ಓ…. ಮನಸೇ
ಮತ್ತೆ ಆವರಿಸಿತೇ ಕಳೆದು ಹೋಗಿದ್ದ ಪ್ರೀತಿ
ವಸಂತದ ತಂಗಾಳಿಯಂತೆ?,
ಸಿಂಗರಿಸಿತೇ ಮನದಾಗಸ ಬಣ್ಣದ
ಕಾಮನಬಿಲ್ಲಂತೆ ?.
ಹೆಜ್ಜೆ ಹೆಜ್ಜೆಗೂ ಬದುಕಿಲ್ಲಿ
ಗೊಂದಲದ ಗೂಡು,
ಹೇಗೆ ಹಾಡಬಲ್ಲುದು ಪ್ರೀತಿಯ ಹಕ್ಕಿ
ಮೈ ಮರೆತು ಹಾಡು ?.
ಎಲ್ಲಿ , ಏಕೆ ,ಹೇಗೆ ಅರಳಿತು
ಈ ಹೂ ಪ್ರೀತಿ ಮತ್ತೆ ?,
ಅರುಹದಿರು ಎಲ್ಲೂ
ಇದರ ವಿರುದ್ಧ ಇಡೀ ಜಗತ್ತೇ.
ಏಕಾದೆ ಮನಸೇ ಮಿಡಿವ ಹೃದಯಕ್ಕೆ
ಇಷ್ಟೊಂದು ಹತ್ತಿರ ?,
ಕಲ್ಲು ಮನ ಅರಿಯದು
ಪ್ರೀತಿ, ಪ್ರೇಮ , ಒಲುಮೆಯ ಸ್ನೇಹ ಬಂಧುರ.
ನನ್ನಲ್ಲೇಕೆ ಇಟ್ಟೆ ನೀ
ಇಷ್ಟೊಂದು ಭರವಸೆ ?,
ಮನವೆಂಬ ಮರ್ಕಟ ಬದಲಾಯಿಸಬಹುದು
ಕ್ಷಣ ಕ್ಷಣಕ್ಕೂ ತನ್ನ ಮುಖವಾಡ , ವರಸೆ.
ಮರೆತೇ ಇರುಳ ಕನಸಂತೆ
ನಾ ಎಲ್ಲಾ ಕಥೆ,
ಕೆದಕದಿರು, ನೆನಪಿಸದಿರು ಮತ್ತೆ ಮತ್ತೆ,
ಮರೆಯದಿರು ಆರಾಧನಾ ಲೋಕದೊಳಗೆ
ಎಂದೆಂದಿಗೂ……
ನೀ ನನ್ನ ದೇವತೆ.
– ನಯನ ಬಜಕೂಡ್ಲು
ಚೆಂದದ ಭಾವನೆಗಳು
ಭಾವ ತುಂಬಿದ ಹಾಡು.
ನೆನಪ ಕೆದಕದಿರು… ಅರ್ಥಪೂರ್ಣ ಕವನ.
‘ಮನವೆಂಬ ಮರ್ಕಟ ಬದಲಾಯಿಸಬಹುದು ಕ್ಷಣ ಕ್ಷಣಕ್ಕೂ ತನ್ನ ಮುಖವಾಡ , ವರಸೆ.’ ಇದು ಅಕ್ಷರಶ: ನಿಜ.. ಚೆಂದದ ಕವನ