ನಾನು ಇರುವ ಬೀದಿಯಲ್ಲಿ ಕೆಲವರು ಮನೆ ಮುಂದೆ ಫುಟ್ ಪಾತುಗಳನ್ನು ಹೂ ಗಿಡ ಬೆಳೆಸಲು ಆಕ್ರಮಿಸಿ ಕೊಂಡು ಬೇಲಿ ಹಾಕಿ ಕೊಂಡಿದ್ದಾರೆ.ಕಳ್ಳ? ಭಕ್ತರಿಗೆ ಹೂ ಹಬ್ಬ . ಕುತೂಹಲ ಏನು ಅಂದರೆ ಅದನ್ನು ಬೆಳೆದಿರುವಾಕೆ ಬೇರೆಯವರ ಮನೆಯಲ್ಲಿ ಹೂ ಕದಿಯುತ್ತಾರೆ.

  12. Krishnaprabha says:

    ನಮ್ಮ ಮನೆಯಂಗಳದಲ್ಲಿ ಬೆಳೆದ ಹೂವುಗಳನ್ನು ದಾರಿಹೋಕರು ಕೊಯ್ಯುವುದು ಮಾಮೂಲಿ ವಿಷಯ ಆಗಿ ಬಿಟ್ಟಿದೆ. ಬೆಳೆದ ಬಾಳೆಗೊನೆಯನ್ನು ಕೂಡಾ ಯಾರೋ ಕಡಿದುಕೊಂಡು ಹೋದರೆಂದು ಸಹೋದ್ಯೋಗಿಯೊಬ್ಬರು ಬೇಸರದಿಂದ ಹೇಳಿದಾಗ ಪಿಚ್ಚೆನ್ನಿಸಿತು..

  13. Santosh Shetty says:

    “ದಯವಿಟ್ಟು ಒಂದೆರಡು ಹೂವನ್ನು ನಮಗಾಗಿ ಬಿಟ್ಟು ಹೋಗ ಬಹುದೇ ? “.ಹೀಗೆಂದು ಯಜಮಾನ /ನಿ ಕೇಳಿದ್ದರೆ…………(?)
    ಅವರಿಗೆ ಮುಜುಗರ ಅನಿಸುತಿತ್ತ …ಏನೋ..?! Let us try in this regard.
    ಪ್ರಭಾ,ತಮ್ಮ ಲೇಖನ ಓದಿದೆ.ನನಗೂ ಸ್ವಲ್ಪ ಹೂವು ಉಳಿಸಿ, ಎಂಬಲ್ಲಿ ತಮ್ಮ ಬಹುದಿನದ ನೋವು ತೋಡಿಕೊಂಡಂತಿತ್ತು.
    ಸರಳ ಸುಂದರ ಶೈಲಿಯಲಿ ಅಭಿವ್ಯಕ್ತಿ ಸಲ್ಪಟ್ಟ ತಮ್ಮ ಅಭಿಪ್ರಾಯಗಳು. ಅಭಿನಂದನಾರ್ಹ.

    • Krishnaprabha says:

      ಧನ್ಯವಾದಗಳು ಸಂತೋಷ್ ಅವರಿಗೆ..
      ಹೂವು ಕೀಳುವವರು ಕಣ್ಣಿಗೆ ಬಿದ್ದರೆ ನಿಮ್ಮ ಸಲಹೆಯನ್ನು ಪ್ರಯತ್ನಿಸಬಹುದು

  14. Shankari Sharma says:

    ಹೌದು.. ಈ ಒಂದು ಅರ್ಥವಾಗದ ಗೀಳು ಸರ್ವತ್ರ ನೋಡಬಹುದು. ನಮ್ಮ ಮನೆ ಪಕ್ಕದಲ್ಲಿದ್ದ ಹಿರಿಯರ ಮನೆಯಲ್ಲಿ ತರಹೇವಾರಿ ಹೂಗಳು ತುಂಬಾ ಇದ್ದರೂ ವಾಕಿಂಗ್ ನೆಪದಲ್ಲಿ ಬೇರೆ ಕಡೆಯಿಂದ ಹೂ ಕದಿಯುವುದು ನೋಡಿ ಕಸಿವಿಸಿಯಾಗುತ್ತಿತ್ತು. ಸರಳ ಸುಂದರ ಬರಹ ಚೆನ್ನಾಗಿದೆ.

    • Krishnaprabha says:

      ಧನ್ಯವಾದಗಳು ಶಂಕರಿ ಶರ್ಮ ಅವರಿಗೆ. ತಮ್ಮ ಮನೆಯ ಗಿಡಗಳಲ್ಲಿ ಹೂವಿರಬೇಕು, ಉಳಿದವರ ಮನೆಯ ಗಿಡಗಳಲ್ಲಿನ ಹೂವು ದೇವರಿಗೆ ಅನ್ನುವ ಮನೋಭಾವ….

  15. Rama.M says:

    Akka, baraha chennagide. Heege hoovu keeluvavarige maryadi ennuvadu doorada mathu

  16. Anonymous says:

    Article is good. This is my experience also. Easy going people

  17. Thanuja says:

    Super article madam…

  18. Raveeshwara S says:

    ನೀವು ಬರೆಯುವ ವಿಷಯ, ಅದರಲ್ಲಿರುವ ಅಡಕಗಳು, ಭಾವನೆಗಳು, ಅಭಿವ್ಯಕ್ತಿಯ ರೀತಿ ತುಂಬಾ ಚೆನ್ನಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: