ಪ್ರವಾಸ

ನಯನ ಮನೋಹರ ನಯಾಗರ

Share Button

             ಅಮೇರಿಕಾದ ನ್ಯೂಯಾರ್ಕ್ ನ ಬಫೆಲೋ ಪಟ್ಟಣದಲ್ಲಿದೆ ಜಗತ್ತಿನ ಪ್ರಾಕೃತಿಕ ಅದ್ಭುತಗಳಲ್ಲೊಂದಾದ ನಯಾಗರ ಜಲಪಾತ. ನಾನು ಮೊತ್ತ ಮೊದಲಾಗಿ ನಮ್ಮ ಜೋಗದ ಜಲಪಾತವನ್ನು ನೋಡಿದಾಗ ಅದೆಷ್ಟು ಸಂಭ್ರಮಪಟ್ಟಿದ್ದೆ… ಪರಮಾಶ್ಚರ್ಯದಿಂದ ಮೂಕ ವಿಸ್ಮಿತಳಾಗಿದ್ದೆ! ಆದರೆ ಆಗ ನಯಾಗರದ ರಮಣೀಯ ದೃಶ್ಯವನ್ನು ಸವಿಯುವ ಭಾಗ್ಯ ನನ್ನದಾಗಬಹುದೆಂದು ಕನಸು ಮನಸಿನಲ್ಲೂ ಯೋಚಿಸಿರಲಿಲ್ಲ. ಅಮೇರಿಕಾದಲ್ಲಿರುವ ಮಗಳು-ಅಳಿಯ, ಮೂರು ತಿಂಗಳು ಅಲ್ಲಿಗೆ ಕರೆಸಿಕೊಂಡು ನಮಗಾಗಿ ಕೆಲವು ಪ್ರವಾಸಗಳನ್ನು ಏರ್ಪಡಿಸಿದರು. ಅದರಲ್ಲಿ ಹತ್ತು ದಿನಗಳ ಪೂರ್ವ ಅಮೇರಿಕಾ ಪ್ರವಾಸವೂ ಒಂದು. ಕ್ಯಾಲಿಫೋರ್ನಿಯಾದಿಂದ ಹೊರಟು, ರಾತ್ರಿ ಬಫೆಲೋದಲ್ಲಿರುವ ನಮ್ಮ ಬಂಧುಗಳ ಮನೆಯಲ್ಲಿ ಉಳಕೊಂಡು, ಅವರ ಆದರಾತಿಥ್ಯವನ್ನು ಸವಿದು ಮೊದಲನೆಯದಾಗಿ ನಾವು ವೀಕ್ಷಿಸಿದುದೇ ನಯಾಗರ ಜಲಪಾತವನ್ನು. ನನಗೆ ತಿಳಿದಂತೆ, ನಾನು ನೋಡಿದ ಸ್ಥಳಗಳ ಬಗ್ಗೆ ಪುಟ್ಟ ವಿವರಣೆ ಜೊತೆಗೆ ಕೆಲವು ಫೋಟೋಗಳು  ತಮಗಾಗಿ…

ಅಮೇರಿಕಾದ ಉತ್ತರ ಪರ್ವತ ಸಾಲುಗಳಲ್ಲಿನ ಮಂಜುಗಡ್ಡೆಯು ಬೇಸಿಗೆಯಲ್ಲಿ ಕರಗಿ ರೂಪುಗೊಂಡ ನಯಾಗರ ನದಿಯ ನೀರಿನಿಂದ ಉಂಟಾದ ನಯಾಗರ ಜಲಪಾತವು, *ಅಮೇರಿಕಾ ಫಾಲ್ಸ್, ಬ್ರೈಡಲ್ ವೇಲ್ ಮತ್ತು ಹಾರ್ಸ್ ಶೂ* ಎಂಬ ಮೂರು ಜಲಪಾತಗಳನ್ನು ಒಳಗೊಂಡಿದೆ. ಹಾರ್ಸ್ ಶೂ, ತನ್ನ ಹೆಸರಿನಂತೆ, ಕುದುರೆ ಲಾಳದ ಆಕಾರದಲ್ಲಿದ್ದು, ಅತ್ಯಂತ ಅಗಲವಾಗಿದೆ, ಅಂದರೆ ಸುಮಾರು 4 ಕಿ.ಮೀನಷ್ಟು!  ಇದರ ಅಗಾಧತೆ ಎಷ್ಟೆಂದು ಮನವರಿಕೆಯಾಗಲೂ ಕಷ್ಟ!   ಇದು ಕೆನಡಾಕ್ಕೆ ಸೇರಿದೆ. ಬ್ರೈಡಲ್ ವೇಲ್   ಸಣ್ಣದು. ನಯಾಗರ ಜಲಪಾತದ ಎತ್ತರವು ಜೋಗಜಲಪಾತಕ್ಕಿಂತ ಕಡಿಮೆ (176ಮೀ). ಅದರ ವಿಶಾಲತೆ ಹಾಗೂ ಸೌಂದರ್ಯಕ್ಕಾಗಿಯೇ ಅದು ಜಗತ್ಪ್ರಸಿದ್ಧ! ಚಳಿಗಾಲದಲ್ಲಿ ಇಲ್ಲಿಯ ನೀರು ಹೆಪ್ಪುಗಟ್ಟಿರುತ್ತದೆ.

1678ನೇ ಇಸವಿಯಲ್ಲಿ ಇದರ ಇರುವಿಕೆಯನ್ನು ಪ್ರಪಂಚಕ್ಕೆ ತಿಳಿಸಿದವರು ಫ್ರೆಂಚ್ ಧರ್ಮ ಗುರುಗಳೊಬ್ಬರು.  ಆನಂತರದ ದಿನಗಳಲ್ಲಿ ಜಲಪಾತದ ನೀರಿನ ಪ್ರಚಂಡ ಶಕ್ತಿಯನ್ನು ಅಲ್ಲಿಯ ಜನರು ತಮ್ಮ ಮಿಲ್ಲುಗಳಿಗೆ ಮತ್ತು ವಿವಿಧ ಕಾರ್ಖಾನೆಗಳಿಗೆ ಬಳಸತೊಡಗಿದರು. ಅವುಗಳಿಂದ ಹೊರ ಬಂದ ತ್ಯಾಜ್ಯಗಳಿಂದಾಗಿ ನೀರು ತುಂಬಾ ಕಲುಷಿತಗೊಳ್ಳತೊಡಗಿತು. ಜನ ಸಾಮಾನ್ಯರಿಂದ ಜಲಪಾತದ ವೀಕ್ಷಣೆಗೆ ದುಡ್ಡು ಕೂಡಾ ವಸೂಲಿ ಮಾಡುತ್ತಿದ್ದರು. ಇದರೆಲ್ಲದರ ವಿರುದ್ಧ ನಯಾಗರ ಬಿಡುಗಡೆಗಾಗಿ  ( Free Niagara Movement)ಅತ್ಯಂತ  ಬಿರುಸಿನ  ಚಳುವಳಿಗಳು ಆರಂಭವಾಗಿ, 1885ರಲ್ಲಿ T.V. Welch ಇವರ ನೇತೃತ್ವದಲ್ಲಿ ನಯಾಗರ ದ ಬಿಡುಗಡೆಗೆ ಕಾನೂನು ರಚಿಸಲಾಯಿತು. ಇದರಿಂದಾಗಿ ಎಲ್ಲಾ ಬಗೆಯ ಚಟುವಟಿಕೆಗಳೂ ನಿಷೇಧಿಲ್ಪಟ್ಟು  ಜಲಪಾತವು ಪ್ರಕೃತಿಯ ನೈಜ ಸೌಂದರ್ಯವನ್ನು ಪಡೆಯಿತಲ್ಲದೆ ವೀಕ್ಷಣೆಯು ಜನಸಾಮಾನ್ಯರಿಗೆ ಸುಲಭ ಸಾಧ್ಯವಾಯಿತು. ಈಗ  ಜಲಪಾತ ನೋಡಲು ದುಡ್ಡು ತೆರಬೇಕಾಗಿಲ್ಲ. ಉತ್ಪಾದಿಸಲ್ಪಡುವ ಮಿಲಿಯಗಟ್ಟಲೆ  ಕಿ. ವಾ.ಗಳಷ್ಟು ವಿದ್ಯುಚ್ಛಕ್ತಿಯನ್ನು ಅಮೇರಿಕಾ ಮತ್ತು ಕೆನಡ ದೇಶಗಳು ಹಂಚಿಕೊಳ್ಳುತ್ತಿವೆ.

        ಜಲಪಾತದ ಮೇಲಿನಿಂದ ನೋಡುವಾಗ ಒಂದು ತರಹದ ರುದ್ರ ರಮಣೀಯ ದೃಶ್ಯ ಗೋಚರಿಸಿದರೆ,   ಕ್ರೂಝ್ ಗಳಲ್ಲಿ ಹೋಗಿ ( ಇವುಗಳಿಗೆ ನಿಗದಿ ಪಡಿಸಿದ ಹಣ ಕೊಡಬೇಕಾಗುತ್ತದೆ) ಜಲಪಾತದ ಕೆಳಗಡೆಗಡೆಯಿಂದ ವೀಕ್ಷಿಸುವಾಗ ಸಿಗುವ ಅನುಭವ ಇನ್ನೂ ಅತ್ಯದ್ಭುತ!  ಅಮೇರಿಕಾ ಮತ್ತು ಕೆನಡ, ಎರಡೂ ಕಡೆಗಳಿಂದ ಈ ವೀಕ್ಷಣೆಗಳಿಗೆ ಅವಕಾಶವಿದೆ. ಅಮೇರಿಕಾ  ಮತ್ತು ಕೆನಡ ತಂಡಗಳಿಗೆ, ಮೇಲಿನಿಂದ ರಭಸವಾಗಿ ಬೀಳುವ ನೀರಿನಿಂದ ಒದ್ದೆ ಯಾಗದಿರಲೆಂದು ಕ್ರಮವಾಗಿ ನೀಲಿ ಮತ್ತು ಕೆಂಪು ಬಣ್ಣದ ರೈನ್ ಕೋಟುಗಳನ್ನು ಕೊಡುತ್ತಾರೆ. ನದಿ ನೀರಿನಲ್ಲಿ ತೇಲುವ ಈ    ಕ್ರೂಝ್ ಗಳನ್ನು ನೋಡುವುದೇ ಕಣ್ಣಿಗೆ ಹಬ್ಬ . ಬ್ರೈಡಲ್ ವೇಲ್  ಕೆಳಗಡೆಗೆ ನಡೆದುಕೊಂಡೇ ಹೋಗಿ, ಮೇಲಿನಿಂದ ಅತ್ಯಂತ ರಭಸದಿಂದ ಬಂಡೆ ಮೇಲೆ ಬೀಳುವ ನೀರಿನ ಹೊಡೆತಕ್ಕೆ ರಾಚುವ ಪ್ರಚಂಡ  ಜಲಧಾರೆಗೆ ಮೈಯೊಡ್ಡಿ, ಶುಭ್ರ ಬಿಳಿ ನೊರೆಯ ಅಗಾಧ ಮೊರೆತವನ್ನು ಮನಸಾರೆ ಸವಿದು ಆನಂದಿಸಬಹುದು. ವರ್ಷವೊಂದಕ್ಕೆ  8 ಮಿಲಿಯದಷ್ಟು ಪ್ರವಾಸಿಗರು ಭೇಟಿ ಕೊಡುವ ಈ ಜಾಗವು ಅತ್ಯಂತ ಸುವ್ಯವಸ್ಥಿತವಾಗಿ ಸ್ವಚ್ಛತೆಯಿಂದ ಕೂಡಿರುವುದು ನಿಜಕ್ಕೂ ಮನ ಮೆಚ್ಚುವಂತಿದೆ. ಕಲ್ಪನೆಗೆ ನಿಲುಕದ, ಪ್ರಕೃತಿಯ ಈ ಅಗಾಧ ಸೌಂದರ್ಯವನ್ನು ವೀಕ್ಷಿಸುವ ಅವಕಾಶವನ್ನು ಪಡೆದ ಪ್ರತಿಯೊಬ್ಬರಿಗೂ ಇದೊಂದು ಚಿರಸ್ಮರಣೀಯ ಅನುಭವವಾಗುವುದರಲ್ಲಿ ಸಂಶಯವಿಲ್ಲ.
.

– ಶಂಕರಿ ಶರ್ಮ, ಪುತ್ತೂರು.

8 Comments on “ನಯನ ಮನೋಹರ ನಯಾಗರ

  1. ನಯನ ಮನೋಹರ ಜಲಪಾತ ನಾವುಗಳು ವೀಕ್ಷಸಿದ ಹಾಗೆ ಅನುಭವ ವಾಯಿತು
    ಚೆನ್ನಾಗಿ ವರ್ಣಿಸಿರುವಿರಿ , .

  2. ತುಂಬಾ ಚಂದದ ವರ್ಣನೆ . ಓದುವಾಗ ನಾವೇ ಅಲ್ಲಿದ್ದ ಅನುಭವ .

  3. ಚಂದದ ವರ್ಣನೆ ‌ಕಳೆದ ತಿಂಗಳು ತಾನೇ ‌ಮಗನ ಜತೆ ನೋಡಿ ಅದರ ಅಗಾಧ ತೆಗೆ ಅದನ್ನು ನಿರ್ವಹಿಸುವ ಅವರ ಕೌಶಲ್ಯ ಕ್ಕೆ ಬೆರಗಾಗಿ ಬಂದೆವು.ನಿಮ್ಮ ಅನುಭವ ನಮ್ಮ ದೂ ಹೌದು. ಅಭಿನಂದನ

  4. ನನ್ನದೇ ಅನುಭವವನ್ನು ಭವ್ಯವಾಗಿ ಬಣ್ಣಿಸಿದ್ದಾರೆ ಶಂಕರಿ ಶರ್ಮರವರು !

  5. ಇದೇ ತಿಂಗಳ 11 ಮತ್ತು 12 ನೇ ತಾರೀಖು ನಯಾಗರಕ್ಕೆ ಎರಡನೇ ಬಾರಿ ಭೇಟಿ ನೀಡಿದಾಗ ನನಗೆ ಆದ ಅನುಭವವೂ ಇದೇ ! 26 ವರ್ಷಗಳ ಹಿಂದೆ ನಯಾಗರಾ ನೋಡಿದ ನೆನಪು ಮಾಸುವ ಮುನ್ನವೇ ಮತ್ತೊಮ್ಮೆ ನೋಡಿದೆ ! ಆಗೆಲ್ಲಾ ಈಗಿನಷ್ಟು ಕಟ್ಟಡಗಳೂ ,ಜನರೂ ಇರುತ್ತಿರಲಿಲ್ಲ !

  6. ಲೇಖನ ಚೆನ್ನಾಗಿದೆ, ಅಮೇರಿಕಾಕ್ಕೆಹೋಗುವ ಅವಕಾಶ ಐಲ್ಲರಿಗೂ ಸಿಗುವದಿಲ್ಲ, ಆದರೆ ಈಮೇಲಿನ ಲೇಖನ ಓದಿ ಆನಂದಿಸಬಹುದು

  7. ಓದಿದ, ಮೆಚ್ಚಿದ ಎಲ್ಲಾ ಸಹೃದಯೀ ಬಂಧುಗಳಿಗೆ ಧನ್ಯವಾದಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *