ಕಥೆಯೆಂಬ ಮಾಯಕ
ಕತೆ ಎಂದರೆ ಯಾರಿಗೆ ಇಷ್ಟ ಇಲ್ಲ? ‘ಅಮ್ಮ ಒಂದು ಕತೆ ಹೇಳಮ್ಮ ‘ ಎಂದು ಲಲ್ಲೆಗರೆಯುವ ಎಲ್ ಕ್ ಜಿ ಮಗು. ‘ಕತೆ ಹೇಳುವೆ ನನ್ನ ಕತೆ ಹೇಳುವೆ’ ಎಂದು ಕಣ್ಣೆವೆಯಲ್ಲಿ ನೀರು ಚಿಮ್ಮಿಸುವ ಹಾಡು. ‘ನಿಂದೊಳ್ಳೆ ಕತೆಯಾಯ್ತಲ್ಲ ಬಿಡು‘ ಎಂದು ಕಾಲೆಳೆಯುವ ಗೆಳೆಯ ಗೆಳತಿಯರು. ಒಂದೊಳ್ಳೆ ಕತೆ ಇದ್ದರೆ ಸುಪರ್ ಹಿಟ್ ಆಗುವ ಸಿನೆಮಾಗಳು. ‘ಹಾಗೆಲ್ಲ ಕತೆ’ ಎಂದು ನಿಡುಸುಯ್ಯುವ ಮಧ್ಯ ವಯಸ್ಕರು. ಹೀಗೆ ಕತೆ ಎನ್ನುವುದು ನಮ್ಮ ಜೀವನದ ಅವಿಭಾಜ್ಯ ಅಂಗ. ಕತೆ, ಕತೆ ಹೇಳುವ ಪ್ರಕ್ರಿಯೆ ನಮ್ಮ ಮೌನಕ್ಕೆ, ನಿಟ್ಟುಸಿರಿಗೆ ಹೆಗಲಾಗುತ್ತದೆ, ಗಾಯಕ್ಕೆ ಮದ್ದಾಗುತ್ತದೆ.
ದೊಡ್ದವರಿರಲಿ, ಸಣ್ಣವರಿರಲಿ ಮಾನವ ಜೀವನದ ಅನುಭವಗಳು ಹೆಚ್ಚು ಕಡಿಮೆ ಒಂದೇ ಆಗಿರುವುದರಿಂದಲೇ ಕತೆಗಳು ಆಪ್ಯಾಯಮಾನ. ಹರಟೆ ಕಟ್ಟೆಯಲ್ಲಿನ ಕತೆಗಳು, ಜಗಳಗಳನ್ನು ನೋಡುತ್ತ ನಮ್ಮ ಮನದಲ್ಲಿ ನೆನಪಾಗುವ ಕತೆಗಳು, ಪುಟ್ಟ ಮಕ್ಕಳು ಸ್ಕೂಲ್ ನಲ್ಲಿ ತಮಗಾದ ಅನುಭವಗಳನ್ನು ವರದಿ ಒಪ್ಪಿಸುವ ಕತೆಗಳು, ಕಿರಾಣಿ ಅಂಗಡಿಯವನು ಹೇಳುವ ಘಟನೆಗಳು, ಆಗ ತಾನೇ ಜೀವನದ ಅನುಭವಗಳಿಗೆ ಪಕ್ಕಾದ ಯುವಕ ಯುವತಿಯರ ಕನವರಿಕೆಗಳು ಹೀಗೆ ಕತೆ ಎಂಬುದು ಬಾಳಿನ ನೇಯ್ಗೆಯಲ್ಲಿರುವ ಕಪ್ಪು, ಬಿಳಿ, ಕೆಂಪು ಎಳೆಗಳು.
ನಮ್ಮ ಜೀವನದ ಅತಂತ್ರತೆ, ಅಭದ್ರತೆ, ಭವಿಷ್ಯದ ಬಗ್ಗೆ ಅಯೋಮಯ, ಇರುವಿನ ಬಗೆ ಸಂಕಟ, ಅರಿವಿಗಾಗಿ ಹಂಬಲ, ಮಿತಿಯನ್ನು ಮೀರುವ ಬಯಕೆ ಇವೆಲ್ಲ ಸಾರ್ವತ್ರಿಕವಾಗಿರುವುದರಿಂದಲೇ ಇನ್ನೊಬ್ಬರ ಜೀವನದಲ್ಲೂ ಇಂತಹ ಗೊಂದಲಗಳಿವೆ ಎಂದು ತಿಳಿದುಕೊಳ್ಳುವುದು ನಮ್ಮ ಮನಸ್ಸಿಗೆ ಸಾಂತ್ವನವನ್ನೂ , ಬದುಕುವ ಆಸೆಯನ್ನೂ ಹುಟ್ಟಿಸುತ್ತದೆ. ಹೀಗಾಗಿಯೇ ಜನರು ಕತೆಗಳನ್ನು ಇಷ್ಟ ಪಡುತ್ತಾರೆ.
ಒಂದು ಕತೆಗೆ ನಮ್ಮ ದೈನ್ಯವನ್ನು, ಸಮಷ್ಟಿ ಪ್ರಜ್ಞೆಯ ಆಕ್ರೋಶವನ್ನು ಮೀರಿ ಬೆಳಕಾಗುವ ಶಕ್ತಿ ಇದೆಯೆ ಎನ್ನುವುದು ಪಶ್ನೆ. ಅದು ಏಕ ಕಾಲದಲ್ಲಿ ಹೌದು ಮತ್ತು ಅಲ್ಲ. ತಾತ್ವಿಕವಾಗಿ ಹೇಳುವುದಾದರೆ ಅದು ಕೆಚ್ಚನ್ನು ತುಂಬಿ ಸ್ಫೂರ್ತಿಯನ್ನು ಒಡಮೂಡಿಸಬಹುದು. ಹೆಪ್ಪುಗಟ್ಟಿದ ಮೌನವನ್ನು ಕಣ್ಣೀರಾಗಿ ಹರಿಸಬಹುದು. ಅದು ಫ಼ಿಲ್ಮ್ ಆಗಿರಬಹುದು, ನೃತ್ಯವಾಗಿರಬಹುದು, ಅಕ್ಷರದ ಬನಿಗೆ ಆ ಶಕ್ತಿ ಇದೆ. ಉದಾಹರಣೆಗೆ ‘ತಾರೇ ಜಮೀನ್ ಪರ್’ ಮೂವಿ ಬಂದಾಗ ಥಿಯೇಟರ್ ಗೆ ಥಿಯೇಟರೇ ಕಣ್ಣೀರುಗರೆಯುತ್ತಿತ್ತು. ಒಂದು ಹಾಡಿಗೆ, ಒಂದು ಸ್ಲೋಗನ್, ಹೆಚ್ಚೇಕೆ ಒಂದು ಜಾಹೀರಾತಿನ ಜಿಂಗಲ್ಸ್ ಗೆ ಕೂಡ ನಮಲ್ಲೊಂದು ಗುಂಗು ಹಿಡಿಸುವ, ಅಪ್ರಜ್ಞಾ ಪೂರ್ವಕವಾಗಿ ನಮ್ಮ ಭಾವಕೋಶದ ಭಾವವೇ ಆಗುವ ಶಕ್ತಿ ಇದೆ.
ಕತೆಯೊಂದನ್ನು ಓದಲು ಯಾವುದಾದರೂ ಥಿಯರಿಯ ಅವಶ್ಯಕತೆಇದೆಯೇ ಎನುವುದೂ ಪ್ರಶ್ನೆ. ಒಂದು ನಿರ್ದಿಷ್ಟ ಪಂಗಡ, ಸಮುದಾಯಕ್ಕೆ ಸೇರಿದ ವ್ಯಕ್ತಿಗಳ, ಒಂದು ಭಾವ ವಲಯ ಹೆಚ್ಚು ಕಡಿಮೆ ಒಂದೇ ಇರುವ ಕಾರಣ ಉದಾಹರಣೆಗೆ ವಸಾಹತುಪ್ರಜ್ನೆ) ಒಂದು ಮಾನ ದಂಡ ತನ್ನಿಂತಾನೇ ಬೆಳವಣಿಗೆಯಾಗುತ್ತದೆ. ಇದೇ ಸಮಯ ಯಾವುದೇ ‘ಇಸಮ್’ಗಳಿಗೆ ಒಳಗಾಗದೆ ಒಂದು ಕೃತಿಯನ್ನು ಓದುವ ದೊಡ್ಡ ಮನಸ್ಸು ನಮ್ಮಲ್ಲಿ ಕಡಿಮೆಯಾಗುತ್ತಿರುವುದೂ ಅಷ್ಟೇ ಸತ್ಯ. ಒಂದು ಕೃತಿಗೋಸ್ಕರ ಜನರು ಹೊಡೆದಾಡಿಕೊಳ್ಳುವುದಿದೆಯಲ್ಲ ಅದು ಸಾಹಿತ್ಯ ಪ್ರತಿಪಾದಿಸುವ ಮಾನವೀಯತೆಯ ಅಣಕ.
.
– ಜಯಶ್ರೀ ಬಿ. ಕದ್ರಿ
ಮನ ಮುಟ್ಟುವ ವಿಷ್ಳೇಶಣೆ…….!!!! ಇಷ್ಟವಾಯ್ತು……
ಕಥೆಯು ಸುಂದರವಾಗಿದೆ
ಕಥೆಯ ಕಥೆ thumba chennagide akka ….
Sangeetha raviraj
ಬಹಳ ಚೆನ್ನಾಗಿ ಹೇಳಿದ್ರಿ ಮೇಡಂ. ನಮ್ಮ ದಿನ ನಿತ್ಯದ ಸಣ್ಣ ಪುಟ್ಟ ಘಟನೆಗಳೇ ವಿವರಿಸುತ್ತಾ ಹೋದಂತೆ ಕತೆ ಆಗುತ್ತದೆ . ಆದರೆ ನಾವು ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನದ ಲೋಕದೊಳಗೆ ಎಷ್ಟು ವ್ಯಸ್ತರಾಗಿದ್ದೇವೆ ಅಂದ್ರೆ ಯಾರಿಗೂ, ಯಾವ ಕತೆಗಳನ್ನೂ ಓದಲು, ನೋಡಲು, ಅಥವಾ ಕೇಳುವಷ್ಟೂ ತಾಳ್ಮೆ , ಸಮಯ ಎರಡೂ ಇಲ್ಲ .