ಲಹರಿ

ಕಡೆಗೂ ನಾನು ಲೇಖನ ಬರೆದೆ

Share Button

28-30 ವರ್ಷಗಳ ಹಿಂದಿನ ವಿಷಯ. ನಾನಾಗ ಕಾಲೇಜು ವಿದ್ಯಾರ್ಥಿನಿ. ಕಾಲೇಜು ದಿನಗಳಲ್ಲಿ ಕವನ, ಕತೆ, ಪ್ರಬಂಧ ಬರೆಯುತ್ತಿದ್ದ ನನಗೆ ಹಲವು ಬಾರಿ ಪ್ರಬಂಧ ರಚನೆಯಲ್ಲಿ ಬಹುಮಾನ ಬಂದಿತ್ತು. ದೂರವಾಣಿ ಸಂಪರ್ಕ ಇಲ್ಲದ ದಿನಗಳು. ದೂರದ ಊರಿನಲ್ಲಿದ್ದ ಬಂಧುಗಳಿಗೂ, ಹಲವು ಸ್ನೇಹಿತರಿಗೂ ಪತ್ರ ಬರೆಯುವುದು ನನ್ನಿಷ್ಟದ ವಿಷಯವಾಗಿತ್ತು. ನನಗೆ ಮೊದಲಿಂದಲೂ ಪುಸ್ತಕಗಳನ್ನು ಓದುವುದು ಮೆಚ್ಚಿನ ಹವ್ಯಾಸ. ಕಾಲೇಜು ಗ್ರಂಥಾಲಯದಲ್ಲಿ ಲಭ್ಯವಿದ್ದ ಸಾಯಿಸುತೆ, ತ್ರಿವೇಣಿ, ವಾಣಿ ಮುಂತಾದ ಲೇಖಕಿಯರು ಬರೆದ ಅನೇಕ ಕಾದಂಬರಿಗಳನ್ನು ಓದಿ ಮುಗಿಸಿದ್ದೆ. ಸುಧಾ, ತರಂಗ, ತುಷಾರ, ಮಯೂರ, ಉತ್ಥಾನ ಮೊದಲಾದ ಪತ್ರಿಕೆಗಳನ್ನು ತಪ್ಪದೆ ಓದುತ್ತಿದ್ದೆ. ನಾನೂ ಬರೆಯಬೇಕೆಂಬ ಅದಮ್ಯ ಬಯಕೆ ಮನದಲ್ಲಿ. ಒಳ್ಳೆಯ ಕಥೆ ಬರೆಯಬೇಕೆಂಬ ಕನಸು ಹೊಸ ಕಥೆಗಳನ್ನು ಓದಿದಾಗ ಗರಿಗೆದರುತ್ತಿತ್ತು. ಎಷ್ಟೋ ಸಲ ನಾನು ಕಥೆ ಬರೆದಂತೆ, ಒಳ್ಳೆಯ ಕಥೆಗಾರ್ತಿಯಾದಂತೆ ಕನಸು ಬೀಳುತ್ತಿತ್ತು. ಎಲ್ಲಾ ಪತ್ರಿಕೆಗಳ ಸಂಪಾದಕರ ವಿಳಾಸ ನನ್ನ ಬಳಿಯಿತ್ತು. ಒಮ್ಮೆ ಯಾವುದೋ ಒಂದು ಪತ್ರಿಕೆಗೆ ಕಥೆ ಬರೆದು ಕಳಿಸಿದ್ದೆ. ಸ್ವೀಕೃತವಾಗಿಲ್ಲ ಎಂಬ ವಿಷಾದದ ಪತ್ರ ನನ್ನ ಕೈ ಸೇರಿತು. ಆ ನಂತರ ಹಿಂಜರಿಕೆಯೋ, ಆತ್ಮವಿಶ್ವಾಸದ ಕೊರತೆಯೋ, ಪ್ರೋತ್ಸಾಹಿಸುವವರು ಇಲ್ಲದೆಯೋ- ಅಂತೂ ಆ ಕನಸನ್ನು ನನಸು ಮಾಡುವ ಉಸಾಬರಿಗೆ  ನಾನು ಹೋಗಲೇ ಇಲ್ಲ.

ನನಗೋ ಕನ್ನಡ ಅಂದರೆ ವಿಪರೀತ ಪ್ರೀತಿ. BSc. ಪದವಿ ಶಿಕ್ಷಣ ಪಡೆಯುವಾಗ ದ್ವಿತೀಯ ಭಾಷೆಯಾಗಿ ಕನ್ನಡವನ್ನೇ ಆಯ್ದುಕೊಂಡಿದ್ದೆ. ಕನ್ನಡ ವಿಷಯದಲ್ಲಿ ನಾನೇ ತರಗತಿಗೆ ಮೊದಲಿಗಳಾಗಿದ್ದೆ. ಪದವಿ ಶಿಕ್ಷಣ ಮುಗಿದ ಬಳಿಕ ಸ್ನಾತಕೋತ್ತರ ಕಲಿಕೆಯನ್ನು ಕನ್ನಡದಲ್ಲಿ ಮಾಡುವುದಾ ಅಥವಾ ವಿಜ್ಞಾನ ವಿಷಯದಲ್ಲಿ ಮಾಡುವುದಾ ಅನ್ನುವ ದ್ವಂದ್ವ ಯೋಚನೆ  ನನ್ನನ್ನು ಕಾಡಿತ್ತು. ಕೊನೆಗೂ ವಿಜ್ಞಾನ ವಿಷಯದಲ್ಲಿಯೇ  ಮಾಡುವಾ ಅಂತ ನಿರ್ಧರಿಸಿ, ಭೌತಶಾಸ್ತ್ರ ವಿಷಯದಲ್ಲಿ  MSc. ಮಾಡಿದೆ.  MSc.  ಮುಗಿದ ಕೂಡಲೇ ಉದ್ಯೋಗವೂ ಸಿಕ್ಕಿತ್ತು. ಉದ್ಯೋಗಕ್ಕೆ ಸೇರಿದ ಪ್ರಾರಂಭದ ದಿನಗಳಲ್ಲಿ ಕೆಲವು ಕವನಗಳನ್ನು ನನ್ನಷ್ಟಕ್ಕೆ ಗೀಚುತ್ತಿದ್ದ ನೆನಪು. ಆ ನಂತರ ಉದ್ಯೋಗದ ಜೊತೆ ಮದುವೆ, ಮಕ್ಕಳು, ಸಂಸಾರದ ಜವಾಬ್ದಾರಿ ಇವೆಲ್ಲದರ ನಡುವೆ ಬರೆಯುವ ಗೋಜಿಗೆ ಹೋಗಿರಲಿಲ್ಲ. ಮಕ್ಕಳು ಶಾಲೆಗೆ ಹೋಗುವಾಗ, ಅವರಿಗೆ ಭಾಷಣ ಸ್ಪರ್ಧೆಯೋ ಅಥವಾ ಪ್ರಬಂಧ ಸ್ಪರ್ಧೆಯೋ ಇದ್ದರೆ, ಸ್ವಲ್ಪ ವಿಷಯ ಸಂಗ್ರಹ ಮಾಡಿಕೊಡುತ್ತಿದ್ದೆ. ಮಕ್ಕಳಿಗೆ ಬಹುಮಾನ ಬಂದಾಗ ಸಂಭ್ರಮಿಸುತ್ತಿದ್ದೆ. ವಿದ್ಯಾರ್ಥಿಗಳಿಗೆ ನೋಟ್ಸ್ ಕೊಟ್ಟಾಗ, ಅವರು “ಮ್ಯಾಡಂ ಒಳ್ಳೆ ನೋಟ್ಸ್ ಕೊಡ್ತಾರೆ” ಅನ್ನುವಾಗ ನನ್ನೊಳಗೆಯೇ ಸಣ್ಣಗೆ ಬೀಗುತ್ತಿದ್ದದ್ದು ನನ್ನೊಳಗಿನ ವಿಚಾರ.

