ರಜಾ…ಮಜಾ

Share Button

“ಹಲೋ ಅಮ್ಮ, ಹೇಗಿದ್ದೀಯಾ?  ನಮ್ಮ ಅನುಪಳಿಗೆ ರಜೆ ಸಿಕ್ಕಿದೆ…ಭರ್ತಿ ಎರಡೂವರೆ ತಿಂಗಳು. ನಾವು ಆಫ್ರಿಕಾ ಪ್ರವಾಸ ಮುಗಿಸಿ ಮನೆಗೆ ಬರ್ತೇವೆ. ನಿಮ್ಮೊಂದಿಗೆ ಅವಳು ಒಂದು ತಿಂಗಳು ಇರ್ತಾಳೆ, ಖುಷಿಯಾ? ಹಾಂ..ಒಂದು ವಿಷಯ..ಅವಳಿಗೆ ಉದಾಸೀನ ಆಗ್ಬಾರ್ದಲ್ವಾ..ಅದಕ್ಕೆ ಮನೆಗೆ ಮೊಲ ತಗೊಂಡು ಬನ್ನಿ ಆಯ್ತಾ?” ಅಮೇರಿಕದಲ್ಲಿರುವ ಮಗಳ ದೂರವಾಣಿ ಉಲಿಯಿತು.ಅಮೆರಿಕದಲ್ಲಿ ಜೂನ್,ಜುಲೈ ತಿಂಗಳಲ್ಲಿ ಶಾಲೆಗೆ ರಜೆ. ಅಜ್ಜ,ಅಜ್ಜಿಯರ ಪ್ರೀತಿ,ಒಲುಮೆಯ ನವಿರಾದ ಬಂಧದ ಅನುಭವವು ಮೊಮ್ಮಕ್ಕಳಿಗೆ ತುಂಬಾ ಹಿತಕರ.ನಾವು ಸಣ್ಣದಿರುವಾಗ ರಜೆ ಪೂರ್ತಿ ಅಜ್ಜನ ಮನೆಯಲ್ಲಿ ಝಂಡಾ ನೆನಪಾಯ್ತು…ಹಾಗಾಗಿ ರಜಾ ದಿನಗಳನ್ನು ಅಜ್ಜನ ಮನೆಯಲ್ಲಿ ಕಳೆಯಲು ಯೋಜನೆ ರೂಪುಗೊಂಡಿತ್ತು. 2ನೇ ತರಗತಿಯಿಂದ 3ನೇ ತರಗತಿಗೆ ಜಿಗಿಯಲು ಸಿದ್ಧಳಾಗಿದ್ದ ನಮ್ಮ ಪುಟ್ಟ ಬಾಲೆಗೆ ನಮ್ಮಲ್ಲಿರಲು ತಯಾರಿ ನಡೆಸಬೇಕಿತ್ತು. ಹಳ್ಳಿ ಥರಹದ ಪಟ್ಟಣದಂತಿದ್ದ ನಮ್ಮೂರಲ್ಲಿಯೋ ಧೋಯೆಂದು ಸುರಿಯುವ ಮಳೆಗಾಲ… “ಎಲ್ಲೆಲ್ಲಿ ನೋಡಿದರೂ ಅಲ್ಲಿ ನಿನ್ನ ಕೀರುತಿ” ಎನ್ನುವಂತೆ , ನಮ್ಮ ಪುಟ್ಟ ಹಿತ್ತಲಲ್ಲಿ ಹಸಿರಿನ ಜೊತೆಗೇ ಸಕಲ ದಿಕ್ಕುಗಳಲ್ಲೂ  ನೀರು,ಪಾಚಿ, ಹುಲ್ಲು,ಸೊಳ್ಳೆಗಳ ಮೇಳ ನಡೆದಿತ್ತು. ಅಮೇರಿಕದ ಸುಸಜ್ಜಿತ,ಸ್ವಚ್ಛವಾದ ಜಾಗದ ಅನುಭವವಿರುವ ನಮಗೆ,ಅಲ್ಲಿಯ ಮೊಮ್ಮಗಳ ಪುಟ್ಟ ಪಾದವಿಡಲು ಎಲ್ಲಿ ಜಾಗ ಹುಡುಕಲಿ ಎಂದು ಯೋಚನೆ. ಮಗಳು ಸುದ್ದಿ ತಿಳಿಸಿದಾಗ ಮನಸ್ಸು ಹಿಗ್ಗಿ ಹೀರೇಕಾಯಿ ಆಗುವುದರ ಜೊತೆಗೇ ಸ್ವಲ್ಪ ಅಳುಕು ಕೂಡಾ ಇತ್ತೆನ್ನಿ..!

