ಬೀಗ ಕೊಟ್ಟ ತಪ್ಪಿಗೆ, ಹಸಿವು ಸಹಿಸಿಕೊಂಡರು ತೆಪ್ಪಗೆ
ಈ ಶಿವರಾತ್ರಿ ಹತ್ತಿರ ಬಂತೂ ಅಂದ್ರೆ ಮಾರ್ಕೆಟ್ಟಿನಲ್ಲಿ ಸಿಗುವ ಬಗೆಬಗೆಯ ಹಣ್ಣುಗಳೆಲ್ಲಾ ಮನೆಯ ತುಂಬಿ ಮನೆಯೊಂದು ಮಿನಿ ಮಾರ್ಕೆಟ್ಟಾಗಿರುತ್ತದೆ. ಕಲ್ಲಂಗಡಿ, ಕರಬೂಜ, ಹಸಿರು, ಕಪ್ಪು ದ್ರಾಕ್ಷಿ, ಚಿಕ್ಕೂ, ಸೇಬು, ಬಾಳೆ, ಏನುಂಟು ಏನಿಲ್ಲ. ಫ್ರೂಟ್‌ಜ್ಯೂಸ್, ಫ್ರೂಟ್ ಸಲಾಡ್, ಫ್ರೂಟ್ ಬೌಲ್, ರಸಾಯನ, ಇಲ್ಲಾ ಹಾಗೇ ಕತ್ತರಿಸಿ ತಿನ್ನುವುದು, ಒಟ್ಟಿನಲ್ಲಿ ಗಂಟೆಗೊಮ್ಮೆ ಸಿಂಕಿನ ತುಂಬಾ ಮಿಕ್ಸಿ ಜಾರ್, ಲೋಟ, ತಟ್ಟೆ, ಸ್ಪೂನು, ಫೋರ್ಕುಗಳದೇ ಸಾಮ್ರಾಜ್ಯ.
ಶಿವರಾತ್ರಿ ಎಂದರೆ ಚಿಕ್ಕವರಿದ್ದಾಗ ನಮಗೆ ಖುಷಿಯೋ ಖುಷಿ. ಉಪವಾಸ ಅಂತಾ ಎಲ್ಲಾ ರೀತಿಯ ತಿಂಡಿಗಳನ್ನು ಮಾಡುತ್ತಿದ್ದುದು ಹಾಗೂ ಅನೇಕ ಬಗೆಯ ಹಣ್ಣು ಹಂಪಲುಗಳ ರಸಾಯನ, ಸಲಾಡ್, ಜ್ಯೂಸ್ ಸವಿಯುವ ಭಾಗ್ಯ ಒಂದೆಡೆಯಾದರೆ, ಜಾಗರಣೆ ಅಂತಾ ಪರೀಕ್ಷೆಗಳು ಸನಿಹದಲ್ಲಿದ್ದರೂ ಸಹ ರಾತ್ರಿಯ ಹೊತ್ತು ಓಣಿಯ ಎಲ್ಲರೂ ತಮ್ಮ ತಮ್ಮ ಮಕ್ಕಳನ್ನು ಆಡಲು ಬಿಡುತ್ತಿದ್ದುದು ಮತ್ತೊಂದು ಸಂಗತಿ. ಜೊತೆಗೆ ರಾತ್ರಿ ಹತ್ತು ಗಂಟೆಯಿಂದ, ಮುಂಜಾನೆ ಐದು ಗಂಟೆಯ ತನಕ, ಏರಿಯಾದಲ್ಲೊಂದು ಬಾಡಿಗೆ ಟಿವಿ, ಬಾಡಿಗೆ ವಿಸಿಆರ್, ತಂದಿಟ್ಟು, ಅದರಲ್ಲಿ ಭಕ್ತಿ ಪ್ರಧಾನ ಚಲನಚಿತ್ರಗಳಾದ ಭಕ್ತ ಸಿರಿಯಾಳ, ಭಕ್ತ ಕುಂಬಾರ ಮುಂತಾದವುಗಳನ್ನು ಹಿರಿಯರೆಲ್ಲಾ ಭಯಭಕ್ತಿಯಿಂದ ವೀಕ್ಷಿಸುತ್ತಿದ್ದುದು. ಸುಸ್ತಾಗುವಷ್ಟು ಆಟ ಆಡಿ, ಟಿವಿ ನೋಡುತ್ತಾ ಮಕ್ಕಳೆಲ್ಲಾ ಅಲ್ಲೇ ಅಮ್ಮನ ಮಡಿಲಲ್ಲಿ ನಿದ್ದೆ ಹೋಗುತ್ತಿದ್ದೆವು. ಹಿರಿಯರು ಮಾತ್ರ ಕಣ್ರೆಪ್ಪೆ ಮಿಟುಕಿಸದೆ ಟಿವಿ ವೀಕ್ಷಿಸುತ್ತಿದ್ದರು.
ಶಿವರಾತ್ರಿಯ ದಿನದ ಮತ್ತೊಂದು ಘಟನೆ ನೆನಪಾಗುತ್ತದೆ. ಶಿವರಾತ್ರಿಯ ಸಂಜೆ ಪಕ್ಕದ ಮನೆಯವರು ಬಂದು, ಬೆಳಗಿನಿಂದ ಪೂರ್ತಿ ಉಪವಾಸ ಇದ್ದೇವೆ, ಶಿವನ ಗುಡಿಗೆ ಹೋಗಿ ಬಂದು ಫಳಾರ ಸೇವಿಸುತ್ತೇವೆ, ಸ್ವಲ್ಪ ಬೀಗ ನಿಮ್ಮ ಮನೆಯಲ್ಲಿ ಇಟ್ಟುಕೊಳ್ಳಿ ಎಂದು ಕೊಟ್ಟು ಹೋಗಿದ್ದರು. ನಾವಂತೂ ಗುಡಿಗೆ ಹೋಗುವ ಪ್ಲಾನಿರಲಿಲ್ಲ. ಅದ್ಯಾಕೋ ಮಗಳು ಗುಡಿಗೆ ಹೋಗಿ ಬರೋಣವೆಂದು ತುಂಬಾ ಹಠ ಮಾಡಿದ್ದರಿಂದ, ಅವರು ಕೀ ಇಟ್ಟಿದ್ದನ್ನು ಮರೆತು ನಾವು ಬೀಗ ಹಾಕಿಕೊಂಡು ಗುಡಿಗೆ ಹೋಗಿಬಿಟ್ಟೆವು. ಅಲ್ಲಿ ನೋಡಿದರೆ ಕಿಲೋಮೀಟರ್‌ಗಟ್ಟಲೆ ಕ್ಯೂ. ನಾವೇನೋ ಸಂಜೆ ಪಟ್ಟಗೆ ತಿಂಡಿ, ಹಣ್ಣು ತಿಂದು ಹೋದದ್ದರಿಂದ ಹೊಟ್ಟೆ ತುಂಬಿತ್ತು. ಹೋದ ಮೇಲೆ ದೇವರ ದರ್ಶನ ಮಾಡದೆ ವಾಪಸ್ಸಾಗುವುದು ಸರಿಯಲ್ಲ ಎನಿಸಿ ಮೂರು ಗಂಟೆ ಕ್ಯೂನಲ್ಲಿ ನಿಂತು ದರ್ಶನ ಪಡೆದು ಮನೆಗೆ ವಾಪಸಾಗುವ ಹೊತ್ತಿಗೆ ರಾತ್ರಿ ಹನ್ನೊಂದು ದಾಟಿತ್ತು.
ಮನೆಯ ಹತ್ತಿರ ಬೈಕಿನಲ್ಲಿ ಇಳಿಯುತ್ತಿದ್ದಂತೆ ಕೀ ಕೊಟ್ಟಿದ್ದ ಪಕ್ಕದ ಮನೆಯವರೆಲ್ಲಾ ನಮ್ಮ ಮನೆಯ ಹೊರಗಿನ ಕಟ್ಟೆಯ ಮೇಲೆ ಕುಳಿತಿದ್ದುದು ಕಂಡು ಅಯ್ಯೋ! ಎಂಥ ಕೆಲಸವಾಯಿತು ಎಂದು ಹಲುಬಿದೆವು. ಬೆಳಿಗ್ಗೆಯಿಂದ ಉಪವಾಸವಿದ್ದ ಅವರಿಗೆ ಮತ್ತೊಂದು ಮೂರು ಗಂಟೆ ಹೆಚ್ಚು ಉಪವಾಸ ಮಾಡಿಸಿದಂತಾಗಿತ್ತು, ಅವರೆಲ್ಲರ ಮುಖ ಬಾಡಿದ ಸೊಪ್ಪಿನಂತಾಗಿತ್ತು. ಸಾರಿ ಕೇಳುತ್ತಾ, ಒಳಗೆ ಹೋಗಿ ಬೀಗ ಕೊಟ್ಟು ಕಳುಹಿಸಿದೆವು. ಆಗೆಲ್ಲಾ ಮೊಬೈಲುಗಳು ಇಲ್ಲದ ಕಾರಣ, ನಾವು ಎಲ್ಲಿಗೆ, ಯಾವ ಗುಡಿಗೆ ಹೋಗಿದ್ದೇವೆ ಎಂದು ಗೊತ್ತಾಗದೆ ಪಾಪ ನಮ್ಮ ಮನೆಯ ಮುಂದೆ ನಾಯಿಯ ಹಾಗೆ ನಮ್ಮ ಬರುವಿಕೆಯನ್ನು ಎದುರು ನೋಡಿದ್ದಾಗಿತ್ತು. ಮತ್ತೆಂದೂ ಅವರು ನಮ್ಮ ಮನೆಗೆ ಕೀ ಕೊಡುವ ತಪ್ಪು ಮಾಡಲಿಲ್ಲ. ತಮ್ಮ ಮನೆಗೆ ಹೊಸ ಬೀಗ ಹಾಕಿಸಿ, ಎಲ್ಲರೂ ಒಂದೊಂದು ಕೀ ಇಟ್ಟುಕೊಂಡಿದ್ದರು. ಶಿವರಾತ್ರಿಯ ಸಮಯದಲ್ಲಿ ಮಾತ್ರ ತಪ್ಪದೇ ಈ ಘಟನೆಯನ್ನು ನೆನಪು ಮಾಡಿಕೊಂಡು ನಗುತ್ತಾರೆ.
.
-ನಳಿನಿ. ಟಿ. ಭೀಮಪ್ಪ, ಧಾರವಾಡ
ಸಕಾಲಿಕ ಬರಹ, ನಿರೂಪಣೆ ಇಷ್ಟವಾಯಿತು..
ಧನ್ಯವಾದಗಳು ಮೇಡಂ
ಸುಪರ್ಬ್. ತಮ್ಮ ಅನುಭವಗಳ ಸರಣಿ ಸೊಗಸಾಗಿದೆ. ಬಾಲ್ಯದ ದಿನಗಳ ನೆನಪು, ಅಮ್ಮನ ಮಡಿಲು, ಎಲ್ಲವೂ ಸುಂದರವಾಗಿ ವಿವರಿಸಿದ್ದೀರಿ . ಚಂದ .
ಧನ್ಯವಾದಗಳು ನಯನ ಅವರೇ
ನಳಿನಿ ಯವರೇ , ಶಿವರಾತ್ರಿಯ ಉಪವಾಸ ಸಖತ್ತಾಗೆ ಮಾಡಿಸಿದ್ರಿ ಬಿಡಿ ಪಕ್ಕದ ಮನೆಯವರಿಗೆ . ಹ್ಹ….. ಹ್ಹ…. ಹ್ಹ………
ಹೌದು ರೀ …ಬೆಳಿಗ್ಗೆ ಶುಭಾಶಯಗಳೊಂದಿಗೆ ಮತ್ತೆ ನೆನಪು ಮಾಡಿ ನಕ್ಕರು ನೋಡಿ !
ಶಿವರಾತ್ರಿ ಹಬ್ಬದ ಪುಣ್ಯ ಫುಲ್!! ಸೊಗಸಾದ ಅನುಭವ ಲೇಖನ.