ಹದ್ದು ಮೀರಿದವರಿಗೆ ಹೆದ್ದಾರಿ ಮಾಡಿಕೊಡಿ

Share Button

 

ಬೇಡ ಎನ್ನಿಸಿದಾಗಲೆಲ್ಲ
ಬಿಚ್ಚಿಡುವುದಕ್ಕೆ
ಬದುಕು ಶೂಗಳಲ್ಲ

-ವಾಸುದೇವ ನಾಡಿಗ(ವಿರಕ್ತರ ಬಟ್ಟೆಗಳು)

ಮೂರು ಸಾಲಿನ ಪದ್ಯದಲ್ಲಿ ನನ್ನನ್ನು ಮತ್ತೆ ಮತ್ತೆ ಕಾಡಿದ ಮೂರು ಪದ, ಬಯಕೆ, ಬದುಕು ಮತ್ತು ಶೂ (ಚಪ್ಪಲಿ).

ಕೆಲವರಿಗೆ ಬದ್ಧತೆಗಳನ್ನು ಬದಲಾಯಿಸುವುದು, ಬಳಗವನ್ನು ಕಳಚಿಕೊಳ್ಳುವುದು, ಚಪ್ಪಲಿಯನ್ನು ತೊಟ್ಟು ಬಿಟ್ಟಷ್ಟೇ ಸರಳ. ಅವರ ಪಾಲಿಗೆ ಬದುಕು ಚಪ್ಪಲಿ, ಆದರೆ ಬದಲಾಯಿಸುವುದೊಂದೇ ಪರಿಹಾರವಲ್ಲ ಎಂದು ತಿಳಿದುಕೊಂಡವರಿಗೆ ಚಪ್ಪಲಿಯೇ ಬದುಕು. ಚಪ್ಪಲಿ ತನ್ನ ಪಾದದ ಪವಿತ್ರ ಬಟ್ಟೆ, ಬದುಕೇ ಬಿಟ್ಟೆನು ಆದರೆ ನನ್ನ ಕಾಯ್ದ ಈ ಚಪ್ಪಲಿಗಳ ಬಿಡಲಾರೆ ಎಂದು ಮಾದಾರ ಚನ್ನಯ್ಯನಂತೆ ಒಬ್ಬ ಶರಣನಾಗಿ ಪರಿವರ್ತನೆಯಾಗಬಹುದು. ವಸ್ತುಗಳನ್ನು ಅತ್ಯಂತ ನಿರ್ಮಮವಾಗಿ ಕಿತ್ತೆಸೆಯುವ ಜೀವ ಯಾವುದೇ ಆಗಿರಲಿ, ಅದು ನಿರ್ದಯಿಯಾಗಿರುತ್ತದೆ. ಪಾತಕಿಯಾಗಿರುತ್ತದೆ ಎನ್ನುತ್ತಾನೆ ಗಿಬ್ರಾನ್.

ಗಿಬ್ರಾನ್

ದೆಹಲಿಯ ನಿಜಾಮುದ್ದೀನ ಬಹಳ ದೊಡ್ಡ ಸಂತ, ಮಾತೃಮಯಿ. ಅವನ ಬಳಿ ಬಯಕೆ ಇಟ್ಟುಕೊಂಡು ಹೋದವರಾರೂ ಬರಿಗೈಯಿಂದ ಬರಲಿಲ್ಲ. ಮಗಳ ಮದುವೆಗೆಂದು ಹಣ ಹೊಂದಿಸುವ ಧಾವಂತದಲ್ಲಿದ್ದ ಬಡವನೊಬ್ಬ ಸಂತ ನಿಜಾಮುದ್ದೀನರ ಬಳಿ ಬಂದು ಅಳಲು, ಅನಿವಾರ್ಯತೆಗಳನ್ನು ತೊಡಿಕೊಂಡ. ಸಮಾಧಾನಿಸಿದ ಸಂತ, ‘ಇಲ್ಲಿಯೇ ಕುಳಿತಿರು, ಯಾರಾದರೂ ಭಕ್ತರು ಬಂದು ಏನಾದರೂ ನೀಡಿದರೆ ಅದೆಲ್ಲವನ್ನೂ ಕೊಟ್ಟು ಬಿಡುತ್ತೇನೆ. ನಿನ್ನ ಕಷ್ಟ ಪರಿಹರಿಸಿಕೊಳ್ಳಬಹುದು’ ಎಂದ. ಸಂತ ಮತ್ತು ಭಕ್ತ ಹೀಗೆಯೇ ಮೂರು ದಿನ ಕಾಯುತ್ತ ಕಳೆದರು. ಯಾರೂ ಬರಲಿಲ್ಲ. ಏನನ್ನೂ ನೀಡಲಿಲ್ಲ. ಆದರೆ ಸಂತ ನಿಜಾಮುದ್ದೀನ ನಂಬಿ ಬಂದವನನ್ನು ಬರಿಗೈಯಿಂದ ಕಳುಹಿಸುವಂತಿರಲಿಲ್ಲ. ಅಂತಿಮವಾಗಿ ತನ್ನ ಬಳಿ ಇರುವ ಹಳೆಯ ಚಪ್ಪಲಿಗಳನ್ನು ಬಂದವನ ಕೈಗೆ ಇಡುತ್ತ ಇವುಗಳನ್ನು ಮಾರಿಕೊಂಡು, ಚೂರು-ಪಾರು ಹಣದಿಂದ ಕಷ್ಟ ಪರಿಹರಿಸಿಕೊ ಎಂದ.

ನೊಂದು, ಹಳೆಯ ಚಪ್ಪಲಿಗಳನ್ನು ಬಗಲಲ್ಲಿಯ ಚೀಲಿನಲ್ಲಿಟ್ಟುಕೊಂಡು ಸುಡುಬಿಸಿಲಲ್ಲಿ ಬಡವ ಹೊರಟಿದ್ದ. ಅತ್ತ ಕಾಬೂಲಿನಿಂದ ಅಮೀರ ಖುಸ್ರೋ ತನ್ನ ಅಪಾರ ಸಂಪತ್ತನ್ನು ಎಂಟು ಒಂಟೆಗಳ ಮೇಲೆ ಹೇರಿಕೊಂಡು ಭಾರತಕ್ಕೆ ಬರುತ್ತಿದ್ದ. ಆತ ತನ್ನ ಸದ್ಗುರುವಿನ  ತಲಾಶ್(ಹುಡುಕಾಟ)ದಲ್ಲಿದ್ದ. ಈ ದಾರಿಹೋಕ ಖುಸ್ರೋನ ಪಕ್ಕದಿಂದ ಹಾಯ್ದು ಹೋಗುತ್ತಲೇ, ಏನೋ ತನ್ನ ಇದುವರೆಗಿನ ವಸ್ತುವಿನ ವಾಸನೆ ಬಡಿಯಿತು ಖುಸ್ರೋಗೆ. ದಾರಿಹೋಕನನ್ನು ತಡೆದು ನಿಲ್ಲಿಸಿದ. ನಿನ್ನ ಬಳಿ ಏನಿದೆ? ಎಂದು ಕೇಳಿದ. ದಾರಿಹೋಕ ಅಂಜಿ ತನ್ನ ಬಳಿ ಇರುವ ಸಂತ ನಿಜಾಮುದ್ದೀನರ ಹಳೆಯ ಚಪ್ಪಲಿಗಳನ್ನು ತೋರಿಸಿದ. ಅತ್ಯಂತ ಆನಂದತುಂದೀಲನಾದ ಅಮೀರ ಖುಸ್ರೋ, ತನ್ನ ಎಂಟು ಒಂಟೆಗಳ ಮೇಲಿನ ವೈಡೂರ್ಯವನ್ನೆಲ್ಲ ಬಡವನಿಗೆ ನೀಡಿ, ಆತನಿಂದ ಸಂತ ನಿಜಾಮುದ್ದೀನರ ಚಪ್ಪಲಿ ಖರೀದಿಸಿದ. ಕೆಲವರ ಚಪ್ಪಲಿ, ಆ ಚಪ್ಪಲಿಯ ಏಟು ಪಡೆಯುವುದೂ ಭಾಗ್ಯವೆ. ಯಾಕೆಂದರೆ ಅದು ಸದ್ಗುರುವಿನ ಸಂದೇಶ.

ಚಪ್ಪಲಿ ಕೊಂಡ ಖುಸ್ರೋ ನೇರ ನಿಜಾಮುದ್ದೀನರ ಬಳಿ ಹೋದ. ಅವರ ಆ ಚಪ್ಪಲಿಗಳನ್ನು ಅವರಿಗರ್ಪಿಸಿ ತನ್ನನ್ನು ಆಶೀರ್ವದಿಸಲು ಕೇಳಿದ. ಮುಗುಳ್ನಕ್ಕ ನಿಜಾಮುದ್ದೀನ, ಈ ಚಪ್ಪಲಿಗಾಗಿ ನೀನು ಏನು ಕೊಟ್ಟೆ? ಎಂದು ಕೇಳಿದ. ಖುಸ್ರೋ ಎಂಟು ಒಂಟೆ ಕೊಪ್ಪರಿಗೆ ನೀಡಿದ್ದನ್ನು ಪ್ರಾಮಾಣಿಕವಾಗಿ ಒಪ್ಪಿಕೊಂಡ. ಆದರೆ ನಿಜಾಮುದ್ದೀನ ಬಹಳ ಸೋಯಿ ವ್ಯಾಪಾರವಾಯಿತು. ಅವುಗಳ ಬೆಲೆ ನೀನು ನೀಡಿದುದಕ್ಕಿಂತ ದುಪ್ಪಟ್ಟು, ಹೆಚ್ಚು ಎಂದು ನಕ್ಕ.

ಅಮೀರ ಖುಸ್ರೋ

 

ಕೆಲವರ ಸ್ನೇಹ ದುಬಾರಿ, ಅಲ್ಲಿ ಖುಸ್ರೋನಂತೆ ಕಳೆದುಕೊಳ್ಳುವುದೇ ಜಾಸ್ತಿ. ಆದರೆ ಅದಕ್ಕೆ ಆತ್ಮವಿಶ್ವಾಸ, ಪುಣ್ಯ, ಎದೆಗಾರಿಕೆಯ ಶಕ್ತಿ ಇರತ್ತದೆ. ಅದು ಶರೀಫನೊಂದಿಗೆ ಶೆರೆ ಕುಡಿದಂತೆ. ಆ ಭಾಗ್ಯವನ್ನು ಪಾತಕ ಲೋಕದ ಯಾವ ಶಕ್ತಿಯೂ ಕಸಿಯುವುದಲ್ಲ, ಕುಸಿಯುವದಿಲ್ಲ. ಏನೇ ಮಾಡಿದರು ತನಗೆ ಯಾವ ಪುಣ್ಯದ ನೆರಳಿದೆ? ಯಾವ ನೆಲದ ಸಂಸ್ಕೃತಿಯ   ಆತ್ಮವಿಶ್ವಾಸವಿದೆ? ಎನ್ನುವುದು ಕಾಯುತ್ತಿರುತ್ತದೆ. ಇಂಥ ಸುಂದರ, ಅವಶ್ಯಕ ಬೇಲಿಗಳನ್ನು ಹಾರಿದವರು ಹಾದಿ ತಪ್ಪುತ್ತಾರೆ. ತಪ್ಪಿದ ಹಾದಿ ತಪ್ಪುತ್ತಲೇ ಹೋಗುತ್ತದೆ. ಆತ್ಮವಂಚನೆಯ ಖುಷಿಯಲ್ಲಿದ್ದವರು ಕುಸಿಯುತ್ತಲೇ ಹೋಗುತ್ತಾರೆ. ಹೊಸ್ತಿಲು ದಾಟಿ, ಹೊಸ್ತಿಲು ಸಿಗದ, ಲಾಜುಗಳ, ಘರವಾಲಿಗಳ, ಮೊಬೈಲು, ಪೈರಸಿ, ಪುಂಡರ, ವ್ಯಾಪಾರಿಗಳ, ತಲೆಹಿಡುಕರ, ಸಂಸಾರಗಳ ಹದ ಮುರಿಯುವ ಮಿಂಡರ ಪಾಲಿನ ದಂಡ-ದೇಹವಾಗುತ್ತ ಹೋಗುತ್ತಾರೆ. ಈ ಪಾತಕಿಗಳು ನಮ್ಮನ್ನು ಒಮ್ಮೆ ದಾರಿ ತಪ್ಪಿಸುತ್ತಾರೆ, ಆದರೆ ನಾವು ನಿತ್ಯ ಸಾಯುತ್ತೇವೆ. ಅಂದಹಾಗೆ ನಮ್ಮ ಬದುಕಿನಲ್ಲಿದ್ದ ದಾರಿ ತಪ್ಪಿದ ಗೆಳೆಯನೊಬ್ಬನ ಬಗೆಗೆ ನಿಮಗೆ ಹೇಳಬೇಕು:

ಇಂದಿಗೆ ಹದಿನಾಲ್ಕು ವರ್ಷಗಳ ಹಿಂದೆ, ಧಾರಾವಾಡದ ಗಾಂಧಿ ಚೌಕನಲ್ಲಿ ‘ನಿವೇದಿತಾ ಮೆಡಿಕಲ್ಸ್’ ತೆರೆದುಕೊಂಡು, ಆಗಷ್ಟೇ ಸಂಶೋಧನೆಯಲ್ಲಿ ತೊಡಗಿಕೊಂಡಿದ್ದ ಅನೇಕ ಗೆಳೆಯರನ್ನು ಕರೆದುಕೊಂಡು, ನನ್ನ ಮನೆತನದಲ್ಲಿಯೇ ಈ ಹಿಂದೆಂದೂ ಇರದ ವ್ಯಾಪಾರ ಲೋಕದಲ್ಲಿ ಒಂದು ಪ್ರಾಯೋಗಿಕ ಹೆಜ್ಜೆ ಇರಿಸಿದೆ. ಇಟ್ಟ ಹೆಜ್ಜೆಯ ಹಿಂದೆ ಪ್ರಾಮಾಣಿಕ ಹಸಿವಿತ್ತು, ಪ್ರಾಮಾಣಿಕ ಗೆಳೆಯ-ಗೆಳತಿಯರ ಬಳಗವಿತ್ತು, ಅನೇಕ ವೈದ್ಯರುಗಳ ಪ್ರಾಮಾಣಿಕ ಪ್ರೋತ್ಸಾಹವಿತ್ತು. ಕಡಿಮೆ ಸಂಪಾದನೆಯಾದರೂ ಚಿಂತೆಯಿಲ್ಲ, ಆದರೆ ಕಾಳಸಂತೆಯಲ್ಲಿ ಚಲಾವಣೆಯಲ್ಲಿರುವ ಅನೈತಿಕ ಔಷಧಿಗಳನ್ನೆಲ್ಲ ಬದಿಗಿರಿಸಿ ವ್ಯಾಪಾರ ಮಾಡಬೇಕೆಂಬ ಪ್ರಾಮಾಣಿಕ ಮನಸ್ಸು, ಈರ್ವರ ಉದ್ದೇಶವಾಗಿತ್ತು. ಹೀಗಾಗಿ ಹೆಜ್ಜೆಯ ಹಾದಿಯಲ್ಲಿಯೂ ಹಸಿರು ಹುಟ್ಟಿತು. ಹುಟ್ಟಿದ ಹಸಿರು ಹತ್ತಾರು ಕುಟುಂಬಗಳ ಪಾಲಿಗೆ ಅನ್ನದ ದಾರಿಯಾಯಿತು. ಹಾಗಾದರೆ ಇಲ್ಲಿ ಸೇರಿದವರೆಲ್ಲರೂ ಪ್ರಾಮಾಣಿಕರಾದವರೆ?

ಇಲ್ಲ, ಹಾಗಿರಲಿಲ್ಲ. ನಮ್ಮೊಲ್ಲೊಬ್ಬ ಕೆಲಸಗಾರನಿದ್ದ, ಆತನ ಹೆಸರು ವಿಕ್ರಮ. “ಏನಯ್ಯ ಚಕ್ರಮ್” ಎಂದೂ ಕೆಲವೊಮ್ಮೆ ಆತನಿಗೆ ಚುಡಾಯಿಸುತ್ತಿದ್ದೆವು. ಆತ ಸ್ವಾಮಿ ಅಯ್ಯಪ್ಪನ ಪರಮ ಭಕ್ತನೂ ಕೂಡ. ಮುದ್ದಾದ ಮುಖ, ಆದರೆ ಆತನ ಕಣ್ಣುಗಳು ಮಾತ್ರ ಸರಿ ಇರಲಿಲ್ಲ. ನನ್ನ ಪಾಲಿಗೆ ಮನುಷ್ಯನ ವ್ಯಕ್ತಿತ್ವದಲ್ಲಿ ಅತ್ಯಂತ ಪ್ರಾಮಾಣಿಕವಾದ ಅಂಗವೇ ಈ ಕಣ್ಣುಗಳು. ನಮ್ಮ ನಾಲಿಗೆ ನುಡಿಯದ ನಮ್ಮೊಳಗಿನ ಅನೂಹ್ಯ ಲೋಕವನ್ನು ಈ ನಮ್ಮ ಕಣ್ಣುಗಳು ತೆರೆದಿಟ್ಟುಬಿಡುತ್ತವೆ. ಅಂತೆಯೇ ಅಕ್ಕಮಹಾದೇವಿ ಅನುಭವ ಮಂಟಪಕ್ಕೆ ಬಂದಾಗ, ಅಲ್ಲಮ ಪರೀಕ್ಷಿಸಿದ ಅತಿ ಮುಖ್ಯ ಅಂಗ ಆಕೆಯ ಕಣ್ಣು. ಅಲ್ಲಿ ವಾಂಛೆಗಳು ಸತ್ತು ನಿಶ್ಚಲವನ್ನು ಕಂಡಾಗಲೇ ಆಕೆಗೆ ಶರಣಸಂಗಕ್ಕೆ ಅನುಮತಿಸಿದ್ದು.

ಈ ನಮ್ಮ ಚಕ್ರಮ್ ಸಾರಿ, ವಿಕ್ರಮ ಮೆಲ್ಲಗೆ ಅಂಗಡಿಯಲ್ಲಿ ಕದಿಯಲು ಶುರುವಿಟ್ಟುಕೊಂಡ. ಸುಗಂಧ ಎಣ್ಣೆಯ ಪಾಕೀಟು, ಶಾಂಪೂ ಸಾಚೆಟ್, ಪೌಡರ್ ಬಾಕ್ಸ್ ಹೀಗೆ ಅವಕಾಶ ಸಿಕ್ಕಾಗಲೆಲ್ಲ ಒಂದು ಭಂಡಧೈರ್ಯ ಮಾಡಿ ಗೆದ್ದ ಎಂದು ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುತ್ತಿದ್ದ. ಆತನ ಆ ಭಂಡ ಸಾಹಸ ನಮಗೀರ್ವರ ಸಹೋದರರಿಗೂ ತಿಳಿದಿತ್ತು. ಆದರೆ ಮಾಡುವುದೇನು? ಇಂದೋ, ನಾಳೆಯೋ ಮನಸ್ಸು ಮಾಗಬಹುದು, ಆತನೊಬ್ಬ ಉತ್ತಮ ಮನುಷ್ಯನಾಗಬಹುದು ಎಂಬ ನಿರೀಕ್ಷೆಯಲ್ಲಿಯೇ ಕಾಲ ಉರುಳಿತು. ಆದರೆ ವಿಕ್ರಮ, ಚಕ್ರಮನಾಗುತ್ತಲೇ ಹೋದ. ನಮ್ಮ ನಿರೀಕ್ಷೆಗೆ ವಿರುದ್ಧವಾಗಿ ಕದಿಯುವಿಕೆಯಲ್ಲಿ ಮಾಹೀರನಾಗುತ್ತ ಹೊರಟ. ಏನು ಮಾಡುವುದು? ಒಳ್ಳೆಯ ಕೆಲಸಗಾರ ಚಟ ಮಾತ್ರ ಕೆಟ್ಟದ್ದು. ಚಿಂತೆಯಾಯಿತು. ನಮಗೆ ಈಗ ಚಿಕ್ಕಂದಿನಲ್ಲಿ ಮನೆಯಲ್ಲಿ ನಡೆದ ಒಂದು ಘಟನೆ ನೆನಪಾಯಿತು. ಯಾರೂ ಇಲ್ಲದ ವೇಳೆಯಲ್ಲಿ ಮನೆಯೊಳಗಿನ ಮಿಠಾಯಿಯನ್ನು ಕದಿಯುತ್ತಿದ್ದ ನನ್ನ ಅಣ್ಣನೊಬ್ಬನಿಗೆ, ಒಂದು ದಿನ ನಮ್ಮ ತಂದೆ ಎಲ್ಲ ಮಿಠಾಯಿ ಡಬ್ಬಗಳನ್ನು ಆತನ ಮುಂದಿರಿಸಿ, ತಿನ್ನಲು ಹೇಳಿದರು. ಜೊತೆಗೆ ಬೆತ್ತ ಮುರಿಯುವವರೆಗೆ ಶಾಸ್ತಿ ಮಾಡಿದರು. ಇದೇ ಸರಿಯಾದ ಮಾರ್ಗವೆ?

ನಾವಿಬ್ಬರೂ ಸಹೋದರರು ಸೇರಿ ಒಂದಂತೂ ಮಾಡಿದೆವು. ಯಥಾ ಪ್ರಕಾರ ರಾತ್ರಿ ಅಂಗಡಿ ಮುಚ್ಚುವ ಸಮಯ. ವಿಕ್ರಮ ಕದಿಯುವಿಕೆಯಲ್ಲಿ ತಲ್ಲೀನನಾಗಿದ್ದ. ಆಗ ಹೋಗಿ ನನ್ನ ತಮ್ಮ ಆತನನ್ನು ವಸ್ತು ಸಮೇತ ಹಿಡಿದುಕೊಂಡ. ಆದರೆ ಬಡಿಯಲಿಲ್ಲ, ಬೈಯಲಿಲ್ಲ, ಬದಲಿಗೆ ಯಾವ ವಸ್ತುವನ್ನು ಆತ ಕದಿಯುತ್ತಿದ್ದನೋ ಅದನ್ನು ಕೈ ತುಂಬ ನೀಡಿ, ಗಂಟೆಗಳವರೆಗೂ ಆತನ ಒಳ್ಳೆಯ ಸೇವೆಯನ್ನು ಕುರಿತು ಹೇಳಿ ಬೀಳ್ಕೊಟ್ಟ. ವಿಕ್ರಂ ಅಳಲಾರಂಭಿಸಿದ, ತಿದ್ದಿಕೊಳ್ಳುತ್ತೇನೆ ಎಂದು ಗೋಗರೆದ, ಆದರೆ ನಮಗೆ ಎಲ್ಲವೂ ಬೇಡವಾಗಿತ್ತು. ಅಪರಾಧಿಯ ಮುಖ ಹೊತ್ತು ಆತ ನಮ್ಮೊಂದಿಗಿರುವುದು ಒಂದು ರೀತಿಯ ಚಿತ್ರಹಿಂಸೆಯಾಗಿತ್ತು. ಈಗ ಆತನನ್ನು ಬೀಳ್ಕೊಡುವುದೊಂದೇ ಸರಿಯಾದ ದಾರಯಾಗಿತ್ತು.

ಕಣ್ಣೀರಿಟ್ಟು ಹೊರಗೆ ಹೊರಟಿದ್ದ ವಿಕ್ರಂ ನಿಮ್ಮ ಚಪ್ಪಲಿಗಳನ್ನು ಕೊಡಿ ಬದುಕಿನುದ್ದಕ್ಕೂ ಪೂಜಿಸುತ್ತೇನೆ , ಮನುಷ್ಯನಾಗುತ್ತೇನೆ ಎಂದ. ಆದರೆ ಕೊಡಲು ನಾವು ನಿಜಾಮುದ್ದೀನನಂಥ ಗುರುವೂ ಆಗಿರಲಿಲ್ಲ, ಪೂಜಿಸಲು ಆತ ಅಮೀರ್ ಖುಸ್ರೋವಿನಂಥ ಶಿಷ್ಯನೂ ಆಗಿರಲಿಲ್ಲ. ಕ್ಷಣದ ಭಾವನಾತ್ಮಕ ಮಾತು. ಆತನದೊಂದು ಹದ್ದು ಮೀರಿದ ಹಾದಿ, ಕೈ ಹಿಡಿದು ಅಪರಾಧಗಳ ಹೆದ್ದಾರಿಗೆ ಬಿಡುವುದೊಂದೇ ನಮ್ಮ ಗುರಿಯಾಗಿತ್ತು. ಈಗ ಆತ ಆಪರಾಧಿಗಳ ಸಾಲಿನಲ್ಲಿ. ಹೆದ್ದಾರಿಗೆ ಬಿಟ್ಟ ನಾವು. . . . . ? What is the use of fast running, when you are on immoral way. ಅಲ್ವೆ?

-ಡಾ.ರಾಜಶೇಖರ ಮಠಪತಿ (ರಾಗಂ )

2 Responses

  1. Nayana Bajakudlu says:

    ನೈಸ್. ಗುರು ದೇವೋ ಭವ.
    ನಿಜ ನಾವು ಹೆಜ್ಜೆ ಹಾಕಲು ಕಲಿಸಿದವರನ್ನು, ನಮ್ಮ ಕತ್ತಲೆಯ ಹಾದಿಯಲ್ಲಿ ವಿದ್ಯೆಯ ಬೆಳಕಾದವರನ್ನು ಯಾವತ್ತೂ ಮರೆಯಬಾರದು . ಪ್ರತಿಯೊಬ್ಬ ಮನುಷ್ಯನ ಬಾಳಲ್ಲೂ ಯಾವ ರೂಪದಲ್ಲೇ ಇರಲಿ ಗುರುವಿನ ಸ್ಥಾನ ಬಹಳ ದೊಡ್ಡದು . ನಾವು ಆ ಗುರುವನ್ನು ತಲೆಬಾಗಿ ಗೌರವಿಸಲೇ ಬೇಕು

  2. Shwetha gowda says:

    ನಾನು ಗೊಂದಲದಲ್ಲಿದ್ದೇನೆ ಗುರುಗಳೇ….

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: