ಒಂಟಿ ಹಕ್ಕಿಯ ಉಲಿಯದ ಕೊಕ್ಕು
ಮಾಟ ಕೊಕ್ಕಿನ ಮಿರುಗುವ
ರೆಕ್ಕೆಯ ಈ ಒಂಟಿ ಹಕ್ಕಿಯೂ
ಆಗಸದ ವಾರಸುದಾರನೇ!
ನಭದ ಗಹನತೆ ಮತ್ತು
ವಿಸ್ತಾರಕ್ಕೂ ರೆಕ್ಕೆ
ಬಿಚ್ಚಿ ಹಾರುವ ಅದರ
ಕೊಕ್ಕಲ್ಲಿ ಅಡಗಿದ ಬಿಕ್ಕು
ಆಗಸಕ್ಕೆ ಕೇಳುವುದಿಲ್ಲ!
ಹೀಗೆ ಬಂದು ಹಾಗೆ
ಹೋಗುವ ಮೋಡ ಅರೆ
ಕ್ಷಣದ ನೆರಳು ಕೈ ಹಿಡಿವ ಬೆರಳು
ಗಾಳಿಗೆ ಅಧೀನ ಮೋಡ
ಓಡುವುದು ಕರಗುವುದು
ಹನಿ ಸುರಿಯುವುದೂ ಹಕ್ಕಿಯ
ದಾಹ ತಣಿಸುವುದಿಲ್ಲ
ಕೊಕ್ಕಿನ ಗುಕ್ಕಿಗಾಗಿ ಗೂಡೊಳಗೆ
ಚಿಲಿಪಿಲಿಗುಟ್ಟಿ ಕಾಯುವ ರಜತ ಮರಿ ಹಕ್ಕಿ ಅರಿಯದು ಅಮ್ಮನ
ಕೊರಳ ಉಲಿ!
ನೆಗೆದರೆ ವಿಶಾಲ ಆಗಸ, ನಭದ ತುಂಬಾ
ತಾರೆ ನೀಹಾರಿಕೆಗಳ ಬಂಧು ಗಡಣ
ಉಡಲು ಉಣ್ಣಲು ಕೊರತೆಯಿಲ್ಲದ ಪ್ರಕೃತಿ
ಹಕ್ಕಿಯ ಎಣೆ ಇಲ್ಲದ ಭಾಗ್ಯ
ಹಕ್ಕಿಗೆ ಬೇಕಿರುವುದು;
ಕೊರಳ ಹಾಡ ಆಲಿಸುವ ಕಿವಿ
ಕಣ್ಣ ಕನಸ ಕಾಯುವ ರೆಪ್ಪೆ
ದಣಿದ ರೆಕ್ಕೆಯ ಸವರುವ ಬೆರಳು
ಸದಾ ಹಿಂಬಾಲಿಸುವ –
ತನ್ನಂತಹುದೇ ನೆರಳು
– ಆನಂದ್ ಋಗ್ವೇದಿ
ಎಷ್ಟು ಚೆಂದದ ಕವಿತೆ
ಹಕ್ಕಿಗೂ ಒಂದು ಮನಸಿದೆ, ಅದರೊಳಗೆ ತನ್ನವರ ಸೇರೋ ಕಾತರ ಇದೆ, ತನ್ನ ಕಾಳಜಿ ಮಾಡುವವರು ಬೇಕೆಂಬ ಹಂಬಲ ಇದೆ ಅನ್ನುವ ಭಾವನೆಯನ್ನು ಒಳಗೊಂಡಂತಿದೆ ಕವನ .
ಹಕ್ಕಿ ಹಾಡನು ಕೇಳಿದ ಕವಿ, ಮತ್ತೆ ನಮಗೆ ಕೇಳಿಸಿರುವ ಪರಿ ಸೊಗಸಾಗಿದೆ.. ಋಗ್ವೇದಿ ಸರ್..
ತುಂಬಾ ಭಾವನಾತ್ಮಕ ಕವನ
ಹಾಡಿಗಾಗಿ, ಕವಿಯ ನುಡಿಗಾಗಿ
https://youtu.be/dDPsberFt_I