ಅಷ್ಟಾದರೂ, ಸೋಜಿಗದ ವಿಷಯ ಅಂದರೆ ಕಥೆ- ಕವನ- ಲೇಖನಗಳನ್ನು ಬರೆಯಬೇಕೆಂಬ ಉತ್ಕಟವಾದ ಇಚ್ಛೆ ಮನದಿಂದ ಮಾಸಿರಲಿಲ್ಲ. ಆದರೂ ತಲೆಯಲ್ಲಿ ಬರುತ್ತಿದ್ದ ಯೋಚನೆಗಳೊಂದೂ ಲೇಖನಿಗಿಳಿಯಲಿಲ್ಲ. ಬಹುಶಃ 15-16 ವರ್ಷದ ಹಿಂದಿರಬೇಕು. ಒಮ್ಮೆ ಕಾಲೇಜಿನಲ್ಲಿ  ಐದು ದಿನಗಳ ನಾಟಕೋತ್ಸವ ನಡೆದಾಗ ಎಲ್ಲಾ ನಾಟಕಗಳನ್ನು ನೋಡಿ ವಿಮರ್ಶೆ ಬರೆದು ಕಾಲೇಜು ವಾರ್ಷಿಕ ಸಂಚಿಕೆಗೆ ಕೊಟ್ಟಿದ್ದೆ. ನಾನು ಬರೆದದ್ದು ಮುದ್ರಣ ಅಂತ ಆದದ್ದು ಅದೇ.  ಸುಮಾರು 8 ವರ್ಷದ ಹಿಂದೆ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಪ್ರಯುಕ್ತ ಸಾರ್ವಜನಿಕರಿಗಾಗಿ “ಮಾನಸಿಕ ಆರೋಗ್ಯ ಕಾಪಾಡುವಲ್ಲಿ ಜನಸಾಮಾನ್ಯರ ಪಾತ್ರ” ಎಂಬ ಪ್ರಬಂಧ ಸ್ಪರ್ಧೆಯ ಬಗ್ಗೆ ದಿನಪತ್ರಿಕೆಯಲ್ಲಿ ಓದಿದಾಗ ಈ ಸಲವಾದ್ರೂ ಬರೆಯಬೇಕು ಎನ್ನುವ ತುಡಿತವನ್ನು ಹತ್ತಿಕ್ಕಲಾಗದೆ ಪ್ರಬಂಧ ಬರೆದು ಪ್ರಥಮ ಸ್ಥಾನ ಪಡೆದದ್ದು ಅಚ್ಚಳಿಯದ ನೆನಪು. ಆದರೂ ಕತೆ ಯಾ ಲೇಖನ   ಬರೆಯಲಾಗದ
ವ್ಯಥೆ ನನ್ನದಾಗಿತ್ತು.

ಆ ಬಳಿಕ ಸಂಶೋಧನಾ ಕಾರ್ಯಗಳಲ್ಲಿ ನಿರತಳಾದಾಗ, ಬಿಡುವಿಲ್ಲದ ಕಾರಣ ನಾನು ಲೇಖನಗಳನ್ನು ಬರೆಯುತ್ತಿಲ್ಲ ಅಂತ ನನಗೆ ನಾನೇ ಸಮಾಧಾನಪಡುತ್ತಿದ್ದೆ. ನನ್ನ ಸಂಶೋಧನಾ ಲೇಖನಗಳು  ಪ್ರಕಟವಾದಾಗ “ಅಬ್ಬಾ, ಇಲ್ಲಿಯಾದ್ರೂ ಪ್ರಕಟ ಆಯ್ತಲ್ಲ” ಎಂಬ ನೆಮ್ಮದಿ. ನೀವು ನಂಬ್ತೀರೊ ಬಿಡ್ತೀರೋ ಗೊತ್ತಿಲ್ಲ- ಉದ್ಯೋಗಕ್ಕೆ ಸೇರಿದ 26 ವರ್ಷಗಳ ನಂತರವೂ ಕನ್ನಡದಲ್ಲಿ ಬರೆಯಬೇಕೆಂಬ ಆಸೆಯಿನ್ನೂ ಜೀವಂತವಾಗಿತ್ತು!  ಪ್ರವೃತ್ತಿಯಲ್ಲಿ ಲೇಖಕಿಯಾಗಿರುವ ನನ್ನ ಸಹೋದ್ಯೋಗಿ ಜಯಶ್ರೀಯವರ ಬಳಿ ನನ್ನ ಪ್ರವರ ಬಿಚ್ಚಿಟ್ಟಾಗ “ಬರೆಯಿರಿ ಮ್ಯಾಡಂ, ಬರೆಯುತ್ತಾ ಹೋದಂತೆ, ನಿಮಗೆ ಬರವಣಿಗೆಯ ಕಲೆ ಕರಗತ ಆಗ್ತದೆ. ಬೇಕಾದ್ರೆ ನಾನೂ ಸಹಾಯ ಮಾಡ್ತೇನೆ. ಶುಭಸ್ಯ ಶೀಘ್ರಂ” ಅಂತ ಹುರಿದುಂಬಿಸಿದ್ರು. Better late than never ಎಂಬ ಆಂಗ್ಲೋಕ್ತಿಯನ್ನು ನನಗೆ ನಾನೇ ಅನ್ವಯಿಸಿಕೊಂಡೆ, ಏನಾದ್ರೂ ಸರಿ, ಯೋಚನೆಗಳನ್ನು ಅಕ್ಷರ ರೂಪಕ್ಕೆ ಇಳಿಸಲೇಬೇಕು ಎಂದು ನಿಶ್ಚಯಿಸಿದೆ. ನನ್ನ ಮೊದಲನೇ ಲೇಖನವೇ  ಸುರಹೊನ್ನೆಯಲ್ಲಿ ಪ್ರಕಟವಾದ “ಮೊಗ್ಗರಳುವ ಮೊದಲೇ”, ಎರಡನೆಯದು “ಬಹೂಪಯೋಗಿ ಜಾಂಬು ಹಣ್ಣು”. ಲೇಖನಗಳಲ್ಲಿ ತಪ್ಪುಗಳು ಕಂಡರೆ ಸರಿಪಡಿಸುವ ಗುರುತರವಾದ ಜವಾಬ್ದಾರಿ ನಿಮ್ಮದು. ನಿಮ್ಮೆಲ್ಲರ ಪ್ರೋತ್ಸಾಹ, ಹಾರೈಕೆ ನನ್ನ ಮೇಲಿರಲಿ.

-ಕೃಷ್ಣಪ್ರಭಾ, ಮಂಗಳೂರು

12 Comments on “ಕಡೆಗೂ ನಾನು ಲೇಖನ ಬರೆದೆ

    1. Beautiful and well said madam. ಯಾವ ಒಂದು ನಿರೀಕ್ಷೆ ಇಲ್ಲದೆ ಎಲ್ಲರನ್ನು ಪ್ರೋತ್ಸಾಹಿಸಿ ಎಲ್ಲರ ಬರಹಗಳನ್ನು ತಮ್ಮ ಸುರಹೊನ್ನೆ ಅಂತರ್ಜಾಲ ಪತ್ರಿಕೆಯಲ್ಲಿ ಪ್ರಕಟಿಸಿ ಪ್ರೋತ್ಸಾಹಿಸುವವರುವ ನಮ್ಮ ಹೇಮಮಾಲಾ ಅವರು . ನೀವು ನಿಮ್ಮ ಲೇಖನ, ಕವಿತೆ , ಕಥೆಗಳನ್ನು ಇಲ್ಲಿಯೂ ಬರೀರಿ ಮೇಡಂ , ನಾವೆಲ್ಲರೂ ಇದ್ದೇವೆ ಓದುವವರು.

      1. ಧನ್ಯವಾದಗಳು ನಯನಾ ಆವರೇ…ಸುರಹೊನ್ನೆಯ ಹೊಸ ಸದಸ್ಯೆಯಾಗಿ ಇಲ್ಲಿರುವ ಸತ್ವಭರಿತ ಲೇಖನಗಳನ್ನು ಓದಿ ಖುಷಿಪಡುತ್ತಿದ್ದೇನೆ…
        ಸುರಹೊನ್ನೆ ಬಳಗಕ್ಕೆ ಅಭಿನಂದನೆಗಳು…

  1. ಬಹುಶಃ ಮಹಿಳೆಯರ ಕತೆ ಹೆಚ್ಚು ಕಮ್ಮಿ ನಿಮ್ಮಂತೆಯೇ. ಸಂಸಾರದ ಜಂಜಡದಲ್ಲಿ ಇಂತಹ ಆಸೆ ಹಾಗೂ ಹವ್ಯಾಸಗಳು ತಟಸ್ಥವಾಗಿಬಿಡುತ್ತವೆ. ಬರೆಯಿರಿ ಮೇಡಂ. ಉತ್ತಮ ಬರಹಗಾರ್ತಿಯಾಗುವ ಎಲ್ಲಾ ಲಕ್ಷಣಗಳು ನಿಮ್ಮಲ್ಲಿವೆ. ಅದಕ್ಕೇ ಆ ಆಸೆ ನಿಮ್ಮಲ್ಲಿ ಜೀವಂತವಾಗಿದೆ.

  2. ಅಭಿನಂದನೆಗಳು. ಒಳ್ಳೆಯ ಬರಹಕ್ಕೆ ಬೇಕಾದ ಭಾಷೆ ಮತ್ತು ವಿಷಯ ನಿಮ್ಮಲ್ಲಿದೆ. ಬರವಣಿಗೆ ಮುಂದುವರಿಯಲಿ.

  3. ಬರವಣಿಗೆ ಮುಂದುವರಿಸಿ ಅಂತ ಹಾರೈಸಿದ್ದೀರಾ. ಜೆಸ್ಸಿಯವರಿಗೆ ಮತ್ತು ಜಯಕರ್ ಅವರಿಗೂ
    ಧನ್ಯವಾದಗಳು

  4. Exceptional!
    Flow of the article takes the reader till end.
    U could have started writing much before.
    Wish that u will write many more in the days to come.

  5. ನಿಮ್ಮ ಕುತೂಹಲ ಮೂಡಿಸಿ ಓದಿಸುವ ಕಲೆ ಬಹಳ ವಿಶಿಷ್ಟ ಆಗಿದೆ

  6. ಉತ್ಥಾನ ಪತ್ರಿಕೆಯ ಮೇಲ್ ಇದ್ದರೆ ಕಳಿಸಿ
    ೯೯೦೦೨೨೦೭೨೨

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *