ಭಾವಯಾನ
ನೀ ಗೀಚೋ ನೂರಾರು ಸಾಲುಗಳು ,
ಮರುಗದಿರು ಗುರುತಿಸಲಿಲ್ಲವೆಂದು ಯಾರೂ, ಎಲ್ಲೂ ,
ಬೇಕಲ್ಲವೇ ಅದನ್ನೂ ಮೆಚ್ಚೋ ಮನಸುಗಳು ,
ಒಂದೇ ಸಮವೆಲ್ಲಿಹುದು ಇಲ್ಲಿ ಎಲ್ಲರ ಭಾವಗಳು ?.
ಪ್ರತಿಯೊಂದು ಭಾವನೆಗಳೂ ಆಗಿ ಕವಿತೆ ,
ಹೊಮ್ಮಿತೊಂದು ಹೊಸ ಭಾವಗೀತೆ ,
ಬರೆಯ ಹೊರಟಾಗ ಈ ಬಾಳ ಕಥೆ ,
ಈಗಂತೂ ಭಾವಲೋಕದ ತುಂಬಾ ಬರೀ ಮೌನಗೀತೆ .
ನಿರಾಸೆಯ ಒಳಹೊಕ್ಕು ಕೆಳಗಿಳಿಸದಿರು ಲೇಖನಿ ,
ಮಿಡಿಯದಿರು ನೋವಿನ ಒಳಹೊಕ್ಕು ಕಂಬನಿ ,
ಸಮಾಧಾನಿಸುವುದ ಕಲಿ ಮೊದಲು ನಿನ್ನಂತರಂಗವ ನೀ ,
ಹಾಡ ತೊಡಗುವುದು ತನ್ನಿಂದ ತಾನೇ ಸಂತಸದಿ ಮನದ ಇನಿದನಿ .
ಸಾಹಿತ್ಯ ಲೋಕವೋ ಬಹಳ ವಿಶಾಲ ,
ಇಲ್ಲಿಹುದು ಹುಡುಕಿದಷ್ಟೂ ಮುಗಿಯದ ಮೂಲ ,
ಬಗ್ಗಿಸದಿರು ನೀ ಇಲ್ಲಿ ತಲೆಯ ಒಪ್ಪಿಕೊಂಡು ಸೋಲ ,
ಸಿಕ್ಕೇ ಸಿಗುವರಿಲ್ಲಿ ಮುನ್ನಡೆಸುವವರು ಹಿಡಿದು ಕೈಗಳ .
ಮನದೊಳಗಿನ ಒಂದೊಂದೂ ತಲ್ಲಣ ,
ಬರೆಯುತ್ತಾ ಹೋದಂತೆ ಸುಂದರ ಕವನ ,
ಸಾಗುತ್ತಾ ಹಿಂತಿರುಗಿ ನೋಡಲೊಮ್ಮೆ ತೆರೆದು ಅಂತರಂಗದ ನಯನ,
ಸೊಗಸೆನಿಸದಿರದು ಕಳೆದ ಪ್ರತಿಯೊಂದು ಕ್ಷಣ.
ನಿಜ, ಅಕ್ಷರ ಲೋಕದೊಳಗಿನ ಪಯಣ ,
ಸುಲಭವಲ್ಲ ಕಠಿಣ ,
ಹಾಗೆಂದು ಭಾವನೆಗಳ ಅನಾವರಣ ಗೊಳಿಸುವುದ ನಿಲ್ಲಿಸದಿರು,
ಸಿಗುವುದು ಒಂದಾದರೂ ಇಲ್ಲಿ ಸ್ಪಂದಿಸೋ ಮನ .
ದೊರೆತಾ ಕ್ಷಣದಿಂದ ನಡೆವಾಗ ಬೀಳೋ ಮಗುವ ಸಂಭಾಳಿಸೋ ತಾಯಿಯಂತಹ ಮಡಿಲು,
ಭಾವಲೋಕವಾಗಿಹುದಿಂದು ಬತ್ತದ ಕಡಲು,
ಪುಟಗಳ ತುಂಬಾ ಗೀಚಿದಷ್ಟೂ ಮುಗಿಯದ ಪದಗಳು,
ಇದಕ್ಕೆಲ್ಲಾ ಸ್ಫೂರ್ತಿ ಬಾಳ ತಿರುವಲ್ಲಿ ದೊರೆತ ಅನಿರೀಕ್ಷಿತ ಆಸರೆ
ಆಗಿ ತಂಪಾದ ನೆರಳು .
– ನಯನ ಬಜಕೂಡ್ಲು.
ಭಾವಯಾನ ನಿರಂತರವಾಗಿ ಸಾಗಲಿ..
ಸುಂದರವಾದ ಭಾವಯಾನ