ಕಛ್ ದೇಖಿಯೇ.. ಕುಛ್ ಗುಜಾರಿಯೇ
ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸುವ ದೃಷ್ಟಿಯಿಂದ ಗುಜರಾತ್ ಸರಕಾರವು ಕಛ್ ನಲ್ಲಿ, ಡಿಸೆಂಬರ್ ನಿಂದ ಫೆಬ್ರವರಿ ತಿಂಗಳ ವರೆಗೆ ‘ ರಣ್ ಉತ್ಸವ’ ವನ್ನು ಹಮ್ಮಿಕೊಳ್ಳುತ್ತಿದೆ. ಈ ಬಾರಿಯ ರಣ್ ಉತ್ಸವವು ಫೆಬ್ರವರಿ 20, 2019 ರ ವರೆಗೆ ಚಾಲನೆಯಲ್ಲಿರುತ್ತದೆ. ಗುಜರಾತ್ ರಾಜ್ಯದ ಕಛ್ ಪ್ರದೇಶದ ಭೌಗೋಳಿಕ ವೈಶಿಷ್ಟ್ಯಗಳಿಂದಾಗಿ, ಸಮುದ್ರದ ನೀರು ಇಂಗಿ ಹೋಗಿ, ಉಪ್ಪಿನ ಬಿಳಿ ಹರಳುಗಳು ಶೇಖರವಾಗುತ್ತಾ ವಿಶಾಲವಾದ ಉಪ್ಪು ಮರುಭೂಮಿಯು ನಿರ್ಮಾಣಗೊಂಡಿದೆ. ಗುಜರಾತಿ ಭಾಷೆಯಲ್ಲಿ ಮರುಭೂಮಿಗೆ ‘ರಣ್ ‘ ಎನ್ನುವುತ್ತಾರೆ. ಹಾಗಾಗಿ ಕಛ್ ನಲ್ಲಿ ಕಾಣಸಿಗುವ ಸಫೇದ್ ರಣ್ ಅಥವಾ ‘ ಬಿಳಿ ಮರುಭೂಮಿ’ ವಿಶಿಷ್ಟ.
ಸಾಂಪ್ರದಾಯಿಕ ಗುಜರಾತಿ ಉಡುಗೆ ತೊಟ್ಟ ಮೇರುನಟ ಅಮಿತಾಭ್ ಬಚ್ಚನ್ ಅವರು, ಕಛ್ ನ ಸಮುದ್ರ ತೀರದಲ್ಲಿ ನಡೆಯುತ್ತಾ, ‘ ಆಪ್ ನೇ ಕಛ್ ನಹಿ ದೇಖಾ ತೋ ಕುಛ್ ನಹಿ ದೇಖಾ ! ಕುಛ್ ಚ್ ದಿನ ತೋ ಗುಜಾರಿಯೇ ಗುಜರಾತ್ ಮೇ ‘ ಎಂದು ಹೇಳುವ ಜಾಹೀರಾತನ್ನು ನೋಡಿದಾಗ, ಒಂದು ಬಾರಿ ಕಛ್ ಗೆ ಹೋಗಬೇಕೆಂಬ ಆಸೆ ಗರಿಗೆದರಿತ್ತು. ಖಾಸಗಿ ಪ್ರವಾಸಿ ಸಂಸ್ಥೆಯ ಮೂಲಕ ಹೆಸರು ನೋಂದಾಯಿಸಿದೆವು, ಜನವರಿ 18, 2019 ರಂದು, ಬೆಂಗಳೂರು-ಭುಜ್ ಮೂಲಕವಾಗಿ ಕಛ್ ತಲಪಿದಾಗ ಸಮಯ ಮಧ್ಯಾಹ್ನ ದಾಟಿತ್ತು. ಮರುಭೂಮಿಯ ಪ್ರವೇಶದ್ವಾರದಲ್ಲಿ ನೂರು ರೂ ಕೊಟ್ಟು ಟಿಕೆಟ್ ಪಡೆದುಕೊಂಡು, ನಮಗೆ ವಸತಿ ಕಲ್ಪಿಸಲಾಗಿದ್ದ ‘ನೊವಾ ಪಾಟ್ಗರ್ ಟೆಂಟ್’ ಗೆ ಬಂದೆವು. ಬಟ್ಟೆಯಿಂದ ನಿರ್ಮಿಸಲಾಗಿದ್ದ ಅಚ್ಚುಕಟ್ಟಾದ ಟೆಂಟ್ ಗಳವು. ಟೆಂಟ್ ನ ಹೊರಗಡೆ ಅಲಂಕಾರಿಕ ಲಾಟೀನು ತೂಗುಹಾಕಿದ್ದರು. ದೃಢವಾದ ಗೋಡೆ ಇಲ್ಲ ಎನ್ನುವುದನ್ನು ಬಿಟ್ಟರೆ, ಟೆಂಟ್ ನ ಒಳಗಡೆ ಬೆಡ್ , ಕಪಾಟು, ಸ್ನಾನದ ಮನೆ ಎಲ್ಲವೂ ಅನುಕೂಲಕರವಾಗಿಯೇ ಇದ್ದುವು.
ಲಗೇಜನ್ನು ಇರಿಸಿ, ಉಪಾಹಾರ ಸೇವಿಸಿಯಾದ ಕೂಡಲೇ ನಮ್ಮನ್ನು ಅನತಿ ದೂರದಲ್ಲಿರುವ ‘ದೊರ್ಡೋ’ ಎಂಬಲ್ಲಿರುವ ಸೂರ್ಯಾಸ್ತ ವೀಕ್ಷಣಾ ಸ್ಥಳಕ್ಕೆ ಕರೆದೊಯ್ದರು. ನಮ್ಮ ವಸತಿಯಿಂದ 5 ಕಿ.ಮೀ ದೂರದಲ್ಲಿದ್ದ ‘ದೋರ್ಡೋ’ ಈ ಭಾಗದ ಕಡಲತೀರ. ಇಲ್ಲಿಯ ಮುಖ್ಯದ್ವಾರದಿಂದ ವೀಕ್ಷಣಾ ಗೋಪುರವನ್ನು ತಲಪಲು ಅಂದಾಜು 1.5 ಕಿ.ಮೀ ನಡೆಯಬಹುದು, ಅಥವಾ ಒಂಟೆ ಸವಾರಿ ಮಾಡಬಹುದು. ಒಂಟೆ ಹಾಗೂ ಕುದುರೆಗಳಿಂದ ಎಳೆಯಲ್ಪಡುವ ಗಾಡಿಗಳೂ ಬಾಡಿಗೆಗೆ ಲಭ್ಯವಿದೆ. ಕಣ್ಣು ಹಾಯಿಸಿದಷ್ಟೂ ದೂರಕ್ಕೆ ಕಾಣಿಸುವ ಬಿಳಿ ಉಪ್ಪಿನ ಮಣ್ಣುಹಾಸಿನಲ್ಲಿ ಸೂರ್ಯನು ಮರೆಯಾಗುವ ದೃಶ್ಯ ಮನಮೋಹಕ. ಸೀಗಲ್ ಮತ್ತು ಫ್ಲೆಮಿಂಗ್ ನಂತಹ ವಲಸೆ ಹಕ್ಕಿಗಳೂ ಕೆಲವು ಕಾಣಿಸಿದುವು. ಇನ್ನು ಸಾಹಸ ಪ್ರಿಯರಿಗೆ ಹಲವಾರು ಅಡ್ವೆಂಚರ್ ಗೇಮ್ ಗಳಿವೆ. ಪ್ರಶಾಂತವಾದ ವಾತಾವರಣದಲ್ಲಿ, ಹುಣ್ಣಿಮೆ ಚಂದಿರನ ಬೆಳಕಲ್ಲಿ, ಉಪ್ಪಿನ ಮರುಭೂಮಿಯಲ್ಲಿ ಅಡ್ಡಾಡಿದ ಅನುಭವ ಅವಿಸ್ಮರಣೀಯ.
ಹಿಂತಿರುಗಿ ಬರುವಾಗ ಒಂಟೆಗಾಡಿಯಲ್ಲಿ ಪ್ರಯಾಣಿಸಿ ‘ರಣ್ ಉತ್ಸವ’ ನಡೆಯುವ ಜಾಗಕ್ಕೆ ಬಂದೆವು. ಅನತಿ ದೂರದಲ್ಲಿ ವಿಶಾಲವಾದ ‘ಟೆಂಟ್ ಸಿಟಿ’ ಕಾಣಿಸುತ್ತಿತ್ತು. ಅಗಲವಾದ ರಸ್ತೆಯ ಇಕ್ಕೆಲದಲ್ಲಿಯೂ ಕಛ್ ನ ಕರಕುಶಲ ಅಲಂಕಾರಿಕ ವಸ್ತುಗಳು, ಕಸೂತಿ ಬಟ್ಟೆ, ಶಾಲು ಮೊದಲಾದುವುಗಳನ್ನು ಮಾರುವ ಅಂಗಡಿಗಳಿದ್ದವು. ಅಲ್ಲಲ್ಲಿ ಚಹಾ, ತಿಂಡಿ, ಪಾನೀಯದ ಅಂಗಡಿಗಳೂ ಮೇಳೈಸಿದ್ದುವು. ಸಂಗೀತ/ಮನೋರಂಜನಾ ಕಾರ್ಯಕ್ರಮಕ್ಕಾಗಿ ಸಿದ್ಧಪಡಿಸಿದ್ದ ವೇದಿಕೆಗಳು ಅಲ್ಲಲ್ಲಿ ಕಂಡುಬಂದುವಾದರೂ, ಬಹುತೇಕ ವೇದಿಕೆಗಳಲ್ಲಿ ಆ ದಿನ ಕಾರ್ಯಕ್ರಮವಿದ್ದಂತಿರಲಿಲ್ಲ.
ಅಷ್ಟಿಷ್ಟು ಸುತ್ತಾಡಿ, ಒಂದಿಷ್ಟು ಕನ್ನಡಿಗಳುಳ್ಳ ಕಸೂತಿ ಶಾಲುಗಳನ್ನು ಸ್ಮರಣಿಕೆಗಾಗಿ ಖರೀದಿಸಿ, ಸ್ಥಳೀಯ ಚಾಟ್ಸ್ ಸೇವಿಸಿ, ನಮ್ಮ ಟೆಂಟ್ ಗೆ ಹಿಂತಿರುಗಿದೆವು. ರಾತ್ರಿಯೂಟದ ನಂತರ ಟೆಂಟ್ ನ ಮುಂದೆ ಇದ್ದ ವಿಶಾಲವಾದ ಅಂಗಳದಲ್ಲಿ ಸೌದೆ ಉರಿ ಹಚ್ಚಿ ‘ಕ್ಯಾಂಪ್ ಫೈರ್ ‘ ಆರಂಭವಾಯಿತು. ಕಚ್ಚೆ ಧರಿಸಿ, ತಲೆಗೆ ಪೇಟಾ ಸುತ್ತಿದ್ದ ಸ್ಥಳೀಯ ಕಲಾವಿದರು ಸುಮಾರು ಒಂದು ಗಂಟೆಯ ಕಾಲ ಹಾಡು ಹೇಳಿ ರಂಜಿಸಿದರು. ನಮಗೆ ಮರುದಿನ ಬೇಗನೇ ಹೊರಡಲಿದ್ದುದರಿಂದ ಅನಿವಾರ್ಯವಾಗಿ ‘ಕ್ಯಾಂಪ್ ಫೈರ್’ ಜಾಗದಿಂದ ವಿಶ್ರಾಂತಿಗಾಗಿ ನಿರ್ಗಮಿಸಿದೆವು.
‘ರಣ್ ಉತ್ಸವ’ ಕ್ಕೆ ಬರುವ ಪ್ರವಾಸಿಗರು ಅಪರೂಪವೆನಿಸುವ ಉಪ್ಪು ಮರುಭೂಮಿಯಲ್ಲಿ ನಡೆದಾಡಿ , ಬೆಳದಿಂಗಳನ್ನು ಕಣ್ತುಂಬಿಸಿ, ಒಂಟೆ ಸವಾರಿ ಮಾಡಿ, ಗುಜರಾತಿನ ಸ್ಥಳೀಯ ಊಟೋಪಚಾರ ಸವಿದು, ಕಛ್ ಉಡುಗೆ ಧರಿಸಿ, ಆಸಕ್ತಿ ಇದ್ದರೆ ಸಾಹಸಮಯ ಕ್ರೀಡೆಗಳಲ್ಲಿಯೂ ಭಾಗವಹಿಸಿ , ಟೆಂಟ್ ನಲ್ಲಿ ನಿದ್ರಿಸುವ ವಿಶಿಷ್ಟ ಅನುಭವಗಳನ್ನು ಪಡೆಯಬಹುದು.
ಕಛ್ ಗೆ ಬರುವ ದಾರಿಯಲ್ಲಿ ಅಥವಾ ಹಿಂತಿರುಗುವಾಗ ಭುಜ್ ನ ಆಸುಪಾಸಿನಲ್ಲಿರುವ ಮ್ಯೂಸಿಯಂ, ಪ್ರಾಗ್ ಮಹಲ್ , ಐನಾ ಮಹಲ್ ಸ್ವಾಮಿ ನಾರಾಯಣ ಮಂದಿರ ಸರೋವರ, ಕೋಟೇಶ್ವರ ಮಂದಿರ, ಮಾಂಡ್ವಿ ಬೀಚ್ ಇತ್ಯಾದಿಗಳಿಗೂ ಭೇಟಿ ಕೊಡಬಹುದು.
ಹೋಗುವುದು ಹೇಗೆ?
ಬೆಂಗಳೂರಿನಿಂದ ಗುಜರಾತಿನ ಭುಜ್ ನಗರಕ್ಕೆ ವಿಮಾನ ಅಥವಾ ರೈಲಿನ ಮೂಲಕ ಪ್ರಯಾಣಿಸಬೇಕು. ಅಲ್ಲಿಂದ ಕಛ್ ಗೆ ಸುಮಾರು 80 ಕಿ.ಮೀ ದೂರವಿದೆ. ಕಾರು ಅಥವಾ ಬಸ್ಸಿನಲ್ಲಿ ಪ್ರಯಾಣಿಸಬಹುದು. ಮಾರ್ಗದ ಮಧ್ಯೆ, ಕಛ್ ಮರುಭೂಮಿಗೆ ಪ್ರವೇಶವಾಗುವ ಮೊದಲು ಪ್ರವೇಶಕ್ಕೆ ಟಿಕೆಟ್ ಖರೀದಿಸಬೆಕಾಗುತ್ತದೆ. ಊಟ ವಸತಿಗಾಗಿ ಮುಂಗಡ ಕಾಯ್ದಿರಿಸುವಿಕೆಯ ಸೌಲಭ್ಯವಿದೆ. ಹೆಚ್ಚಿನ ವಿವರಗಳಿಗಾಗಿ www.rannutsav.com ಜಾಲತಾಣಕ್ಕೆ ಭೇಟಿ ಕೊಡಬಹುದು. ಆನ್ ಲೈನ್ ಮಲ್ಲಿ ಮುಂಗಡ ಬುಕ್ಕಿಂಗ್ ಗೆ ಅವಕಾಶವಿದೆ. ವಿವಿಧ ಶ್ರೇಣಿಯ ಟೆಂಟ್ ಗಳು ವಿಭಿನ್ನ ದರಗಳಲ್ಲಿ ಸಿಗುತ್ತವೆ. ಕೆಲವು ಖಾಸಗಿ ಪ್ರವಾಸಿ ಸಂಸ್ಥೆಯವರ ಮೂಲಕವೂ ಪ್ರಯಾಣಿಸಬಹುದು.
– ಹೇಮಮಾಲಾ.ಬಿ
(ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟಿತವಾದ ಬರಹ)
ಶ್ರೀ ಮತಿ.ಹೇಮವಾಲ ಅವರೆ ನಿಮ್ಮ ಲೇಖನ ತುಂಬಾ ಸೊಗಸಾಗದೆ…ನಾವು ನೊಡಿದ ಹತ್ತು ಹಲವಾರು ಪ್ರೇಕ್ಷಣೀಯ ತಾಣಗಳನ್ನು ಕಣ್ಣಿಗೆ ಕಟ್ಟಿದಂತೆ ಚಿತ್ರಿಸಿದ್ದೀರಿ….ನಮ್ಮ ಮಿತ್ರರೂ ,ಹಿತೈಷಿಗಳೂ, ಬಂಧುಗಳೂ ನಮ್ಮ ಗುಜರಾತ್ ಯಾತ್ರೆ ಯ ಬಗ್ಗೆ ತಿಳಿಸಲು ಕೇಳುತ್ತಿದ್ದರು…ನಿಮ್ಮ ಈ ಲೇಖನ ಪರಿಪೂರ್ಣ ವಾಗಿರುವುದರಿಂದ ಸಂತೋಷವಾಗಿ ಅವರಿಗೆ ಓದಲು ,ತಿಳಿದುಕೊಳ್ಳಲು ರವಾನಿಸುತ್ತಿದ್ದೇನೆ….ನನ್ನ ಕೆಲಸ ಸುಸೂತ್ರವಾಯಿತು…ಧನ್ಯವಾದಗಳು… ನಿಮ್ಮ ಲೇಖನಿಗೆ ವಿರಾಮವಿಲ್ಲದಿರಲಿ…ಬರೆಯಿರಿ ಬರೆಯುತ್ತಿರಿ
ತಮ್ಮ ನಲ್ನುಡಿಗಳಿಗೆ ಅನಂತ ಧನ್ಯವಾದಗಳು.
ಒಳ್ಳೆಯ ವಿವರಣೆ ಕೊಟ್ಟಿದ್ದೀರಿ ಧನ್ಯವಾದಗಳು
ಬಹಳ ಚೆನ್ನಾಗಿದೆ . ಹೊಸ ಲೋಕದೊಳಗೊಂದು ಸುತ್ತು ಹಾಕಿದ ಅನುಭವ . ಮೇಡಂ , ನೀವು ಪ್ರವಾಸದಲ್ಲಿ ಪ್ರತಿಯೊಂದು ವಿಷಯವನ್ನು ಆಳವಾಗಿ ಅರಿತು ಎಂಜಾಯ್ ಮಾಡೋ ರೀತಿ ಸುಪರ್ಬ್
ಇಂಥ ಮಾಹಿತಿಗಳು ಓದುಗರಿಗೆ ಸಿಗಬೇಕು
ನಿಮ್ಮ ಪ್ರವಾಸ ಕಥನಗಳು ವಿಶೇಷವಾದದ್ದು. ಅಭಿನಂದನೆಗಳು ಮೇಡಂ
ಸರಳವಾಗಿ ಕಣ್ಣಿಗೆ ಕಟ್ಟಿದಂತೆ ಬಣ್ಣಿಸುವ ನಿಮ್ಮ ಬರಹಗಳು ನಿಜವಾಗಿಯೂ ತುಂಬಾನೇ ಇಷ್ಟ. ಮತ್ತಷ್ಟು, ಹೆಚ್ಚು ಬರಹಗಳು ನಿಮ್ಮಿಂದ ಬರಲೆಂದು ಅಪೇಕ್ಷೆ.