ಆಫ್ರಿಕಾ ಪ್ರವಾಸ ಮುಗಿಸಿ, ಪುಟ್ಟ ತಮ್ಮ,ಅಮ್ಮನ ಜೊತೆ ಬಂದಿಳಿದಳು ನಮ್ಮ ಪುಟ್ಟ ಹುಡುಗಿ. ನಮ್ಮನ್ನು ಕಂಡಾಗ ಕೇಳಿದ ಮೊದಲ ಪ್ರಶ್ನೆ..“ತಿನ್ನಲು ಗೊರಟು ಉಂಟಾ ಅಜ್ಜಾ?” ಎಂದು. ಕಳೆದ ಸಲ ಬಂದಾಗ ತಿಂದ ಕಾಡು ಮಾವಿನ ಹಣ್ಣಿನ ರುಚಿಯ ನೆನಪು ಇನ್ನೂ ಅವಳಲ್ಲಿತ್ತು ನೋಡಿ..!

ದಿನಾಲೂ ವಾಟ್ಸಾಪ್ ನಲ್ಲಿ ಕಂಡು  ಎಷ್ಟೆಲ್ಲ ಲೊಟ್ಟೆ ಪಟ್ಟಾಂಗ ಹೊಡೆದಿದ್ದರೂ ,ಈಗ ಮೊಮ್ಮಗಳು ನಮ್ಮ ಬಳಿಗೆ ಬರಲು ಸ್ವಲ್ಪ ಅಳುಕುವಂತಿದ್ದಳು. ಸ್ವಲ್ಪ ಹೊತ್ತು ಕಳೆದ ಮೇಲೆ ನಮ್ಮ ಪಟ್ಟಾಂಗ ಸುರುವಾಗಿಯೇ ಬಿಟ್ಟಿತ್ತು. ಒಂದು ವಾರ ಎಲ್ಲರ ಜೊತೆ ಸಮಯ ಕಳೆದದ್ದೇ ಗೊತ್ತಾಗಲಿಲ್ಲ… ಏಳು ದಿನ ಏಳು ನಿಮಿಷಗಳಂತೆ ಕಳೆದು ಹೋದುವು. ಅಮ್ಮ ಮತ್ತು ತಮ್ಮ ಅವಳನ್ನು ನಮ್ಮಲ್ಲಿ ಬಿಟ್ಟು ಹೋಗುವ ದಿನ ಬಂದಾಯ್ತು..  ರಾತ್ರಿ ರೈಲು ನಿಲ್ದಾಣಕ್ಕೆ ಎಲ್ಲರೂ ಜೊತೆಯಾಗಿ ಹೋಗಿ ಬೆಂಗಳೂರಿಗೆ ಬೀಳ್ಕೊಂಡದ್ದೂ ಆಯ್ತು. ರೈಲು ಹೊರಡುತ್ತಿದ್ದಂತೆ, ಅವರೆಡೆಗೆ ಕೈ ಚಾಚಿ ಗಟ್ಟಿಯಾಗಿ ಅಳಲಾರಂಭಿಸಿದಾಗ ನನಗೋ ಒಂದೆಡೆ ಬೇಜಾರು…ನಮ್ಮವರು ಅವರನ್ನು ಕರಕೊಂಡು  ಹೋಗಿದ್ದರಿಂದ, ರೈಲು ನಿಲ್ದಾಣದಿಂದ  ವಾಪಾಸ್ ಮನೆಗೆ  ಬರುವಾಗ ನಾವಿಬ್ಬರೇ…ಹೇಗೋ ಸಮಾಧಾನಪಡಿಸಿ ಮನೆಗೆ ತಲಪಿದಾಗ ಮಲಗುವ ಸಮಯ. ಮಲಗುವಾಗ ಜೊತೆಗೇ ಇರುತ್ತಿದ್ದ ಮುದ್ದಿನ ಗೊಂಬೆ ಎಲ್ಲೂ ಕಾಣಲಿಲ್ಲ. ಅದಿಲ್ಲದೆ ಮಲಗಲು ಒಪ್ಪದೆ ಅಳಲು ಸುರು ಮಾಡಿದಾಗ ನಾನು ತಬ್ಬಿಬ್ಬು..!ಅದಾಗಲೇ ರಾತ್ರಿ 11ಗಂಟೆಯಾಗಿತ್ತು ..ಇಬ್ಬರೂ ಕೂಡಿ ಇಡೀ ಮನೆಯನ್ನೇ ಜಾಲಾಡಿದೆವು..ಊಹೂಂ…ಎಲ್ಲೂ ಸಿಗಲೇ ಇಲ್ಲ.   ನನಗೆ, ಆ ಗೊಂಬೆ, ಅವರ ಜೊತೆ ಹೋಗಿದ್ದರೆ ಏನು ಮಾಡುವುದೆಂದು ದಿಗಿಲಾಯ್ತು.!. ಕೂಡಲೇ ಮಗಳಿಗೆ ಫೋನ್ ಮಾಡಿದಾಗ ದೇವರ  ದಯದಿಂದ ಸಿಕ್ಕಿದಳು. “ನನ್ನ ಬಳಿ ಇಲ್ಲಮ್ಮ..ಅಲ್ಲೇ ಇದೆ..ಇನ್ನೊಮ್ಮೆ ಹುಡುಕಿ ನೋಡು”ಎಂದಾಗ ಮನಸ್ಸಿಗೆ ಸ್ವಲ್ಪ ಧೈರ್ಯ ಬಂದಂತಾಗಿ ಪುನಃ ಹುಡುಕಿದೆವು…ಅಬ್ಬಾ.. ಅಲ್ಲೇ ಮಂಚದ ಕೆಳಗೇ ಅಡಗಿ ಕೂತಿತ್ತು. ಆದಿನ ರಾತ್ರಿ ಬೇಸರದಲ್ಲಿದ್ದರೂ ಚೆನ್ನಾಗಿ ನಿದ್ರೆಯಾಯ್ತು ಅನ್ನಿ…

ಬೆಳಗ್ಗೆ ತಡವಾಗಿ ಎದ್ದು ಬಂದಾಗ ಪುನಃ ಅಮ್ಮನ ನೆನಪಾಗಿ ಅಳು. ಮಗಳು  ವಿಮಾನದಲ್ಲಿ ಇದ್ದುದರಿಂದ ಮಾತಾಡಲೂ ಮುಂದೆರಡು ದಿನ ಸಿಗವಂತಿರಲಿಲ್ಲ. ನಮ್ಮಲ್ಲಿ ತುಂಬಾ ವರ್ಷಗಳಿಂದ ಚಿಕ್ಕ ಮಕ್ಕಳು ಇಲ್ಲದ್ದರಿಂದ ಅವರ ನಡವಳಿಕೆಗಳಿಗೆ ಹೊಂದಿಕೊಳ್ಳಲು ಕೆಲವಾರು ಸೂಕ್ಷ್ಮ ಮಾನಸಿಕ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗಿತ್ತು.ನೋಡಿ…  ಹಾಗೆಯೇ ನನ್ನಲ್ಲಿದ್ದ ಉಪಾಯಗಳ ಸಕಲ ಭಂಡಾರಗಳನ್ನೂ ಖಾಲಿ ಮಾಡಿ ಸಮಾಧಾನ ಪಡಿಸಲು ಕೂತೆ. ಅವಳಿಗಿಷ್ಟದ ಕಾರ್ಟೂನ್ ಹಾಕಿದಾಗ ಅರ್ಧಂಬರ್ಧ ಅಳುತ್ತಾ ತಿಂಡಿ ಮುಗಿಸಿಯಾಯ್ತು. ಮತ್ತೆರಡು ದಿನಗಳು ಅಮ್ಮನ ನೆನಪಲ್ಲೇ ಕಳೆದು ಹೋಯ್ತು.ಆಟ,ತಿಂಡಿಗಳ ಕಡೆ ಜಾಸ್ತಿ ಮನಕೊಡದೆ ಇದ್ದ ಆ ಎರಡು ದಿನಗಳು, ತನ್ನ ಅಮ್ಮನ ಜೊತೆ ಮಾತಾಡಿದ ಮೇಲೆ ಸರಿಯಾಗಿ ಹೋಯ್ತು..

ಸಾಂದರ್ಭಿಕ ಚಿತ್ರ, ಕೃಪೆ: ಅಂತರ್ಜಾಲ

ನಾವು ಮಾಡುತ್ತಿದ್ದ ತಿಂಡಿಗಳಲ್ಲಿ ಎರಡೇ ಅವಳಿಗಿಷ್ಟ… ನೀರು ದೋಸೆ ಮತ್ತು ಓಡ್ಪಾಳೆ .ಅದರೊಂದಿಗೆ ತೆಂಗಿನ ಸಿಹಿ ಹಾಲು. ಬೇರೆ ಬೇರೆ ತರಹದ ತಿಂಡಿಗಳ ಪ್ರಯೋಗ ಮಾಡಿದರೂ ನಮ್ಮ ಶೀತ ಪೆಟ್ಟಿಗೆಯಲ್ಲಿ ಇದೆರಡರ ಹಿಟ್ಟು ಸದಾ ತಯಾರಿರಲೇ ಬೇಕಿತ್ತು ನೋಡಿ.. ಮೊಮ್ಮಗಳ ಸುಪ್ರಭಾತ ಬೆಳಿಗ್ಗೆ ಹತ್ತು  ಗಂಟೆ ಮೇಲೆ. ನಾವು ತಿಂಡಿ ಮುಗಿಸಿ ಅವಳು ಏಳುವುದನ್ನೇ ಕಾಯುವುದು ಕೂಡಾ ಮಜದ ಕೆಲಸವಾಗಿತ್ತು ನಮಗೆ. ಎದ್ದ ಕೂಡಲೇ ದಡಬಡಿಸಿ ಅವಳೊಂದಿಗೇ ಇದ್ದು ತಿಂಡಿ ತಿನಿಸುವುದು ಇನ್ನೊಂದು ರೀತಿಯ ಖುಷಿ. ಅವಳಿಗೆ ತುಂಬಾ ಇಷ್ಟದ ವಿಷಯವೆಂದರೆ ಕಾಡು ಮಾವಿನ ಹಣ್ಣಿನ ಪುಟ್ಟ ಗೊರಟನ್ನು ಚಪ್ಪರಿಸುತ್ತಾ ಆನಂದದಿಂದ ಕಾಲಕಳೆಯುವುದು. ಆ ಹಣ್ಣು ಲಭ್ಯವಿರುವ ಸಮಯದಲ್ಲಿ ಅದರ ಸಿಪ್ಪೆ ತೆಗೆದು ಡೀಪ್ ಫ್ರೀಝರಲ್ಲಿ ಭದ್ರವಾಗಿ ಇಟ್ಟದ್ದು ಸಾರ್ಥಕ ವಾಗಿತ್ತು. ನಮ್ಮಲ್ಲಿದ್ದಷ್ಟು ದಿನವೂ ಒಂದು ದಿನವೂ ತಪ್ಪದೆ ಗೊರಟಿನಾನಂದ ಲಭಿಸಿತ್ತು ಅವಳಿಗೆ.

ಅವಳಿಗಾಗಿ ತಂದಿದ್ದ ಮೊಲಗಳೊಡನೆ ಆಟವಾಡದಿದ್ದರೂ ಒಳ್ಳೆ ಹುಲ್ಲು ತಂದು ತಿನ್ನಲು ಕೊಡುವುದು ಖುಷಿ ಸಂಗತಿಯಾಗಿತ್ತು. ಆದರೆ ಅದರೊಡನೆ ಆಟವಾಡಿಸುವ ನಮ್ಮಾಸೆ ಕೊನೆಗೋ ಪೂರೈಸಲೇ ಇಲ್ಲ. ಅಕ್ಬರ ಬೀರಬಲ್ಲರ ಬಲು ಮೋಜಿನ ಕಥೆಗಳು ಎಲ್ಲರಿಗೂ ಇಷ್ಟ ತಾನೇ? ಅದರಲ್ಲಿ ಬೀರಬಲ್ಲ ತಾನೇ ಮಗುವಾಗಿ, ತುಂಡರಿಸಿದ ಕಬ್ಬನ್ನು ಮೊದಲಿನಂತೆ ಮಾಡಿಕೊಡಲು ಅಕ್ಬರನಲ್ಲಿ ಹಟ ಮಾಡುವ ಪ್ರಸಂಗವೂ ಒಂದು. ಹಾಗೆಯೇ ನಮ್ಮ ಈ ಪುಟ್ಟ ಬೀರಬಲ್ಲೆ ನಮ್ಮನ್ನು ಪೇಚಿಗೆ ಸಿಕ್ಕಿಸಿದ ಪ್ರಸಂಗಗಳು ಹಲವಾರು. ಅವಳಿಗೆ ನಮ್ಮಿಂದ ಏನಾದರೂ ಕೆಲಸ ಆಗಬೇಕಾದರೆ ,ನೆನಪಾದಾಗಲೆಲ್ಲಾ ನಮಗೆ ಭಾವನಾತ್ಮಕ ಬೆದರಿಕೆ (ಬ್ಲಾಕ್ ಮೈಲ್ ) ಹಾಕಿ..“ನನಗೆ ಅಮ್ಮ ,ಆಡಲು ತಮ್ಮ ಈಗಲೇ ಬೇಕು” ಎಂದು ಅಳಲಾರಂಭಿಸಿದರೆ, ನಮ್ಮ ಖಜಾನೆಯ ಎಲ್ಲಾ ಉಪಾಯಗಳೂ ಮುಗಿದು ತಬ್ಬಿಬ್ಬಾಗಿ ಪೆಚ್ಚು ಮುಖ ಹಾಕಿಕೊಂಡು ಕೂತ ದಿನಗಳೇ ಬಹಳ.   ಹಾಗೆಯೇ ನನ್ನ ಸ್ನೇಹಿತೆಯೊಬ್ಬಳ ಮಾತು ನೆನಪಿಗೆ ಬಂತು. ಬೆಂಗಳೂರಲ್ಲಿದ್ದ ಅವಳ ಮಗಳು, ಮೊಮ್ಮಗಳು ಊರಿಗೆ ಬಂದು ಹೋಗುವಾಗ ಮೊಮ್ಮಗಳನ್ನು ಅಜ್ಜಿ ಜೊತೆ ಇರಲು ಸ್ವಲ್ಪ ಸಮಯ ಬಿಟ್ಟು ಹೋದಳು. ಇಡೀ ದಿನ ಚೆನ್ನಾಗಿ ಆಡಿಕೊಂಡಿದ್ದವಳು ರಾತ್ರಿಯಾಗುತ್ತಿದ್ದಂತೆ ಈಗಲೇ ಅಮ್ಮ ಬೇಕೆಂದು ತುಂಬಾ ಅಳಲಾರಂಭ..! ಹೀಗೆಯೇ ಮೂರ್ನಾಲ್ಕು ದಿನಗಳು ಕಳೆದರೂ ಅಳು ಕಡಿಮೆಯಾಗದೆ ಸ್ವರಸ್ಥಾಯಿ ಮೇಲಕ್ಕೇರುತ್ತಾ ಹೋಗಿತ್ತು. ನಾಲ್ಕನೇ ದಿನ ಮೊಮ್ಮಗಳನ್ನು ಬೆಂಗಳೂರಿಗೆ ತಲಪಿಸಿ ಬಂದರು. ಇದು ಸ್ವಲ್ಪ ಯೋಚಿಸಬೇಕಾದ ಸಂಗತಿಯೇ ಅಲ್ಲವೇ? ನನಗೆ ಅಮೆರಿಕಕ್ಕೆ ಕೂಡಲೇ ಕರಕೊಂಡು ಹೋಗಿ ಬಿಡಲು ಸಾಧ್ಯವಿದೆಯೇ ..ನೀವೇ ಹೇಳಿ?

ನಾವು ಎಂದಿನಂತೆ ಮುಸ್ಸಂಜೆ ಹೊತ್ತಲ್ಲಿ ಭಜನೆ ಮಾಡಿ ಪ್ರಸಾದ ವಿತರಣೆಯಾದ ಮೇಲೆ ಅವಳದ್ದೇ ಆದ ಬೇರೆಯೇ ಪೂಜೆ ಇರುತ್ತಿತ್ತು. ಅವಳೇನು ಮಾಡುವಳೆಂದು ನಾನಷ್ಟು ಗಮನಿಸಿರಲಿಲ್ಲ.. ಮರುದಿನ ಬೆಳಿಗ್ಗೆ ನೆಲ ಗುಡಿಸುವಾಗ ನೆಲದಲ್ಲಿದ್ದ  ಕೆಲವು ಹೂಗಳನ್ನೂ ತೆಗೆದು ಸ್ವಚ್ಛ ಮಾಡಿದೆ.  ಮುಂದಿನ ದಿನ ರಾತ್ರಿ ಅವಳು ಪೂಜೆ ಮುಗಿಸಿ, ಮರುದಿನ ಬೆಳಿಗ್ಗೆ ಎದ್ದು ದೇವರ ಎದುರಲ್ಲಿ ಕೂತು  ಜೋರಾಗಿ ಅಳಲಾರಂಭಿಸಿದಳು. ಏನಾಯ್ತು ಎಂದು ವಿಚಾರಿಸಿದಾಗ  ಹೇಳಿದಳು “ ಅಮ್ಮನಿಗೆ ನನ್ನ ಮೇಲೆ ಪ್ರೀತಿಯೇ ಇಲ್ಲ ಅಜ್ಜೀ.” .” ಯಾಕೆ ಕಂದ ಹಾಗನ್ತಿ.” ನಾನು ಕೇಳಿದೆ. ” ಅಜ್ಜೀ, ನಿನ್ನೆ ನಾನಿಟ್ಟ ಹೂವುಗಳನ್ನೆಲ್ಲಾ ಅಮ್ಮ ತಗೊಂಡಿದ್ದಾಳೆ, ಇವತ್ತು ನೋಡು ತಗೊಳ್ಳಲೇ ಇಲ್ಲ” ಎಂದಳು…ಇದನ್ನು ಕೇಳಿ ನಾನು ನಿಜವಾಗಿ ಭಾವುಕಳಾಗಿ ಹೋದೆ.  ಅದಕ್ಕೆ ನಾನಂದೆ ” ಪುಟ್ಟಾ.. ಅಮ್ಮ ಇವತ್ತು ಹೂ ತಗೊಳ್ಳದೆ ಅದರ ಪರಿಮಳವನ್ನು ತಗೊಂಡಿದ್ದಾಳೆ ನೋಡು” ಹೂ ಮೂಸಿ ನೋಡಿದಾಗ ಅದರ ಪರಿಮಳ ಸ್ವಲ್ಪ ಕಡಿಮೆಯಾಗಿತ್ತೇನೋ.. ಅಲ್ಲಿಗೆ ಅವಳಿಗೆ ಸಮಾಧಾನವಾಯ್ತು ..ಸದ್ಯ..! ವಿಷಯ ಏನ್ಗೊತ್ತಾ? ಅವಳು ದೇವರ ಎದುರಿಗೆ ನೆಲದ ಮೇಲೆ ಮೂರು ಹೂವುಗಳನ್ನಿಟ್ಟು , ಅವುಗಳಿಗೆ ಕ್ರಮವಾಗಿ ಒಂದರ ಮೇಲೆ ಕುಂಕುಮ ಹಾಗೂ ಇನ್ನೆರಡರಲ್ಲಿ ವಿಭೂತಿ ಇಟ್ಟು ಅಮ್ಮ, ಅಪ್ಪ ಹಾಗೂ ತಮ್ಮನಿಗಾಗಿ ಬೇಡಿಕೊಳ್ಳುತ್ತಿದ್ದಳು. ಹಿಂದಿನ ದಿನ ನಾನು ನೆಲ ಸ್ವಚ್ಛ ಮಾಡುವಾಗ ತೆಗೆದುದನ್ನು ಅವಳು ಅಮ್ಮನೇ ತೆಗೆದುದು ಎಂದುಕೊಂಡಿದ್ದಳು..!! ಹೌದು …ಮಕ್ಕಳ ಮುಗ್ಧ ಮನಸ್ಸಿನ ಯೋಚನೆಗಳು ನಮ್ಮ ಯೋಚನಾ ಪರಿಧಿಯನ್ನೂ ಮೀರಿ ಬೆಳೆದಿರುತ್ತವೆ..ಪವಿತ್ರವಾಗಿರುತ್ತವೆ.!

ಅಮೇರಿಕದಲ್ಲಿ ಕಲಿಯುತ್ತಿದ್ದ ಸಂಗೀತ ಪಾಠದ ಮುಂದುವರಿಕೆಯನ್ನು ಇಲ್ಲಿ ಮಾಡಲು ಮಗಳ ಕೋರಿಕೆಯಂತೆ ವಾರಕ್ಕೆರಡು ಬಾರಿ ಸಂಗೀತ ಶಿಕ್ಷಕಿಯಲ್ಲಿಗೆ ಹೋಗುವುದಿತ್ತು. ಮೊದಲು ಕಲಿತ ಪಾಠದ ಅಭ್ಯಾಸಕ್ಕಾಗಿ ಹರಸಾಹಸ ಮಾಡಿ ಕೂರಿಸಿದರೆ ಅರ್ಧದಲ್ಲೇ ನನ್ನ ಬ್ಲಾಕ್ ಮೈಲ್ ಸುರು..!.. ಆದರೆ ದಿನಗಳುರುಳಿದಂತೆ ನಾನು ಅವಳ ಪ್ರೀತಿಯ ಅಜ್ಜಿಯಾಗಿಬಿಟ್ಟಿದ್ದೆ. ಚೆನ್ನಾಗಿ ಸಂಗೀತ ಅಭ್ಯಾಸಮಾಡಿ ಶಾಭಾಷ್ ಎನಿಸಿಕೊಂಡಳು. ಸಂಗೀತದ ಗಂಧವೇ ಇಲ್ಲದ ನಾನೂ ಅವಳೊಡನೆ  ಒಂದೆರಡು ಪದ್ಯಗಳನ್ನು ಕಲಿತುಬಿಟ್ಟೆ ಅನ್ನಿ.

ಸಾಂದರ್ಭಿಕ ಚಿತ್ರ, ಕೃಪೆ: ಅಂತರ್ಜಾಲ

ಅಮೇರಿಕದಲ್ಲಿ ಹುಟ್ಟಿ ಬೆಳೆದ ಹುಡುಗಿ ನಮ್ಮ ಈ ರಭಸದ ಮಳೆಗಾಲದ ಜಿಟಿ ಪಿಟಿ ವಾತಾವರಣಕ್ಕೆ ಚೆನ್ನಾಗಿ ಒಗ್ಗಿಕೊಂಡಳು.ಆಗಾಗ ಅವಳನ್ನು ಪುಟ್ಟ ಪ್ರವಾಸಗಳಿಗೆ ಕರಕೊಂಡು ಹೋಗುತ್ತಿದ್ದೆವು. ಹಾಗೆಯೇ ಒಂದು ಸಸ್ಯೋದ್ಯಾನಕ್ಕೆ ಹೋಗಿದ್ದೆವು. ಸಿಕ್ಕಾಪಟ್ಟೆ ಮಳೆ ಬೇರೆ. ಅಲ್ಲಿ ತಲಪಿದಾಗ ನೋಡಿದರೆ ಉದ್ಯಾನದ ಬಾಗಿಲು ಮುಚ್ಚಿತ್ತು. ಪಕ್ಕದಲ್ಲಿ ಯಾರೂ ಕಾಣಲಿಲ್ಲ. ಯಾರಾದರೂ ಸಿಗುತ್ತಾರಾ ಎಂದು ನನ್ನವರು ಸ್ವಲ್ಪ ದೂರದಲ್ಲಿದ್ದ ಶಾಲಾ ಮಕ್ಕಳ ಹಾಸ್ಟೆಲ್ ನತ್ತ ನಡೆದರು. ಮೊಮ್ಮಗಳು ನನ್ನೊಡನೆಯೇ ಇದ್ದಳು. ದೂರದಲ್ಲಿ ಹೋಗುತ್ತಿರುವ ಅವಳ ಅಜ್ಜನನ್ನು ನೋಡಿ ನಾನು ಅಲ್ಲಿಗೆ ಹೋಗ್ಬೇಕು ಎಂದು ಓಡಿದಳು. ಅವಳು ಅಲ್ಲಿಗೆ ತಲಪುವ ಮೊದಲೇ ಅದೆಲ್ಲಿದ್ದವೋ ಎರಡು ನಾಯಿಗಳು ಪಕ್ಕದಿಂದ ಬಂದು ಅವಳೆಡೆಗೆ ಬಂದು ಬೊಗಳಲಾರಂಭಿಸಿದವು. ನಾನು ದೂರದಿಂದ ನೋಡುತ್ತಿದ್ದವಳಿಗೆ ತುಂಬಾ ಗಾಬರಿಯಾಯಿತು. ಅವಳು ಹೆದರಿ ಹಿಂದಿರುಗಿ ಓಡಿ ನನ್ನ ಕಡೆ ಬರಲಾರಂಬಿಸಿದಳು. ನನ್ನವರು ಕಟ್ಟಡದ ಹಿಂಭಾಗ ತಲಪಿದ್ದರಿಂದ ಇದರ ಸುಳಿವು ಅವರಿಗಿರಲಿಲ್ಲ. ನಾನೂ ಅವಳ ಕಡೆ ಓಡಲಾರಂಬಿಸಿದೆ. ಕ್ಷಣದೊಳಗೆ ಎಲ್ಲಾ ಕಡೆಗಳಿಂದಲೂ  ಐದಾರು ನಾಯಿಗಳು ಬೊಬ್ಬೆ ಹಾಕಿಕೊಂಡು ಬರಬೇಕೇ.?.ನನಗಂತೂ ಆಕಾಶವೇ ಕಳಚಿ ಬಿದ್ದಷ್ಟು ಗಾಬರಿಯಾಗಿ ಜೋರಾಗಿ ಓಡಿದರೆ ಮೊಮ್ಮಗಳು ಅಳುತ್ತಾ ಇನ್ನೂ ಜೋರಾಗಿ ಓಡಿ ನನ್ನ ಬಳಿ ಬಂದು ಬಿಟ್ಟಿದ್ದಳು.ನಾಯಿಗಳು ಹಾಗೇ ಹಿಂದಿರುಗಿ ಹೋಗಿದ್ದವು. ಆ ಗಾಬರಿಯಲ್ಲೂ ಅಜ್ಜನ ತಮಾಷೆ…ಪಿ.ಟಿ.ಉಷಾಳನ್ನೂ ಮೀರಿಸಿ ಓಡಿದ್ದೀಯಲ್ಲಾ ಪುಟ್ಟೀ…ಶಾಭಾಷ್.. ಅಜ್ಜನ ಮಾತಿಂದ ಮೊಮ್ಮಗಳ ಗಾಬರಿ, ಆಳು ಎಲ್ಲಾ ನಾಪತ್ತೆ..!

ಅಂತೂ ಅವಳಿದ್ದ ಮೂರು ವಾರಗಳಲ್ಲಿ ಮೊದಮೊದಲು ಇದ್ದ ಅಳು ಹಟಗಳು ನಾಪತ್ತೆಯಾಗಿ ಖುಷಿ ಖುಷಿಯಾಗಿ ಕುಣಿದಾಡುವುದು ಕಂಡು ಇವಳನ್ನು ಹೇಗಪ್ಪಾ ಕಳುಹಿಸುವುದು ಎಂದುಕೊಳ್ಳುವಂತಾಯ್ತು. ಬಿಕೋ ಎನ್ನುತ್ತಿದ್ದ ಮನೆ ಮನಸ್ಸನ್ನು ಕಳಕಳಿಸಿ ನಳನಳಿಸುವಂತೆ ಮಾಡಿ ಹೊರಟು ನಿಂತಾಗ ನಮ್ಮ ಮನಸ್ಸಲ್ಲಿ ದುಗುಡ ತುಂಬಿತ್ತು. ಅವಳನ್ನು ಬೀಳ್ಕೊಟ್ಟು ಬಂದು ಖಾಲಿ ಮನಸ್ಸಿನೊಂದಿಗೆ ಖಾಲಿ ಖಾಲಿ ಮನೆಯನ್ನು ಹೊಕ್ಕು, ಮುಂದಿನ ವರ್ಷಗಳಲ್ಲಿನ ಅವಳ ಆಗಮನದ ನಿರೀಕ್ಷೆಯಲ್ಲಿ ಗೆಲುವಾಗುವ ಪ್ರಯತ್ನ ನಮ್ಮದು…

ಮುದ್ದು ಮೊಮ್ಮಗಳಿಗಾಗಿ…

ಇಳಿ ಹರೆಯ ಸಮಯದಲಿ
ಆಲಸ್ಯ ಮನದಲ್ಲಿ
ಕಾಲ ಉರುಳುವುದು ತಾ ಮಂದಗತಿಯಲ್ಲಿ..

ಮೊಮ್ಮಗಳ ಆಗಮನ
ಹರುಷದಲಿ ತುಂಬಿ ಮನ
ನವಸ್ಫೂರ್ತಿ ತುಂಬಿ ಹರಿಯೆ ನವ್ಯ ಕವನ..

ಅತ್ತು ನಗುವುದು ಆಟ
ಗಾನ ಕಲಿಕೆಯ ಪಾಠ
ಪುಟ್ಟ ಪಾದದ ಗೆಜ್ಜೆ ನಿನಾದದೋಟ..

ಉಲ್ಲಾಸಗೊಳಲು ಮನ
ಓಡಿತೊಂದೊಂದೆ ದಿನ
ಹೊರಟು ನಿಂತಳು ಬಾಲೆ ಆ ಒಂದು ದಿನ

“ಕಂದಿರಲು ನಮ್ಮ ಮನ
ಬೀಳ್ಕೊಡಲೆ ಏನೆ ನಿನ್ನ
ಬಲು ಬೇಗ ಬಂದು ಬಿಡು ಓ ನಮ್ಮ ಚಿನ್ನ”

-ಶಂಕರಿ ಶರ್ಮ, ಪುತ್ತೂರು.

5 Responses

  1. Nalini Bheemappa says:

    Thumba chennagide

  2. Shankara Narayana Bhat says:

    ಲೇಖನ ಚೆನ್ನಾಗಿದೆ. ವಿದೇಶದಲ್ಲಿ ಇರುವ ಮಕ್ಕಳ ಮೊಮ್ಮಕ್ಕಳ ಆಗಮನ. ನಿರ್ಗಮನ ಇತ್ಯಾದಿ ವಿಷಯಗಳನ್ನು ಲೇಖಕರು ವಿವರಿಸಿದರು. ಇದು ನೈಜ ಚಿತ್ರಣ ಆಗಿರಬಹುದು.

  3. Nayana Bajakudlu says:

    ಬಹಳ ಸೊಗಸಾದ ಬರಹ. ನನ್ಗೆ ನನ್ನ ಬಾಲ್ಯದ ದಿನಗಳು, ನನ್ನ ಪ್ರೀತಿಯ ಅಜ್ಜಿ, ಅಜ್ಜಿ ಮನೆ ಎಲ್ಲವೂ ತುಂಬಾ ನೆನಪಾಯಿತು. ಇತ್ತೀಚಿನ ಆಧುನಿಕತೆ ತುಂಬಿದ ಜೀವನ ಶೈಲಿಯಲ್ಲಿ ನಾವು ನಮ್ಮ ಮಕ್ಕಳನ್ನು ಒಂಟಿಯಾಗಿ ಬೆಳೆಸಿ , ಹಿರಿಯರಿಂದ ದೂರ ಇಟ್ಟು ಇಂತಹ ಅದ್ಭುತ , ಸುಂದರ ಅನುಭವಗಳಿಂದ ವಂಚಿತರನ್ನಾಗಿ ಮಾಡ್ತಾ ಇದ್ದೇವೆ. ಪರಿಣಾಮ ಒಂಟಿತನದ ಬೇಗುದಿಯಲ್ಲಿ ನಾವು ಮಕ್ಕಳನ್ನೇ ಕಳೆದುಕೊಳ್ಳುವಂತಹ ಪರಿಸ್ಥಿತಿ , ಜೊತೆಗೆ ಕೊನೆಗೊಂದು ದಿನ ಅವರು ಹೆತ್ತವರನ್ನೇ ದೂರ ಮಾಡ್ತಾರೆ , ಇದಕ್ಕೆಲ್ಲ ಕಾರಣ ನಾವೇ, ಬೇರಾರು ಅಲ್ಲ. ಹಿರಿಯರ ನೆರಳಲ್ಲಿ ಬೆಳೆಯುವ ಮಕ್ಕಳು ಖಂಡಿತ ಜೀವನದ ಮೌಲ್ಯಗಳನ್ನು ಅನುಸರಿಸಿಕೊಂಡು ಹೋಗುವವರಾಗಿರುತ್ತಾರೆ .

  4. Sowjanya Kadappu says:

    ಸೊಗಸಾಗಿ ಬರೆದಿದ್ದೀರಿ

  5. Shankar Sharma says:

    ಲೇಖನವನ್ನು ಓದಿದ, ಮೆಚ್ಚಿದ ನಿಮಗೆಲ್ಲರಿಗೂ ಧನ್ಯವಾದಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: